ಭಾನುವಾರ, ಸೆಪ್ಟೆಂಬರ್ 26, 2021
21 °C

ನಿವೃತ್ತ ಶಿಕ್ಷಕನಿಂದ ಕಲ್ಲಂಗಡಿ ಬೇಸಾಯ: 70 ದಿನದಲ್ಲಿ ₹5 ಲಕ್ಷ ಆದಾಯ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ದೇಗಲಮಡಿ ಗ್ರಾಮ ಎಲೆಬಳ್ಳಿ ಬೇಸಾಯಕ್ಕೆ ಹೆಸರು ಮಾಡಿದೆ. ಇದಕ್ಕೆ ‘ಮಿನಿ ದುಬೈ’ ಎಂಬ ಖ್ಯಾತಿಯೂ ಇದೆ. ಆದರೆ ಈ ‘ಮಿನಿ ದುಬೈ’ನ ರೈತರು ಎಲೆಬಳ್ಳಿ ಬಿಟ್ಟು ಕಲ್ಲಂಗಡಿಯತ್ತ ಹೊರಳಿದ್ದು ಬಂಪರ್ ಆದಾಯ ಪಡೆಯುತ್ತಿದ್ದಾರೆ.

ಇಲ್ಲಿನ ನಿವೃತ್ತ ಶಿಕ್ಷಕ ಚಿದಂಬರರಾವ್ ಕುಲಕರ್ಣಿ ತಮ್ಮ ಒಂದು ಹೆಕ್ಟೇರ್ ಜಮೀನಿನಲ್ಲಿ ಕಲ್ಲಂಗಡಿ ಬೆಳೆದು ಕೇವಲ 70 ದಿನಗಳಲ್ಲಿ ₹7 ಲಕ್ಷ ಗಳಿಸಿದ್ದಾರೆ. ಖರ್ಚು ವೆಚ್ಚ ತೆಗೆದರೆ  ₹5 ಲಕ್ಷ ನಿವ್ವಳ ಆದಾಯ ಬಂದಿದೆ.

ಗ್ರಾಮದ ಹೊಸ ಬಡಾವಣೆ (ಬಡಗ್ಯಾನಕಲ್) ಸಿದ್ದೇಶ್ವರ ನಗರದ ಎದುರಿಗಿರುವ ಜಮೀನಿನಲ್ಲಿ ಕಲ್ಲಂಗಡಿ ಬೆಳೆದ ಅವರು ಬರೋಬ್ಬರಿ 85 ಟನ್ ಇಳುವರಿ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಒಂದೊಂದು ಕಾಯಿ ಕನಿಷ್ಠ 4ರಿಂದ 6 ಕೆ.ಜಿ ಇದ್ದು, ನೆರೆಯ ತೆಲಂಗಾಣದ ವರ್ತಕರು ತೋಟಕ್ಕೆ ಬಂದುಖರೀದಿಸಿ ಒಯ್ಯುತ್ತಿದ್ದಾರೆ ಎಂದು ಅವರ ಸಂಬಂಧಿ ದತ್ತಾತ್ರೇಯ ಕುಲಕರ್ಣಿ ತಿಳಿಸಿದರು. ಪ್ರತಿ ಕೆ.ಜಿ ಕಲ್ಲಂಗಡಿಗೆ ₹8 ರಂತೆ 85 ಟನ್ ಮಾರಾಟ ಮಾಡಿದ್ದಾರೆ. ಇನ್ನೂ 2 ಟನ್ ಉತ್ಪನ್ನ (ಸೆಕೆಂಡ್ಸ್) ಬರುವ ನಿರೀಕ್ಷೆ ಇದೆ.

ಹೊಲಕ್ಕೆ ವನ್ಯಜೀವಿಗಳಿಂದ ರಕ್ಷಣೆಗಾಗಿ ಸೋಲಾರ್ ತಂತಿ ಬೇಲಿ ಅಳವಡಿಸಿಕೊಂಡಿದ್ದಾರೆ. ಬೋದು ಮಾಡಿ ಮಲ್ಚಿಂಗ್ ಪದ್ಧತಿಯಂತೆ ಪ್ಲಾಸ್ಟಿಕ್ ಕವರ್ ಹೊದೆಸಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಪ್ರತಿ ಹೆಕ್ಟೇರ್‌ನಲ್ಲಿ ಬೇಸಾಯಕ್ಕೆ ಮೊದಲ ಬಾರಿಗೆ ₹1.5 ಲಕ್ಷ ಖರ್ಚು ತಗುಲಿದೆ.

‘ತೋಟಗಾರಿಕಾ ಇಲಾಖೆಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ರೈತರು ಆಸಕ್ತಿಯಿಂದ ಕಲ್ಲಂಗಡಿ ಬೇಸಾಯ ನಡೆಸಿ ಉತ್ತಮ ಲಾಭ ಪಡೆಯುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಕಾಲ ಕಾಲಕ್ಕೆ ಮಾರ್ಗದರ್ಶನ ಮಾಡಿದ್ದಾರೆ’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕ ಅಜಿಮುದ್ದಿನ್ ತಿಳಿಸಿದರು.

ಮತ್ತೆ ಕಲ್ಲಂಗಡಿ ಬೇಸಾಯ

₹5 ಲಕ್ಷ ಆದಾಯ ಪಡೆಯುವ ಮೂಲಕ ಉತ್ತೇಜಿತರಾದ ದತ್ತಾತ್ರೆಯ ಕುಲಕರ್ಣಿ ಇದೇ ಹೊಲದಲ್ಲಿ ಮತ್ತೆ ಕಲ್ಲಂಗಡಿ ಬೇಸಾಯ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಇದಕ್ಕಾಗಿ 18 ಸಾವಿರ ಸಸಿ (ಅಗಿ) ಬುಕ್ ಮಾಡಿದ್ದಾರೆ. ಮೊದಲ ಬಾರಿಗೆ ಬೋದು ಮಾಡಲು ಹಾಗೂ ಮಲ್ಚಿಂಗ್ ಪೇಪರ್ ಮತ್ತು ಹನಿ ನೀರಾವರಿ ವ್ಯವಸ್ಥೆಗೆ ಹೆಚ್ಚು ಹಣ ವ್ಯಯವಾಗಿದೆ. ಆದರೆ ಈಗ ಸಸಿ ಮತ್ತು ಔಷಧ ಹೊರತುಪಡಿಸಿದರೆ ಬೇರೆ ಖರ್ಚು ಇರುವುದಿಲ್ಲ ಎಂಬುದು ಅವರ ಅನಿಸಿಕೆ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು