ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅರುಣ್ ದೇವಯ್ಯ, ಮೈಸೂರು
*ಸಾವಯವ ವಿಧಾನದಲ್ಲಿ ಪಪ್ಪಾಯ ಬೆಳೆಯುವುದು ಹೇಗೆ?

: ಪಪ್ಪಾಯಿ ಬೆಳೆಸುವ ವಿಧಾನವನ್ನು ಈ ಅಂಕಣದಲ್ಲಿ ವಿವರವಾಗಿ ಹೇಳಲು ಸಾಧ್ಯವೇ ಇಲ್ಲ. ಆಸಕ್ತಿಯಿದ್ದರೆ ಬೆಳೆದಿರುವ ರೈತರಲ್ಲಿದ್ದು, 5–6 ದಿನದಲ್ಲಿ ಕಲಿಯಬಹುದು.

ಸುಗುಣ, ಬೆಂಗಳೂರು
*ಗುಲಾಬಿ ಗಿಡಕ್ಕೆ ಸಾವಯವ ವಿಧಾನದಲ್ಲಿ ಒಳ್ಳೆಯ ಕೀಟನಾಶಕ ಯಾವುದು?
ಉ:
ಪ್ರತಿ ವಾರ ಗಿಡವೊಂದಕ್ಕೆ 5 ಗ್ರಾಂ ಖಾದಿ ಬೋರ್ಡಿನವರ ಬೇವಿನ ಸೋಪಿನ ತುಣಕುಗಳನ್ನು 1 ಲೀಟರ್ ನೀರಲ್ಲಿ ತಪ್ಪದೆ ಸಿಂಪಡಿಸುತ್ತಿರಿ.


ಉದಯ ಮ. ಕನೇರಿ, ಕೋಳಿಗಡ್ಡ, ಬೆಳಗಾವಿ
*ನಮ್ಮ ಮನೆಯ ಹಿಂದೆ ತೆಂಗಿನ ಮರಗಳಿವೆ. ಏಳು ವರ್ಷವಾದರೂ ಕಾಯಿ ಬಿಟ್ಟಿಲ್ಲ, ಕಾರಣ ಏನು?
* ಗುಲಾಬಿ ಗಿಡವನ್ನು ನೆಲದಲ್ಲಿ ನೆಟ್ಟು 5–6 ತಿಂಗಳುಗಳಾಗಿವೆ. ಒಮ್ಮೆ ಮಾತ್ರ ಹೂವು ಬಿಟ್ಟು ನಂತರ ಬಿಡುತ್ತಿಲ್ಲ. ಕಾರಣ, ಪರಿಹಾರ ತಿಳಿಸಿ.
ಉ:
ಐದು ವರ್ಷಕ್ಕೆಲ್ಲಾ ತೆಂಗು ಫಲ ನೀಡಬೇಕು. ಪ್ರತಿನಿತ್ಯ 40 ಲೀಟರ್ ನೀರು, ವರ್ಷಕ್ಕೆ 50 ಕೆ.ಜಿ. ಹಟ್ಟಿಗೊಬ್ಬರ, 10 ಕೆ.ಜಿ. ಕಟ್ಟಿಗೆ ಬೂದಿ ಒದಗಿಸಿ. ಸರಿಯಾಗಬಹುದು.
*2 ತಿಂಗಳಿಗೊಮ್ಮೆ ಗುಲಾಬಿ ಬಳ್ಳಿಗಳನ್ನು ಕತ್ತರಿಸಿ, ಗೊಬ್ಬರ ನೀರು ಒದಗಿಸಿ. ಕೀಟ ನಿಯಂತ್ರಣ ಮಾಡಿದರೆ ಸರಿಯಾಗಿ ಹೂವು ಬಿಡುತ್ತವೆ.

ಕೃಷ್ಣೇಗೌಡ, ಬೆಂಗಳೂರು
*ಮೂಲಂಗಿ ಗಿಡವನ್ನು ಕಪ್ಪು ಬಣ್ಣದ ಹುಳುಗಳು ತಿನ್ನುತ್ತಿವೆ. ಪರಿಹಾರ ಏನು?

: ಬೆಳಗಿನ ಜಾವದಲ್ಲಿ ಎಲೆಗಳ ಮೇಲೆ ನೀರಿನ ಆವಿ ಇದ್ದಾಗ ಕಟ್ಟಿಗೆ ಬೂದಿ ಎರಚುತ್ತಿರಿ.

ರಮೇಶ ಶಿವಾಜಿ
*ಅಣಬೆ ಬೇಸಾಯದ ತರಬೇತಿ ಎಲ್ಲಿ ಸಿಗುತ್ತದೆ?
ಉ:
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಸ್ಥೆಯಲ್ಲಿ ಉತ್ತಮ ಅಣಬೆ ಬಿತ್ತನೆ ಮತ್ತು ತರಬೇತಿ ನೀಡುತ್ತಾರೆ. ಅವರಿಂದ ಉತ್ತಮ ಅಣಬೆ ಬೆಳೆಗಾರರ ವಿಳಾಸ ಪಡೆದು 2 ದಿನ ತರಬೇತಿ ಪಡೆಯಿರಿ.

ಪ್ರದೀಪ್‌ ಕೆ.ಆರ್‌. ಬೇಲೂರು
*ತೆಂಗಿನ ಮರದ ಮಧ್ಯೆ ಅಡಿಕೆ ಸಸಿ ನೆಟ್ಟು ಆರು ವರ್ಷಗಳಾಗಿವೆ. ಈಗ ಗೊನೆ ಬಿಡಲು ಆರಂಭವಾಗಿದ್ದು, ಅವು ತೀರಾ ಚಿಕ್ಕದಾಗಿವೆ. ಕಾಯಿ ಬಿಡುತ್ತಿಲ್ಲ, ಪರಿಹಾರ ತಿಳಿಸಿ. ಕೆಂಜುಗದಿಂದ ಏನಾದರೂ ತೊಂದರೆ ಇದೆಯೇ?
ಉ:
ತೆಂಗಿನ ಮರದ ನೆರಳಿನಿಂದ ಅಡಿಕೆ ಸರಿ ಬರುತ್ತಿಲ್ಲವಾಗಿರಬಹುದು. ನೀರು ಗೊಬ್ಬರ ಸರಿಯಾಗಿ ಒದಗಿಸಿ. ಎರಡು ವರ್ಷಗಳಲ್ಲಿ ಸರಿಯಾಗ ಬಹುದು. ಕೆಂಜುಗ ತುಂಬಾ ಉಪಯುಕ್ತ ಕೀಟಭಕ್ಷಕ. ಇದರಿಂದ ಯಾವುದೇ ತೊಂದರೆ ಇಲ್ಲ.

ಲಕ್ಷ್ಮಣ ಕೋಲಕಾರ, ಅಫಜಲಪೂರ
*ನದಿಯ ದಂಡೆ ಸಮೀಪ ಎರಡು ಎಕರೆ ತೋಟವಿದೆ. ಒಂದು ಎಕರೆ ದ್ರಾಕ್ಷಿ ಬೆಳೆಯಬೇಕು. ಸಾವಯವ ವಿಧಾನದಲ್ಲಿ ಅದನ್ನು ಹೇಗೆ ಬೆಳೆಯುವುದು, ಕೀಟ, ರೋಗಬಾಧೆ ಬಾರದಂತೆ ನೋಡಿಕೊಳ್ಳುವುದು ಹೇಗೆ?
: ನನಗೆ ದ್ರಾಕ್ಷಿ ಬೆಳೆಯ ಅನುಭವವಿಲ್ಲ. ತಾವು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿರುವ ಸಾವಯವ ದ್ರಾಕ್ಷಿ ಬೆಳೆಗಾರರನ್ನು ಭೇಟಿ ಮಾಡಿ.

ಹೆಚ್ ಸಿ ಚಂದ್ರಶೇಖರ್, ಚನ್ನಪಟ್ಟಣ
*ನಮ್ಮ ಶಾಲೆಯಲ್ಲಿ ಹೂವಿನ ತೋಟ ಇರುವುದರಿಂದ ಪ್ರತಿನಿತ್ಯ ಸಾವಿರಾರು ಜೇನು ನೊಣಗಳು ಮಕರಂದ ಹೀರಲು ಬರುತ್ತಿವೆ. ನಾವು ನಮ್ಮ ಶಾಲೆಯಲ್ಲಿ ಜೇನು ಹುಳು ಸಾಕಣೆ ಮಾಡಬಹುದೆ?
ಉ:
ತುಂಬಾ ಒಳ್ಳೆಯ ಯೋಚನೆ. ಮೊದಲು ಮಾಡಿ.

ಮಾಲತೇಶ ಹುಲಿಹಳ್ಳಿ, ಮೇಡ್ಲೇರಿ (ರಾಣೇಬೆನ್ನೂರ)
*ಕುರಿ ಸಾಕಾಣಿಕೆಗೆ ಸರ್ಕಾರದಿಂದ ಸಹಾಯ ಯೋಜನೆ ಸಿಗುತ್ತದೆಯೇ? ದಯವಿಟ್ಟು  ತಿಳಿಸಿ.
: ಖಂಡಿತ ಇದೆ. ಕೂಡಲೆ ನಿಮ್ಮ ತಾಲ್ಲೂಕಿನ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ.

    ಶಶಿಧರ, ಹಿರಿಯೂರು
*ಡಿಸೆಂಬರ್‌ ಹಾಗೂ ಜನವರಿಯಲ್ಲಿ ಕಣಗಲೆ ಹೂವು ಹೆಚ್ಚಿಗೆ ಬಿಡಬೇಕು. ಅದಕ್ಕೆ ಏನು ಮಾಡಬೇಕು?
ಉ:
ಚಳಿಗಾಲದಲ್ಲಿ ಅನೇಕ ಹೂಗಳು ಹೆಚ್ಚಿನ ಇಳುವರಿ ಕೊಡುವುದಿಲ್ಲ. ಆದರೂ ತಾವು ಅಕ್ಟೋಬರ್‌–ನವೆಂಬರ್‌ ತಿಂಗಳಿನಲ್ಲಿ ಮೊದಲ ಹಂತದ 8–10 ಇಂಚು ಕೊನೆ ಕತ್ತರಿಸಿ. ಸಹಾಯವಾಗಬಹುದು.

ಶಂಭುಲಿಂಗ, ನಾಗಮಂಗಲ
*ಕಬ್ಬಿಗೆ ಸುಳಿರೋಗ ಬಾರದಂತೆ ಏನು ಮಾಡಬೇಕು?
ಉ:
ಸೂಕ್ತ ಸಮಯದಲ್ಲಷ್ಟೇ ಕಬ್ಬನ್ನು ನಾಟಿ ಮಾಡಬೇಕು. ಕಬ್ಬಿನಲ್ಲಿ 2–3 ಗರಿ ಕಂಡಾಗ ಒಂದು ಚಿಟಿಕೆ ಬೇವಿನ ಹಿಂಡಿ ಉದುರಿಸಿ.

ಮನು ಭಾಗ್ವತ್‌, ಶಿವಮೊಗ್ಗ
*ಸಪೋಟಾ (ಚಿಕ್ಕು) ಗಿಡಗಳಿಗೆ ಕೀಟ ಬಾಧೆ. ಸಾವಯವದಲ್ಲಿ ಇವುಗಳ ನಿಯಂತ್ರಣ ಹೇಗೆ?
ಉ:
ಮಣ್ಣಲ್ಲಿ ಶೇ 2ರಷ್ಟು ಸಾವಯವ ಇಂಗಾಲ ಉಳಿಸಿ. ಚಿಕ್ಕು ಕಾಯಿ ಇದ್ದಾಗ 250 ಮಿ.ಲೀ. ಬೇವಿನ ಎಣ್ಣೆಯನ್ನು 50 ಲೀಟರ್‌ ಸಿಂಪರಣಾ ದ್ರಾವಣದ ಜೊತೆ 10 ಲೀಟರ್‌ ಗೋಮೂತ್ರದಲ್ಲಿ ಕರಗಿಸಿ. ಇದಕ್ಕೆ 40 ಲೀಟರ್‌ ನೀರು ಬೆರೆಸಿ ತಿಂಗಳಿಗೊಮ್ಮೆ ಸಿಂಪಡಿಸಿ.

ರತ್ನಮ್ಮ ಹಿರೇಹಾಳ, ಮಂಗಳೂರು
*ಸಾವಯವ ಪದ್ಧತಿಯಲ್ಲಿ ದಾಳಿಂಬೆ ಬೆಳೆಯಬಹುದೇ? ಎಲ್ಲಿ ಬೆಳೆಯಬಹುದು?
ಉ:
ಖಂಡಿತ ಬೆಳೆಯಬಹುದು. ನೀರು ಬಸಿದು ಹೋಗುವ ಎಲ್ಲಾ ಮಣ್ಣುಗಳೂ ದಾಳಿಂಬೆ ಬೆಳೆಯಲು ಸೂಕ್ತವೇ. ಆದರೂ ಮಣ್ಣನ್ನು ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ. ಸಾಲಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 12 ರಿಂದ 15 ಅಡಿ ಅಂತರದಲ್ಲಿ ಸಸಿ ನೆಡಬೇಕು. ಬೆಳೆಗೆ ಹೆಚ್ಚಿನ ಸಾವಯವ ಗೊಬ್ಬರ ಬಳಸಿ. ಪ್ರತಿ 10 ದಿನಕ್ಕೊಮ್ಮೆ ಗಂಜಲ ಮತ್ತು ನೀರನ್ನು 1:4 ಅನುಪಾತದಲ್ಲಿ ಸಿಂಪಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT