ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲೂ ನಗುವ ಬೆಳೆ!

ಬಹುಬೆಳೆ ಪದ್ಧತಿಯ ಯಶಸ್ಸು
Last Updated 14 ಜನವರಿ 2019, 19:30 IST
ಅಕ್ಷರ ಗಾತ್ರ

ಇಪ್ಪತ್ತೇಳು ಎಕರೆ ಜಮೀನಿನಲ್ಲಿ ಢಾಳಾಗಿ ಕಾಣುವುದು ನಾಲ್ಕು ಎಕರೆಯಲ್ಲಿರುವ ಕುಬ್ಜ ಪೇರಲ ಗಿಡಗಳು. ಅದರ ಜತೆಯಲ್ಲೇ ಸಂಗಾತಿಗಳಾಗಿ ಬೆಳೆಯುತ್ತಿರುವ ಕೊತ್ತಂಬರಿ, ಕರಿಬೇವು, ನುಗ್ಗೆ, ಮೆಕ್ಕೆಜೋಳ, ಸ್ವೀಟ್‌ ಕಾರ್ನ್‌, ಚೆಂಡುಹೂ, ಅಲಸಂದೆ, ಅವರೆಕಾಯಿ, ಬದನೆ, ಹಸಿಕಡಲೆ, ಸೋರೆಕಾಯಿ ಬೆಳೆ.

ಜಮೀನು ಹೊಕ್ಕರೆ ಥಟ್ಟನೆ ಆಕರ್ಷಿಸುವ ಈ ವೈವಿಧ್ಯಮಯ ಬೆಳೆಗಳಿಗೆ ರಸಗೊಬ್ಬರ ಸೋಕಿಸಿಲ್ಲ. ಕೀಟನಾಶಕ ಸಿಂಪಡಿಸಿಲ್ಲ. ಆದರೆ, ಮಿಶ್ರಬೆಳೆಗಳಿಂದಲೇ ಮಣ್ಣಿಗೆ ಸಾರಜನಕ ಸ್ಥಿರೀಕರಿಸಿ, ಪ್ರಧಾನ ಬೆಳೆಗಳಿಗೆ ಪೂರಕ ಪೋಷಕಾಂಶಗಳನ್ನು ಪೂರೈಸುತ್ತಾ, ಬರದ ಬೇಗೆಯಲ್ಲೂ ಬೆಳೆಗಳಲ್ಲಿ ‘ನಗು’ ತುಂಬುವಂತೆ ಮಾಡಿದ್ದಾರೆ. ಈ ಜಮೀನಿನ ಮಾಲೀಕರಾದವೈ. ಈಶ್ವರರಾವ್ ಹಾಗೂ ಅವರ ಮಗ ಸುಧೀರ್.

ಇದು ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಹೋಬಳಿಯ ವಿಜಯಪುರ ಕ್ಯಾಂಪ್‌ ಬಳಿ ಇರುವ ಕೃಷಿ ಭೂಮಿ. ಈ ಜಮೀನನ್ನು ಐದಾರು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ನಾಲ್ಕು ಎಕರೆಯ ಪೇರಲ, ಎಂಟು ಎಕರೆಯಲ್ಲಿ ಡಯಾನ ತಳಿಯ ಅಂಜೂರ, ಹತ್ತು ಎಕರೆಯಲ್ಲಿ ಕಬ್ಬು, ಎರಡೂವರೆ ಎಕರೆಯಲ್ಲಿ ಭತ್ತ, ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸುಭಾಷ್‌ ಪಾಳೇಕರ್ ಅವರ ನೈಸರ್ಗಿಕ ಶೂನ್ಯ ಬಂಡವಾಳ ಕೃಷಿ ಪದ್ಧತಿ ಅನುಸರಿಸಿಯೇ ಕೃಷಿ ಮಾಡುತ್ತಿದ್ದಾರೆ. ರಸಗೊಬ್ಬರ, ಕೀಟನಾಶಕ ಬಳಕೆ ಇಲ್ಲಿ ನಿಷಿದ್ಧ.

ಜಮೀನಿನಲ್ಲಿ ಪೇರಲ ಸಮೃದ್ಧವಾಗಿದೆ. ಪ್ರತಿ ಗಿಡದಲ್ಲೂ ಒಂದೂವರೆ ಕೆಜಿ ತೂಗುವಂಥ ಹಣ್ಣುಗಳು ತೊನೆದಾಡುತ್ತಿರುತ್ತವೆ. ಪೇರಲದ ಗಿಡಗಳ ನಡುವೆ ಹೆಜ್ಜೆ ಹಾಕಿದಾಗ, ಎಲೆಗಳ ಹಿಂದೆ ಅಡಗಿದ್ದ ಹಣ್ಣುಗಳು ಗಮನ ಸೆಳೆದವು. ‘ಇವು ಥೈವಾನ್ ತಳಿಯ ಪೇರಲ ಹಣ್ಣು. ಒಳಗಡೆ ತಿರುಳು ಪಿಂಕ್ ಬಣ್ಣದ್ದಿರುತ್ತದೆ. ರಸಗೊಬ್ಬರ, ಕೀಟನಾಶಕವಿಲ್ಲದೇ ಬೆಳೆದ ಬೆಳೆ ಇದು’ ಎನ್ನುತ್ತಾ ಗಿಡದಲ್ಲಿದ್ದ ಒಂದೂವರೆ ಕೆ.ಜಿ. ತೂಗುವ ಎರಡು ಹಣ್ಣುಗಳನ್ನು ಹಿಡಿದು ತೋರಿಸಿದರು ಸುಧೀರ್.

ಈ ಪೇರಲ ಗಿಡಗಳನ್ನು ನಾಟಿ ಮಾಡಿ, ಬರುವ ಫೆಬ್ರುವರಿಗೆ ಒಂದು ವರ್ಷವಾಗುತ್ತದೆ. ಮೂರು ತಿಂಗಳಿಂದ ಹಣ್ಣುಗಳನ್ನು ಕಟಾವು ಮಾಡುತ್ತಿದ್ದಾರೆ. ಇಲ್ಲಿವರೆಗೆ ಒಟ್ಟು 8 ಟನ್‌ ಇಳುವರಿ ದೊರೆತಿದೆ. ಬೆಂಗಳೂರಿನಿಂದ ಬೇಡಿಕೆ ಇದೆ. ಆದರೂ, ‘ನಮ್ಮ ಸಾವಯವ ಉತ್ಪನ್ನವನ್ನು ನಮ್ಮ ಜಿಲ್ಲೆಯವರೇ ತಿನ್ನಲಿ’ ಎಂಬ ನಿರ್ಧಾರ ಮಾಡಿ ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.

‘ಪೇರಲದ ಜತೆಗೆ ವೈವಿಧ್ಯಮಯ ಮಿಶ್ರ ಬೆಳೆಗಳನ್ನು ಬೆಳೆದಿರುವುದು, ಆರ್ಥಿಕ ಲಾಭಕ್ಕಷ್ಟೇ ಅಲ್ಲ. ಅವು ಗಾಳಿಯಲ್ಲಿರುವ ಸಾರಜನಕವನ್ನು ಬಳಸಿಕೊಂಡು ಬೇರಿನ ಮೂಲಕ ಮಣ್ಣಿಗೆ ಸೇರಿಸುತ್ತವೆ. ಅದನ್ನು ಪೇರಲ ಗಿಡಗಳು ಹೀರಿಕೊಳ್ಳುತ್ತದೆ. ಪ್ರಮುಖ ಬೆಳೆ ಚೆನ್ನಾಗಿ ಬರುತ್ತದೆ’ – ಇಂಥ ತತ್ವಗಳನ್ನೇ ಜಮೀನಿನ ತುಂಬ ಅವರು ಅಳವಡಿಸಿದ್ದೇನೆ ಎನ್ನುತ್ತಾರೆ ಸುಧೀರ್.

ಹೀಗೆ ಅವರು ಹೇಳುತ್ತಿರುವಾಗಲೇ, ಜಮೀನಿಗೆ ಬಂದ ಕೃಷಿ ಕೂಲಿಕಾರರು ಪೇರಲಕ್ಕೆ ಅರಿಸಿನ, ಮೆಣಸಿನಕಾಯಿ ಪುಡಿ ಮಿಶ್ರಿತ ಮಜ್ಜಿಗೆಯ ಔಷಧಿಯನ್ನು ಸಿಂಪಡಿಸುತ್ತಿದ್ದರು. ‘ಮಜ್ಜಿಗೆಯು ಸೋಂಕುಗಳಿಂದ ಬೆಳೆಯನ್ನು ರಕ್ಷಿಸುತ್ತದೆ’ ಎಂದರು ಎಂ.ಬಿ.ಎ ಪದವೀಧರ ಸುಧೀರ್‌. ‘ಏನೇ ಆದರೂ ಜಮೀನನ್ನು ಖಾಲಿ ಬಿಡಬಾರದು ಅಷ್ಟೇ’ ಎನ್ನುತ್ತಾ ಮುಂದೆ ನಡೆದರು.

ಕೊಳವೆಬಾವಿಗಳೇ ಆಧಾರ

ಒಟ್ಟು ಜಮೀನಿನಲ್ಲಿ 8 ಎಕರೆ ಮಾತ್ರ ತುಂಗಭದ್ರಾ ಕಾಲುವೆಯ ಅಂಚಿನಲ್ಲಿದೆ. ‘ಆದರೆ ಜಮೀನು ಕೊನೆಭಾಗದಲ್ಲಿರುವುದರಿಂದ ನೀರು ಬರುವುದು ಕಡಿಮೆ. ಬಂದರೂ ಕೆಲವು ತಿಂಗಳು ಸಿಗಬಹುದು. ಉಳಿದಂತೆ ಮೂರು ಕೊಳವೆಬಾವಿಗಳೇ ನೀರಿಗೆ ಆಧಾರ. ಇಷ್ಟಾದರೂ, ಮಳೆಗಾಲದಲ್ಲಿ ಮಳೆ ನೀರನ್ನು ಸಮರ್ಪಕವಾಗಿ ಬಳಸುತ್ತಾರೆ. ತೋಟದಲ್ಲಿ ಮಳೆ ನೀರು ಇಂಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನಿಯಮಿತವಾಗಿ ದೊರೆಯುವ ಕಾಲುವೆ ನೀರನ್ನು ಬಾವಿಯಲ್ಲಿ ಸಂಗ್ರಹಿಸಿ, ಅದನ್ನು ಬೆಳೆಗಳಿಗೆ ಪೂರೈಸುತ್ತಾರೆ.

ದಶಕಗಳ ಹಿಂದೆ ಈಶ್ವರರಾವ್ ಈ ಒಣಭೂಮಿಯನ್ನು ಖರೀದಿಸಿದಾಗ ಜನರು ಅಪಹಾಸ್ಯ ಮಾಡಿದ್ದರಂತೆ. ಈಗ ಅವರು ಅದೇ ಜಮೀನಿನಲ್ಲಿ ವೈವಿಧ್ಯಮಯ ಬೆಳೆಗಳ ಸಸ್ಯಲೋಕವನ್ನು ಸೃಷ್ಟಿಸಿದ್ದಾರೆ.

‘ಜೀವಾಮೃತ, ಮಣ್ಣಿಗೆ ಮುಚ್ಚಿಗೆ, ಸಸ್ಯ ಜನ್ಯ ಕಷಾಯಗಳನ್ನು ಬಳಸುವುದರಿಂದ ಜಮೀನಿನ ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳು ಹೆಚ್ಚಾಗಿವೆ. ಮಣ್ಣಿನಲ್ಲಿ ದೀರ್ಘಕಾಲ ತೇವಾಂಶ ಹಿಡಿದಿಡುವ ಶಕ್ತಿ ವೃದ್ಧಿಯಾಗಿದೆ. ಹೀಗಾಗಿಯೇ ಬರದಲ್ಲೂ ಬೆಳೆಗಳು ನಗುತ್ತಿವೆ’ ಎಂಬುದು ಅವರ ಅಭಿಪ್ರಾಯ.

ದ್ರವರೂಪಿ ಗೊಬ್ಬರ ಪೂರೈಕೆ

ಕಷಾಯ, ದ್ರವರೂಪಿ ಗೊಬ್ಬರಗಳನ್ನು ತಯಾರಿಸಲು ಒಂದು ಸಾವಿರ ಲೀಟರ್‌ ಸಂಗ್ರಹ ಸಾಮರ್ಥ್ಯದ ನಾಲ್ಕು ತೊಟ್ಟಿಗಳನ್ನು ಮಾಡಿಕೊಂಡಿದ್ದಾರೆ. ಒಂದರಲ್ಲಿ ದಶಪರ್ಣ ಕಷಾಯ ತಯಾರಿಸುತ್ತಾರೆ. ಜಮೀನು ಮತ್ತು ಸುತ್ತಮುತ್ತ ಸಿಗುವ ವಿವಿಧ ಬಗೆಯ ಗಿಡಗಳ ಎಲೆಗಳನ್ನು ಸಂಗ್ರಹಿಸಿ, ತೊಟ್ಟಿಗೆ ಹಾಕಿ, ಅದರೊಂದಿಗೆ ಅರಿಸಿನ, ಶುಂಠಿ, ಮೆಣಸಿನಕಾಯಿ, ತಂಬಾಕು ಸೇರಿಸಿ 45 ದಿನಗಳ ಕಾಲ ನೀರಿನಲ್ಲಿ ನೆನೆಸುತ್ತಾರೆ. ಅದರಿಂದ ತಯಾರಾಗುವ ಕಷಾಯವನ್ನು, ಅಳತೆಗೆ ತಕ್ಕಂತೆ ನೀರಿನಲ್ಲಿ ಸೇರಿಸಿ, ಹನಿನೀರಾವರಿ ಪೈಪುಗಳ ಮೂಲಕ ಬೆಳೆಗಳಿಗೆ ಪೂರೈಸುತ್ತಿದ್ದಾರೆ. ಉಳಿದ ಎರಡು ತೊಟ್ಟಿಗಳಲ್ಲಿ ಆಕಳು ಗಂಜಲ, ಸಗಣಿ, ಬೆಲ್ಲ ಮಿಶ್ರಣ ಮಾಡಿ ಜೀವಾಮೃತ ತಯಾರಿಸುತ್ತಾರೆ. ಅದನ್ನೂ ಜಮೀನಿಗೆ ಕೊಡುತ್ತಾರೆ. ಜೀವಾಮೃತ ತಯಾರಿಸುವುದಕ್ಕಾಗಿಯೇ ಹತ್ತು ದೇಸಿ ತಳಿಗಳನ್ನು ಸಾಕಿದ್ದಾರೆ.

‌‘ಏಕಬೆಳೆ ಪದ್ಧತಿಗೆ ತಮ್ಮನ್ನು ಸಂಪೂರ್ಣ ಒಪ್ಪಿಸಿಕೊಂಡು, ಮಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ತೋರದ, ಭೂಮಿಗೆ ಹೆಚ್ಚು ಸಮಯ ಕೊಡದ ರೈತರು ಈ ತಂದೆ–ಮಗನ ಮಾದರಿ ಕೃಷಿ ಬದ್ಧತೆಯಿಂದ ಪಾಠಗಳನ್ನು ಕಲಿಯಬೇಕು’ ಎನ್ನುತ್ತಾರೆ ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ. ಮಿಶ್ರಬೆಳೆ ಕುರಿತ ಹೆಚ್ಚಿನ ಮಾಹಿತಿಗಾಗಿ ಸುಧೀರ್ ಅವರ ಸಂಪರ್ಕ ಸಂಖ್ಯೆ: 8660409387

ಚಿತ್ರಗಳು: ಬಿ.ಎಂ.ರುದ್ರಮುನಿಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT