ಶುಕ್ರವಾರ, ಏಪ್ರಿಲ್ 10, 2020
19 °C

ವಾಣಿಜ್ಯ ಕೃಷಿಯತ್ತ ಕೈತೋಟದ ತರಕಾರಿ

ಆತ್ರೇಯ Updated:

ಅಕ್ಷರ ಗಾತ್ರ : | |

ಕಳೆದ ವಾರ, ಸ್ಥಳೀಯ ಮಡಹಾಗಲ ತಳಿ ಕುರಿತ ಲೇಖನಕ್ಕಾಗಿ ಪೂರಕ ಮಾಹಿತಿ ಸಂಗ್ರಹಿಸುತ್ತಿದ್ದೆ. ಹಿರಿಯ ಪತ್ರಕರ್ತ ಶ್ರೀಪಡ್ರೆಯವರು ಮಡಿಕೇರಿ ಬಳಿಯ ಚೆಟ್ಟಳ್ಳಿಯಲ್ಲಿನ ಭಾರತೀಯ ತೋಟಗಾರಿಕಾ ಸಂಸ್ಥೆ(ಐಐಎಚ್‌ಆರ್) ಉಪಕೇಂದ್ರದಲ್ಲಿ ಇದೇ ಮಡಹಾಗಲದ ಅಸ್ಸಾಂ ತಳಿಯನ್ನು ವಾಣಿಜ್ಯವಾಗಿ ಬೆಳೆಯುತ್ತಿರುವ ಕುರಿತು ಮಾಹಿತಿ ನೀಡಿದರು.

ಆ ಮಾಹಿತಿ ಹಿಡಿದು ಹುಡುಕಾಡುವಾಗ ಸಿಕ್ಕವರೇ ಐಐಎಚ್‌ಆರ್‌, ಚೆಟ್ಟಹಳ್ಳಿ ಹಾರ್ಟಿಕಲ್ಚರ್ ಎಕ್ಸಪೆರಿಮೆಂಟ್ ಸ್ಟೇಷನ್ (ಚೆಸ್) ಅಧಿಕಾರಿ ಡಾ. ಲಚುಮಿಕಾಂತನ್ ಭಾರತಿ. ಇವರು ಅಸ್ಸಾಂ ವೆರೈಟಿ ಮಡಹಾಗಲವನ್ನು, ಸಂಸ್ಥೆಯ ಆವರಣ ದಲ್ಲಿ ಬೆಳೆಸುತ್ತಿದ್ದಾರೆ. ಮೊದಲು ಸಣ್ಣದಾಗಿ ಶುರು ಮಾಡಿದ ಮಡಹಾಗಲ ಕೃಷಿ, ಕಾಲು ಎಕರೆಗೆ ವಿಸ್ತಾರಗೊಂಡಿದೆ. ಕಳೆದ ಬಾರಿ ಆರು ಸಾವಿರ ಸಸಿಗಳನ್ನು ಬೆಳೆಸಿದ್ದರಂತೆ. ಈ ತಳಿಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಕೆಲ ತಿಂಗಳ ಹಿಂದೆ ಚೆಟ್ಟಳ್ಳಿಯಲ್ಲಿ ‘ಮಡಹಾಗಲ ಕ್ಷೇತ್ರೋತ್ಸವ’ ಕೂಡ ಮಾಡಿದ್ದರು.

‌ಕೊಡಗಿನಲ್ಲಿ ಮಡಹಾಗಲಕ್ಕೆ ಉತ್ತಮ ಬೇಡಿಕೆ ಇದೆ. ಹಾಗಾಗಿ, ಸಂಶೋಧನಾ ಕ್ಷೇತ್ರದ ಸಿಬ್ಬಂದಿ, ಸಂಸ್ಥೆಯ ಆವರಣದಲ್ಲೇ ತಾವು ಬೆಳೆದ ಕಾಯಿಗಳನ್ನು ಇಟ್ಟು ಮಾರಾಟ ಮಾಡಿದ್ದಾರೆ. ‘ಈ ವರ್ಷ ಕಾಲು ಎಕರೆಯಿಂದ ₹50 ಸಾವಿರದಷ್ಟು ಮಡಹಾಗಲ ಮಾರಾಟವಾಗಿದೆ’ ಎನ್ನುತ್ತಾರೆ ಭಾರತಿ. 

ಅಸ್ಸಾಂ ವೆರೈಟಿ ವಿಶೇಷ

ಅಸ್ಸಾಂ ತಳಿಯ ಮಡಹಾಗಲ, ಸ್ಥಳೀಯ ಕಾಡುಪೀರೆ (spine gourd, momordica dioica)ಗಿಂತ ವಿಭಿನ್ನವಾಗಿದೆ. ಬೆಳವಣಿಗೆ, ಗಾತ್ರ, ತೂಕ ಎಲ್ಲ ರೀತಿಯಲ್ಲೂ. ‘ಸ್ಥಳೀಯ ತಳಿಗಿಂತ ಗಾತ್ರದಲ್ಲಿ ದೊಡ್ಡದು. ತೂಕದಲ್ಲಿ ಒಂದೊಂದು ಕಾಡು ಪೀರೆ 30 ರಿಂದ 40 ಗ್ರಾಂ ತೂಗಿದರೆ, ಅಸ್ಸಾಂ ವೆರೈಟಿ ನೂರು ಗ್ರಾಂವರೆಗೂ ತೂಗುತ್ತದೆ. ಊರಿನ ತಳಿ ಮೂರೇ ತಿಂಗಳು ಸೀಸನ್. ಇದು ಆರು ತಿಂಗಳವರೆಗೂ ಫಸಲು ಕೊಡುತ್ತದೆ’ – ವಿವರಿಸುತ್ತಾರೆ ಡಾ. ಭಾರತಿ. ‘ಸ್ಥಳೀಯ ತಳಿಯ ಗೆಡ್ಡೆಗಳಿಂದಲೇ ಸಸಿಗಳ ಉತ್ಪಾದನೆ ಕಡಿಮೆ. ಆದರೆ, ಅಸ್ಸಾಂ ತಳಿಯಲ್ಲಿ ಮರಿಗೆಡ್ಡೆಗಳಿಂದಲೂ ಸಾಕಷ್ಟು ಸಸಿಗಳನ್ನಾಗಿ ಬೆಳೆಸಬಹುದು. ಮರಿಗೆಡ್ಡೆಗಳನ್ನೂ ಕತ್ತರಿಸಿಯೂ ಗಿಡಮಾಡಬಹುದು’ ಎನ್ನುವುದು ಅವರ ಅಭಿಪ್ರಾಯ.

ನಾಟಿ ತಳಿಯಲ್ಲಿ ಪರಾಗಸ್ಪರ್ಶ ಕ್ರಿಯೆ ಸ್ವಾಭಾವಿಕವಾಗಿ ಆಗುತ್ತದೆ. ಈ ತಳಿಯಲ್ಲಿ ನಾವೇ ಹೆಣ್ಣು, ಗಂಡು ಹೂವು ಹುಡುಕಿ ಪರಾಗಸ್ಪರ್ಶ ಮಾಡಿಸಬೇಕು. ಹೀಗಾಗಿ ಬೀಜದಿಂದ ಸಸಿ ಮಾಡಿದರೆ, ಗಂಡು ಬಳ್ಳಿಗಳು ಹೆಚ್ಚಾಗಿ ಬರುವ ಸಾಧ್ಯತೆ ಇದೆಯಂತೆ. ಜತೆಗೆ, ಬೀಜದಿಂದ ತಯಾರಿಸಿದ ಸಸಿಯಲ್ಲಿ, ತಾಯಿಯ ಗುಣವೇ ಬರುತ್ತದೆ ಎಂಬ ನಂಬಿಕೆಯಿಲ್ಲ. ಹಾಗಾಗಿ, ವಾಣಿಜ್ಯ ಕೃಷಿಯಾಗಿ ಇದನ್ನು ಬೆಳೆಸುವಾಗ, ಹತ್ತು ಹೆಣ್ಣು ಬಳ್ಳಿಗೆ, ಒಂದು ಗಂಡು ಬಳ್ಳಿ ಇದ್ದರೆ ಒಳ್ಳೆಯದು ಎನ್ನುತ್ತಾರೆ ಇದನ್ನು ಬೆಳೆಸುತ್ತಿರುವ ರೈತರು.

ತಂತಿಗಳ ಮೇಲೆ ಬಳ್ಳಿ

ಅಸ್ಸಾಂ ವೆರೈಟಿಯನ್ನು ಟ್ರೆಲ್ಲಿಸ್ (ತಂತಿ ಬೇಲಿಯ ಹಾಗೆ) ಮೇಲೆ ಬೆಳೆಸುತ್ತಾರೆ. ಟ್ರೆಲ್ಲಿಸ್ ಎಂದರೆ ಎರಡು ಕಂಬಗಳ ನಡುವೆ ತಂತಿಗಳನ್ನು ಕಟ್ಟಿ, ಅದಕ್ಕೆ ಬಳ್ಳಿ ಹಬ್ಬಿಸುವ ಪ್ರಕ್ರಿಯೆ. ಈ ಬೀನ್ಸ್, ಟೊಮೆಟೊ, ಮಿಡಿ ಸೌತೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರೈತರಿಗೆ, ಈ ವಿಧಾನದ ಬಗ್ಗೆ ಅರಿವಿರುತ್ತದೆ.

‘ಟ್ರೆಲ್ಲಿಸ್‌ನಲ್ಲಿ ಬೆಳೆಸುವುದರಿಂದ ಬೆಳಕು/ಬಿಸಿಲು ಬಳ್ಳಿಯ ಎರಡೂ ಭಾಗಕ್ಕೂ ಬೀಳುತ್ತದೆ. ಬೆಳವಣಿಗೆ ಉತ್ತಮವಾಗಿರುತ್ತದೆ. ಪರಾಗ ಸ್ಪರ್ಶ ಮಾಡಿಸಲು ಸುಲಭ. ಚಪ್ಪರದಲ್ಲಿ ಬಳ್ಳಿ ಹಬ್ಬಿಸಿದರೆ, ಮೇಲ್ಭಾಗಕ್ಕೆ ಮಾತ್ರ ಬಿಸಿಲು ಬೀಳುತ್ತದೆ. ಹೂವು ಅರಳಿದ ಜಾಗದಲ್ಲಿ ಕೈ ತೂರಿಸುವುದು ಕಷ್ಟ. ದೊಡ್ಡ ಪ್ರಮಾಣದಲ್ಲಿ ಬೆಳೆಯುವುದರಿಂದ, ಬೇಲಿ ವಿಧಾನವೇ ಸೂಕ್ತ ಎನ್ನುವುದು ಭಾರತಿ ಅವರ ಅಭಿಪ್ರಾಯ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಟ್ರೆಲ್ಲಿಸ್ ಮಾಡಿಕೊಂಡರೆ, ಖರ್ಚು ಕಡಿಮೆಯಾಗುತ್ತದೆ.

ಒಂದು ಕಡೆ ಗೆಡ್ಡೆ ಹಾಕಿದರೆ, ಅದೇ ಜಾಗದಲ್ಲಿ ಐದಾರು ವರ್ಷ ಬಳ್ಳಿ ಬೆಳೆಸಬಹುದು. ಎರಡು ಗುಜ್ಜು ನೆಟ್ಟು, ಮೂರು ಸಾಲುಗಳಲ್ಲಿ ತಂತಿ ಕಟ್ಟಿ, ಬಳ್ಳಿ ಹಬ್ಬಿಸಬಹುದು. ಕಾಲು ಎಕರೆಯಲ್ಲಿ ಒಂದು ಸಾವಿರ ಸಸಿಗಳನ್ನು ಕೂರಿಸಬಹುದಂತೆ. 

ಕರ್ನಾಟಕದಲ್ಲಿ ಅಸ್ಸಾಂ ತಳಿ…

ಚೆಟ್ಟಹಳ್ಳಿಯ ಕೇಂದ್ರದ ಸಂಪರ್ಕಕ್ಕೆ ಬಂದ ಕೊಡಗು, ಚಿಕ್ಕಮಗಳೂರು, ಉಡುಪಿ, ಕಾರ್ಕಳ ಭಾಗದ ಹಲವು ರೈತರು ಅಸ್ಸಾಂ ವೆರೈಟಿಯ ಮಡಹಾಗಲ ಬೆಳೆಯುತ್ತಿದ್ದಾರೆ. ಈ ವರ್ಷದ ಫೆಬ್ರುವರಿಯಿಂದ ಈ ಕೃಷಿ ಆರಂಭಿಸಿ, ಏಪ್ರಿಲ್‌ನಲ್ಲಿ ಮೊದಲ ಬೆಳೆ ತೆಗೆದು ಮಾರಾಟ ಮಾಡಿದ್ದಾರೆ. ಬಹುತೇಕರು ಸ್ಥಳೀಯವಾಗಿ ಮಾರಾಟ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಜಯಪುರದ ಕೃಷಿಕ ಅಶೋಕ್ ಕುಮಾರ್ ಸ್ಥಳೀಯ ಹಾಗೂ ಅಸ್ಸಾಂ ಎರಡೂ ವೆರೈಟಿಯ ಮಡಹಾಗಲ ಬೆಳೆಯುತ್ತಿದ್ದಾರೆ. ಈ ವರ್ಷದ ಫೆಬ್ರುವರಿಯಿಂದ ನೂರು ಅಸ್ಸಾಂ ತಳಿಯ ಮಡಹಾಗಲ ಹಾಕಿದ್ದರು. ‘ಅಸ್ಸಾಂ ತಳಿ ಮೂರು ತಿಂಗಳೊಳಗೆ ಕಾಯಿ ಸಿಗುತ್ತದೆ. ಒಳ್ಳೆ ಮಾರ್ಕೆಟ್ ಇದೆ. ನಾಟಿಗೆ ಹೋಲಿಸಿದರೆ, ಈ ತಳಿಗೆ ಸ್ವಲ್ಪ ಗೊಬ್ಬರ ಕೊಡಬೇಕು. ಇದಕ್ಕೆ ಕೀಟ ಬಾಧೆ ಇದೆ. ಔಷಧ ಹೊಡೆಯಬೇಕಾಗುತ್ತದೆ. ನಿಯಂತ್ರಣದ ಬಗ್ಗೆ ಎಚ್ಚರ ವಹಿಸಬೇಕು. ಆದರೆ ಇಳುವರಿ ಚೆನ್ನಾಗಿರುತ್ತದೆ. ಕಾಯಿ ಗಾತ್ರ ಚೆನ್ನಾಗಿರುತ್ತದೆ. ಕೆ.ಜಿ.ಗೆ ₹140 ಹಾಗೆ ಮಾರಾಟ ಮಾಡಿದೆ’ ಎನ್ನುತ್ತಾರೆ ಅವರು. 

ಪೊನ್ನಂಪೇಟೆ ಸಮೀಪದ ಕೃಷಿಕ ತಿಮ್ಮಯ್ಯ ಅವರು ಈ ಬಾರಿ ಕಾಲು ಎಕರೆಯಲ್ಲಿ 400 ಅಸ್ಸಾಂ ವೆರೈಟಿ ಮಡಹಾಗಲ ಸಸಿಗಳನ್ನು ಹಾಕಿದ್ದರು. ಬೇಲಿ ವಿಧಾನದಲ್ಲಿ ಬಳ್ಳಿ ಹಬ್ಬಿಸಿದ್ದರು. ಉತ್ತಮ ಫಸಲು ಬಂತು. ಕೆ.ಜಿಗೆ ₹100 ರಿಂದ ₹150ಕ್ಕೆ ಮಾರಾಟ ಮಾಡಿದ್ದಾರೆ. ಸುಮಾರು ₹50 ಸಾವಿರದಷ್ಟು ವ್ಯಾಪಾರ ಮಾಡಿದ್ದಾರೆ. ಇತ್ತೀಚೆಗೆ ಮಳೆ ಹೆಚ್ಚಾದ ಕಾರಣ, ಸ್ವಲ್ಪ ಸಸಿಗಳು ಕೊಚ್ಚಿ ಹೋಗಿವೆ. ವಿಶೇಷವೆಂದರೆ, ಇವರು ಸಾವಯವ ವಿಧಾನದಲ್ಲಿ ಮಡಹಾಗಲ ಬೆಳೆದಿದ್ದಾರೆ. ‘ಸಸಿಗಳಿಗೆ ಜೈವಿಕ ಗೊಬ್ಬರ ಬಳಸಿದ್ದೇನೆ. ಕಳೆ ನಿಯಂತ್ರಣಕ್ಕೆ ಪ್ಲಾಸ್ಟಿಕ್ ಮಲ್ಚ್ ಮಾಡಿದ್ದೆ. ಗೋಮೂತ್ರ ಸಿಂಪಡಿಸಿ ಕೀಟ ನಿಯಂತ್ರಣ ಮಾಡಿದ್ದೇನೆ. ಸಾವಯವ ವಿಧಾನದಲ್ಲಿ ಇದನ್ನು ಬೆಳೆಯಲು ಸಾಧ್ಯ’ ಎನ್ನುತ್ತಾರೆ ತಿಮ್ಮಯ್ಯ.

ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಆರೂರಿನ ಆದಿತ್ಯ ಫಾರಂನ ಸತ್ಯನಾರಾಯಣ ಅವರು ಚೆಟ್ಟಹಳ್ಳಿಯಿಂದಲೇ 100 ಸಸಿಗಳನ್ನು ತಂದು ಬೆಳೆಸಿದ್ದಾರೆ. ಇಳುವರಿ ಉತ್ತಮವಾಗಿದೆ. ಕೆ.ಜಿ ನೂರು ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ‘ಬೇರೆ ತರಕಾರಿಗೆ ಹೋಲಿಸಿದರೆ, ಇದನ್ನು ಬೆಳೆಯುವುದು ಸುಲಭ. ಉತ್ತಮ ಮಾರುಕಟ್ಟೆ ಇದೆ. ಗಣೇಶ ಚೌತಿ ಸಮಯದಲ್ಲಿ ಕೆ.ಜಿಗೆ ₹200ವರೆಗೂ ಬೆಲೆ ಏರುತ್ತದೆ. ಮಂಗಳೂರಿನಲ್ಲಿ ಕೊಂಕಣಿ ಮಂದಿ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಇದರಿಂದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತಾರೆ. ಹೀಗಾಗಿ ಬೇಡಿಕೆಯೂ ಹೆಚ್ಚು’ ಎನ್ನುತ್ತಾರೆ ಅವರು.

ಸಸಿ, ಕಾಯಿಗೆ ಉತ್ತಮ ಬೇಡಿಕೆ: ನಾಟಿ ತಳಿ ಮತ್ತು ಅಸ್ಸಾಂ ವೆರೈಟಿ ನಡುವೆ ರುಚಿಯಲ್ಲಿ ತುಸು ವ್ಯತ್ಯಾಸವಿರಬಹುದು. ಆದರೆ ಪೋಷಕಾಂಶಗಳಲ್ಲಿ ಇಲ್ಲ. ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಈ ವೆರೈಟಿ ಬೆಳೆಯಲು ಉತ್ತಮ ವಾತಾವರಣವಿದೆ ಎನ್ನುತ್ತಾರೆ ಭಾರತಿ. ಕ್ಷೇತ್ರೋತ್ಸವ, ತರಬೇತಿ ನಡೆಸಿದ ನಂತರ 40 ಸಾವಿರದಷ್ಟು ಸಸಿಗಳಿಗೆ ಬೇಡಿಕೆ ಬಂದಿದೆಯಂತೆ.

ಇದನ್ನೂ ಓದಿ: ಕಾಡು ಹಾಗಲ ಹೊಲದಲ್ಲಿ ಅರಳಿದಾಗ

ಮಡಹಾಗಲ ಸಸಿಗಳು ಸದ್ಯ ಚೆಟ್ಟಹಳ್ಳಿ ಕೇಂದ್ರದಲ್ಲಿ ಲಭ್ಯವಿವೆ. ರೈತರ ಗುಂಪುಗಳು ಆಸಕ್ತಿ ತೋರಿದರೆ, ಮಡಹಾಗಲ ಬೆಳೆಯಲು ತರಬೇತಿ ಕೊಡುತ್ತಾರಂತೆ. ಇತ್ತೀಚೆಗೆ ಚೆಟ್ಟಹಳ್ಳಿ ಕೇಂದ್ರದಿಂದ ರೈತರಿಗೆ ತರಬೇತಿಯನ್ನೂ ಕೊಟ್ಟಿದ್ದಾರೆ. ಮಡಹಾಗಲ ಕೃಷಿ ಕುರಿತ ಹೆಚ್ಚಿನ ಮಾಹಿತಿಗೆ ಕೃಷಿಕ ಎಸ್.ಸಿ.ತಿಮ್ಮಯ್ಯ 8971277809 (ಸಂಜೆ 6 ಗಂಟೆ ನಂತರ), ಐಐಎಚ್‌ಆರ್, ಚೆಟ್ಟಹಳ್ಳಿ ಕೇಂದ್ರವನ್ನು 08276–266635 ನಂ. ನಲ್ಲಿ ಸಂಪರ್ಕಿಸಬಹುದು. (ಬೆಳಿಗ್ಗೆ 9 ರಿಂದ ಸಂಜೆ 4– ರಜೆ ದಿನಗಳು ಹೊರತುಪಡಿಸಿ). ಇಮೇಲ್: chesc.iihr@icar.org.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು