ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮನಸು; ಹೊಸ ಕನಸು| ಬಹುಬೆಳೆ ಕೃಷಿ ನನ್ನ ಈ ವರ್ಷದ ಆದ್ಯತೆ

Last Updated 28 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಪದೇ ಪದೇ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ ಊರು ನನ್ನದು. ಕೆಲವು ವರ್ಷಗಳಿಂದ ಕಾಲುವೆಯಲ್ಲಿ ನೀರು ಹರಿಯುತ್ತಿದೆ ಎಂಬ ಸಮಾಧಾನ ಇದ್ದರೂ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗಲು ಮಳೆ ಬರಬೇಕು ತಾನೇ? ಅಧಿಕ ನೀರಿನಿಂದ ಭತ್ತ ಬೆಳೆಯುವ ನಮ್ಮ ಪ್ರದೇಶದ ರೈತರು ಮಾರುಕಟ್ಟೆ ಸಮಸ್ಯೆಗೆ ಸಿಲುಕುತ್ತಾರೆ. ಭತ್ತ ಕಟಾವಾದಾಗ ಸಿಕ್ಕ ದರಕ್ಕೆ ಮಾರಾಟ ಮಾಡುತ್ತಾರೆ. ಆದರೆ, ಆ ಜಾಯಮಾನ ನನ್ನದಲ್ಲ. ನನ್ನದೇನಿದ್ದರೂ ಗ್ರಾಹಕರ ಜತೆ ನೇರ ವಹಿವಾಟು.

ಭತ್ತ ಸಂಸ್ಕರಿಸಿ ಅಕ್ಕಿ, ತೊಗರಿ ಸಂಸ್ಕರಿಸಿ ಬೇಳೆ ಮಾಡಿ ಮಾರಾಟ ಮಾಡುವುದು ನನ್ನ ಆದ್ಯತೆ. ಇದು ನನಗೆ ಹೆಚ್ಚು ಲಾಭದಾಯಕ. ಕೃಷಿ ಕ್ಷೇತ್ರದ ಸಮಸ್ಯೆಗಳು, ಸಂಕಷ್ಟಗಳು ನನಗೆ ಹೆಚ್ಚು ಅರಿವಾಗಿದ್ದೇ ಈ ವರ್ಷ. ಅದು ಪ್ರಾಕೃತಿಕ ವಿಕೋಪ ಆಗಿರಬಹುದು ಅಥವಾ ಮಾರುಕಟ್ಟೆಯ ಸಂಕಟ ಆಗಿರಬಹುದು. ಇದಕ್ಕಾಗಿ ನಾನು ಹೊಸ ವರ್ಷ ಕೃಷಿ ವೈವಿಧ್ಯವನ್ನು ಅಳವಡಿಸಿಕೊಳ್ಳಲು ಮುಂದಾಗುತ್ತೇನೆ. ಅದರಲ್ಲೂ ಉಪಕಸುಬುಗಳನ್ನು ಅಳವಡಿಸಿಕೊಂಡರೆ ಅದು ಕೃಷಿ ಸಂಕಟಕ್ಕೆ ಒಳ್ಳೆಯ ಪರಿಹಾರ ಎಂಬುದು ಅರಿವಿಗೆ ಬಂದಿದೆ. ಈ ವರ್ಷದ ದೆಹಲಿಯು ದಟ್ಟ ಹೊಗೆ –ಮಂಜಿನಲ್ಲಿ ಮುಳುಗಿದ್ದು ಗೊತ್ತೇ ಇದೆ. ಕುತೂಹಲದ ಸಂಗತಿ ಎಂದರೆ ಅಲ್ಲಿ ನಡೆದಿದ್ದು ನಮ್ಮಲ್ಲೂ ಇದೆ. ಅದು ಭತ್ತದ ಹುಲ್ಲಿನ ಸುಡುವಿಕೆ. ಯಾದಗಿರಿಯ ರೈತರು ಸಹ ಭತ್ತದ ಹುಲ್ಲನ್ನು ಸುಡುತ್ತಾರೆ. ಅದನ್ನು ತಪ್ಪಿಸುವುದು ಹೇಗೆ? ನಾವೊಂದಿಷ್ಟು ಯುವ ರೈತರು ಭತ್ತದ ಹುಲ್ಲು ಬಳಸಿ ಅಣಬೆ ಕೃಷಿ ಮಾಡಲಿದ್ದೇವೆ. ಒಂದಷ್ಟು ಜನ ಗೊಬ್ಬರ ತಯಾರಿಕೆ ಮಾಡಲಿದ್ದೇವೆ. ವಾತಾವರಣ ಕಲುಷಿತಗೊಳಿಸುವ ಕ್ರಮಕ್ಕೆ ಈ ಹೆಜ್ಜೆ ವಿರೋಧವೇ ಸೈ!

ಕೃಷಿಯಲ್ಲಿ ಬಹುಬೆಳೆ ಪದ್ಧತಿ ಅಳವಡಿಕೆ ಈ ವರ್ಷದ ಮುಖ್ಯ ನಿರ್ಣಯಗಳಲ್ಲಿ ಒಂದು. ಒಂದು ಬೆಳೆಗೆ ಕೆಲವೊಮ್ಮೆ ಹೆಚ್ಚು ದರ ಬರಬಹುದು. ಉದಾಹರಣೆಗೆ ಈರುಳ್ಳಿ! ಆದರೆ, ಅದನ್ನು ಬೆಳೆಸಿದವರಿಗೆ ಹೆಚ್ಚು ಆದಾಯ ಸಿಕ್ಕಿದೆ ಎಂದೇನಿಲ್ಲ. ಹಣ ಬಾಚಿದ್ದು ದಲ್ಲಾಳಿಗಳು ಮಾತ್ರ. ಅದರ ಬದಲಿಗೆ ವಿವಿಧ ಬೆಳೆ ಇದ್ದರೆ ಅಧಿಕ ಆದಾಯ ಖಚಿತ. ಈ ವರ್ಷ ನಾನು ಆ ಯಶಸ್ವಿ ರೈತರ ಸಾಲಿಗೆ ಸೇರುವ ಸಂಕಲ್ಪ ಮಾಡಿದ್ದೇನೆ. ಆರೋಗ್ಯದ ಅರಿವು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಗ್ರಾಹಕರಿಗೆ ಶುದ್ಧ ಆಹಾರ ಕೊಡುವ – ಅದೂ ಮಧ್ಯವರ್ತಿ ಇಲ್ಲದೇ –ಪ್ರಯತ್ನಗಳನ್ನು ನಾನು ಇನ್ನಷ್ಟು ಹೆಚ್ಚಿಸಿಕೊಳ್ಳುವೆ.

ನಿರೂಪ‍ಣೆ: ಆನಂದತೀರ್ಥ ಪ್ಯಾಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT