ಶನಿವಾರ, ಸೆಪ್ಟೆಂಬರ್ 18, 2021
21 °C

ಬೆಳೆ ವಿಮೆ: ಇನ್ನು ನಾಮನಿರ್ದೇಶನ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಳ್ಳುವಾಗ ಇನ್ನು ಮುಂದೆ ರೈತರ ಜೊತೆ ಅವರ ಕುಟುಂಬದ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕು’ ಎಂದು ವಿಮೆ ಕಂಪನಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚನೆ ನೀಡಿದರು.

ಬೆಳೆ ವಿಮೆ ಸಂಬಂಧ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಅವರು ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

‘ಇಷ್ಟು ದಿನ ನಾಮನಿರ್ದೇಶನವನ್ನು ಪರಿಗಣಿಸುತ್ತಿರಲಿಲ್ಲ. ಇದರಿಂದ ವಿಮೆದಾರ ರೈತ ಮೃತಪಟ್ಟರೆ ವಿಮೆ ಪರಿಹಾರ ಪಡೆಯಲು ತೊಂದರೆ ಆಗುತ್ತಿತ್ತು. ಹೀಗಾಗಿ ಕಡ್ಡಾಯವಾಗಿ ನಾಮನಿರ್ದೇಶನ ಮಾಡಿಸಬೇಕು. ವಿಮೆ ಮಾಡಿಸುವ ಕಂಪನಿಗಳು ಕೃಷಿ ಇಲಾಖೆಯಲ್ಲಿ ಕಚೇರಿ ಮಾಡಿಕೊಳ್ಳದೆ ಈ ಹಿಂದೆ ಸೂಚಿಸಿದಂತೆ ಪ್ರತಿ ತಾಲ್ಲೂಕಿನಲ್ಲಿ ಪ್ರತ್ಯೇಕ ಕಚೇರಿ ತೆರೆಯಬೇಕು. ಅಲ್ಲದೆ, ಕಚೇರಿ ತೆರೆದ ಸ್ಥಳದ ಜಿಪಿಎಸ್ ಲಿಂಕ್ ಅನ್ನು ಕೃಷಿ ಇಲಾಖೆಗೆ ನೀಡಬೇಕು. ರೈತರ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಿ ಬೆಳೆ ವಿಮೆಗೆ ದಾಖಲಿಸಬೇಕು’ ಎಂದು ಸಚಿವರು ಸಲಹೆ ನೀಡಿದರು.

ಅತಿ ಹೆಚ್ಚು ಬೆಳೆ ವಿಮೆ: 2018-19ನೇ ಸಾಲಿನಲ್ಲಿ 12.80 ಲಕ್ಷ ರೈತರಿಗೆ ₹ 2,595.86 ಕೋಟಿ ವಿಮೆ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ ₹ 12.73 ಲಕ್ಷ ಫಲಾನುಭವಿಗಳಿಗೆ ₹ 2,586.27 ಕೋಟಿ ಪರಿಹಾರ ವಿಮಾ ಸಂಸ್ಥೆಯವರಿಂದ ಇತ್ಯರ್ಥಪಡಿಸಲಾಗಿದೆ. ಉಳಿದ 6,215 ರೈತರಿಗೆ ₹ 9.58 ಕೋಟಿ ಬಾಕಿ ಇದೆ. 2019-20ರಲ್ಲಿ 6.81 ಲಕ್ಷ ರೈತರಿಗೆ ₹ 771.81 ಕೋಟಿ ವಿಮೆ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದ್ದು, ಅದರಲ್ಲಿ 6.44 ಲಕ್ಷ ಫಲಾನುಭವಿಗಳಿಗೆ ₹ 736.37 ಕೋಟಿ ಇತ್ಯರ್ಥಪಡಿಸಲಾಗಿದೆ. ಉಳಿದ 37,202 ರೈತರಿಗೆ ₹ 35.43 ಕೋಟಿ ಬಾಕಿ ಇದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

‘2019-20ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 6.81 ಲಕ್ಷ ರೈತರು ನೋಂದಣಿ ಆಗಿದ್ದಾರೆ. ಈ ಹಂಗಾಮಿನಲ್ಲಿಯೂ ಬೆಳೆ ನೋಂದಣಿಯಾದ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯ ದತ್ತಾಂಶಗಳೂಂದಿಗೆ ತಾಳೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. 2020ರ ಮುಂಗಾರು ಹಂಗಾಮಿಗೆ ಒಟ್ಟು 11.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 12.81 ಲಕ್ಷ ಹೆಕ್ಟೇರ್ ಪ್ರದೇಶವನ್ನು ಬೆಳೆ ವಿಮೆಗೆ ಒಳಪಡಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು