ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿಗೆ ‘ದಾವನಿ’ ರೋಗ ಬಾಧೆ: ಪರಿಹಾರಕ್ಕೆ ಬೆಳೆಗಾರರ ಆಗ್ರಹ

Last Updated 11 ಜುಲೈ 2021, 19:30 IST
ಅಕ್ಷರ ಗಾತ್ರ

ತೆಲಸಂಗ (ಬೆಳಗಾವಿ ಜಿಲ್ಲೆ): ವಿವಿಧ ರಾಜ್ಯಗಳಿಗೆ ಉತ್ತಮ ಗುಣಮಟ್ಟದ ದ್ರಾಕ್ಷಿ ಹಾಗೂ ಒಣ ದ್ರಾಕ್ಷಿ ಸರಬರಾಜು ಮಾಡುವ ತೆಲಸಂಗ ಭಾಗದಲ್ಲಿ ದ್ರಾಕ್ಷಿ ಬೆಳೆಯಲ್ಲಿ ಈ ಬಾರಿಯೂ ‘ದಾವನಿ’ ರೋಗ ಕಾಣಿಸಿಕೊಂಡಿದೆ.

ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದ್ರಾಕ್ಷಿ ಬೆಳೆಗಾರರ ಮೇಲೆ ಮತ್ತೊಂದು ಹೊಡೆತ ಬಿದ್ದಿದೆ. ಬೆಳೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎನ್ನುವುದು ಅವರ ಆಗ್ರಹವಾಗಿದೆ.

ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ದ್ರಾಕ್ಷಿ ಬೆಳೆಗೆ ದಾವನಿ ರೋಗ ಮತ್ತು ಕಾಂಡ ಕೊರೆಯುವ ಕೀಟ ಬಾಧೆ ಕಾಣಿಸಿಕೊಂಡಿದೆ. ತೆಲಸಂಗ ಭಾಗದಲ್ಲೇ 4ಸಾವಿರ ಹೆಕ್ಟೇರ್ ಸೇರಿಅಥಣಿ ತಾಲ್ಲೂಕಿನಲ್ಲಿ 5ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಇದೆ. ತೆಲಸಂಗ, ಕನ್ನಾಳ, ಬನ್ನೂರ ಸೇರಿದಂತೆ ಅಥಣಿ ಪೂರ್ವ ಭಾಗದ ಹಲವು ಗ್ರಾಮಗಳಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಗೆ ಈ ರೋಗಗಳು ತಗುಲಿವೆ. ಪರಿಣಾಮ ಇಳುವರಿ ಗಣನೀಯವಾಗಿ ಕುಸಿಯುವ ಭೀತಿಯೂ ಎದುರಾಗಿದೆ ಎನ್ನುತ್ತಾರೆ ಬೆಳೆಗಾರರು.

‘ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ದ್ರಾಕ್ಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಈ ಭಾಗದಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಬೇಸಾಯ ಮಾಡಿದ್ದ ನಮಗೆ ಮೋಡ ಕವಿದ ವಾತಾವರಣ ಶಾಪವಾಗಿ ಪರಿಣಮಿಸಿದೆ’ ಎಂದು ತಿಳಿಸಿದರು.

‘ಬರದ ನಾಡಾದ ಇಲ್ಲಿ ನೀರಿನ ಕೊರತೆ ಇದೆ. ಇದರಿಂದ ಒಣ ಬೇಸಾಯದ ರೈತರು ಹನಿ ನೀರಾವರಿ ಮಾಡಿಕೊಂಡು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಒಂದಿಲ್ಲೊಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ಕಲ್ಪಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಅಪ್ಪು ಜಮಾದರ ಆಗ್ರಹಿಸಿದರು.

ಅನಿವಾರ್ಯವಾಗಿದೆ

ಈ ಭಾಗದಲ್ಲಿ ದ್ರಾಕ್ಷಿ ಬೆಳೆಗೆ ದಾವನಿ ರೋಗ ಹೆಚ್ಚಾಗಿದೆ. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಿ ಉದರುತ್ತಿವೆ. ರಕ್ಷಿಸಿಕೊಳ್ಳಲು ನಿತ್ಯವೂ ಔಷಧಿ ಸಿಂಪಡಿಸುವುದು ಅನಿವಾರ್ಯವಾಗಿದೆ.

–ಬಸವರಾಜ ಅಸ್ಕಿ, ದ್ರಾಕ್ಷಿ ಬೆಳೆಗಾರ, ಕನ್ನಾಳ

ವರದಿ ಸಲ್ಲಿಸಲಾಗುವುದು

ತೆಲಸಂಗ ಭಾಗದಲ್ಲಿ ದ್ರಾಕ್ಷಿ ಬೆಳೆಗೆ ದಾನನಿ ರೋಗ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ತೋಟಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

– ಅಕ್ಷಯಕುಮಾರ ಉಪಾಧ್ಯಾಯ, ತೋಟಗಾರಿಕೆ ಅಧಿಕಾರಿ, ತೆಲಸಂಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT