ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕಾಲದಲ್ಲಿ ಹೂ, ಹಣ್ಣು ಬೆಳೆಗಾರರ ಮುದುಡಿದ ಬದುಕು

ಮದುವೆ, ಜಾತ್ರೆ ಸೇರಿದಂತೆ ಶುಭ ಸಮಾರಂಭಗಳಿಗೆ ನಿರ್ಬಂಧ: ಹೊಲಗಳಲ್ಲಿಯೇ ಕೊಳೆತ ಉತ್ಪನ್ನ
Last Updated 17 ಸೆಪ್ಟೆಂಬರ್ 2021, 18:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಎರಡು ವರ್ಷವಾಯಿತು ನಮ್ಮ ಬದುಕು ಕಷ್ಟಕ್ಕೆ ಸಿಲುಕಿ. ಹಣ್ಣು, ಹಾಲು, ತರಕಾರಿ ಬಳಕೆಯನ್ನು ಕಡಿಮೆ ಮಾಡಿದೆವು. ಮನೆಯ ಖರ್ಚನ್ನು ಸಾಧ್ಯವಿದ್ದಷ್ಟು ತಗ್ಗಿಸಿದೆವು. ಅಲ್ಪಸ್ವಲ್ಪ ಉಳಿತಾಯದಲ್ಲಿಯೇ ಬದುಕು ನಡೆಸಿದೆವು. ಹೂ ಹೊಸಕಿದಂತೆ ಆಯಿತು ನಮ್ಮ ಬದುಕು. ಇಂದಿಗೂ ಕೋವಿಡ್ ಪೂರ್ವದಲ್ಲಿದ್ದ ಸಹಜ ಸ್ಥಿತಿ ಸಾಧ್ಯವಾಗಿಲ್ಲ’

ಇದು ಹೂ ಬೆಳೆಗಾರರಾದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸೂರೇನಹಳ್ಳಿಯ ರಮ್ಯಾ ಅವರ ನೋವಿನ ನುಡಿ.

ಹೂ, ಹಣ್ಣು, ತರಕಾರಿ ಬೆಳೆಗಾರರು, ಮಾರಾಟಗಾರರು ಹಾಗೂ ಈ ಉದ್ದಿಮೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವವರ ಬದುಕನ್ನು ಕೋವಿಡ್ ಹೈರಾಣಾಗಿಸಿದೆ. ಕೋವಿಡ್‌ ತಂದ ಸಂಕಷ್ಟಗಳಿಂದ ಇಂದಿಗೂ ಅವರು ಹೊರಬರಲು ಸಾಧ್ಯವಾಗಿಲ್ಲ.

200 ಕಾಕಡ ಹೂ ಗಿಡಗಳ ಉತ್ಪನ್ನವೇ ರಮ್ಯಾ ಅವರ ಬದುಕಿಗೆ ಆಧಾರವಾಗಿತ್ತು. ಕೋವಿಡ್ ನಂತರ ಬೇಡಿಕೆ ಮತ್ತು ಬೆಲೆ ಕುಸಿತ ಅವರ ಬದುಕಿನ ಘಮವನ್ನೇ ಕಸಿಯಿತು. ಆರ್ಥಿಕ ಸ್ಥಿತಿಯ ಏರುಪೇರು ರಾಜ್ಯದ ಹಲವು ಭಾಗಗಳ ಹೂ, ಹಣ್ಣು, ತರಕಾರಿ ಬೆಳೆಗಾರರು, ಮಾರಾಟಗಾರರ ಬದುಕಿನಲ್ಲಿಯೂ ಆಗಿವೆ.

ಬೆಳೆಗಾರರು, ಹೂ ಬಿಡಿಸುವವರು, ಹೂ ಕಟ್ಟುವವರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು, ಅಲಂಕಾರಿಕ ಪುಷ್ಪಗಳಿಂದ ಹೂಗುಚ್ಚ ಮಾಡುವವರು ಹೀಗೆ ಪುಷ್ಪೋದ್ಯಮಕ್ಕೆ ಆತುಕೊಂಡು ಬದುಕು ಸಾಗಿಸುತ್ತಿದ್ದ ಸಾಮಾನ್ಯರು ಕೋವಿಡ್‌ನಿಂದ ಕುಗ್ಗಿದ್ದಾರೆ. ಮೊದಲ ಅಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ಸರ್ಕಾರ ಗರಿಷ್ಠ ಒಂದು ಹೆಕ್ಟೇರ್ ಮಿತಿಯಲ್ಲಿ ₹ 25 ಸಾವಿರ ಪರಿಹಾರ ನೀಡಿತು. ಎರಡನೇ ಅಲೆಯಲ್ಲಿ ಪರಿಹಾರ ₹ 10 ಸಾವಿರಕ್ಕೆ ಇಳಿಕೆ ಆಯಿತು. ಅದು, ಕೆಲವು ಬೆಳೆಗಾರರಿಗೆ ಈ ಹಣ ದಕ್ಕಿತು. ಆದರೆ ಹೂ ಕಟ್ಟುವವರು, ಬಿಡಿಸುವ ಕೂಲಿಕಾರರ ಪಾಡು?

ಹಣ್ಣು, ತರಕಾರಿ, ಹೂ ಉತ್ಪನ್ನಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಗ್ರಾಮೀಣ ಭಾಗಗಳಲ್ಲಿ ವ್ಯವಸ್ಥೆ
ಯೂ ಇಲ್ಲ. ಸಂಗ್ರಹ ಸಾಧ್ಯವೂ ಇಲ್ಲ. ಬೇಡಿಕೆ ಮತ್ತು ಬೆಲೆ ಇಲ್ಲದ ಕಾರಣ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದು
ರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೂವಿನ ಗಿಡಗಳನ್ನು ಕೊಳೆಯಲು ಬಿಟ್ಟರು. ಕತ್ತರಿಸಿ ಹಾಕಿ
ದರು. ಕೋವಿಡ್ ಛಾಯೆಯ ಕಾರಣ ಲಾಭದ ಮಾತಿರಲಿ, ಹೂಡಿಕೆಯೂ ವಾಪಸ್ ಆಗದಷ್ಟು ಏರುಪೇರು ಜರುಗಿದವು. ಮಾರ್ಚ್‌ನಿಂದ ಆರಂಭವಾಗಿ ಜುಲೈವರೆಗಿನ ಗ್ರಾಮೀಣ ಭಾಗಗಳಲ್ಲಿ ಜಾತ್ರೆಗಳ ಸುಗ್ಗಿ. ವಿವಾಹ ಸೇರಿದಂತೆ ಶುಭ ಸಮಾರಂಭಗಳು ಹೆಚ್ಚು ಜರುಗುತ್ತವೆ. ಸಹಜವಾಗಿ ಹಣ್ಣು, ತರಕಾರಿ, ಹೂವಿಗೆ ಬೇಡಿಕೆ ಇರುತ್ತದೆ. ಆದರೆ, ಕೋವಿಡ್ ಕಾರಣ ಯಾರಿಗೂ ಶುಭವಾಗಲಿಲ್ಲ. ಹೋಟೆಲ್‌ಗಳು, ಅಂಗಡಿಗಳು ಸಹ ಬಂದ್ ಆಗಿದ್ದವು.

ಬೀದಿಗೆ ಬದುಕು: ‘ಆಯಾ ಸೀಜನ್‌ಗೆ ಅನುಗುಣವಾಗಿ ಚಿಕ್ಕಬಳ್ಳಾಪುರ ಎಪಿಎಂಸಿಯಿಂದ ಸಗಟು ದರದಲ್ಲಿ ತರಕಾರಿ, ಹಣ್ಣು, ಹೂ ಖರೀದಿಸಿ ಮಾರುತ್ತಿದ್ದೆವು. ನಿತ್ಯ ಗರಿಷ್ಠ ₹ 500 ಆದರೂ ದುಡಿಮೆ ಆಗುತ್ತಿತ್ತು. ಹಬ್ಬಗಳು, ದೇಗುಲಗಳಲ್ಲಿ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಳ್ಳೆಯ ಆದಾಯವನ್ನೇ ನೋಡುತ್ತಿದ್ದೆವು’ ಎಂದು ಚಿಕ್ಕಬಳ್ಳಾಪುರ ಬೀದಿಬದಿ ವ್ಯಾಪಾರಿ ಅಸ್ಲಾಂ ಪಾಷ ತಿಳಿಸುತ್ತಾರೆ.

ಜೀವನಕ್ಕೆ ಸಮಸ್ಯೆ ಇರಲಿಲ್ಲ. ಆದರೆ, ಕೋವಿಡ್ ಬಂದ ನಂತರ ನಮ್ಮ ತಳ್ಳುವಗಾಡಿಗಳು ಮೂಲೆ ಸೇರಿದವು. ಜನರು ಹೊರಗೆ ಬಂದರೆ ಅಲ್ಲವೇ ನಮ್ಮ ವ್ಯಾಪಾರ ನಡೆಯುವುದು. ಬೀದಿ ವ್ಯಾಪಾರಿಗಳಾದ ನಾವು ನಿಜಕ್ಕೂ ಬೀದಿಗೇ ಬಿದ್ದಿದ್ದೇವೆ. ದಾನಿಗಳು ದಿನಸಿ ಕಿಟ್ ಕೊಟ್ಟ ಕಾರಣ ಬದುಕಿದೆವು ಎಂದು ಕಣ್ಣೀರಾಗುತ್ತಾರೆ.

ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ

ಪುಷ್ಪ ಕೃಷಿಕರು ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಕಾರಣದಿಂದ ಬಹಳಷ್ಟು ಬೆಳೆಗಾರರು ಬೀದಿಗೆ ಬಂದಿದ್ದಾರೆ. ಪುಷ್ಪ ಕೃಷಿ ವ್ಯವಹಾರ ನಡೆಸುತ್ತಿದ್ದವರಿಗೂ ಪೆಟ್ಟು ಬಿದ್ದಿದೆ ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಅರವಿಂದ್ ‘ಪ್ರಜಾವಾಣಿ’ಗೆ ತಿಳಿಸಿದರು. ಈಗ ಸ್ವಲ್ಪಮಟ್ಟಿಗೆ ಪುಷ್ಪೋದ್ಯಮ ಚೇತರಿಕೆ ಹಾದಿಯಲ್ಲಿ ಇದೆ. ಆದರೆ ಕೋವಿಡ್ ಪರಿಣಾಮಗಳು ಇಂದಿಗೂ ಕಾಡುತ್ತಿದೆ. ಸರ್ಕಾರ ಹೂ ಬೆಳೆಗಾರರ ಬೆಂಬಲಕ್ಕೆ ನಿಲ್ಲಬೇಕು ಎಂದರು.

‘ಅಂಗಡಿಗಳೇ ಬಂದ್ ಆದವು’

ಕೋವಿಡ್ ತಂದ ನಷ್ಟದಿಂದ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸಗಟು ಹಣ್ಣಿನ ವ್ಯಾಪಾರಿಗಳು ಅಂಗಡಿಗಳನ್ನೇ ಮುಚ್ಚಿದರು ಎಂದು ರಾಜ್ಯ ಸಗಟು ಹಣ್ಣು ಮಾರಾಟಗಾರರ ಸಂಘದ ಅಧ್ಯಕ್ಷ ಸೈಯದ್ ಮೆಹಬೂಬ್ ತಿಳಿಸಿದರು.

ಸಪೋಟ, ಸೀತಾಫಲ, ಮೂಸಂಬಿ ಮತ್ತಿತರ ಹಣ್ಣುಗಳನ್ನು ದೀರ್ಘಕಾಲ ಸಂಗ್ರಹಿಸಲು ಸಾಧ್ಯವಿಲ್ಲ. ಸರ್ಕಾರ ನಿಗದಿಗೊಳಿಸಿದ ಅವಧಿಯ ಒಳಗೆ ವ್ಯಾಪಾರ ನಡೆಸಬೇಕಾಗಿತ್ತು. ರಾಜ್ಯದಿಂದ ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳಿಗೆ ಮಾವು ರವಾನೆ ಆಗುತ್ತದೆ. ಆದರೆ, ಕಳೆದ ಎರಡು ವರ್ಷಗಳಿಂದ ಮಾವು ರವಾನೆ ಕಡಿಮೆ ಆಯಿತು. ಬೆಳೆಗಾರರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ನಷ್ಟಕ್ಕೆ ತುತ್ತಾದರು ಎಂದು ಹೇಳಿದರು.

***

ಕೋವಿಡ್ ಸಂದರ್ಭದಲ್ಲಿ ತರಕಾರಿ ಬೆಲೆ ಆಗೊಮ್ಮೆ ಈಗೊಮ್ಮೆ ಹೆಚ್ಚಳ ಕಂಡಿದೆ. ಆದರೆ, ಎರಡು ವರ್ಷಗಳಿಂದ ಬೆಲೆಯಲ್ಲಿ ಸ್ಥಿರತೆ ಇಲ್ಲ. ನಷ್ಟದ ಕಾರಣದಿಂದ ತರಕಾರಿ ಬೆಳೆಯುವುದನ್ನೇ ಬಿಟ್ಟೆ

- ಎಸ್‌.ಎಂ. ಮಲ್ಲೇಶ್, ಗೊಲ್ಲಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು

ಎರಡು ಎಕರೆಯಲ್ಲಿ 600 ಗಿಡ ಸೀಬೆ ಬೆಳೆದಿದ್ದೆ. ಬೇಸಿಗೆಯಲ್ಲಿ ಹಣ್ಣು ಬರುತ್ತಿತ್ತು. ಎರಡು ವರ್ಷ ಇದೇ ಸಮಯದಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಹಣ್ಣು ಮಾರಾಟ ಸಾಧ್ಯವಾಗಲಿಲ್ಲ. ಲಕ್ಷಾಂತರ ರೂಪಾಯಿ ನಷ್ಟವಾಯಿತು. ಗಿಡಗಳನ್ನು ಕಡಿದು ಹಾಕಿದೆ

- ಶಶಿಧರ, ಹಲಗಲದ್ದಿ, ಹಿರಿಯೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT