ಶನಿವಾರ, ಸೆಪ್ಟೆಂಬರ್ 25, 2021
29 °C
ಅಸಲೂ ಬಾರದ ಸ್ಥಿತಿಯಲ್ಲಿ ಬೆಳೆಗಾರರು: ಸಾಗಣೆ ವೆಚ್ಚಕ್ಕೂ ಕುತ್ತು

ಟೊಮೆಟೊಗೆ ಹಿಂದೆಂದೂ ಕಾಣದಷ್ಟು ಮಚ್ಚೆರೋಗ: ರೈತರು ಕಂಗಾಲು

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಹಿಂದೆಂದೂ ಕಾಣದಷ್ಟು ಮಚ್ಚೆರೋಗ ಈ ಬಾರಿ ಕಾಣಿಸಿಕೊಂಡಿರುವ ಪರಿಣಾಮವಾಗಿ ತಾಲ್ಲೂಕಿನ ಟೊಮೆಟೊ ಬೆಳೆಗಾರರು ದಿಕ್ಕು ತೋಚದ ಸ್ಥಿತಿ ತಲುಪಿದ್ದಾರೆ.

ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳು ಜಿಲ್ಲೆಯಲ್ಲಿಯೇ ಟೊಮೆಟೊ ಬೆಳೆಗೆ ಹೆಸರು ವಾಸಿ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆ ಎಂದು ಈಚಿನ ವರ್ಷಗಳಲ್ಲಿ ಇದನ್ನು ಹೆಚ್ಚಾಗಿ ನೆಚ್ಚಿಕೊಳ್ಳಲಾಗಿದೆ. ನೀರಾವರಿ ಪ್ರದೇಶದಲ್ಲಿ ಬೇಗ ಹಣ ತಂದು ಕೊಡುವ ಮತ್ತು ಮಾರುಕಟ್ಟೆ ಸಮಸ್ಯೆ ಇಲ್ಲದ ಬೆಳೆಯಾಗಿರುವ ಕಾರಣ ಟೊಮೆಟೊವನ್ನು ಹೆಚ್ಚು ಬೆಳೆಯಲಾಗುತ್ತಿದೆ.

ಬೆಳೆಗಾರ ಕೆ.ಟಿ. ನವೀನ್ ಮಾಹಿತಿ ನೀಡಿ, ‘ಈ ವರ್ಷ ಮಚ್ಚೆರೋಗ ಬಾಧೆಯಿಂದ ಸಾಕಷ್ಟು ತೊಂದರೆಯಾಗಿದೆ. ಹೆಚ್ಚು ಕಡಿಮೆ ಬಹುತೇಕ ಎಲ್ಲ ಟೊಮೆಟೊ ಪ್ಲಾಟ್‌ಗಳಲ್ಲಿ ರೋಗ ಕಾಣಿಸಿಕೊಂಡಿದೆ. ಇದರಿಂದ ಇಳುವರಿ ಪ್ರಮಾಣ ಶೇ 50ರಷ್ಟು ಕಡಿಮೆಯಾಗಿದೆ. ಕಟಾವು ಮಾಡುವ ಹಣ್ಣಿನ ಪೈಕಿ ಶೇ 50ಕ್ಕೂ ಹೆಚ್ಚು ಮಚ್ಚೆರೋಗಕ್ಕೆ ತುತ್ತಾಗಿವೆ. ಮಚ್ಚೆರೋಗ ಇರುವ ಹಣ್ಣಿನ ಬೆಲೆ 15 ಕೆ.ಜಿ ಬಾಕ್ಸ್‌ಗೆ ₹ 20ರಿಂದ ₹ 30ರಷ್ಟು ಇದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಈ ಹಣ್ಣನ್ನು ಕೇಳುವವರು ಇಲ್ಲದಂತಾಗಿದೆ. ಸಾಗಣೆ ವೆಚ್ಚವೂ ಬರುತ್ತಿಲ್ಲ’ ಎಂದು ಹೇಳಿದರು.

ಕೋಲಾರ ಮತ್ತು ಚಿಕ್ಕಮ್ಮನಹಳ್ಳಿ ಖಾಸಗಿ ಮಾರುಕಟ್ಟೆಯಲ್ಲಿ ರೋಗ ರಹಿತ ಮತ್ತು ರಪ್ತು ಗುಣಮಟ್ಟದ ಹಣ್ಣು 15 ಕೆ.ಜಿ ಪ್ರತಿ ಬಾಕ್ಸ್‌ಗೆ ₹ 150ರಿಂದ 160ಕ್ಕೆ ಮಾರಾಟವಾಗುತ್ತಿದೆ. ನಾಟಿ, ಸಾಗಣೆ, ಕಟಾವು ಎಲ್ಲ ವೆಚ್ಚ ಸೇರಿ ಪ್ರತಿ ಕೆ.ಜಿ ಹಣ್ಣು ಉತ್ಪಾದನೆಗೆ ಅಂದಾಜು ₹ 18ರಿಂದ ₹20 ವೆಚ್ಚ ಬರುತ್ತದೆ. ಈಗ ಅರ್ಧದಷ್ಟೂ ಸಿಗುತ್ತಿಲ್ಲ ಎಂದು ಹೇಳಿದರು.

‘ಮಚ್ಚೆರೋಗ ವ್ಯಾಪಕವಾಗಿ ಹಬ್ಬಿ ಬೆಳೆಗಾರರು ಸಾಕಷ್ಟು ತೊಂದರೆಗೀಡಾಗಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿಲ್ಲ. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಚುರ ಪಡಿಸಿಲ್ಲ. ಇದು ಸೋಂಕು ಹಬ್ಬಲು ಮತ್ತು ವ್ಯಾಪಕ ನಷ್ಟಕ್ಕೀಡಾಗಲು ಅನುವು ಮಾಡಿಕೊಟ್ಟಿದೆ. ಇನ್ನಾದರೂ ಗಮನಹರಿಸಿ ನೆರವಿಗೆ ಬರಬೇಕು’ ಎಂದು ಬೆಳೆಗಾರರು ದೂರಿದ್ದಾರೆ.

ತೇವಾಂಶ ಹೆಚ್ಚಳದಿಂದ ವ್ಯಾಪಕ

ಮೊಳಕಾಲ್ಮುರು ತಾಲ್ಲೂಕಿನಲ್ಲಿ 500 ಹೆಕ್ಟೇರ್ ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ 4,000 ಹೆಕ್ಟೇರ್ ಸೇರಿದಂತೆ ಅವಳಿ ತಾಲ್ಲೂಕುಗಳಲ್ಲಿ 4,500 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಟೊಮೆಟೊ ಬೆಳೆ ನಾಟಿ ಮಾಡಲಾಗಿದೆ. ವೈಜ್ಞಾನಿಕವಾಗಿ ಪ್ರತಿ ಹೆಕ್ಟೇರ್ ನಾಟಿಗೆ ₹ 1.50 ಲಕ್ಷದಿಂದ ₹ 2 ಲಕ್ಷದಷ್ಟು ವೆಚ್ಚ ತಗಲುತ್ತದೆ. ಈ ಬಾರಿ ತೇವಾಂಶ ಹೆಚ್ಚು ಇದ್ದ ಕಾರಣ ರೋಗ ಕಾಣಿಸಿಕೊಂಡಿದೆ. ಜೊತೆಗೆ ಉತ್ತರ ಭಾರತದ ರಾಜ್ಯಗಳ ಮಾರುಕಟ್ಟೆಗೆ ಸರಿಯಾಗಿ ಸಾಗಣೆ ಮಾಡಲು ಸಾಧ್ಯವಾಗದಿರುವುದು ಸಹ ದರ ಕುಸಿತಕ್ಕೆ ಕಾರಣವಾಗಿದೆ.

- ಆರ್. ವಿರೂಪಾಕ್ಷಪ್ಪ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

***

ಮಾರುಕಟ್ಟೆಗೆ ಟೊಮೆಟೊ ಕಳಿಸಿದಲ್ಲಿ ವಾಹನ ಬಾಡಿಗೆ ಬರುತ್ತದೆ ಎಂಬ ನಂಬಿಕೆ ಇಲ್ಲದಂತಾಗಿದೆ. ಅನೇಕ ರೈತರು ಕೈಯಿಂದ ಬಾಡಿಗೆ ಹಣ ಕೊಟ್ಟಿದ್ದಾರೆ. ಕೆಲವರು ಹಣ್ಣು ಬಿಡಿಸಲು ಹೋಗುತ್ತಿಲ್ಲ.

-ನಾಗಣ್ಣ, ಬೆಳೆಗಾರ, ಬಿ.ಜಿ. ಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು