ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಯಲ್ಲೂ ಔಷಧೀಯ ವನ!

ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಆಂದೋಲನ
Last Updated 17 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಮಲೆನಾಡಿನ ಅರಣ್ಯದಂಚಿನಲ್ಲಿರುವ ಮುತ್ತ ಪೂಜಾರಿಯವರ ರಾಸು ಗರ್ಭ ಕಟ್ಟುತ್ತಿಲ್ಲ. ಎರಡು ಸಲ ಸರಳವಾಗಿ ಕರು ಹಾಕಿದ್ದ ಅದು ಈ ಬಾರಿ ಮೂರುನಾಲ್ಕು ಬಾರಿ ವೀರ್ಯಕೊಡಿಸಿದರೂ ಪುನಃ ಒಂದು ಒಂದೂವರೆ ತಿಂಗಳಿಗೆ ಬೆದೆಗೆ ಬಂದುಬಿಡುತ್ತದೆ. ಆಗ ಅವರಿಗೆ ದೇವಗೊಡ್ಲಿನ ರಾಮಚಂದ್ರ ಭಟ್ಟರು ಹೇಳಿದ ಮನೆಮದ್ದು ಸಹಾಯಕ್ಕೆ ಬಂತು. ಪಕ್ಕದ ಅಡವಿಯಿಂದ ಎರಡು ಬೈನೆಗಿಡಗಳನ್ನು ತಂದು ಅದರ ತಿರುಳು ತೆಗೆದು, 2 ಕೆ.ಜಿ ಮೊಳಕೆ ಬರಿಸಿದ ಉದ್ದಿನ ಕಾಳು, ಅರ್ಧ ತೆಂಗಿನ ಕಾಯಿತುರಿ ಮತ್ತು ಅರ್ಧ ಬೂದುಗುಂಬಳದ ಜೊತೆ ಕೊಚ್ಚಿ ಈ ಗುರುವಾರ, ನಂತರದ ಭಾನುವಾರ ಮತ್ತು ಮುಂದಿನ ಗುರುವಾರ -ಹೀಗೆ ಮೂರು ಬಾರಿ ತಿನ್ನಿಸಿದರು. ನಂತರದ ಬೆದೆಯಲ್ಲಿ ಹಸು ತಕರಾರಿಲ್ಲದೇ ಗಬ್ಬವಾಯಿತು !

ದೀರ್ಘಕಾಲದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಗನಳ್ಳಿಯ ಸುಬ್ಬರಾಯ(80) ತಮ್ಮ ಮನೆಯ ಎದುರು ತುಳಸಿಗಿಡಗಳ ಪುಟ್ಟ ವನವನ್ನೇ ಬೆಳೆಸಿದ್ದಾರೆ. ತುಳಸಿಗಿಡಗಳ ನಡುವೆ ಆಗಾಗ ಓಡಾಡುತ್ತಿದ್ದರೆ ಅವರ ಉಸಿರಾಟ ಎಷ್ಟೋ ಸರಾಗವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ...

***

ಉತ್ತರ ಕನ್ನಡ ಜಿಲ್ಲೆಯ ರೈತರ ಮನೆಯಂಗಳದಲ್ಲಿ ಪಶ್ಚಿಮಘಟ್ಟಗಳಲ್ಲಿರುವ ಅಪರೂಪದ ಔಷಧೀಯ ಸಸ್ಯಗಳನ್ನು ವನದ ರೂಪದಲ್ಲಿ ಬೆಳೆಸುತ್ತಿದ್ದಾರೆ. ಮಾತ್ರವಲ್ಲ, ಅವುಗಳನ್ನು ಬಳಸಿ ಅನೇಕ ರೋಗಗಳಿಗೆ ಔಷಧಗಳಾಗಿಸುತ್ತಿದ್ದಾರೆ. ಕಳೆದ ವರ್ಷದಿಂದ ಆರಂಭವಾಗಿರುವ ಔಷಧೀಯ ವನಗಳನ್ನು ಬೆಳೆಸುವ ಪ್ರಯತ್ನ ಈಗ ಆಂದೋಲನ ರೂಪ ಪಡೆದಿದೆ. ಯೂತ್‌ ಫಾರ್‌ ಸೇವಾ ಸಂಘಟನೆ ಮತ್ತು ಅರಣ್ಯ ಇಲಾಖೆ ಈ ‘ಆಂದೋಲನ’ಕ್ಕೆ ಶಕ್ತಿ ತುಂಬಿದೆ.

ಶಿರಸಿಯ ಅಡೇಮನೆ ಹಳ್ಳಿಯ ಪ್ರಕಾಶ ಭಟ್ಟರಂಥ ರೈತರು ಎರಡು ಎಕರೆಯ ಸೊಪ್ಪಿನ ಬೆಟ್ಟದಲ್ಲಿ ಐದು ವರ್ಷಗಳಿಂದ ನೂರಾರು ಔಷಧಿಗಿಡಗಳನ್ನು ನೆಟ್ಟುಬೆಳೆಸಿದ್ದಾರೆ.

ಶತಾವರಿ, ಜೀವಂತಿ, ಏಕನಾಯಕ, ಹಿಪ್ಪಲಿ, ವಾಯುವಿಳಂಗ, ಕದಂಬ, ಕರವೀರ, ಶಿವಣೆ, ಅತ್ತಿ, ಖದಿರ, ನಾಗಲಿಂಗ, ಪುನರ್ನವ, ವಾತಂಗಿ, ಎಕ್ಕೆ, ದೂರ್ವೆ, ದರ್ಬೆ, ಗಲಂಗ, ಕಸ್ತೂರಿ ಅರಿಸಿನ, ಸಂಪಿಗೆ, ಪಾರಿಜಾತ, ಕಾಡಜೀರಿಗೆ, ದುರ್ವಾಸನೆ ಗಿಡ, ಮಧುನಾಶಿನಿ ಸೇರಿದಂತೆ ಹಲವು ಬಳ್ಳಿ, ಗಿಡ, ಮರಗಳು ಇವರ ಸಂಗ್ರಹದಲ್ಲಿವೆ. ‘ಮಾಯವಾಗುತ್ತಿರುವ ಕೆಲವು ಅದ್ಭುತವಾದ ಔಷಧೀಯ ಸಸ್ಯಗಳನ್ನು ಒಂದೆಡೆ ಬೆಳೆಸಿ ಉಳಿಸುವ ಉದ್ದೇಶ ನನ್ನದು’ ಎನ್ನುತ್ತಾರೆ ಪ್ರಕಾಶ್. ಈ ಸಸ್ಯಗಳ ಕುರಿತು ಅರಿವು ಮೂಡಿಸುವ ಜತೆಗೆ ಕ್ರಮೇಣವಾಗಿ ಉಪ ಆದಾಯ ಪಡೆಯುವ ನಿರೀಕ್ಷೆ ಅವರದು.

ಗೋಕರ್ಣದ ವೇದಶ್ರವ ಶರ್ಮಾ (60) ತಮ್ಮ 10 ಎಕರೆಗಳ ‘ಅಶೋಕ ವನ’ದಲ್ಲಿ 400ಕೂ ಹೆಚ್ಚು ಬಗೆಯ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಅಕ್ಷತೆಬಳ್ಳಿ, ಅಂಕೋಲೆ, ಅಗ್ನಿಮಂಥ, ಅಮೃತಬಳ್ಳಿ, ಅಗ್ನಿಶಿಖೆ, ದಾರುಹರಿದ್ರ, ನೆಡತೆ, ಮುರುಗಲು, ಉಪ್ಪಾಗೆ, ಸಹದೇವಿ, ಉತ್ತರಣೆ, ಹಲವು ವಿಧದ ತುಳಸಿ, ಆಡುಮುಟ್ಟದ ಗಿಡ ಇವು ಪ್ರಮುಖವಾದವು. ಜನಪದ ಪದ್ಧತಿಯಲ್ಲಿ ಮೂರು ದಶಕಗಳ ತಮ್ಮ ಅನುಭವ ಮತ್ತು ಪ್ರಯೋಗಗಳನ್ನಾಧರಿಸಿ ಹಲವು ವಿಧದ ಔಷಧಿಗಳನ್ನೂ ಇವರು ತಯಾರಿಸುತ್ತಾರೆ. ಇವರಷ್ಟೇ ಅಲ್ಲ ಶಿರಸಿಯ ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ, ಮಂಜಣ್ಣ ಹೂಡ್ಲಮನೆ, ಸಿದ್ದಾಪುರದ ಆನಂದ ನಾಯ್ಕ, ಶಾಂತಾರಾಮ ಹೆಗಡೆ ಹೆಗಡೆಕಟ್ಟಾ, ಗಣಪತಿ ಇಸಳೂರ, ರಾಮಚಂದ್ರ ಭಟ್ ದೇವಗೊಡ್ಲು ಅವರು ಅಪರೂಪದ ಔಷಧೀಯ ಸಸ್ಯಗಳ ಪಾಲನೆ ಮತ್ತು ಮಾಹಿತಿ ಪ್ರಸಾರದ ಕಾರ್ಯದಲ್ಲಿ ತೊಡಗಿದ್ದಾರೆ.

ಔಷಧೀಯ ವನಗಳು
ಕಳೆದ ವರ್ಷ ಅರಣ್ಯ ಇಲಾಖೆ ಮತ್ತು ಯೂತ್‌ ಫಾರ್ ಸೇವಾ ಸಂಘಟನೆ ಸಹಯೋಗದಲ್ಲಿ ಮಳೆಗಾಲದ ಆರಂಭದಲ್ಲಿ ಬೀಜದುಂಡೆ ಅಭಿಯಾನ (ಮಣ್ಣಿನಲ್ಲಿ ಔಷಧೀಯ ಸಸ್ಯಗಳ ಬೀಜ ಸೇರಿಸುವುದು) ಆರಂಭಿಸಲಾಯಿತು. ಸಂಘಟನೆಯ ಪರಿಸರ ವಿಭಾಗದ ಸಂಚಾಲಕ ಉಮಾಪತಿ ಭಟ್ ‘ಔಷಧೀಯ ವನ’ಗಳ ನಿರ್ಮಾಣದಲ್ಲಿ ಪರಿಣತರು. ಕೆಲವು ನಿಶ್ಚಿತ ಸಸ್ಯಗಳನ್ನು ನಿಗಿದಿತ ದಿಕ್ಕುಗಳಿಗೆ ಅನುಗುಣವಾಗಿ ಬೆಳೆಸುವ ವಿಧಾನವದು. ಉದಾಹರಣೆಗೆ ಪಂಚವಟಿ ವನ ಎಂದರೆ ಬಿಲ್ವ ವೃಕ್ಷವನ್ನು ಮಧ್ಯದಲ್ಲಿ ನೆಟ್ಟು ಪೂರ್ವಕ್ಕೆ ಅತ್ತಿ, ಪಶ್ಚಿಮದಲ್ಲಿ ಶಮಿ, ಉತ್ತರಕ್ಕೆ ಅಶ್ವತ್ಥ ಮತ್ತು ದಕ್ಷಿಣಕ್ಕೆ ಬೇವಿನ ಗಿಡಗಳನ್ನು ಬೆಳೆಸುವುದು. ಹೀಗೆಯೇ ವರ್ಣಔಷಧಿ ವನ, ಶಿವಪಂಚಾಕ್ಷರಿ ವನ, ನವಗ್ರಹ ವನ, ರಾಶಿವನ, ನಕ್ಷತ್ರವನ, ಸಪ್ತರ್ಷಿವನ, ನಂದನವನ, ಅಶೋಕವನ, ಅಷ್ಟದಿಕ್ಪಾಲಕ ವನ, ಅಕ್ಷರವನ, ಕೇವಲಜ್ಞಾನ ವನ, ಗೋಪಾಲಕ ವನ, ಪುಣ್ಯಕೋಟಿ ವನದಂತಹ ಹಲವು ವಿಧಾನಗಳಿವೆ.

ಹುಬ್ಬಳ್ಳಿಯ ತಮ್ಮ ತೋಟದ ಮನೆಯ ಆವರಣದಲ್ಲಿ ಡಾ. ಪಾಂಡುರಂಗ ಅವರು ಪಂಚವಟಿ ವನ ಮಾಡಿದ್ದಾರೆ. ಅವರ ಪ್ರಕಾರ ಇಂಥ ಸಸ್ಯಗಳ ನಡುವೆ ನಡೆದಾಡುವುದೇ ಆಹ್ಲಾದಕರ ಅನುಭವ ನೀಡುತ್ತದೆ. ನೂರಾರು ಜನ ಇವರ ವನ ನೋಡಲು ಬರುತ್ತಾರೆ. ಶಿರಸಿ ಕಾನ್ಮನೆಯ ನಿಸರ್ಗಜ್ಞಾನ ಕೇಂದ್ರದಲ್ಲಿ ಎರಡು ವರ್ಷಗಳ ಹಿಂದೆ ವರ್ಣಔಷಧೀಯ ವನ ನಿರ್ಮಿಸಲಾಗಿದೆ. ಮಾನವನ ದೇಹದ ಪ್ರತಿ ಅಂಗಕ್ಕೂ ಸಂಬಂಧಿಸಿದ 50ಕ್ಕೂ ಹೆಚ್ಚು ಸಸ್ಯಗಳನ್ನು ಕ್ರಮಾನುಸಾರ ಬೆಳೆಸಿದ್ದಾರೆ. ‘ನಮ್ಮಲ್ಲಿಗೆ ಬರುವ ಆಸಕ್ತರಿಗೆ ಮತ್ತು ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಔಷಧೀಯ ಸಸ್ಯಗಳನ್ನು ಗುರುತಿಸುವ ಮತ್ತು ಅವುಗಳ ಮಹತ್ವ ತಿಳಿಸುವ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಕೇಂದ್ರದ ಸಂಚಾಲಕ ಶಿವಾನಂದ ಕಳವೆ. ಅನೇಕ ಧಾರ್ಮಿಕ ಕೇಂದ್ರಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಸೋಂದಾ ಸ್ವರ್ಣವಲ್ಲೀ ಮಠವು ಸಸ್ಯಸಂಜೀವಿನಿ ವನವನ್ನು ಅಭಿವೃದ್ಧಿಪಡಿಸಿದ್ದು ನೂರಾರು ಜಾತಿಯ ಅಮೂಲ್ಯ ಸಸ್ಯಗಳು ಇಲ್ಲಿ ಬೆಳೆಯುತ್ತಿವೆ.

ಕಾರವಾರದ ನಂದನಗದ್ದಾ ಹಳ್ಳಿಯಲ್ಲಿ ಗಣೇಶ ನೇವರೇಕರ್ ಎಂಬುವವರು ಏಕನಾಯಕ, ರಕ್ತಚಂದನ ಮತ್ತು ಮ್ಯಾಪಿಯಾ(ದುರ್ವಾಸನೆ ಗಿಡ)ಗಳ ವಾಣಿಜ್ಯಿಕ ಸಂವರ್ಧನೆಯಲ್ಲಿ ತೊಡಗಿದ್ದಾರೆ. 4 ವರ್ಷಗಳಿಂದ ದೊಡ್ಡಪ್ರಮಾಣದಲ್ಲಿ ಬೆಳೆಸುತ್ತಿದ್ದಾರೆ. ಈ ಬಾರಿ ಕಟಾವು ಮಾಡಲು ಯೋಜಿಸಿದ್ದಾರೆ. ಏಕನಾಯಕವನ್ನು ಒಮ್ಮೆ ನೆಟ್ಟರೆ 4 ವರ್ಷಗಳಲ್ಲಿ ಅದರ ಬೇರು ಮತ್ತು ಕಾಂಡಗಳು ಕಟಾವಿಗೆ ಬರುತ್ತವೆ. ಎಕರೆಗೆ ಸರಾಸರಿ 4 ಲಕ್ಷಗಳ ಇಳುವರಿ ನಿರೀಕ್ಷಿಸಬಹುದು. ಇದನ್ನು ಮುಖ್ಯವಾಗಿ ಮಧುಮೇಹ ನಿಯಂತ್ರಣಕ್ಕೆ ಬಳಸುತ್ತಾರೆ. ಪ್ರತಿ 4-5 ವರ್ಷಕ್ಕೊಮ್ಮೆ ಪುನಃ ಗಿಡಗಳನ್ನು ನೆಡಬೇಕಾಗುತ್ತದೆ. ಮ್ಯಾಪಿಯಾವನ್ನೂ 4 ವರ್ಷಕ್ಕೊಮ್ಮೆ ಪ್ರೂನಿಂಗ್ ಮಾಡುತ್ತ ಇಳುವರಿ ಪಡೆಯಬಹುದು. ಇದನ್ನು ಕೆಲವು ತರಹದ ಕ್ಯಾನ್ಸರ್ ರೋಗಚಿಕಿತ್ಸೆಗೆ ಬಳಸಲಾಗುತ್ತದೆ. ನೇವರೇಕರ್‍ರವರು ಒಪ್ಪಂದದ ಕೃಷಿಯ ಮೂಲಕ ಈ ಔಷಧೀಯ ಸಸ್ಯಗಳ ಬೆಳೆ ತೆಗೆಯುತ್ತಿದ್ದಾರೆ.

ಅರಣ್ಯ ಇಲಾಖೆಯು ಶಿರಸಿಯ ಸಮೀಪದ ಬಕ್ಕಳ ಗ್ರಾಮದಲ್ಲಿ 30 ವರ್ಷಗಳಿಂದ ಹಲವು ಜಾತಿಯ ಅಮೂಲ್ಯ ಸಸ್ಯಸಂಪತ್ತನ್ನು ಬೆಳೆಸಿದೆ. ಈ ಗಿಡಮರಗಳಿಗೆ ಅವುಗಳಿಗೆ ಸಸ್ಯಶಾಸ್ತ್ರೀಯ ಹೆಸರು ಮತ್ತು ಸಾಮಾನ್ಯ ಹೆಸರಿನ ನಾಮಫಲಕ ತೊಡಿಸಿದ್ದಾರೆ.

ಶಿರಸಿಯ ಅರಣ್ಯ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ವಾಸುದೇವ ಮತ್ತು ಡಾ. ಶ್ರೀಕಾಂತ ಗುನಗಾ ಕಾಲೇಜಿನ ಆವರಣದಲ್ಲಿ ಅಳಿವಿನಂಚಿನಲ್ಲಿರುವ ಮರದ ಅರಿಸಿನ, ದುರ್ವಾಸನೆ ಗಿಡ, ಎಂಬೆಲಿಯಾ, ಏಕನಾಯಕ ಇತ್ಯಾದಿ ಗಿಡಗಳ ನರ್ಸರಿ ತಯಾರಿಸಲು ಶ್ರಮಿಸಿದ್ದಾರೆ.

ಸಮುದಾಯಗಳಿಗೂ ಉತ್ತೇಜನ
ಔಷಧೀಯ ಸಸ್ಯಗಳ ಕುರಿತಾಗಿ ಕೆಲಸಮಾಡುತ್ತಿರುವ ಬೆಂಗಳೂರಿನ ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನದ (ಎಫ್‌.ಆರ್.ಎಲ್.ಎಚ್.ಟಿ) ಅಧಿಕಾರಿ ಡಾ.ಬಿ.ಎಸ್.ಸೋಮಶೇಖರ್ ‘ನಮ್ಮಲ್ಲಿ ಹಲವು ಔಷಧೀಯ ಸಸ್ಯಗಳನ್ನು ಬೆಳೆಸಿದ್ದೇವೆ. ಆಸಕ್ತರಿಗೆ ಕೂಡ ನೀಡುತ್ತೇವೆ’ ಎಂದು ಹೇಳಿದರೆ, ‘ಆಸಕ್ತ ರೈತರು ತಮ್ಮದೇ ಒಂದು ಗುಂಪು ರಚಿಸಿಕೊಂಡು ಬಂದರೆ ಅಗತ್ಯ ಸಹಕಾರ ನೀಡುತ್ತೇವೆಂದು ಶಿರಸಿಯ ತೋಟಗಾರಿಕಾ ಇಲಾಖೆಯ ಅಧಿಕಾರಿ ಸತೀಶ ಹೆಗಡೆ ಭರವಸೆ ನೀಡುತ್ತಾರೆ. ಇಂಥವರ ನಡುವೆ ಸಿದ್ದಾಪುರದ ಹುಲಿಮನೆಯ ಗೃಹಿಣಿ ಇಂದಿರಾ, ‘ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಔಷಧೀಯ ಸಸ್ಯಗಳ ಪರಿಚಯ ಮತ್ತು ಉಪಯೋಗ ತಿಳಿದಿರುತ್ತದೆ. ಸಣ್ಣಪುಟ್ಟ ಅನಾರೋಗ್ಯಕ್ಕೆಲ್ಲ ವೈದ್ಯರನ್ನು ಅವಲಂಬಿಸುವುದರ ಬದಲು ನಮ್ಮ ಹಿತ್ತಿಲಲ್ಲಿರುವ ಸಸ್ಯಗಳಿಂದಲೇ ಔಷಧಗಳನ್ನು ತಯಾರಿಸಿಕೊಳ್ಳುವುದು ಒಳಿತು’ ಎಂದು ಅಭಿಪ್ರಾಯ ಪಡುತ್ತಾರೆ. ಈ ಆಂದೋಲನದಿಂದಾಗಿ, ತಾರಸಿ ತೋಟಗಳಲ್ಲಿಯೂ ಮನೆಗೆ ಅಗತ್ಯವಿರುವ ಔಷಧೀಯ ಸಸ್ಯಗಳನ್ನು ಬೆಳೆಸುವ ಅಭ್ಯಾಸ ಆರಂಭವಾಗಿದೆ.

ಹಾಗೆ ನೋಡಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ದೇವರ ಕಾಡುಗಳು ನೂರಾರು ವರ್ಷಗಳಿಂದ ಇಲ್ಲಿನ ಅಪರೂಪದ ಸಸ್ಯಸಂಪತ್ತಿನ ಜೊತೆಗೆ ಜೀವವೈವಿಧ್ಯವನ್ನು ರಕ್ಷಿಸುತ್ತಿವೆ. ಹವಾಮಾನ ಬದಲಾವಣೆಯ ಇಂದಿನ ದಿನಗಳಲ್ಲಿ ಮಾನವನ ಆದ್ಯತೆಗಳು ಬದಲಾಗಿರುವಾಗ ಇಂಥ ಅಮೂಲ್ಯ ಸಂಪತ್ತನ್ನು ರಕ್ಷಿಸಿಕೊಳ್ಳುವ ಕೆಲವು ಪ್ರಯತ್ನಗಳಾದರೂ ನಡೆಯುತ್ತಿದೆಯೆಂಬುದಕ್ಕೆ ಇವೆಲ್ಲ ಕೆಲ ಉದಾಹರಣೆಗಳಷ್ಟೆ!

ಗ್ರಾಮ ಮಟ್ಟಕ್ಕೂ ಮೂಲಿಕೆ..
ಕೇವಲ ಸಸ್ಯಗಳಲ್ಲಿರುವ ಔಷಧೀಯ ಗುಣಗಳನ್ನು ಗುರುತಿಸುವುದಲ್ಲದೇ ಅದರ ಪ್ರಯೋಜನವನ್ನು ಗ್ರಾಮಮಟ್ಟದಲ್ಲಿ ಹೇಗೆ ಪಡೆಯಬಹುದೆಂಬುದಕ್ಕೆ ತಮಿಳುನಾಡಿನ ಮಧುರೈಯಲ್ಲಿರುವ ‘ಸೇವಾ’ ಎಂಬ ಸರಕಾರೇತರ ಸಂಸ್ಥೆ ಉದಾಹರಣೆಯಾಗಿದೆ. ಈ ಸಂಸ್ಥೆಯ ಮುಖ್ಯಸ್ಥ ಪಿ.ವಿವೇಕಾನಂದನ್ ನಮ್ಮ ಸುತ್ತಲಲ್ಲೇ ಸಿಗುವ ಸಸ್ಯಮೂಲಿಕೆಗಳನ್ನು ಜಾನುವಾರುಗಳ ಆರೋಗ್ಯರಕ್ಷಣೆಗೆ ಹೇಗೆ ಬಳಸಬಹುದೆಂಬುದರ ಬಗ್ಗೆ ಒಂದು ಪ್ಯಾಕೇಜ್ ತಯಾರಿಸಿದ್ದಾರೆ. ಆಸಕ್ತರಿಗೆ ಅವರು ಇಂಥ 20ಕ್ಕೂ ಹೆಚ್ಚು ಔಷಧ ಮಿಶ್ರಣ ತಯಾರಿಕೆಯ ವಿಧಾನಗಳ ಪ್ರಾತ್ಯಕ್ಷಿಕೆ ನಡೆಸಿಕೊಡುತ್ತಾರೆ.

ಉತ್ತರಕ್ಕೂ ವಿಸ್ತರಿಸಿದೆ...
ಯೂತ್‌ ಫಾರ್ ಸೇವಾ ಸಂಘಟನೆ ಮಲೆನಾಡಿನಲ್ಲಿ ಮಾತ್ರವಲ್ಲದೇ ಬಯಲು ಸೀಮೆಯಲ್ಲೂ ಈ ‌ಔಷಧೀಯ ಸಸ್ಯಗಳನ್ನು ಬೆಳೆಸುವ ಆಂದೋಲನ ವಿಸ್ತರಿಸಿದೆ. ಅಥಣಿಯ ಲೋಕಾಪುರದಲ್ಲಿ ಉತ್ತರ ಕರ್ನಾಟಕ ಭಾಗದ ಔಷಧಿಯ ಸಸ್ಯಗಳ ವನವನ್ನು ನಿರ್ಮಿಸಿದೆ. ಆರೇಳು ವರ್ಷಗಳ ಹಿಂದೆಯೇ ಬೆಳಗಾವಿ ಜಿಲ್ಲೆಯ ಕಂಕೇರಿಯ ವೃಂದಾರಣ್ಯ ಗುರುಕುಲ ಮತ್ತು ಧಾರವಾಡದ ರೈಲ್‍ನಗರ ಮತ್ತು ತೇಜಸ್‍ನಗರಗಳಲ್ಲಿ ಔಷಧಿಯ ಸಸ್ಯವನ ಆರಂಭಿಸಲಾಗಿದೆ.

ಔಷಧೀಯ ವನ ಕುರಿತ ಮಾಹಿತಿಗಾಗಿ ಉಮಾಪತಿ ಭಟ್‌, ಯೂತ್ ಫಾರ್ ಸೇವಾ – 9448774780, ಔಷಧೀಯ ಸಸ್ಯಗಳ ವಾಣಿಜ್ಯ ಕೃಷಿ ಮಾಹಿತಿಗಾಗಿ ಗಣೇಶ್ ನೇವರೇಕರ್‌ – 9448105381 (ಸಮಯ ಸಂಜೆ 6 ರಿಂದ 7 ಗಂಟೆವರೆಗೆ).

ಪಾಷಾಣ ಭೇದಿ ಔಷಧೀಯ ಸಸ್ಯ ತೋರಿಸುತ್ತಿರುವ ದೇವಗೊಡ್ಲು ರಾಮಚಂದ್ರ ಭಟ್‌
ಪಾಷಾಣ ಭೇದಿ ಔಷಧೀಯ ಸಸ್ಯ ತೋರಿಸುತ್ತಿರುವ ದೇವಗೊಡ್ಲು ರಾಮಚಂದ್ರ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT