ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಅಂಚೆ ಸೇವಕರ ಪ್ರತಿಭಟನೆ

ವೇತನ ಪರಿಷ್ಕರಣೆಗೆ ಸಂಬಂಧಿತ ಕಮಲೇಶ್‌ ಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ
Last Updated 25 ಮೇ 2018, 7:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗ್ರಾಮೀಣ ಅಂಚೆ ಸೇವಕರ ವೇತನ ಪರಿಷ್ಕರಣೆಗಾಗಿ ರಚಿಸಿದ್ದ ಕಮಲೇಶ್‌ ಚಂದ್ರ ಸಮಿತಿ ವರದಿಯನ್ನು ಕೇಂದ್ರ ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ವೇಳೆ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಬಾಲಕೃಷ್ಣ, ‘ಕಮಲೇಶ್‌ ಚಂದ್ರ ಸಮಿತಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ 16 ತಿಂಗಳು ಕಳೆದಿವೆ. ಇದಕ್ಕೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಇದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಲು ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.

‘ಗ್ರಾಮೀಣ ಅಂಚೆ ನೌಕರರ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಲಾಖೆಗೆ ವರದಿ ಸಲ್ಲಿಸಿದರೂ ನೌಕರರ ಸೇವೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಅನೇಕ ಬಾರಿ ಪ್ರತಿಭಟನೆ, ಮುಷ್ಕರ, ರ್‌್ಯಾಲಿ ಹಮ್ಮಿಕೊಂಡರೂ ಇಲಾಖೆ, ಕೇಂದ್ರ ಸರ್ಕಾರವಾಗಲಿ ನಮ್ಮ ಸೇವೆಗೆ ನ್ಯಾಯ ದೊರಕಿಸಿ ಕೊಟ್ಟಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇವತ್ತು ಅಂಚೆ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಗ್ರಾಮೀಣ ಅಂಚೆ ನೌಕರರ ಕೆಲಸಕ್ಕೆ ಹೆಚ್ಚಿನ ಪಾತ್ರ ಇದೆ. ಹೀಗಿರುವಾಗ ನಮ್ಮ ವಿವಿಧ ಬೇಡಿಕೆಗಳಿಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿ ಯಲ್ಲ. ಗ್ರಾಮೀಣ ಅಂಚೆ ಸೇವಕರ ಆರ್ಥಿಕ ಭದ್ರತೆ ತುಂಬಲು ವೇತನ ಪರಿಷ್ಕರಣೆಗಾಗಿ ಕೇಂದ್ರಕ್ಕೆ ಸಲ್ಲಿಸಿರುವ ಕಮಲೇಶ್‌ಚಂದ್ರ ಸಮಿತಿ ವರದಿ ಉತ್ತಮವಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತು ವರದಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, ‘ಗ್ರಾಮೀಣ ಅಂಚೆ ಸೇವಕರ ವೇತನ, ಸಮಸ್ಯೆಗಳು, ಒತ್ತಡಗಳು ಸೇರಿದಂತೆ ಅನೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿ ಟ್ಟಿದ್ದೇವೆ. ಆದರೂ ಸಹ ನಮ್ಮ ಸೇವೆಗೆ ಸ್ಪಂದಿಸುತ್ತಿಲ್ಲ. ಗ್ರಾಮೀಣ ಅಂಚೆ ನೌಕರರು ಸೇವೆಯ ಅವಧಿಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ನಮಗೆ ಯಾವುದೇ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ’ ಎಂದರು.

‘ದೇಶದಲ್ಲಿ 2.70 ಲಕ್ಷ ಗ್ರಾಮೀಣ ಅಂಚೆ ನೌಕರರರು ಇವತ್ತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ 7ನೆ ವೇತನ ಆಯೋಗ ಜಾರಿ ಇದ್ದರೂ ಕೇವಲ ಒಂದು ಲಕ್ಷಕ್ಕೂ ಹೆಚ್ಚು ಅಂಚೆ ನೌಕರರಿಗೆ ಮಾತ್ರ ಅನ್ವಯವಾಗಿದೆ. ಆದರೆ, ಗ್ರಾಮೀಣ ಅಂಚೆ ನೌಕರರಿಗೆ ಮಾತ್ರ ಈ ಯೋಜನೆ ಜಾರಿಯಾಗಿಲ್ಲ. ಇತರೆ ಅಂಚೆ ನೌಕರರಿಗಿಂತ ಗ್ರಾಮೀಣ ಅಂಚೆ ನೌಕರರು ಹೆಚ್ಚು ಕೆಲಸ ನಿರ್ವಹಿಸುತ್ತಾರೆ. ನಮ್ಮ ಸೇವೆಗೆ ಸಾಮಾಜಿಕ ಭದ್ರತೆ ಒದಗಿಸಿಲ್ಲ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಮಂದಿ ಗ್ರಾಮೀಣ ಅಂಚೆ ನೌಕರರು ಇದ್ದಾರೆ. ಈಗಾಗಲೇ ಸೇವೆಯನ್ನು ಮೊಟಕುಗೊಳಿಸಿ ಅಂಚೆ ಕಚೇರಿ ಎದುರು ಕಳೆದ ಮೂರು ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರೂ ಈವರೆಗೂ ಯಾವೊಬ್ಬ ಅಧಿಕಾರಿ ಭೇಟಿ ನೀಡಿಲ್ಲ. ನಮ್ಮ ಬೇಡಿಕೆಗಳ ಅಹವಾಲು ಸ್ವೀಕರಿಸಿಲ್ಲ. ಇದೇ ರೀತಿ ಮುಂದುವರೆದರೆ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಖಜಾಂಚಿ ಟಿ.ಎನ್‌.ವಿಜಯ್‌ ಕುಮಾರ್‌, ಕಾರ್ಯದರ್ಶಿ ಎಂ.ರಾಮಪ್ಪ, ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷ ಪಿ.ಸುಬ್ರಮಣ್ಯಂ, ಮುಖಂಡರಾದ ಎಲ್‌.ಶಂಕರಪ್ಪ, ಶಾಂತಮ್ಮ, ಎಚ್‌.ಆರ್‌. ನರಸಿಂಹಮೂರ್ತಿ, ಮಂಚೇನಹಳ್ಳಿ ಮಂಜುನಾಥ್‌, ಅಜ್ಜವಾರ ಪ್ರದೀಪ್‌, ಗೋವಿಂದಪ್ಪ ಪ್ರತಿಭಟನೆಯಲ್ಲಿ ಇದ್ದರು.

**
7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರ ಗ್ರಾಮೀಣ ಅಂಚೆ ಸೇವಕರನ್ನು ಹೊರತುಪಡಿಸಿ ಉಳಿದೆಲ್ಲ ನೌಕರರ ಸಂಬಳ ಏರಿಕೆ ಮಾಡಿದ್ದು ಸರಿಯಲ್ಲ
- ವಿ.ಬಾಲಕೃಷ್ಣ, ಜಿಲ್ಲಾ ಘಟಕದ ಅಧ್ಯಕ್ಷ, ಗ್ರಾಮೀಣ ಅಂಚೆ ಸೇವಕರ ಸಂಘ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT