ಹನಿ ನೀರಾವರಿಯಲ್ಲಿ ಬದನೆ ಬೆಳೆ

ಶನಿವಾರ, ಜೂಲೈ 20, 2019
26 °C
ಮಳವಳ್ಳಿ ತಾಲ್ಲೂಕಿನಾದ್ಯಂತ ಅರಿವು ಕಾರ್ಯಕ್ರಮ, ಪ್ರಾತ್ಯಕ್ಷಿಕೆ

ಹನಿ ನೀರಾವರಿಯಲ್ಲಿ ಬದನೆ ಬೆಳೆ

Published:
Updated:
Prajavani

ಮಳವಳ್ಳಿ: ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯಲ್ಲಿ, ಸೂಕ್ಷ್ಮ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, 25 ಸಾವಿರ ಎಕರೆಗೆ ನೀರೊದಗಿಸುವ ಗುರಿ ಹೊಂದಲಾಗಿದೆ.

ಹನಿ ನೀರಾವರಿ ಮೂಲಕ ನೀರೊದಗಿಸುವ ಬಗ್ಗೆ ಸ್ಥಳೀಯ ರೈತರಿಗೆ ಅರಿವು ಮೂಡಿಸಲು ಒಂದೊಂದು ಪ್ರದೇಶದಲ್ಲಿ ಒಬ್ಬೊಬ್ಬರ ರೈತರ ಜಮೀನಿನಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಪ್ರಸ್ತುತ ರಾವಣಿ ಗ್ರಾಮದ ಬಳಿ ಮಾದಯ್ಯ ಎಂಬುವರ ಜಮೀನಿನಲ್ಲಿ ಮುಕ್ಕಾಲು ಎಕರೆ ವಿಸ್ತೀರ್ಣದಲ್ಲಿ ಹೈಬ್ರಿಡ್ ತಳಿಯ ಬದನೆಕಾಯಿ ಬೆಳೆಯನ್ನು ಹನಿ ನೀರಾವರಿ ಮೂಲಕ ಬೆಳೆಯಲಾಗಿದೆ. ಈ ಬೆಳೆಗೆ ಆಧುನಿಕವಾಗಿ ನೀರಿನೊಡನೆ ರಾಸಾಯನಿಕ ಸೇರಿಸುವುದು, ನೀರು ಪೂರೈಕೆ, ಕಟಾವು, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಬೇಸಾಯ ತಜ್ಞ ಪಿ.ವಿ.ಜೋಶಿ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಮಾದಯ್ಯ ಅವರ ಜಮೀನಿನಲ್ಲಿ ಸೂರ್ಯಕಾಂತಿ, ಚೆಂಡು ಹೂ ಬೆಳೆಯಲಾಗಿತ್ತು. ಈಗ ಬದನೆಕಾಯಿ ಬೆಳೆ ಹಾಕಲಾಗಿದ್ದು, ಅವರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ಇದ್ದಾರೆ.

‘ಸೂಕ್ಷ್ಮ ಹನಿ ನೀರಾವರಿ ಯೋಜನೆ ಮೂಲಕ ಒಂದು ಎಕರೆ ಬೆಳೆಯನ್ನು ಒಬ್ಬರೇ ನಿರ್ವಹಣೆ ಮಾಡಿಕೊಳ್ಳಬಹುದು. ಅತಿ ಕಡಿಮೆ ನೀರಿನಲ್ಲಿ ಬೆಳೆಯನ್ನು ಬೆಳೆಯಬಹುದಾಗಿದ್ದು, ನೀರು ನೇರವಾಗಿ ಬೆಳೆಯ ಬೇರಿಗೆ ಪೂರೈಕೆಯಾಗುವುದರಿಂದ ವ್ಯರ್ಥವಾಗುವುದಿಲ್ಲ. ಕಳೆ ಬೆಳೆಯುವುದಿಲ್ಲ.

ಇದರ ಜತೆಗೆ ಗೊಬ್ಬರ ಮತ್ತು ಔಷಧಿಗಳನ್ನು ಯಾಂತ್ರೀಕೃತವಾಗಿ ಬಳಸುವುದರಿಂದ ಎಲ್ಲಾ ಬೆಳೆಗೂ, ಸಮಾನವಾಗಿ ಪೂರೈಕೆಯಾಗಿ ಉತ್ತಮ ಇಳುವರಿಯೂ ದೊರಕುತ್ತದೆ. ಕಡಿಮೆ ವೆಚ್ಚದಲ್ಲಿ ಬೆಳೆ ಬೆಳೆಯವುದರಿಂದ ಹೆಚ್ಚು ಲಾಭವನ್ನು ಗಳಿಸಬಹುದಾಗಿದೆ. ಈಚೆಗೆ ಕೃಷಿಗೆ ಹಿನ್ನಡೆಯಾಗುತ್ತಿರುವ ಸಂದರ್ಭದಲ್ಲಿ ಈ ಯೋಜನೆ ಬಹುಪಯೋಗಿಯಾಗಿದೆ’ ಎಂದು ಜೋಶಿ ತಿಳಿಸಿದರು.

‘ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುತ್ತಿದೆ. ಹೈಬ್ರಿಡ್‌ ಬದನೆ ಬೆಳೆ ಹಾಕಿ 60 ದಿನಗಳಾಗಿದ್ದು, 90 ದಿನಗಳಲ್ಲಿ ಬೆಳೆಯನ್ನು ಕಟಾವು ಮಾಡಬಹುದಾಗಿದೆ. ಈ ವ್ಯಾಪ್ತಿಯಲ್ಲಿ ಒಂದು ಸಾವಿರ ರೈತರು ಬದನೆ ಬೆಳೆಯಲು ಸೂಚಿಸಲಾಗುವುದು. ಇದು ಮಾರುಕಟ್ಟೆಯಲ್ಲೂ ಫಸಲು ಮಾರಾಟ ಮಾಡಲು ಅನುಕೂಲವಾಗಲಿದೆ. ಈ ಎಲ್ಲಾ ಮಾಹಿತಿಗಳನ್ನು ಯೋಜನೆಯ ಫಲಾನುಭವಿಗಳಿಗೆ ತಿಳಿಸುವ ಉದ್ದೇಶದಿಂದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !