ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಸುಧಾರಿಸಿದ ಕೃಷಿ ಹೊಂಡ

Last Updated 22 ಜುಲೈ 2019, 19:30 IST
ಅಕ್ಷರ ಗಾತ್ರ

‘ಈ ಭಾಗದಲ್ಲಿ ನೀರಾವರಿ ಸೌಕರ್ಯ ಇಲ್ಲ. ಆದರೆ, ಕಪ್ಪು ಮಣ್ಣಿನ(ಎರೆ) ಭೂಮಿಯಾದ್ದರಿಂದ, ಸ್ವಲ್ಪ ಮಳೆಯಾದರೂ ಸಾಕು. ಹೆಸರು,‌ ಕಡಲೆ, ಮೆಣಸಿನಕಾಯಿಯಂತಹ ಬೆಳೆಗಳನ್ನು ಬೆಳೆಯುತ್ತಿದ್ದೆವು. ಇತ್ತೀಚಿನ ವರ್ಷಗಳಲ್ಲಿ ಮಳೆಯ ಏರುಪೇರಿನಿಂದಾಗಿ ಯಾವ ಬೆಳೆಯನ್ನೂ ಸರಿಯಾಗಿ ಬೆಳೆಯಲಾಗುತ್ತಿರಲಿಲ್ಲ. ಆಗ, ಹೊಲದಲ್ಲಿ ತೆಗೆಸಿದ ಕೃಷಿ ಹೊಂಡ ನಮಗೆ ಆಸರೆಯಾಯಿತು. ಈ ಬಾರಿ ಹೊಂಡದ ನೀರಿನಿಂದಲೇ ಉಳ್ಳಾಗಡ್ಡಿ (ಈರುಳ್ಳಿ)ಬೀಜ ಬೆಳೆದಿದ್ದೇನೆ’ – ನರಗುಂದ ತಾಲ್ಲೂಕಿನ ಕಡದಳ್ಳಿಯ ರೈತ ಧರ್ಮರಡ್ಡಿ ಕರಮಳ್ಳಿ ಹೊಂಡದ ನೀರಿನಿಂದಾದ ಅನುಕೂಲವನ್ನು ಸಂತಸದಿಂದ ಹಂಚಿಕೊಂಡರು.

ಇದೇ ತಾಲ್ಲೂಕಿನ ರೈತ ರುದ್ರಗೌಡ ಲಿಂಗನಗೌಡರೂ ಕೃಷಿಹೊಂಡದಿಂದಾಗಿಯೇ ಆಪಲ್ ಬೇರ್, ಪೇರಲ, ಹತ್ತಿ ಬೆಳೆಯಲು ಸಾಧ್ಯವಾಯಿತು ಎಂದರು. ನವಲಗುಂದ ತಾಲ್ಲೂಕಿನ ಇಬ್ರಾಹಿಂಪುರದ ಅರುಣ ಕುರಹಟ್ಟಿ, ‘ಮೊದಲು ಕಡಲೆ, ಹೆಸರು ಬೆಳೆಯುತ್ತಿದ್ದೆವು. ಹೊಂಡದ ಆಸರೆ ಸಿಕ್ಕ ಮೇಲೆ ಐದು ಎಕರೆಯಲ್ಲಿ ಪೇರಲ ಬೆಳೆದಿದ್ದೇನೆ’ ಎಂದು ಸಂಭ್ರಮ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲೆಯಲ್ಲಿ ನರಗುಂದ, ನವಲಗುಂದ ತಾಲ್ಲೂಕಿನಲ್ಲಿ ಈಗ ಇಂಥ ಹಲವು ಕೃಷಿಹೊಂಡದ ಯಶೋಗಾಥೆಗಳು ಕೇಳಿ ಬರುತ್ತಿವೆ. ನೀರಾವರಿ ಸೌಲಭ್ಯವಿಲ್ಲದ ಈ ಪ್ರದೇಶಗಳಲ್ಲಿ ‘ಮಳೆ ಬಂದರೆ ಬೆಳೆ’ ಎನ್ನುವಂತಹ ಪರಿಸ್ಥಿತಿ ಇದೆ. ಇಂಥ ಕಡೆ ಒಂದಷ್ಟು ರೈತರು ಕೃಷಿಹೊಂಡಗಳನ್ನು ನಿರ್ಮಾಣ ಮಾಡಿಕೊಂಡು, ಹೊಸ ಬೆಳೆಗಳನ್ನು ಬೆಳೆಯುತ್ತಾ, ತಕ್ಕಮಟ್ಟಿಗೆ ಬದುಕಿನಲ್ಲಿ ಸುಧಾರಣೆ ಕಂಡಿದ್ದಾರೆ.

ಈ ಭಾಗದ ರೈತರಿಗೆ ಕೃಷಿಹೊಂಡ ನಿರ್ಮಾಣಕ್ಕೆ ಉತ್ತೇಜನ ನೀಡಿದ್ದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌. ಈ ಸಂಸ್ಥೆ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಆರಂಭಿಸಿರುವ ‘ನೀರ ಸಿಂಚನ’ ಕಾರ್ಯಕ್ರಮದಲ್ಲಿ ಮೂರು ವರ್ಷಗಳಿಂದ 3,500 ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ರೈತರಿಗೆ ನೆರವಾಗಿದೆ. ಪಕ್ಕದ ತೆಲಂಗಾಣದಲ್ಲೂ ಈ ಯೋಜನೆ ಜಾರಿಗೊಳಿಸಿದ್ದು, ಅಲ್ಲೂ 1ಸಾವಿರ ಹೊಂಡಗಳ ನಿರ್ಮಾಣಕ್ಕೆ ಕೈ ಜೋಡಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಹೊಂಡಗಳು ನಿರ್ಮಾಣವಾಗಿವೆ. ಜತೆಗೆ ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳ ಕೃಷಿ ಜಮೀನು ಗಳಲ್ಲೂ ಹೊಂಡಗಳನ್ನು ತೆಗೆಸಲು ಸಂಸ್ಥೆ ನೆರವು ನೀಡಿದೆ. ಹೊಂಡ ಮಾಡಿಸುವವರಿಗೆ ಫೌಂಡೇಷನ್‌ನಿಂದ 30 ಜೆಸಿಬಿಗಳನ್ನು ಉಚಿತವಾಗಿ ನೀಡಿದೆ. ಇದರಿಂದ ರೈತರಿಗೆ ಆರ್ಥಿಕ ಹೊರೆ ಕಡಿಮೆಯಾಗಿ, ಕಡಿಮೆ ವೆಚ್ಚದಲ್ಲಿ ಹೊಂಡಗಳು ನಿರ್ಮಾಣವಾಗಿವೆ.

ಹೊಂಡಗಳ ಗಾತ್ರ 100 ಅಡಿ x100 ಅಡಿ, 12 ಅಡಿ ಆಳ, 100 ಅಡಿ x150 (ಅಗಲ ಮತ್ತು ಉದ್ದ) ಹಾಗೂ 15 ಅಡಿ ಆಳ. ಎರಡು ಅಳತೆಯಲ್ಲಿವೆ. ಪ್ರತಿ ಹೊಂಡದಲ್ಲಿ ಒಮ್ಮೆಗೆ 25 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ. ಮಳೆ ಚೆನ್ನಾಗಿ ಆದರೆ, ವರ್ಷದಲ್ಲಿ ಎರಡರಿಂದ ಮೂರು ಬಾರಿ ಹೊಂಡ ತುಂಬುತ್ತದೆ. ಹೊಂಡದಲ್ಲಿ ನೀರು ನಿಲ್ಲುವು ದರಿಂದ, ಅಂತರ್ಜಲ ಸುಧಾರಣೆಯಾಗುತ್ತದೆ. ಸಕಾಲದಲ್ಲಿ ಮಳೆ ಬಾರದಿದ್ದಾಗ, ಹೊಂಡದ ನೀರೇ ಆಸರೆಯಾಗುತ್ತದೆ ಎನ್ನುತ್ತಾರೆ ರೈತರು.

ಮಳೆಯನ್ನೇ ನೆಚ್ಚಿಕೊಂಡು ಹೆಸರು, ಕಡಲೆ, ಹತ್ತಿಯಂತಹ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದ ರೈತರು, ಈಗ ಕೃಷಿ ಹೊಂಡಗಳ ನೀರಿನಿಂದ ಉಳ್ಳಾಗಡ್ಡಿ ಬೀಜ ಉತ್ಪಾದನೆ, ಪೇರಲ, ಆ್ಯಪಲ್‌ ಬೇರ್‌ ಬೆಳೆಯುವ ಮೂಲಕ ಪರ್ಯಾಯ ಬೆಳೆಗಳತ್ತ ಗಮನ ಹರಿಸುತ್ತಿದ್ದಾರೆ. ಮಿಶ್ರ ಬೆಳೆಯಾಗಿ ವಿವಿಧ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ.

ಇಬ್ರಾಹಿಂಪುರದ ರೈತ ಅರುಣ ಕುರಹಟ್ಟಿ ಮೂರು ವರ್ಷಗಳ ಹಿಂದೆ 100 ಅಡಿ ಅಗಲ, 150 ಅಡಿ ಉದ್ದ, 15 ಅಡಿ ಆಳದ ಕೃಷಿಹೊಂಡ ತೋಡಿಸಿದ್ದರು. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಮಳೆ ಬಂತು, ಎರಡು ಅವಧಿಯಲ್ಲೂ ಹೊಂಡ ತುಂಬಿತು. ಹೊಂಡದಲ್ಲಿ ನೀರು ಸಂಗ್ರಹವಾದ ಮೇಲೆ ಹೆಸರು, ಕಡಲೆ ಬಿಟ್ಟು, ಐದು ಎಕರೆಗೆ ಪೇರಲ ಹಾಕಿಸಿದರು. ಮಿಶ್ರಬೆಳೆಯಾಗಿ ವಿವಿಧ ತರಕಾರಿಗಳನ್ನು ಬೆಳೆದರು. ‘20 ರಿಂದ 25 ದಿನಗಳಿಗೆ ಒಂದಾವರ್ತಿ, ವರ್ಷಕ್ಕೆ ಏಳೆಂಟು ಬಾರಿ ಕೃಷಿ ಹೊಂಡದಿಂದಲೇ ನೀರ ಹಾಯಿಸಿದ್ದೆ. ಎಲ್ಲ ಡ್ರಿಪ್ ಮೂಲಕ ನೀರು ಪೂರೈಕೆ ಮಾಡಿದ್ದರಿಂದ, ಕಡಿಮೆ ನೀರಿನಲ್ಲೇ ಬೆಳೆ ಬೆಳೆದೆ. ಉತ್ತಮ ಆದಾಯ ಸಿಕ್ಕಿದೆ. ಮೂರು ವರ್ಷಗಳಿಂದ ಬರವಿದ್ದರೂ ಹೊಂಡದ ನೀರು ನನ್ನ ಬೆಳೆಗಳನ್ನು ಕಾಪಾಡಿದೆ’ ಎನ್ನುತ್ತಾರೆ ಅರುಣ.

ಅರುಣ ಅವರಂತಹ ಹಲವರ ಜಮೀನುಗಳಲ್ಲಿ ಉಂಟಾದ ಬದಲಾವಣೆಯಿಂದ ಸ್ಫೂರ್ತಿ ಪಡೆದ ಅನೇಕ ರೈತರು ಕೃಷಿಹೊಂಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಒಂದು ಕಾಲದಲ್ಲಿ ದೇಶಪಾಂಡೆ ಫೌಂಡೇಷನ್‌ ಪ್ರತಿನಿಧಿಗಳೇ, ಕೃಷಿಹೊಂಡ ಮಾಡಿಸಲು ರೈತರನ್ನು ಮನೆ ಮನೆಗಳಿಗೆ ಹೋಗಿ ಒತ್ತಾಯಿಸುತ್ತಿದ್ದರು. ಈಗ ರೈತರೇ, ಜೆಸಿಬಿ ಕಳುಹಿಸುವಂತೆ ಸಂಸ್ಥೆಯ ಪ್ರತಿನಿಧಿಗಳಿಗೆ ದುಂಬಾಲು ಬೀಳುತ್ತಿದ್ದಾರೆ.

ಯೋಜನೆ ಅನುಷ್ಠಾನ ಹೇಗೆ?

ದೇಶಪಾಂಡೆ ಫೌಂಡೇಷನ್‌, ಧಾರವಾಡ ತಾಲ್ಲೂಕಿನಲ್ಲಿ ಹತ್ತಿ ಕೃಷಿ ಯೋಜನೆಯೊಂದರ ಅನುಷ್ಠಾನಕ್ಕೆ ಮುಂದಾಗಿತ್ತು. ಆ ವೇಳೆ ನಡೆದ ಸಭೆಯಲ್ಲಿ, ಕೆಲವು ರೈತರು ಈ ಭಾಗಕ್ಕೆ ಕೃಷಿಹೊಂಡ ಎಷ್ಟು ಉಪಯುಕ್ತ ಎನ್ನುವುದನ್ನು ವಿವರಿಸಿದರು. ಇದನ್ನು ಅರಿತ ಸಂಸ್ಥೆಯವರು ಕೃಷಿಹೊಂಡ ಮಾಡಿಸಲು ಜೆಸಿಬಿ ಯಂತ್ರದ ಬಾಡಿಗೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ಅಲ್ಲಿಂದ ಯೋಜನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡ ರೈತರು ಹೊಂಡ ಮಾಡಿಸಿಕೊಳ್ಳಲು ಮುಂದಾದರು ಎಂದು ‘ನೀರ ಸಿಂಚನ’ ಯೋಜನೆ ಉಸ್ತುವಾರಿ ಸಂದೀಪ್ ನಾಯಕ್ ವಿವರಿಸಿದರು.

ಯಂತ್ರದ ನೆರವಿನ ಜತೆಗೆ, ಹೊಂಡ ತೆಗೆಸಲು ಬೇಕಾದ ತಾಂತ್ರಿಕ ಸಲಹೆ, ಹೊಂಡ ತುಂಬಿದ ಮೇಲೆ ಮಿತವಾಗಿ ನೀರು ಬಳಸುವ ವಿಧಾನ, ಯಾವ ಬೆಳೆ ಬೆಳೆಯಬೇಕೆಂಬ ತಜ್ಞರಿಂದ ಮಾರ್ಗದರ್ಶನವನ್ನೂ ಉಚಿತವಾಗಿ ಸಂಸ್ಥೆಯವರು ನೀಡಿದ್ದಾರೆ. ‘ಇವೆಲ್ಲದರ ಪರಿಣಾಮವೇ ರೈತರಿಗೆ ಒಂದು ಹೊಂಡಕ್ಕೆ ಕನಿಷ್ಠ 40ಸಾವಿರದಷ್ಟು ಹಣ ಉಳಿತಾಯವಾಗಿದೆ. ಹೊಂಡ ತೆಗೆಸಿದ ಮೇಲೆ, ಸಾಂಪ್ರದಾಯಿಕ ಬೆಳೆ ಬಿಟ್ಟು ಹಣ್ಣು, ತರಕಾರಿಯಂತಹ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಾಗಿದೆ’ ಎಂಬುದು ಸಂದೀಪ್ ಅಭಿಪ್ರಾಯ.

ರೈತ ಉತ್ಪಾದಕ ಕಂಪನಿ

ಕೃಷಿಹೊಂಡದ ಜತೆಗೆ, ಅದಕ್ಕೆ ಪೂರಕವಾಗಿರುವ ಕೃಷಿ ಚಟುವಟಿಕೆಗಳಿಗೂ ನೆರವಾಗುವ ದೃಷ್ಟಿಯಿಂದ ದೇಶಪಾಂಡೆ ಫೌಂಡೇಷನ್‌ ನರಗುಂದ, ನವಲಗುಂದ ತಾಲ್ಲೂಕುಗಳ 44 ಹಳ್ಳಿಗಳಲ್ಲಿ ರೈತನ್ನೊಳಗೊಂಡ ಕಲ್ಮೇಶ್ವರ ರೈತ ಉತ್ಪಾದಕ ಕಂಪನಿಯನ್ನು ಸ್ಥಾಪಿಸಿದ್ದಾರೆ. ಅದರ ಮೂಲಕ ರೈತರಿಗೆ ಬೀಜ, ರಸಗೊಬ್ಬರ, ಹನಿ ನೀರಾವರಿಯ ಸಾಮಗ್ರಿ, ತಾಡಪಾಲು, ಸ್ಪ್ರೇಯರ್‌ ಮೆಷಿನ್‌ಗಳನ್ನು ಮಾರುಕಟ್ಟೆಗಿಂತ ಸ್ವಲ್ಪ ಕಡಿಮೆ ದರದಲ್ಲಿ ಪೂರೈಸುತ್ತಿದ್ದಾರೆ. ಇದೇ ಕಂಪನಿಯಿಂದ ಕಳೆದ ವರ್ಷ ಸರ್ಕಾರ ನೀಡುವ ಬೆಂಬಲ ಬೆಲೆಯಲ್ಲಿ ಹೆಸರು, ಕಡಲೆ ಖರೀದಿಸಲಾಗಿದೆ. ಉತ್ಪನ್ನಗಳ ಮಾರುಕಟ್ಟೆಗೆ ಬೇಕಾದ ಸಂಪರ್ಕವನ್ನು ಕಲ್ಪಿಸಿಕೊಡಲಾಗುತ್ತದೆ. ರೈತರ ಒಟ್ಟಾರೆ ಆದಾಯವನ್ನು ಹೆಚ್ಚಿಸುವ ಉದ್ದೇಶ ಸಂಸ್ಥೆಯದ್ದು.

ಹನಿ ನೀರಿಗೂ ಪರದಾಡುತ್ತಿರುವ ವೇಳೆಯಲ್ಲಿ, ಸುರಿಯುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಕೃಷಿ ಹೊಂಡ ನಿರ್ಮಾಣಕ್ಕೆ ನೆರವಾಗುತ್ತಿದೆ. ಜಲಸಂರಕ್ಷಣೆ ಜತೆಗೆ, ಬಿತ್ತನೆ ಬೀಜ, ತಾಂತ್ರಿಕ ನೆರವು, ಮಾರುಕಟ್ಟೆ ಸೌಲಭ್ಯವನ್ನೂ ಒದಗಿಸಿಕೊಡಲಾಗುತ್ತಿದೆ’ ಎನ್ನುತ್ತಾರೆ ಫೌಂಡೇಷನ್‌ನ ಕೃಷಿ ವಿಭಾಗದ ನಿರ್ದೇಶಕ ಮಹಮ್ಮದ್‌ ಇನ್ನಸ್‌ಖಾನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT