ಭಾನುವಾರ, ಮೇ 29, 2022
22 °C

ಸಾವಯವ ಕೃಷಿ ವಿ.ವಿ ಸ್ಥಾಪನೆಗೆ ಚಿಂತನೆ: ಬಿ.ಸಿ ಪಾಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಚಿಂತನೆ ನಡೆಸಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ವಿಕಾಸಸೌಧದಲ್ಲಿ ಸಾವಯವ ಕೃಷಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗುಜರಾತ್‌ ಮತ್ತು ಛತ್ತಿಸ್‌ಗಢದಲ್ಲಿರುವ ಸಾವಯವ ಕೃಷಿ ವಿಶ್ವವಿದ್ಯಾಲಯದ ಮಾದರಿಯನ್ನೇ ಅನು ಸರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಆರೋಗ್ಯದ ದೃಷ್ಟಿಯಿಂದ ಹೆಚ್ಚು ದಿನ ಸಾವಯವ ಕೃಷಿ ಉತ್ಪನ್ನಗಳಿಗೆ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಸಾವಯವ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು. ಶಿವಮೊಗ್ಗದಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಸಾವಯವ ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪಾಟೀಲ ತಿಳಿಸಿದರು.

ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳನ್ನು ಬಳಸುವುದರಿಂದ ಆರೋಗ್ಯಕರ ಉತ್ಪನ್ನಗಳನ್ನು ಪಡೆಯಲು ಸಾಧ್ಯವಿಲ್ಲ. ರಾಸಾಯನಿಕ ಬಳಕೆ ಹೆಚ್ಚಿದಷ್ಟು ಭೂಮಿಯ ಪೋಷಕಾಂಶ ಕುಗ್ಗುವುದರ ಜೊತೆಗೆ ರೈತನಿಗೂ ಮತ್ತು ಅದನ್ನು ಸೇವನೆ ಮಾಡುವ ಗ್ರಾಹಕರ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.

ಭೂಮಿಗೆ ವಿಷ ಹಾಕಬಾರದು ಎಂಬ ಸಂಕಲ್ಪ ತೊಟ್ಟು ಸಾವಯವದತ್ತ ರೈತರು ಮುಖ ಮಾಡಬೇಕು. ಒಂದು ಜಿಲ್ಲೆ ಒಂದು ಉತ್ಪನ್ನದಡಿ ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳ ಸಂಸ್ಕರಣೆ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು