ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಗಳಲ್ಲೂ ಕೈತೋಟ ಮಾಡಿ..!

Last Updated 2 ಜುಲೈ 2018, 20:26 IST
ಅಕ್ಷರ ಗಾತ್ರ

ಮನೆಯ ಆಸುಪಾಸು, ಹಿತ್ತಿಲಿನಲ್ಲಿ ಮಾತ್ರವಲ್ಲದೇ ಹೊಲದಲ್ಲೂ ಕೈತೋಟ ಮಾಡಬಹುದು.ಈ ಕುರಿತು ಕೈತೋಟಕ್ಕೆ ಸ್ಥಳ ಆಯ್ಕೆ,ವಿನ್ಯಾಸ, ಮಾದರಿ ಸೇರಿದಂತೆ ಹಲವು ವಿಚಾರಗಳಬಗ್ಗೆ ಎಲ್.ಸಿ.ಚನ್ನರಾಜು ಇಲ್ಲಿ ವಿವರಿಸಿದ್ದಾರೆ.

ಮೂರು ವಿಧಾನಗಳಲ್ಲಿ ಕೈತೋಟ ಮಾಡಬಹುದು. ಒಂದು ಮನೆಯ ಅಂಗಳ, ಹಿತ್ತಿಲು ಅಥವಾ ಆಸುಪಾಸಿನಲ್ಲಿ, ಎರಡನೆಯದು ಹೊಲದ ಪ್ರತ್ಯೇಕ ಸ್ಥಳದಲ್ಲಿ. ಮೂರನೆಯದು ಪ್ರಮುಖ ಬೆಳೆಗಳ ಜತೆಗೆ ಅಂತರ ಬೆಳೆಯಾಗಿ ತರಕಾರಿ ಬೆಳೆಯುವುದು. ಇಲ್ಲಿ ಹೊಲದಲ್ಲಿ ಪ್ರತ್ಯೇಕ ಸ್ಥಳ ನಿಗದಿಪಡಿಸಿ ಕೈತೋಟ ಮಾಡುವ ಬಗ್ಗೆ ತಿಳಿಯೋಣ.

ಹೊಲದಲ್ಲಿ ಸಮರ್ಪಕವಾಗಿ ಬಿಸಿಲು ಬೀಳುವ ಜಾಗವನ್ನು ಕೈತೋಟಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಕು. ಹೊಲದ ಮೂಲೆಯಾದರೆ ಉತ್ತಮ. ಮೊದಲು, ಯಾವ ಉದ್ದೇಶಕ್ಕಾಗಿ ಕೈತೋಟ ಮಾಡುತ್ತಿದ್ದೀರಿ (ಮನೆ ಬಳಕೆಗೋ ಅಥವಾ ಮಾರಾಟದ ಉದ್ದೇಶಕ್ಕೋ) ಎಂದು ನಿರ್ಧರಿಸಬೇಕು. ಮನೆ ಬಳಕೆಗಾದರೆ, ಜನಸಂಖ್ಯೆ ಆಧರಿಸಿ ಜಾಗ ನಿಗದಿಪಡಿಸಿಕೊಳ್ಳಿ. ವಾಣಿಜ್ಯ ಉದ್ದೇಶಕ್ಕಾದರೆ ಜಾಗದ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳಬೇಕು.

ಭೂಮಿ ಸಿದ್ದತೆ: ಪೂರ್ವ ಮುಂಗಾರಿನ ಮಳೆಯಲ್ಲಿ ಒಮ್ಮೆ ಉಳುಮೆ ಮಾಡಿ ಮಣ್ಣಿನಲ್ಲಿರುವ ಕಳೆಗಳು ಹುಟ್ಟಿದ ನಂತರ ಮತ್ತೊಮ್ಮೆ ಉಳುಮೆ ಮಾಡಬೇಕು. ಎರಡನೆಯ ಉಳುಮೆ ನಂತರ ಕೊಟ್ಟಿಗೆ ಗೊಬ್ಬರ ಎರಚಿ ಮಣ್ಣಿನ ಮೇಲ್ಮೈ ಉಳುಮೆ ಮಾಡಿ ಮಣ್ಣನ್ನು ಮಾಗಲು ಬಿಡಬೇಕು.

ಚೌಕಿ ಮಡಿಗಳ ನಿರ್ಮಾಣ: ತರಕಾರಿ ಬೆಳೆಗಳನ್ನು ಬೆಳೆಯುವ ಅನುಪಾತಕ್ಕೆ ಅನುಗುಣವಾಗಿ ಭೂಮಿಯ ಇಳಿಜಾರನ್ನು ನೋಡಿಕೊಂಡು ಚೌಕಿ ಮಡಿಗಳನ್ನು ಮಾಡಿಕೊಳ್ಳಬೇಕು. ಇದ‌ರಿಂದ ಮಳೆ ನೀರು ಮತ್ತು ಮಣ್ಣಿನ ಪೋಷಕಾಂಶ ಕೊಚ್ಚಿ ಹೋಗದೆ ಉಳಿಯುತ್ತವೆ.

ಏರು ಮಡಿಗಳು: ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಬರುವ ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖೆ, ಪುಬ್ಬ, ಉತ್ತರ ಹಾಗೂ ಹಸ್ತ ಮಳೆಗಳು ರಭಸದಿಂದ ಸುರಿಯುತ್ತವೆ. ಆದ್ದರಿಂದ ಅಲ್ಪಕಾಲಿಕ ಸೊಪ್ಪು ತರಕಾರಿಗಳನ್ನು ನಾಲ್ಕು ಅಡಿ ಅಗಲ, ಅರ್ಧ ಅಡಿ ಎತ್ತರದ ಏರು ಮಡಿಗಳ ಮೇಲೆ ಬಿತ್ತಬೇಕು.

ಬೇಲಿ ವಿನ್ಯಾಸ: ಕೈತೋಟಕ್ಕೆ ಆಯ್ಕೆ ಮಾಡಿದ ಸ್ಥಳದ ಸುತ್ತ ನಾಲ್ಕರಿಂದ ಐದು ಅಡಿಗಳ ಅಂತರದಲ್ಲಿ ಗ್ಲಿರಿಸೀಡಿಯ, ನುಗ್ಗೆಯಂತಹ ಚಿಗುರುವ ಕಡ್ಡಿಗಳನ್ನು ನೆಡಬೇಕು. ಚಿಗುರುವ ಸ್ಥಳೀಯ ಮರ-ಗಿಡಗಳ ರೆಂಬೆ ಕೊಂಬೆಗಳನ್ನು ಕೂಡ ಬಳಸಬಹುದು. ಇವು ಸುಮಾರು ಐದು ಅಡಿಗಳಷ್ಟು ಉದ್ದವಿರಬೇಕು. ನೆಟ್ಟ ಒಂದೇ ವರ್ಷದಲ್ಲಿ ಬೆಳೆದು ಎತ್ತರವಾಗುವುದರಿಂದ ಸಾಕು ಪ್ರಾಣಿಗಳಿಂದ ಬೆಳೆ ರಕ್ಷಿಸಬಹುದು. ಈ ಗಿಡಗಳನ್ನು ಪ್ರತಿ ವರ್ಷ ಮುಂಗಾರು ಮಳೆಗಳಲ್ಲಿ ನೆರಳಾಗದಂತೆ ಸವರಬೇಕು. ಇವುಗಳ ಮಧ್ಯೆ ಸ್ಥಳೀಯವಾಗಿ ಸಿಗುವ ಬೇಲಿ ಮುಳ್ಳು ಮತ್ತು ರೆಂಬೆ ಕೊಂಬೆಗಳನ್ನು ಕಟ್ಟಬೇಕು.

ವಿನ್ಯಾಸಗಳು ಹೀಗಿವೆ

ವಾರ್ಷಿಕ ಬಳ್ಳಿ ತರಕಾರಿಗಳು: ಪೂರ್ವ ಮುಂಗಾರಿನಲ್ಲಿ ಬೇಲಿಯ ಒಳಭಾಗದಲ್ಲಿ ಒಂದು ಅಡಿ ಉದ್ದ, ಅಗಲ, ಆಳದ ಗುಂಡಿಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರ ತುಂಬಿ ಮಾಗಲು ಬಿಡಬೇಕು. ವಾರ್ಷಿಕ ತರಕಾರಿ ಬಳ್ಳಿಗಳು ಹಬ್ಬುವ ವಿಸ್ತೀರ್ಣವನ್ನು ಆಧರಿಸಿ ಗುಂಡಿಯಿಂದ ಗುಂಡಿಗೆ ಅಂತರ ಕೊಡಬೇಕು. ಸ್ಥಳೀಯ ಕಾಲಮಾನದ ಪ್ರಕಾರ ಬೀಜಗಳನ್ನು ಬಿತ್ತಬೇಕು. ತುಪ್ಪದಹೀರೆ, ಹೀರೆ, ಸಿಹಿ ಕುಂಬಳ, ಸೋರೆ, ಬೂದುಗುಂಬಳ ಬಳ್ಳಿಗಳು ಬೇಲಿ ಮೇಲೆ ಹಬ್ಬಿಸಲು ಸೂಕ್ತ.

ಸೊಪ್ಪುಗಳು: ಅಲ್ಪಾವಧಿಯ ಸೊಪ್ಪುಗಳಲ್ಲಿ ಅಪಾರ ವೈವಿಧ್ಯವಿದೆ. ಪೌಷ್ಟಿಕತೆಯ ಗಣಿಗಳಾದ ಇವುಗಳಿಗೆ ಕೈತೋಟದಲ್ಲಿ ಜಾಗ ಇದ್ದೇ ಇರಬೇಕು. ಸೊಪ್ಪುಗಳ ಬಿತ್ತನೆ ವಿಧಾನಕ್ಕೆ ಕೋಷ್ಠಕ ನೋಡಿ.

ಗೆಡ್ಡೆ–ಗೆಣಸುಗಳು: ಪಕ್ಷಿಗಳು, ಸಾಕುಪ್ರಾಣಿ, ಕಾಡುಪ್ರಾಣಿ ಹಾಗೂ ಮುಖ್ಯವಾಗಿ ಕೋತಿಕಾಟ ವಿಪರೀತವಾಗಿದ್ದರೆ, ಅಂಥ ಕಡೆ ಗೆಡ್ಡೆ ತರಗಾರಿಗಳಿಗೆ ಆದ್ಯತೆ ಕೊಡಬೇಕು. ಇಂಥ ಕಡೆ ಸಿಹಿ ಗೆಣಸು, ಮೂಲಂಗಿ(ಅಲ್ಪಾವಧಿ) ಬೆಳೆಯಬಹುದು. ಗೆಣಸನ್ನು ಕೈತೋಟದ ಅಂಚುಗಳಲ್ಲಿನ ಬದುಗಳ ಮೇಲೆ ಬೆಳೆಯಬಹುದು. ಮೂಲಂಗಿಯನ್ನು ಚೌಕಿಮಡಿಗಳ ಬದುಗಳ ಮೇಲೆ ಬೆಳೆಸಬಹುದು.

ಸುವರ್ಣಗೆಡ್ಡೆಯನ್ನು ತೋಟದ ಬೇಲಿಯ ಒಳಭಾಗ ಮತ್ತು ಬದುಗಳ ಮೇಲೆ ಅಥವಾ ಪ್ರತ್ಯೇಕವಾದ ಚೌಕಿಮಡಿಗಳಲ್ಲಿ ಬೆಳೆಸಬಹುದು. ಡಯಾಸ್ಕೋರಿಯಾ ಗೆಣಸುಗಳನ್ನು ಬೇಲಿ ಮೇಲೆ ಹಬ್ಬಿಸಬಹುದು. ಶುಂಠಿ ಮತ್ತು ಅರಿಶಿನವನ್ನು ಚೌಕಿ ಮಡಿಯ ಬದುಗಳ ಮೇಲೆ ಬೆಳೆಸಬಹುದು.

ಸೌತೆ, ಮಿಣಕಿ ಬಳ್ಳಿಗಳು: ಈ ಬಳ್ಳಿಗಳು ಹೊಲದಲ್ಲಿ ಕೆಲಸ ಮಾಡುವಾಗ ದಾಹ ತೀರಿಸುವಂತಹವು. ಇವುಗಳನ್ನು ಕೈತೋಟದ ಬೇಲಿ ಪಕ್ಕದಲ್ಲಿ ನೆಡಬೇಕು. ಸೌತೆಯನ್ನು ಬೇಲಿ ಮೇಲೆ ಮತ್ತು ಮಿಣಕಿ (ಮಸ್ಕ್ ಮೆಲನ್‌)ಯನ್ನು ನೆಲದ ಮೇಲೆ ಹಬ್ಬಿಸಬೇಕು.

ಬಣ್ಣದ ಸೌತೆ: ಕಡಿಮೆ ಕಾಲಾವಧಿಯ ಬಳ್ಳಿ ತರಕಾರಿ. ಬೀಜ ಬಿತ್ತಿದ 45-90 ದಿವಸಗಳವರೆಗೆ ಫಸಲು ಕೊಡುತ್ತದೆ. ಹಳದಿ ಬಣ್ಣದ ಕಾಯಿಗಳನ್ನು 15-20 ದಿವಸಗಳ ಕಾಲ ಶೇಖರಣೆ ಮಾಡಬಹುದು. ಬೇಲಿ ಪಕ್ಕ ನೆಟ್ಟು ನೆಲದ ಮೇಲೆ ಹಬ್ಬಿಸಬೇಕು.

ಹಿತ್ತಿಲು ಚಿತ್ತಾರಗಳು – ಕೈತೋಟದ ಕೈಪಿಡಿ

ಮನೆಯಂಗಳ, ಹಿತ್ತಿಲು, ಕೃಷಿ ಭೂಮಿಯಲ್ಲಿ ಕೈತೋಟ ಮಾಡುವ ಕುರಿತ ಮಾಹಿತಿಗಳನ್ನು ಸಂಗ್ರಹಿಸಿ ‘ಹಿತ್ತಿಲು ಚಿತ್ತಾರ’ ಕೃತಿಯನ್ನು ಬೆಂಗಳೂರಿನ ಪೀಪಲ್ ಟ್ರೀ ಸಂಸ್ಥೆ ಪ್ರಕಟಿಸಿದೆ. ಎಲ್.ಸಿ.ಚನ್ನರಾಜು ಈ ಕೃತಿಯ ಲೇಖಕರು. ಒಟ್ಟು ಹತ್ತು ಅಧ್ಯಾಯಗಳುಳ್ಳ ಈ ಪುಸ್ತಕದಲ್ಲಿ ಕೈತೋಟ ಮಾಡುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳು, ಕೈತೋಟದ ಮಾದರಿ ಮತ್ತು ವಿನ್ಯಾಸ, ಸಸಿ ಮಡಿಗಳ ತಯಾರಿಕೆ, ಬಿತ್ತನೆ ಬೀಜಗಳ ರಕ್ಷಣೆ, ಮಣ್ಣಿನ ಆರೈಕೆ, ಕೀಟ, ರೋಗಗಳ ನಿರ್ವಹಣೆ, ಕೃಷಿ ಜಮೀನಿನಲ್ಲಿ, ಯಾವ ಬೆಳೆಗಳ ಜತೆಗೆ ಯಾವ ತರಕಾರಿಗಳನ್ನು ಹಾಕಬೇಕು ಎಂಬ ಅಂಶಗಳನ್ನು ಸೇರಿದಂತೆ, ಕೈತೋಟ ನಿರ್ಮಾಣ ನಿರ್ವಹಣೆಯ ಸಮಗ್ರ ಮಾಹಿತಿಯನ್ನು ದಾಖಲಿಸಿದ್ದಾರೆ.

ಪುಸ್ತಕದ ಪ್ರತಿಗಳಿಗೆ ಸಂಪರ್ಕಕ್ಕೆ ವಿಳಾಸ: ಪೀಪಲ್ ಟ್ರೀ, ಫೈರ್‌ಫ್ಲೈಸ್ ಆಶ್ರಮ, ದಿನ್ನೆಪಾಳ್ಯ, ಕಗ್ಗಲೀಪುರ,ಬೆಂಗಳೂರು – 560082, ದೂ. 9482536412.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT