ಶನಿವಾರ, ಮಾರ್ಚ್ 28, 2020
19 °C
ಎರಡು ಎಕರೆ ಜಮೀನಿನಲ್ಲಿ 600 ಹೆಬ್ಬೇವು, 400 ಶ್ರೀಗಂಧ,

ಬಹು ಬೆಳೆಯತ್ತ ಮನ್ಮಥ ಹೊಂಡಾಳೆ ಚಿತ್ತ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಇಲ್ಲಿಯ ಸಮೀಪದ ಡೋಣಗಾಂವ್ ಗ್ರಾಮದ ಯುವ ರೈತ ಕೃಷಿಯಲ್ಲಿ ಬಹು ಬೆಳೆ ಪದ್ಧತಿ ಅನುಸರಿಸಿ ಯಶಸ್ವಿಯಾಗಿದ್ದಾರೆ.

ಅವರೇ ಯುವ ರೈತ ಮನ್ಮಥ ಹೊಂಡಾಳೆ. ಅವರು ಕಳೆದರಡು ವರ್ಷಗಳಿಂದ ಬಹು ಬೆಳೆ ಪದ್ಧತಿಗೆ ಮಾರು ಹೋಗಿದ್ದಾರೆ.

ಕೇವಲ ಎರಡು ಎಕರೆ ಪ್ರದೇಶದಲ್ಲಿ ಶುಂಠಿ, ಈರುಳ್ಳಿ ಹಾಗೂ ಇತರೆ ತರಕಾರಿ ಬೆಳೆದು ವರ್ಷಕ್ಕೆ ₹1.50 ಲಕ್ಷ ಆದಾಯ ಮಾಡಿಕೊಳ್ಳುತ್ತಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ 600 ಹೆಬ್ಬೇವು, 400 ಶ್ರೀಗಂಧ, 150 ಮಾವಿನ ಸಸಿ ನಾಟಿ ಮಾಡಿದ್ದಾರೆ. ಈ ಗಿಡಗಳ ನಡುವೆ ಶುಂಠಿ, ಈರುಳ್ಳಿ, ತರಕಾರಿ ಬೆಳೆದು ಕೃಷಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ನಮಗೆ 12 ಎಕರೆ ಜಮೀನು ಇದೆ. ಆದರೆ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗದಿರುವುದು ಹಾಗೂ ಕಾರ್ಮಿಕರ ಸಮಸ್ಯೆಯಿಂದ ಹಾಕಿದ ಹಣ ವಾಪಸ್ ಬರುತ್ತಿಲ್ಲ. ಆದರಿಂದ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಎರಡು ಎಕರೆ ಪ್ರದೇಶ ಹನಿ ನೀರಾವರಿಗೆ ಒಳಪಡಿಸಲಾಗಿದೆ. ಹೆಚ್ಚು ನಿರ್ವಹಣೆ ಇಲ್ಲದ ದೀರ್ಘ ಕಾಲದಲ್ಲಿ ಆದಾಯ ಕೊಡಬಲ್ಲ ಶ್ರೀಗಂಧ ಮತ್ತು ಹೆಬ್ಬೇವು ನಾಟಿ ಮಾಡಲಾಗಿದೆ. 10-15 ವರ್ಷಗಳ ನಂತರ ಇವುಗಳಿಂದ ಉತ್ತಮ ಆದಾಯ ನಿರೀಕ್ಷೆ ಇದೆ. ಜತೆಗೆ ನಿತ್ಯದ ಖರ್ಚಿಗಾಗಿ ತೋಟಗಾರಿಕೆ ಬೆಳೆ ಅನುಕೂಲವಾಗಿದೆ’ ಎಂದು ರೈತ ಮನ್ಮಥ ಹೊಂಡಾಳೆ ಹೇಳುತ್ತಾರೆ.

ಸಾಂಪ್ರದಾಯಿಕ ಬೆಳೆಗಳಿಗಿಂತ ತೋಟಗಾರಿಕೆ ಬೆಳೆ ಬೆಳೆಯುವುದರಲ್ಲಿ ಹೆಚ್ಚಿನ ಅನುಕೂಲತೆಗಳಿವೆ. ಸರ್ಕಾರದ ನೆರವಿನಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರಂತೂ ಇನ್ನೂ ತುಂಬಾ ಅನುಕೂಲ.

ಶ್ರೀಗಂಧ ಮತ್ತು ಹೆಬ್ಬೇವು ನಾಟಿ ಮಾಡಲು ಅರಣ್ಯ ಇಲಾಖೆಯವರು ಸಹಾಯಧನ ನೀಡುತ್ತಾರೆ. ಈ ಸಸಿಗಳ ಆರಂಭಿಕ ಮೂರು ವರ್ಷ ನಿರ್ವಹಣೆಗೂ ಆರ್ಥಿಕ ನೆರವು ಇದೆ. ಮಾವು, ಶುಂಠಿಯಂತಹ ತೋಟಗಾರಿಕೆ ಬೆಳೆಗಳಿಗೂ ಪ್ರೋತ್ಸಾಹಧನ ನೀಡಲಾಗುತ್ತದೆ. ಅದಕ್ಕೆ ಮಾರುಕಟ್ಟೆ ಸೌಲಭ್ಯವೂ ಇದೆ. ಹೀಗಾಗಿ ದೀರ್ಘ ಕಾಲದ ನಂತರ ಆದಾಯ ಕೊಡುವ ಗಿಡಗಳ ನಡುವೆ ಬಹು ಬೆಳೆ ಪದ್ಧತಿ ಅನುಸರಿಸಿದರೆ ರೈತರ ಕೈಯಲ್ಲಿ ಸದಾ ಹಣ ಇರುತ್ತದೆ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)