ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯವರ್ಧಕ ಕಾಮಕಸ್ತೂರಿ

Last Updated 17 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ತುಳಸಿ ಜಾತಿಗೆ ಸೇರಿರುವ ಕಾಮಕಸ್ತೂರಿ    ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆಯುರ್ವೇದದಲ್ಲಿ ಇದಕ್ಕೂ ತುಳಸಿಯಷ್ಟೇ ಮಹತ್ವದ ಸ್ಥಾನ. ಆರೋಗ್ಯದಾಯಕವೂ, ಖಾದ್ಯಗಳ ಸ್ವಾದ ಹೆಚ್ಚಿಸುವ ಸುವಾಸನಾ ಗಿಡವೂ ಆಗಿರುವ ಕಾಮಕಸ್ತೂರಿ ಆದಾಯದಾಯಕವೂ ಹೌದು.

ಜಠರೋತ್ತೇಜಕ, ಜಂತುಹುಳ ನಾಶಕ, ವಿಷ ನಿವಾರಕ, ಜ್ವರನಿವಾರಕ, ಸ್ವೇದಕಾರಿ, ಕಫನಿವಾರಕ, ಎದೆರೋಗ ನಿವಾರಕ, ಗಂಟಲು ಕೆರೆತ, ಗೊನೊರಿಯಾ, ರಕ್ತಭೇದಿ, ಅತಿಸಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣದಂತೆ ಇದರ ಎಲೆಗಳು ಹಾಗೂ ಬೀಜ ಕಾರ್ಯನಿರ್ವಹಿಸುತ್ತವೆ.

ಇದರ ಕಷಾಯ ತಲೆಶೂಲೆ ಮತ್ತು ಕೀಲುನೋವು ಪರಿಹಾರಕ್ಕೆ, ಬಾಯಿಯ ದುರ್ವಾಸನೆ ಹೋಗಲಾಡಿಸುವುದರಲ್ಲಿ ಸಹಕಾರಿ. ಎಲೆಗಳು ಹಲವು ಬಗೆಯ ಮಿಠಾಯಿ, ಕೆಚಪ್, ಟೊಮೆಟೊ ಪೇಸ್ಟ್, ಉಪ್ಪಿನಕಾಯಿ, ವಿನಿಗರ್‌ಗಳ ಸ್ವಾದ ಹೆಚ್ಚಿಸುತ್ತವೆ. ಇದರ ಎಣ್ಣೆಯನ್ನು ಬ್ರೆಡ್‌, ಬಿಸ್ಕತ್ತು, ಕೇಕ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕೆಲವು ಬಗೆಯ  ಕ್ರಿಮಿಕೀಟಗಳನ್ನು ನಾಶ ಮಾಡುವುದರಲ್ಲೂ ಎಣ್ಣೆಯದ್ದು ಎತ್ತಿದ ಕೈ. ಅಮೆರಿಕದ ಸಾಂಬಾರ ಪದಾರ್ಥಗಳ ವ್ಯಾಪಾರ ಸಂಘಟನೆ ನೀಡಿರುವ ವರದಿ ಪ್ರಕಾರ ಕಾಮಕಸ್ತೂರಿಯಲ್ಲಿ ಶೇ ೬.೧ರಷ್ಟು ತೇವಾಂಶ, ಶೇ ೧೧.೯ರಷ್ಟು ಪ್ರೋಟಿನ್‌, ಶೇ ೩.೬ರಷ್ಟು ಕೊಬ್ಬು, ಶೇ ೨೦.೫ರಷ್ಟು ನಾರು, ಶೇ ೪೧.೨ರಷ್ಟು ಕಾರ್ಬೋಹೈಡ್ರೇಟ್‌, ಶೇ ೧೬.೭ರಷ್ಟು ಬೂದಿ ಅಂಶಗಳಿವೆ. ಆದ್ದರಿಂದ ಇದರ ಕೃಷಿ ಮಾಡಿದ್ದೇ ಆದಲ್ಲಿ ಹಾಕಿರುವ ಖರ್ಚಿಗಿಂತ ಶೇ 50ಕ್ಕಿಂತ ಅಧಿಕ ಪ್ರಮಾಣದ ಲಾಭ ಗಳಿಸಬಹುದು.

ಬೆಳೆಯುವುದು ಹೀಗೆ
ಕಾಮಕಸ್ತೂರಿ ಗಿಡ ಬೆಳೆಸುವುದು ಶ್ರಮದಾಯಕವೇನಲ್ಲ. ತುಂಡು ಗಿಡ ಹಾಕಿದರೂ ಸಾಕು. ಸ್ವಲ್ಪ ಆರೈಕೆಯಿಂದ ಚೆನ್ನಾಗಿ ಬೆಳೆಯಬಲ್ಲದು. ಚೆನ್ನಾಗಿ ನೀರು ಇಂಗುವ ಮಣ್ಣಿನಲ್ಲಿ ಹುಲುಸಾಗಿ ಬೆಳೆಯಬಲ್ಲದು.

ಎಕರೆಗಟ್ಟಲೆ ಪ್ರದೇಶ­ದಲ್ಲಿ ಈ ಗಿಡದ ಕೃಷಿ ಮಾಡುವ ಹಾಗಿದ್ದರೆ ಮೊದಲು ಅಲ್ಲಿ ಕಸಗಳು ಇರದಂತೆ ನೋಡಿಕೊಳ್ಳ­ಬೇಕು. ಉಳುಮೆ ಮಾಡಿದ ನಂತರ ಎಕರೆಯೊಂದಕ್ಕೆ 8ರಿಂದ 10ಟನ್‌ನಷ್ಟು ಹಟ್ಟಿಗೊಬ್ಬರ ಮತ್ತು ಎಲೆಗಳ ಗೊಬ್ಬರ ಕೊಡಬೇಕು. ಬೀಜಗಳನ್ನು ನೆಡುವುದಿದ್ದರೆ ಪುಡಿಗೊಬ್ಬರ ಇಲ್ಲವೇ ಮರಳಿನಲ್ಲಿ ಮಿಶ್ರಣ ಮಾಡಿಕೊಳ್ಳಬೇಕು (ಏಕೆಂದರೆ ಇವುಗಳ ಬೀಜ ತೀರಾ ಚಿಕ್ಕದಾಗಿರುತ್ತದೆ). ಬೀಜ­ಗಳನ್ನು ನೆಡುವ ಮೊದಲು 4 ಮೀಟರ್‌ ಉದ್ದ ಮತ್ತು ಒಂದೂವರೆ ಮೀಟರ್‌ ಅಗಲದ ಮಡಿ ಮಾಡಿಕೊಳ್ಳಬೇಕು. ಬೀಜ ಉತ್ತಿದ ನಂತರ ನೀರು ಹಾಯಿಸಬೇಕು. 8ರಿಂದ 10 ದಿನ­ಗಳಲ್ಲೇ ಮೊಳಕೆಯೊಡೆಯುವುದನ್ನು ಕಾಣಬಹುದು.

ಮೊಳಕೆ ಒಡೆದು ಎಳೆ ಸಸಿಗಳು 8 ರಿಂದ ೧೦ ಸೆಂ.ಮೀ ಬೆಳೆದಾಗ ನಾಟಿಗೆ ಸಿದ್ಧ ಎಂದರ್ಥ. ಬಿಸಿಲಿನ ವೇಳೆ ನಾಟಿ ಮಾಡಿದರೆ ಗಿಡ ಚೆನ್ನಾಗಿ ಬೆಳೆಯಲಾರದು. ಆದ್ದರಿಂದ ಬಿಸಿಲಿನ ತಾಪ ಕಡಿಮೆ ಇದ್ದಾಗ ಅರ್ಥಾತ್‌ ಸಂಜೆಯ ವೇಳೆ ನಾಟಿ ಮಾಡಿ. ತುಂತುರು ಮಳೆ ಹನಿಸುವ ಸಮಯದಲ್ಲಿ ನಾಟಿ ಮಾಡಿದರೆ ಉತ್ತಮ ಇಳುವರಿ ಸಾಧ್ಯ. ಪ್ರತಿ ಎರಡು ಸಸಿಗಳ ನಡುವೆ ಕನಿಷ್ಠ ೪ ಸೆಂ.ಮೀ ಹಾಗೂ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಕನಿಷ್ಠ 55ರಿಂದ 60 ಸೆಂ.ಮೀ ಅಂತರವಿರುವಂತೆ ನೋಡಿಕೊಳ್ಳಿ.

ಸಸಿಗಳ ಕೆಳಭಾಗದಲ್ಲಿ ತೇವಾಂಶವಿ­ರು­ವಂತೆ ನೋಡಿಕೊಳ್ಳಿ. ವರ್ಷದಲ್ಲಿ ಕನಿಷ್ಠ ೧೨–೧೫ ಬಾರಿ ನೀರಾವರಿ ವ್ಯವಸ್ಥೆ ಮಾಡು­ವುದು ಉತ್ತಮ. ನಾಟಿ ಮಾಡಿದ ೮ ರಿಂದ ೧೨ ವಾರಗಳ ನಂತರ ಕೊಯ್ಲಿಗೆ ಸೂಕ್ತ ಸಮಯ. ಆ ವೇಳೆಗೆ ಗಿಡದಲ್ಲಿ ಹೂವು ಮೂಡಿರುತ್ತವೆ, ಗಿಡದ ತಳಭಾಗದ ಎಲೆಗಳು ಹಳದಿ ಬಣ್ಣದಿಂದ ಕೂಡಿರುತ್ತದೆ. ಬಟ್ಟಿ ಇಳಿಸುವ ವ್ಯವಸ್ಥೆ ಇದ್ದಲ್ಲಿ ಪೂರ್ತಿಯಾಗಿ ಬೆಳೆದ ಹೂವಿನ ತೆನೆಗಳನ್ನು ಮಾತ್ರ ಕೊಯ್ಲು ಮಾಡಬೇಕು. ಈ ತೆನೆಗಳನ್ನು ಬಟ್ಟಿ ಇಳಿಸುವ ಪಾತ್ರೆಗೆ ತುಂಬಿ, ಆವಿ ಸಹಾಯದಿಂದ ಬಟ್ಟಿ ಇಳಿಸಬೇಕು. ಹೂಗಳ ಕೊಯ್ಲು ಆದ ಸುಮಾರು 10–12 ದಿನಗಳಲ್ಲಿ ಮತ್ತೆ ಗಿಡಗಳು ಹೂವನ್ನು ಕೊಡುತ್ತವೆ. ಈ ಗಿಡಗಳು ಬೆಂಗಳೂರಿನ ಭಾರತೀಯ ತೋಟ­ಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಲಭ್ಯವಿವೆ. ಮಾಹಿತಿಗೆ (080) 28466421/ 251.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT