ಒಂದೂವರೆ ದಶಕದ ಯಶೋಗಾಥೆ; ಕಲ್ಲು ಮರಡಿ ನೆಲದಲ್ಲಿ ದ್ರಾಕ್ಷಿಯರಳಿಸಿದ ಕುಂಬಾರ..!

7
ದ್ರಾಕ್ಷಿ ಕೃಷಿಯಲ್ಲಿ ಸತತ ಲಾಭ ಪಡೆದ ರೈತ

ಒಂದೂವರೆ ದಶಕದ ಯಶೋಗಾಥೆ; ಕಲ್ಲು ಮರಡಿ ನೆಲದಲ್ಲಿ ದ್ರಾಕ್ಷಿಯರಳಿಸಿದ ಕುಂಬಾರ..!

Published:
Updated:
Deccan Herald

ದೇವರ ಹಿಪ್ಪರಗಿ: ‘ಕಲ್ಲ ಮಡ್ಡ್ಯಾಗ ಏನ್ ಬೆಳೆಯಕಾಗುತ್ತಾ..! ಎಲ್ಲಿ ನೋಡಿದರೂ ಬರೇ ಕಲ್ಲ. ಇಲ್ಲಿ ಬೋರ್ ಹೊಡಡ್ರೂ ನೀರ್ ಬೀಳೋದು ಗ್ಯಾರಂಟಿಯಿಲ್ಲ. ಇಂಥಾದ್ರಾಗೂ ದ್ರಾಕ್ಷಿ ಹಚ್ಚೋದಂದ್ರ ಕಲ್ಲ ಕಟ್ಕೊಂಡು ಬಾವಿಗೆ ಬಿದ್ದಂಗ...’

ಒಂದೂವರೆ ದಶಕದ ಹಿಂದೆ ಕಲ್ಲಿನಿಂದ ಕೂಡಿದ ಬರಡು ಭೂಮಿಯಲ್ಲಿ, ಕೃಷಿ ಆರಂಭಿಸಿದ ಸಂದರ್ಭ ದೇವರ ಹಿಪ್ಪರಗಿಯ ರಾಯಪ್ಪ ಕುಂಬಾರ ಅವರಿಗೆ ಅಸಂಖ್ಯಾತ ರೈತರು ಹೇಳಿದ ಎಚ್ಚರಿಕೆಯ ಕಿವಿಮಾತುಗಳಿವು.

‘ಇವ್ಯಾವುದಕ್ಕೂ ಕಿವಿಗೊಡದೆ ಭೂಮ್ತಾಯಿಯನ್ನು ನಂಬಿ, ದುಡಿದ ಫಲ ನಾನಿಂದು ಯಶಸ್ವಿ ದ್ರಾಕ್ಷಿ ಬೆಳೆಗಾರನಾಗಿರುವೆ. ವಿವಿಧೆಡೆಯಿಂದ ಕೃಷಿ ಮಾಡಬೇಕು ಎಂದು ನಿಶ್ಚಯ ಮಾಡಿದವರು ನನ್ನ ಪಡಕ್ಕೆ ಭೇಟಿ ನೀಡಿ, ಸಲಹೆ ಪಡೆಯುವುದು ಈಚೆಗಿನ ವರ್ಷಗಳಲ್ಲಿ ಸಹಜ ಪ್ರಕ್ರಿಯೆಯಾಗಿದೆ’ ಎಂದು ಹೆಮ್ಮೆಯಿಂದ ಬೀಗುತ್ತಾರೆ ರಾಯಪ್ಪ ಕುಂಬಾರ.

ಪಟ್ಟಣದ ಬಸವನಬಾಗೇವಾಡಿ ರಸ್ತೆಯಲ್ಲಿಯ ಕಲ್ಲು, ಮರಡಿಯಿಂದ ಕೂಡಿದ ತಮ್ಮ ನಾಲ್ಕುವರೆ ಎಕರೆ ಜಮೀನನ್ನು ಸತತ ಪರಿಶ್ರಮದಿಂದ ಕೃಷಿಗೆ ಯೋಗ್ಯ ಭೂಮಿಯನ್ನಾಗಿಸಿದರು ರಾಯಪ್ಪ. ನೀರು ಕಾಣದ ಭೂಮಿಗೆ ಎರಡು ಕೊಳವೆಬಾವಿ ಸಹಾಯದಿಂದ ನೀರಿನ ವ್ಯವಸ್ಥೆ ಕಲ್ಪಿಸಿದರು. ನೀರಿನ ಸಂಗ್ರಹಣೆಗಾಗಿಯೇ ಎರಡು ಲಕ್ಷ ಲೀಟರ್ ಸಾಮರ್ಥ್ಯದ ಹೊಂಡ ನಿರ್ಮಿಸುವ ಮೂಲಕ, ಖರ್ಚು ಹಾಗೂ ಅದೃಷ್ಟದ ಬೆಳೆಯೆಂದೇ ಹೆಸರಾದ ದ್ರಾಕ್ಷಿ ಕೃಷಿಯಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.

‘ಪದವಿ ಶಿಕ್ಷಣದ ನಂತರ, ವೈದ್ಯರೊಬ್ಬರಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ನನಗೆ, ನಾನೇಕೆ ರೈತನಾಗಬಾರದು ? ಎಂಬ ಪ್ರಶ್ನೆ ಮೂಡುತ್ತಿದ್ದಂತೆ ಕೃಷಿಗೆ ಬಂದೆ, ದ್ರಾಕ್ಷಿ ಬೆಳೆಯನ್ನು ಆಯ್ಕೆ ಮಾಡಿಕೊಂಡು ಮೊದಲು ಮೂರು ಎಕರೆಯಲ್ಲಿ ಮಾತ್ರ ಕೃಷಿ ಆರಂಭಿಸಿದೆ. ಇದಕ್ಕೆ ಸಿಂಡಿಕೇಟ್ ಬ್ಯಾಂಕ್‌ನವರು ₹ 2.70 ಲಕ್ಷ ಸಾಲ ಮಂಜೂರು ಮಾಡಿ ಅನುಕೂಲ ಮಾಡಿಕೊಟ್ಟರು. ಆ ವರ್ಷ ಉತ್ತಮ ಫಸಲು ಬಂದು ಲಾಭವಾಯಿತು.

ಮರು ವರ್ಷ ಮತ್ತೊಂದು ಎಕರೆಗೆ ದ್ರಾಕ್ಷಿ ವಿಸ್ತರಿಸಿದೆ. ಹನಿ ನೀರಾವರಿಗೆ ಸಬ್ಸಿಡಿ ದೊರಕಿದ್ದು ಸಹಕಾರಿಯಾಯಿತು. 14 ವರ್ಷದಿಂದ ದ್ರಾಕ್ಷಿ ಬೆಳೆಯುತ್ತಿರುವೆ. ಹಸಿ ದ್ರಾಕ್ಷಿಯನ್ನು ಒಣದ್ರಾಕ್ಷಿಯನ್ನಾಗಿಸಲು ಮಾಡಲು ಅವಶ್ಯಕವಾದ ಶೆಡ್ಡನ್ನು ₹ 3.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷ ದ್ರಾಕ್ಷಿ ಹಾಗೂ ಒಣ ದ್ರಾಕ್ಷಿಯಿಂದ ಕನಿಷ್ಠ ₹ 8 ಲಕ್ಷದವರೆಗೆ ಲಾಭ ಗಳಿಸುತ್ತಿದ್ದು, ಸ್ವಾವಲಂಬಿ ಬದುಕಿಗೆ ದ್ರಾಕ್ಷಿ ಆಧಾರವಾಗಿದೆ’ ಎಂದು ರಾಯಪ್ಪ ಕುಂಬಾರ ತಮ್ಮ ಯಶೋಗಾಥೆಯನ್ನು ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟರು.

‘ತಿಕೋಟಾ, ಬಾಬಾನಗರ, ಬಿಜ್ಜರಗಿ ಪ್ರದೇಶಗಳಿಗೆ ಸೀಮಿತವಾಗಿದ್ದ ದ್ರಾಕ್ಷಿಯನ್ನು, ಅದೇ ರೀತಿಯ ಭೂಮಿ ಹೊಂದಿರುವ ದೇವರಹಿಪ್ಪರಗಿ ಭಾಗದಲ್ಲಿಯೂ ಬೆಳೆಯಬಹುದು ಎಂದು ಪರಿಚಯ ಮಾಡಿದ್ದು ರಾಯಪ್ಪ ಕುಂಬಾರ.

ದ್ರಾಕ್ಷಿ ಬೆಳೆಯುವ ರೀತಿ, ಅಳವಡಿಸಿಕೊಳ್ಳುವ ವಿವಿಧ ಹಂತಗಳು, ಉಪಯೋಗಿಸಬೇಕಾದ ಗೊಬ್ಬರ, ರಾಸಾಯನಿಕ ಸೇರಿದಂತೆ ಸಮಗ್ರ ಎಲ್ಲ ರೀತಿಯ ಮಾಹಿತಿಯನ್ನು ರೈತ ಸಮುದಾಯಕ್ಕೆ ನೀಡಿ, ಇತರರು ದ್ರಾಕ್ಷಿ ಕೃಷಿಗೆ ಮುಂದಾಗುವಂತೆ ಮಾಡಿದ್ದಾರೆ’ ಎನ್ನುತ್ತಾರೆ ದೇವರಹಿಪ್ಪರಗಿಯ ದ್ರಾಕ್ಷಿ ಬೆಳೆಗಾರರಾದ ಸೋಮಶೇಖರ ಹಿರೇಮಠ, ಶಿವಾನಂದ ಯಾಳಗಿ, ಬಸಯ್ಯ ಮಲ್ಲಿಕಾರ್ಜುನಮಠ, ಸೋಮು ಸೊನ್ನದ, ಈರಯ್ಯ ವಂದಾಲಮಠ, ರಜಾಕ್ ಬಜಂತ್ರಿ, ಸಿದ್ದು ಮಸಬಿನಾಳ, ಚಂದ್ರಾಮ ನಾಯ್ಕೋಡಿ, ರಾಯಗೊಂಡಪ್ಪ ಏಳುಕೋಟಿ, ರಾಜೇಸಾಬ್ ಮಕಾಂದಾರ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !