ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಬಾಳು ಹಸಿರಾಗಿಸಿದ ‘ಹಸಿ ಶುಂಠಿ’

ನೀರಿನ ಮಿತ ಬಳಕೆಗೆ ಹನಿ ನೀರಾವರಿ ಪದ್ಧತಿ ಅಳವಡಿಕೆ: ಆರ್ಥಿಕ ಪ್ರಗತಿಗೆ ತೋಟಗಾರಿಕೆ ಬೆಳೆ ಪೂರಕ
Last Updated 19 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಭಾಲ್ಕಿ: ರೈತರು ಕೇವಲ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯದೆ, ತೋಟಗಾರಿಕೆ ಹಾಗೂ ಬಹು ಬೆಳೆ ಪದ್ಧತಿ ಅನುಸರಿಸಬೇಕು. ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳಬೇಕು. ಆಗ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬಹುದು...

ಇದು ತಾಲ್ಲೂಕಿನ ಅಹಮದಾಬಾದ್‌ ಗ್ರಾಮದ ಪ್ರಗತಿಪರ ರೈತ ಸಂತೋಷ ಪಾಟೀಲ ಅವರ ಮಾತು.

ಅವರು ತಮಗಿರುವ ಆರು ಎಕರೆ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಮೂಲಕ ವಾರ್ಷಿಕವಾಗಿ ಕನಿಷ್ಠ ₹4 ಲಕ್ಷ ಆದಾಯ ಗಳಿಸುತ್ತ, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂದು ಸ್ವಾವಲಂಬಿ ಜೀವನ ನಡೆಸುತ್ತ ಇತರ ಅನ್ನದಾತರಿಗೆ ಮಾದರಿ ಆಗಿದ್ದಾರೆ.

‘ಸದ್ಯ 1 ಎಕರೆಯಲ್ಲಿ ಟೊಮೆಟೊ, ಮೂರು ಎಕರೆಯಲ್ಲಿ ಬೆಳೆದಿರುವ ಹಸಿ ಶುಂಠಿ ಕಟಾವಿಗೆ ಬಂದಿದೆ. ನೀರಿನ ಸಮಸ್ಯೆ ಬಗೆ ಹರಿಸಿಕೊಳ್ಳುಲು ಒಟ್ಟು ನಾಲ್ಕು ಕೊಳವೆ ಬಾವಿಗಳನ್ನು ಕೊರೆಯಿಸಿದ್ದೇನೆ. ಕಳೆದ ವರ್ಷ ಉತ್ತಮ ಮಳೆ ಆಗಿದ್ದರಿಂದ ಸದ್ಯ ಎಲ್ಲ ಕೊಳವೆ ಬಾವಿಗಳಲ್ಲೂ 2 ಇಂಚು ನೀರು ಇದೆ. ಕೊಳವೆ ಬಾವಿಯ ನೀರನ್ನು ತೆರೆದ ಬಾವಿಗೆ ಹರಿಬಿಟ್ಟು, ನಂತರ ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗಳಿಗೆ ನೀರುಣಿಸಿ, ನೀರಿನ ಮಿತ ಬಳಕೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ರೈತ ಸಂತೋಷ.

‘ಕಳೆದ ದೀಪಾವಳಿ ಸಂದರ್ಭದಲ್ಲಿ 2 ಎಕರೆ ಭೂಮಿಯಲ್ಲಿ ಚೆಂಡು ಹೂ ಬೆಳೆದು ₹4 ಲಕ್ಷ ಆದಾಯ ಗಳಿಸಿದ್ದೇನೆ. ಚೆಂಡು ಹೂ ಬೆಳೆಯಲು, ಕಟಾವು ಕೂಲಿ, ಮಾರುಕಟ್ಟೆ ಸಾಗಣೆ ಖರ್ಚು ಸೇರಿದಂತೆ ಒಟ್ಟು ₹2 ಲಕ್ಷ ಖರ್ಚಾದರೂ, ₹2 ಲಕ್ಷ ನಿವ್ವಳ ಆದಾಯ ಗಳಿಸಿದ್ದೇನೆ. ಸದ್ಯ ಮೂರು ತಿಂಗಳ ಬೆಳೆಯಾಗಿರುವ ಟೊಮೆಟೊಗೆ ಉತ್ತಮ ದರ ಸಿಕ್ಕಿಲ್ಲ. ಆದರೂ ₹30 ಸಾವಿರ ರೂಪಾಯಿ ಆದಾಯ ಗಳಿಸಿದ್ದೇನೆ. ಕಳೆದ ಜೂನ್‌ ತಿಂಗಳಿನಲ್ಲಿ 3 ಎಕರೆ ಭೂಮಿಯಲ್ಲಿ ನಾಟಿ ಮಾಡಿ ಹಸಿ ಶುಂಠಿಯನ್ನು ಸಮೃದ್ಧವಾಗಿ ಬೆಳೆದಿದ್ದೇನೆ. 10 ರಿಂದ 15 ದಿನದಲ್ಲಿ ಮಾರುಕಟ್ಟೆಗೆ ಸಾಗಿಸುವವನಿದ್ದೇನೆ. ಅಂದಾಜು 250 ರಿಂದ 300 ಕ್ವಿಂಟಲ್‌ ಬೆಳೆ ಆಗುವ ನಿರೀಕ್ಷೆ ಇದೆ. ಕ್ವಿಂಟಾಲ್‌ಗೆ ಕನಿಷ್ಠ ₹3 ಸಾವಿರ ಬೆಲೆ ಇದ್ದರೆ, ₹7.5 ಲಕ್ಷ ಆದಾಯ ಗಳಿಸುತ್ತೇನೆ. ₹4 ಲಕ್ಷ ಲಾಗೋಡಿ ತೆಗೆದರೂ ಏನಿಲ್ಲವೆಂದರೆ ₹3.5 ಲಕ್ಷ ನಿವ್ವಳ ಲಾಭ ಆಗುವ ನಿರೀಕ್ಷೆಯಲ್ಲಿ ಇದ್ದೇನೆ. ಒಟ್ಟಾರೆ ವಾರ್ಷಿಕವಾಗಿ ಎಲ್ಲ ಬೆಳೆಗಳಿಂದ ಕೃಷಿ ಸಂಬಂಧಿತ ಎಲ್ಲ ಖರ್ಚು ಹೊರತುಪಡಿಸಿ ಕನಿಷ್ಠ ₹4 ಲಕ್ಷ ಸಂಪಾದಿಸುತ್ತೇನೆ’ ಎಂದು ರೈತ ಸಂತೋಷ ಪಾಟೀಲ ಹೆಮ್ಮೆಯಿಂದ, ಸಂತೋಷದಿಂದ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT