ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ; ರೈತರಿಗೆ ಪರಿಹಾರ

Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

`ಫೇಸ್‌ಬುಕ್', ಬಹುಶಃ ಇದನ್ನು ಅರಿಯದವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದು ಜನಪ್ರಿಯ. ಇದು ಕೇವಲ ಮನರಂಜನಾ ತಾಣವಾಗಬಾರದು, ರೈತರಿಗೂ ಉಪಯೋಗಿ ತಾಣವಾಗಲಿ ಎಂಬ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿದೆ `ಅಗ್ರಿಕಲ್ಚರಿಸ್ಟ್' (ಕೃಷಿಕರ ವೇದಿಕೆ) ಎಂಬ ತಂಡ. ಕೃಷಿವಲಯದಲ್ಲಿ ಹೊಸ ಬೆಳವಣಿಗೆ ಹುಟ್ಟುಹಾಕುತ್ತಿರುವ ಪತ್ರಕರ್ತ ಮಹೇಶ್ ಪುಚ್ಚೆಪ್ಪಾಡಿ ಇದರ ರೂವಾರಿ.

ಇಂದಿನ ಯುವಜನತೆಗೆ ಕೃಷಿ ಎಂದರೇನು ಎಂದು ಅನುಮಾನ ಮೂಡುವುದು ಸಹಜ. ಇದನ್ನು ಹೋಗಲಾಡಿಸಿ ಪ್ರತಿಯೊಬ್ಬರಲ್ಲೂ ವ್ಯವಸಾಯದ ಮನೋವೃತ್ತಿ, ಅರಿವು ಬೆಳೆಸಬೇಕೆಂಬ ನಿಟ್ಟಿನಲ್ಲಿ ಸಾಗುತ್ತಿದೆ `ಕೃಷಿಕರ ವೇದಿಕೆ'. ಕೇವಲ ನಾಲ್ಕೈದು ಸದಸ್ಯರೊಂದಿಗೆ ಆರಂಭಗೊಂಡ ಈ ತಂಡ ಅಂತರ್ಜಾಲದಲ್ಲೂ, ವ್ಯವಸಾಯಗಾರನ ಮನದಲ್ಲೂ ಅಚ್ಚಳಿಯದೆ ಉಳಿದಿದೆ. ರಾಜ್ಯದ ನಾನಾ ಕಡೆಗಳ ಕೃಷಿಕರು ಮಾತ್ರವಲ್ಲದೇ 20 ರಿಂದ 60 ವಯೋಮಿತಿಯೊಳಗಿನವರು ಇಲ್ಲಿ ಸದಾ ಸಕ್ರಿಯರು.

ಬೆಂಗಳೂರು, ಶಿರಸಿ, ಮಂಗಳೂರು, ಹೀಗೆ ಹಲವು ಪ್ರದೇಶಗಳ ಕೃಷಿಮಿತ್ರರು ಸೇರಿ ಸುಮಾರು ಎರಡು ಸಾವಿರ ಸದಸ್ಯರು ಈ ತಂಡದೊಂದಿಗೆ ಕೈಜೋಡಿಸಿದ್ದಾರೆ. ಅಗ್ರಿಕಲ್ಚರ್ ಗ್ರೂಪ್ ಚಾಲ್ತಿಗೆ ಬಂದು ಈಗ ಒಂದು ವರ್ಷ ಸಂದಿವೆ. ಅಲ್ಲದೇ ಹಲವಾರು ಯೋಚನೆಗಳು, ಯೋಜನೆಗಳೂ ಗ್ರೂಪ್‌ನ ಮುಂದಿವೆ.

ಚರ್ಚಿಸುವ ಅವಕಾಶ
ಕೃಷಿ ವಿಷಯಗಳ ಕುರಿತು ಚರ್ಚಿಸುವ-ಪ್ರಶ್ನಿಸುವ ಅವಕಾಶ ಇಲ್ಲಿದೆ. ಯಾವುದಾದರೂ ಒಂದು ಬೆಳೆಯನ್ನು ಚರ್ಚಾ ವಿಷಯವನ್ನಾಗಿಟ್ಟುಕೊಂಡು ಪ್ರತಿಯೊಬ್ಬರೂ ಅವರವರ ಅಭಿಪ್ರಾಯಗಳನ್ನು ಮುಂದಿಡುತ್ತಾರೆ. ಎಲ್ಲರ ಒಮ್ಮತದೊಂದಿಗೆ ಕೊನೆಗೆ ಅದಕ್ಕೊಂದು ಉಪಸಂಹಾರ. ಅದು ಕೃಷಿ ಚಟುವಟಿಕೆಗೆ ಸೂಕ್ತವಾದುದು, ಇಷ್ಟವಾಗುವಂತಹದ್ದು.

ಬೆಳೆಗೆ ತಗುಲುವ ರೋಗ, ರೋಗಕ್ಕೆ ವಾಸ್ತವ ಕಾರಣ, ಅದಕ್ಕಿರುವ ಸೂಕ್ತ ಪರಿಹಾರ, ಹೀಗೆ ಮಾಹಿತಿಗಳ ಆಗರ ಇಲ್ಲಿದೆ. ತೆಂಗು-ಕಂಗು, ಬಾಳೆ, ಭತ್ತನಾಟಿ, ತರಕಾರಿ ತುಪ್ಪ ಇತ್ಯಾದಿ ಬೆಳೆಗಳ ಪ್ರತಿದಿನದ ಮಾರುಕಟ್ಟೆ ಧಾರಣೆ ಸದಾ ಲಭ್ಯ. `ತೊಂಡೆ ಬಳ್ಳಿಯ ತುದಿ ದಪ್ಪವಾಗಿ ಸೊರಗುವ ಈ ಹುಳಬಾಧೆಗೆ ಮದ್ದು ಇದೆಯೇ? ಇದ್ದರೆ ತಿಳಿಸಿ?' ಇಂತಹ ಪ್ರಶ್ನೆಗಳನ್ನು ಕೃಷಿಕರು ವೇದಿಕೆಯಲ್ಲಿ ಕೇಳುತ್ತಾರೆ.

`ಯುವ ಸಮೂಹದಲ್ಲಿ ಕೃಷಿಯಾಸಕ್ತಿ ಹೆಚ್ಚಾಗಲು ಅಂತರ್ಜಾಲ ತಾಣವೂ ಉತ್ತಮ ದಾರಿ. ಈ ಮೂಲಕ ಸಾಗಿದರೆ ಪ್ರತಿಮನೆಯ ಮಕ್ಕಳಲ್ಲೂ ಒಂದಿಷ್ಟು ಕೃಷಿಭೂಮಿಯ ಅರಿವಾಗುವುದಲ್ಲದೆ ಹೆತ್ತವರೊಂದಿಗೂ ಈ ಬಗ್ಗೆ ಚರ್ಚಿಸುವ ಅವಕಾಶ ಸಿಗುತ್ತದೆ. ಪಟ್ಟಣದ ಮಂದಿಗೂ ಕೃಷಿ ಮೇಲಿನ ಪ್ರೀತಿ ಹೆಚ್ಚಾಗಬಹುದು' ಎನುತ್ತಾರೆ ಮಹೇಶ್.

ಇಲ್ಲಿ ತೀವ್ರ ಚರ್ಚೆಗೊಳಗಾದ ವಿಷಯ ಹಲವಾರು. ರಾಸಾಯನಿಕ ಗೊಬ್ಬರ, ಪೊಟಾಶಿಯಂ ಪಾಸ್ಪನೇಟ್, ಅಡಿಕೆ ಬೆಳೆಯ ಅಸಲು-ಫಸಲು ಹೀಗೆ ಹಲವು ವಿಷಯಗಳಲ್ಲಿ ನಡೆದ ಬಿಸಿ ಚರ್ಚೆಗಳಂತೂ ತೀವ್ರವಾಗಿತ್ತು, ಫಲಕಾರಿಯೆನಿಸಿತ್ತು. ಇಲ್ಲಿ ಸಾಂಪ್ರದಾಯಿಕ ಕೃಷಿಕರೂ ಅಲ್ಲದೇ ಇತರರಿಗೂ ಇದು  ಪ್ರಯೋಜನಕಾರಿ. `ಕೃಷಿಕರ ವೇದಿಕೆ' ಗ್ರೂಪ್‌ನ ನೇತೃತ್ವದಡಿ ಕೃಷಿರಂಗದ ಪ್ರಗತಿಗಾಗಿ ಕೃಷಿಕ್ಷೇತ್ರಗಳಿಗೆ ನೇರ ಭೇಟಿಕೊಡುವ ಸರ್ವೇ ಕಾರ್ಯವೂ ನಡೆಯುತ್ತಿದೆ.

`ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಈಗಾಗಲೇ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ನವಮಾಧ್ಯಮದ ಮೂಲಕ ಕೃಷಿ ಕ್ಷೇತ್ರದ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ ಸಂಗತಿ. ಪ್ರಾಯಶಃ ಕೃಷಿ ರಂಗದ ಆಕರ್ಷಣೆಯನ್ನು ಹೆಚ್ಚಿಸುವಲ್ಲಿ ಈ ಕೃಷಿಕರ ವೇದಿಕೆ ಸಾಕಷ್ಟು ಶ್ರಮಿಸುತ್ತಿದೆ ಎನ್ನಬಹುದು' ಎನ್ನುವುದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ರಾಕೇಶ್ ಕುಮಾರ್ ಕಮ್ಮಜೆ ಅವರ ಅಭಿಮತ.

ಬೆರಳ ತುದಿಯಲ್ಲಿ ಮಾಹಿತಿ
ಬೆರಳ ತುದಿಯಲ್ಲಿ ಮಾಹಿತಿ ಪಡೆಯುವ ಇಂದಿನ ಯುಗದಲ್ಲಿ ಸಾಮಾಜಿಕ ತಾಣಗಳ ಮೂಲಕ ಕೃಷಿಕರು ಮಾಹಿತಿ ಸಂವಹನ ಮಾಡಬೇಕೆಂಬ ಉದ್ದೇಶ ಕೃಷಿಕರ ವೇದಿಕೆಯದ್ದು. ಹಾಗೆಂದು ಇಲ್ಲಿ ರೈತರೇ ಬೇಕೆಂದೇನಿಲ್ಲ. ಕೃಷಿಕರು ಹೊಲದ ನಡುವೆ, ಜಮೀನಿನ ನಡುವೆ ಪಡೆದ ಅನುಭವಗಳನ್ನು, ತಿಳಿದಿರುವ ಮಾಹಿತಿಯನ್ನು ಹಾಗೂ ಸಮಸ್ಯೆಗಳನ್ನು ಇಲ್ಲಿ ಹಂಚಿಕೊಂಡರೆ ಸೂಕ್ತ ಪರಿಹಾರ ಖಂಡಿತ ಲಭ್ಯ. ಸುಮ್ಮನೆ ಕೂತು ನೋಡಿದರೆ ಸಾಕು, ರೈತರ ಕಷ್ಟ-ಸುಖಗಳು ಗೊತ್ತಾಗುವುದು. ಇವಿಷ್ಟಿದ್ದರೆ ಇಂದಲ್ಲಾ ನಾಳೆಯಾದರೂ ಕೃಷಿ ಹಸಿರಾದೀತು. ಹೊಲದಲ್ಲಿ ಚಿನ್ನ ಬೆಳೆದೀತು... ಎಂಬ ಕೃಷಿಕರ ವೇದಿಕೆ ಆಶಾವಾದ ಕೃಷಿಕರ ಪಾಲಿಗೆ ಆಶಾಕಿರಣವಾಗಲಿ. ವೆಬ್‌ಸೈಟ್ ವಿಳಾಸ: https://www.facebook.com/groups/Agriculturist/
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT