ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಭತ್ತ ಕಟಾವಿಗೆ ಮಳೆರಾಯ ಅಡ್ಡಿ!

Last Updated 13 ಅಕ್ಟೋಬರ್ 2020, 1:45 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಭತ್ತದ ಕಟಾವಿಗೆ ತೀವ್ರ ಹಿನ್ನಡೆಯಾಗಿದೆ.

ಜಿಲ್ಲೆಯ ಎರಡು ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಪೈಕಿ ಒಂದುವರೆ ಲಕ್ಷ ಎಕರೆಯಲ್ಲಿ ಭತ್ತ ಕಟಾವಿಗೆ ಬಂದಿದೆ. ಆದರೆ, ಸತತ ಸುರಿಯುತ್ತಿರುವ ಮಳೆ, ಕಟಾವಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಈಗಾಗಲೇ ನೂರಾರು ಎಕರೆಯಲ್ಲಿ ಭತ್ತ ನೆಲಕ್ಕೊರಗಿದೆ. ಅನೇಕ ಕಡೆಗಳಲ್ಲಿ ಕಂದು ಬಣ್ಣಕ್ಕೆ ತಿರುಗಿದೆ. ಇದು ರೈತರನ್ನು ತೀವ್ರ ಚಿಂತೆಗೀಡು ಮಾಡಿದೆ.

ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಕಂಪ್ಲಿ, ಕುರುಗೋಡು, ಸಿರುಗುಪ್ಪದಲ್ಲಿ ಪ್ರಮುಖ ಬೆಳೆಯಾಗಿ ಭತ್ತ ಬೆಳೆಯಲಾಗುತ್ತದೆ. ತುಂಗಭದ್ರಾ ಜಲಾಶಯದ ಕಾಲುವೆಗಳು ಈ ಭಾಗದಿಂದ ಹಾದು ಹೋಗಿರುವುದರಿಂದ ಯಥೇಚ್ಛವಾಗಿ ನೀರಿನ ಲಭ್ಯತೆ ಇದೆ. ಹಾಗಾಗಿ ಭತ್ತ ಬಿಟ್ಟು ಬೇರೆ ಬೆಳೆಗಳತ್ತ ರೈತರು ಚಿತ್ತ ಹರಿಸಿಲ್ಲ.

ಈ ವರ್ಷ ಸಕಾಲಕ್ಕೆ ಜಲಾಶಯ ತುಂಬಿದೆ. ಸಮಯಕ್ಕೆ ಸರಿಯಾಗಿ ಕಾಲುವೆಗಳಿಗೆ ನೀರು ಕೂಡ ಹರಿಸಲಾಗಿದೆ. ಮಳೆ ಸಹ ಉತ್ತಮ ರೀತಿಯಲ್ಲಿ ಆಗಿದೆ. ರೈತರ ನಿರೀಕ್ಷೆಯಂತೆ ಭತ್ತದ ಫಸಲು ಕೂಡ ಉತ್ತಮವಾಗಿ ಬಂದಿದೆ. ಇನ್ನೇನು ಭತ್ತ ಕಟಾವು ಮಾಡಿ, ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂಬ ಉಮೇದಿನಲ್ಲಿದ್ದ ರೈತರಿಗೆ ಮಳೆ ದೊಡ್ಡ ತಲೆನೋವು ತಂದಿಟ್ಟಿದೆ.

‘ಈ ವರ್ಷ ಭತ್ತ ಬಹಳ ಉತ್ತಮವಾಗಿ ಬೆಳೆದಿದೆ. ಈಗ ಕಟಾವಿಗೆ ಬಂದಿದೆ. ಆದರೆ, ಮಳೆ ಅದಕ್ಕೆ ಅವಕಾಶವೇ ಕೊಡುತ್ತಿಲ್ಲ. ಸತತ ಮಳೆಯಿಂದ ಗದ್ದೆಯಲ್ಲಿ ನೀರು ನಿಂತಿದೆ. ಕೆಲವೆಡೆ ಕೆಸರಾಗಿದೆ. ಪರಿಸ್ಥಿತಿ ಹೀಗಿರುವಾಗ ಕಟಾವು ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಹೊಸಪೇಟೆ ತಾಲ್ಲೂಕಿನ ನರಸಾಪುರದ ರೈತ ಸಣ್ಣಕ್ಕಿ ರುದ್ರಪ್ಪ.

‘ಹಲವು ರೈತರ ಜಮೀನಿನಲ್ಲಿ ಮಳೆಗೆ ಭತ್ತ ನೆಲಕ್ಕೆ ಬಾಗಿದೆ. ಕಂದು ಬಣ್ಣಕ್ಕೆ ತಿರುಗಿದೆ. ರೋಗವೂ ಕಾಣಿಸಿಕೊಂಡಿದೆ. ಈಗ ಕಟಾವು ಮಾಡಿದರೂ ಸಹ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದು ಕಷ್ಟ. ಇನ್ನೂ ಹೀಗೆಯೇ ಮಳೆ ಮುಂದುವರಿದರೆ ಒಂದು ಹಿಡಿಯಷ್ಟೂ ಭತ್ತ ಕೈ ಸೇರುವುದಿಲ್ಲ’ ಎಂದು ತಿಳಿಸಿದರು.

ಜಿಲ್ಲೆಯ ಒಟ್ಟು ಭತ್ತ ಬೆಳೆಗಾರರ ಪೈಕಿ ಶೇ 65ರಷ್ಟು ರೈತರು ಎರಡರಿಂದ ಮೂರು ಎಕರೆ ಜಮೀನು ಹೊಂದಿರುವವರು ಇದ್ದಾರೆ. ಬೆಳೆ ಹಾಳಾದರೆ ಅತಿ ಹೆಚ್ಚು ಸಮಸ್ಯೆಗೆ ಒಳಗಾಗುವವರು ಸಣ್ಣ ರೈತರೇ.

ತೆರೆಯದ ಭತ್ತ ಖರೀದಿ ಕೇಂದ್ರ:ಜಿಲ್ಲೆಯ ಅಲ್ಲಲ್ಲಿ ಕೆಲವು ರೈತರು ಈಗಾಗಲೇ ಭತ್ತ ಕಟಾವು ಮಾಡಿದ್ದಾರೆ. ಆದರೆ, ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

‘ಪ್ರತಿ ಕ್ವಿಂಟಲ್‌ ಭತ್ತದ ಬೆಲೆ ₹1,850 ಇದೆ. ಆದರೆ, ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದ ಕಾರಣ ರೈತರು ₹1,150ರಿಂದ ₹1,200ಕ್ಕೆ ಭತ್ತ ಮಾರುತ್ತಿದ್ದಾರೆ. ರೈತರಿಗೆ ದೊಡ್ಡ ನಷ್ಟ ಉಂಟಾಗುತ್ತಿದೆ. ಹೀಗಿದ್ದರೂ ಮುಖ್ಯಮಂತ್ರಿಗಳು ಕೋವಿಡ್‌ ನೆಪವೊಡ್ಡಿ ಭತ್ತ ಖರೀದಿ ಕೇಂದ್ರ ತೆರೆಯುವುದಿಲ್ಲ ಎಂದಿದ್ದಾರೆ. ರೈತರ ನೆರವಿಗೆ ಬರದ ಇಂತಹ ಸರ್ಕಾರ ಏಕಿರಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT