ಗುರುವಾರ , ಆಗಸ್ಟ್ 13, 2020
21 °C

ಅಣಬೆ ಕೃಷಿಗೆ ‘ಸೌರ’ಶಕ್ತಿ

ಸಿ.ಎಸ್.ನಿರ್ವಾಣ ಸಿದ್ದಯ್ಯ Updated:

ಅಕ್ಷರ ಗಾತ್ರ : | |

ಅಣಬೆ ಕೃಷಿಯನ್ನು ಇನ್ನಷ್ಟು ರೈತ ಸ್ನೇಹಿಯಾಗಿಸಲು ಹೆಸರಘಟ್ಟದ ಐಐಎಚ್‌ಆರ್ ಸಂಸ್ಥೆ ಸೋಲಾರ್ ಶಕ್ತಿ ಆಧಾರಿತ ಯಂತ್ರವನ್ನು ಆವಿಷ್ಕರಿಸಿದೆ. ಮಾಮೂಲಿ ಅಣಬೆ ಕೃಷಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಇದು ಪರಿಹಾರ ನೀಡಬಹುದು ಎಂಬುದು ಯಂತ್ರ ಆವಿಷ್ಕರಿಸಿದವರ ವಿಶ್ವಾಸ

ಅಣಬೆ ಕೃಷಿಯಲ್ಲಿ ನೀರು ನಿರ್ವಹಣೆ ಬಹಳ ಮುಖ್ಯ. ಸಮರ್ಪಕವಾಗಿ ಅಣಬೆ ಬೆಳೆಯಲು ಪ್ರತಿ 30 ನಿಮಿಷಕ್ಕೊಮ್ಮೆ ಬೀಜವಿರುವ ಹುಲ್ಲಿಗೆ ನೀರು ಸಿಂಪಡಿಸಲೇ ಬೇಕು. ಸರಿಯಾದ ಸಮಯಕ್ಕೆ ನೀರು ಚಿಮುಕಿಸದಿದ್ದರೆ, ಬೀಜ ಬೆಳೆಯುವುದಿಲ್ಲ.

ಈ ಅಪಾಯದಿಂದ ತಪ್ಪಿಸಿಕೊಳ್ಳಲು ಕೆಲವರು ವಿದ್ಯುತ್ ಚಾಲಿತ ನೀರು ಸಿಂಪಡಣೆ ಮಾಡುವ ವ್ಯವಸ್ಥೆಗೆ ಮೊರೆ ಹೋಗುತ್ತಿದ್ದಾರೆ. ಆದರೆ ಈ ವ್ಯವಸ್ಥೆ ಅಳವಡಿಸಲು ಹೆಚ್ಚು ಬಂಡವಾಳ ಬೇಕಾಗಬಹುದು. ಜತೆಗೆ, ವಿದ್ಯುತ್ ಕೈಕೊಟ್ಟರೆ ಅಪಾಯ ಹೆಚ್ಚು.

ಇಂಥ ಸಮಸ್ಯೆಗಳಿಗೆ ಪರಿಹಾರವಾಗಿ ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ‘ಸೌರಚಾಲಿತ ಅಣಬೆ ಬೆಳೆಯುವ ಯಂತ್ರ’ವನ್ನು ಆವಿಷ್ಕರಿಸಿದ್ದಾರೆ. ಸಂಸ್ಥೆಯ ಯಂತ್ರೋಪಕರಣ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳಾದ ಡಾ. ಸೇಂಥಿಲ್ ಮತ್ತು ಡಾ. ಮೀರಾ ಪಾಂಡೆ ಇದರ ರೂವಾರಿಗಳು.

ನಿಮಗೆ ಗೊತ್ತಿದೆಯೇ? ಹುಲ್ಲಿನಲ್ಲಿ ಸುತ್ತಿಟ್ಟ ಅಣಬೆ ಬೀಜಗಳು ಬೆಳೆಯಬೇಕೆಂದರೆ ಹುಲ್ಲಿನ ಮೇಲೆ ಪ್ರತಿ 30 ನಿಮಿಷಕ್ಕೊಮ್ಮೆ ನೀರು ಸಿಂಪಡಿಸಬೇಕು. ಸರಿಯಾದ ಸಮಯಕ್ಕೆ ನೀರು ಒದಗಿಸಿದೇ ಇದ್ದರೆ ಬೀಜವು ಬೆಳೆಯದೇ ಬೆಳೆ ಕೈ ಕೊಡುವ ಅಪಾಯ ಹೆಚ್ಚು. ಕೆಲವು ರೈತರು ನೀರು ಸಿಂಪಡಿಸುವಲ್ಲಿ ಐದು ಹತ್ತು ನಿಮಿಷ ವ್ಯತ್ಯಾಸ ಮಾಡಿ, ಅಪಾಯ ತಂದೊಡ್ಡಿಕೊಂಡಿರುವ ಉದಾಹರಣೆಗಳಿವೆ. ಹೆಸರಘಟ್ಟದ ಈ ವಿಜ್ಞಾನಿಗಳು ಆವಿಷ್ಕರಿಸಿರುವ ಸೌರಶಕ್ತಿ ಆಧಾರಿತ ಯಂತ್ರ ಇಂಥ ಅಪಾಯಗಳಿಂದ ಬೆಳೆಗಾರರನ್ನು ಪಾರು ಮಾಡುತ್ತದೆ.

ಯಂತ್ರ ವಿನ್ಯಾಸ ಹೀಗಿದೆ

ನೋಡುವುದಕ್ಕೆ ಥೇಟ್ ಪುಟ್ಟ ಪೆಟ್ಟಿಗೆ ಅಂಗಡಿಯಂತೆ ಕಾಣುತ್ತದೆ. ಮೇಲ್ಭಾಗದ ಸೂರಿಗೆ ಸೌರಫಲಕಗಳನ್ನು ಅಳವಡಿಸಿದ್ದಾರೆ. ಕೆಳಭಾಗದಲ್ಲಿ 20 ಲೀಟರ್ ನೀರು ಹಿಡಿಯುವಂತಹ ತೊಟ್ಟಿ ಇದೆ. ಸೂರು – ತೊಟ್ಟಿಯ ನಡುವೆ ಸುತ್ತಲು ಕಬ್ಬಿಣದ ಸರಳಿನ ಗೋಡೆ ಇದೆ. ಸರಳುಗಳ ಮೇಲೆ ಗೋಣಿಚೀಲದ ಪರದೆಯನ್ನು ಹೊದಿಸಿದ್ದಾರೆ. ಒಳಭಾಗದಲ್ಲಿ ಹುಲ್ಲಿನ ಅಣಬೆ ಬೀಜಗಳನ್ನು ಸುತ್ತಿ ತೂಗು ಹಾಕಲು ದಾರಗಳನ್ನು ಬಿಟ್ಟಿದ್ದಾರೆ. ಈ ಯಂತ್ರದ ಬಲಭಾಗದಲ್ಲಿ ಆಟೊಮ್ಯಾಟಿಕ್ ಮೋಟಾರ್‌ (ಸ್ವಯಂ ಚಾಲಿತ) ಮತ್ತು ಬ್ಯಾಟರಿ ಇದೆ. ಸೋಲಾರ್‌ ಫಲಕಗಳಿಂದ ಉತ್ಪತ್ತಿಯಾದ ವಿದ್ಯುತ್ ಬ್ಯಾಟರಿಗಳಲ್ಲಿ ಶೇಖರಣೆಯಾಗುತ್ತದೆ. ಬ್ಯಾಟರಿಯಿಂದ ಮೋಟಾರ್‌ ಚಾಲನೆಯಾಗುತ್ತದೆ. 

ತೊಟ್ಟಿಗೆ ಹೊರಭಾಗದಿಂದ ಒಂದು ಪೈಪ್ ಜೋಡಿಸಿದ್ದಾರೆ(ಇನ್‌ಲೆಟ್). ಕೊಳವೆಬಾವಿ ಅಥವಾ ಸಂಪ್‌ನಿಂದ ನೀರು ತಂದು ಈ ಪೈಪ್‌ ಮೂಲಕ ಯಂತ್ರದಲ್ಲಿ ರುವ ತೊಟ್ಟಿಗೆ ತುಂಬಿಸಬಹುದು. ಯಂತ್ರದ ತೊಟ್ಟಿಯಿಂದ ಒಂದು ಪೈಪ್‌ ಅಣಬೆ ತೂಗು ಹಾಕಿರುವ ಸ್ಥಳಕ್ಕೆ (ಒಳಾಂಗಳಕ್ಕೆ) ಜೋಡಿಸಲಾಗಿದೆ. 

ಕಾರ್ಯನಿರ್ವಹಣೆ ಹೀಗೆ

ಆಟೊಮ್ಯಾಟಿಕ್ ಮೋಟರ್‌ ಮೂವತ್ತು ನಿಮಿಷಗಳಿಗೊಮ್ಮೆ ಸ್ವಯಂ ಚಾಲನೆಯಾಗುವಂತೆ ಅಡ್ಜೆಸ್ಟ್ ಮಾಡಲಾಗಿರುತ್ತದೆ. ಮೋಟಾರ್ ಚಾಲನೆಯಾದಾಗಲೆಲ್ಲ ತೊಟ್ಟಿಯ ನೀರು ಪೈಪ್‌ಗಳ ಮೂಲಕ ಹರಿದು ಅಣಬೆಗಳ ಮೇಲೆ ಸಿಂಪಡಣೆಯಾಗುತ್ತದೆ. ಅಗತ್ಯಕ್ಕೆ ತಕ್ಕಷ್ಟು ನೀರು ಸಿಂಪಡಣೆಯಾಗುತ್ತದೆ. ಯಂತ್ರದ ಸುತ್ತ ಹೊದಿಸಿರುವ ಗೋಣಿಚೀಲದ ಪರದೆಗಳು ಒಳಗಿನ ವಾತಾವರಣವನ್ನು ನಿಯಂತ್ರಿಸುತ್ತವೆ. 

‘ಈ ಯಂತ್ರದಲ್ಲಿ ಒಮ್ಮೆಗೆ 80 ಅಣಬೆ ಚೀಲಗಳನ್ನು ಜೋಡಿಸಬಹುದು. ಯಂತ್ರಕ್ಕೆ ಗಾಲಿಗಳನ್ನು ಜೋಡಿಸಿದ್ದು, ಇದನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು’ ಎನ್ನುತ್ತಾರೆ ವಿಜ್ಞಾನಿ ಸೇಂಥಿಲ್.

ಸೌರಫಲಕ ಮತ್ತು ಬ್ಯಾಟರಿ

ಈ ಯಂತ್ರವನ್ನು 6 ರಿಂದ 8 ಗಂಟೆ ಬಿಸಿಲನಲ್ಲಿ ಇಟ್ಟರೆ ಸಾಕು. ಒಂದು ದಿನಕ್ಕೆ ಬೇಕಾದ ವಿದ್ಯುತ್‌ ಶಕ್ತಿ ಬ್ಯಾಟರಿಗಳಲ್ಲಿ ಸಂಗ್ರಹವಾಗುತ್ತದೆ. ಬ್ಯಾಟರಿ ಚಾರ್ಜ್‌ ಆಗಲು ತುಂಬಾ ಬಿಸಿಲು ಬೇಕೆಂದೇನೂ ಇಲ್ಲ. ಮೂರ್ನಾಲ್ಕು ಗಂಟೆ ಉತ್ತಮವಾದ ಬಿಸಿಲಿದ್ದರೂ ಸಾಕು. ಯಂತ್ರಕ್ಕೆ ಜೋಡಿಸಿರುವ ಬ್ಯಾಟರಿಗಳು ಗರಿಷ್ಠ ಐದು ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಅಣಬೆ ಪೌಷ್ಠಿಕವಾದ ಆಹಾರ. ಇತ್ತೀಚೆಗೆ ಬಹುಬೇಡಿಕೆಯ ಆಹಾರವೂ ಹೌದು. ಹೀಗಾಗಿ ರೈತರಿಗೆ ಅಣಬೆ ಕೃಷಿಯನ್ನು ಮತ್ತಷ್ಟು ಸುಲಭ ಹಾಗೂ ರೈತ ಸ್ನೇಹಿಯಾಗಿಸಲು ಈ ಯಂತ್ರವನ್ನು ಆವಿಷ್ಕರಿಸಲಾಗಿದೆ. ಯಂತ್ರದ ಬೆಲೆ ₹1 ಲಕ್ಷ. ‘ಬೆಲೆ ಕೇಳಿದಾಗ ತುಸು ದುಬಾರಿ’ ಎನ್ನಿಸಬಹುದು. ಆದರೆ ಅಣಬೆ ಬೆಳೆಗಾರರು ಈ ಹಣವನ್ನು ಒಂದು ತಿಂಗಳಲ್ಲಿ ಗಳಿಸಬಹುದು’ ಎನ್ನುತ್ತಾರೆ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯ ನಿರ್ದೇಶಕ ಎಂ.ಅರ್. ದಿನೇಶ್ .

ಅನುಕೂಲಗಳು

‌ಈ ಯಂತ್ರ ಬಳಸುವುದರಿಂದ ವಿದ್ಯುತ್ ಖರ್ಚು ಬರುವುದಿಲ್ಲ. ಜತೆಗೆ ಕರೆಂಟ್‌ಗಾಗಿ ಕಾಯುವ ಅಗತ್ಯ ಬೀಳುವುದಿಲ್ಲ. ಸಮಪರ್ಕವಾಗಿ ನೀರು ನಿರ್ವಹಣೆಯಾಗದೇ, ಉತ್ಪನ್ನ ಹಾಳಾಗುತ್ತದೆ ಎಂಬ ಆತಂಕವೂ ಇರುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಉತ್ಕೃಷ್ಟವಾಗಿ ಅಣಬೆ ಬೆಳೆಯಬಹುದು. ಇಳುವರಿಯನ್ನೂ ಹೆಚ್ಚಿಸಿಕೊಳ್ಳಬಹುದು. ಇದೊಂದು ರೀತಿ ಸುಸ್ಥಿರ ಅಣಬೆ ಕೃಷಿ ಮಾಡಲು ಸೂಕ್ತ ಯಂತ್ರವಾಗಿದೆ. ಸೋಲಾರ್ ಅಣಬೆ ಕೃಷಿ ಯಂತ್ರ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 94494-92857 ಸಂರ್ಪಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು