ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 11 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

* ಮಹಾಜನ್‌, ಕೋಲಾರ
ಅಂಗಮಾರಿ ರೋಗ ಹಾಗೂ ಕಾಯಿಕೊರಕ ರೋಗದಿಂದಾಗಿ ಟೊಮೆಟೊ ಕೊಳೆತು ಹೋಗುತ್ತಿದೆ. ಪರಿಹಾರ ಏನು?

ಉ: ಎಲ್ಲಾ ತರಕಾರಿ ಬೆಳೆಗಳ ರೋಗಗಳಿಗೆ ಈ ರೀತಿ ಮಾಡಿ: 1 ಕೆ.ಜಿ. ಬೆಳ್ಳುಳ್ಳಿ ಅಥವಾ 1 ಕೆ.ಜಿ. ಶುಂಠಿಯನ್ನು 1 ಕೆ.ಜಿ. ಬೆಲ್ಲ ಸೇರಿಸಿ ನೀರಿಲ್ಲದೇ ಕುಟ್ಟಿ. ಇದನ್ನು ಸೂಕ್ತವಾದ ಪ್ಲಾಸ್ಟಿಕ್‌ ಬಾಟಲಿಯಲ್ಲಿ ತುಂಬಿಸಿ ಒಂದು ವಾರ ನೆರಳಲ್ಲಿ ಇಡಿ. ಈ ಮಿಶ್ರಣವನ್ನು
1 ಲೀಟರ್‌ ನೀರಿಗೆ 1 ಚಮಚ (2 ಗ್ರಾಂ)ದಂತೆ ಕರಗಿಸಿ  ವಾರಕ್ಕೊಮ್ಮೆ ಸಿಂಪಡಿಸಿದರೆ (ವಾರಕ್ಕೊಮ್ಮೆ) ಹತೋಟಿ ಮಾಡಬಹುದು.

ಇನ್ನು ಕಾಯಿಕೊರಕ ಅಥವಾ ಎಲೆ ತಿನ್ನುವ ಕೀಟಗಳ ನಿಯಂತ್ರಣಕ್ಕೆ ಹೀಗೆ ಮಾಡಿ:1 ಕೆ.ಜಿ. ಬೇವಿನ ಬೀಜ ಕುಟ್ಟಿ,
2 ಲೀಟರ್ ಗಂಜಲದಲ್ಲಿ 2 ದಿನ ನೆನೆಸಿಡಿ. ಇದನ್ನು 16 ಲೀಟರ್‌ ನೀರಿನಲ್ಲಿ ಬೆರೆಸಿ ಶೋಧಿಸಿ ಸಿಂಪಡಿಸಿ.
ಇನ್ನೊಂದು ವಿಧಾನವೆಂದರೆ, ನಿಮ್ಮಲ್ಲಿ ಆಡು ತಿನ್ನದ 8–10 ಬಗೆಯ  ತಲಾ 2 ಕೆ.ಜಿ. ಸೊಪ್ಪುಗಳನ್ನು ಜಜ್ಜಿ 25–30 ಲೀಟರ್ ಗಂಜಲದಲ್ಲಿ 8 ದಿನ ನೆನೆಸಿಡಿ. ಈ ಮಿಶ್ರಣದ ಪ್ರತಿ ಒಂದು ಲೀಟರ್‌ಗೆ 10 ಲೀಟರ್‌ ನೀರು ಬೆರೆಸಿ ಸಿಂಪಡಿಸಿ.

* ಮಾಲಿನಿ ಶ್ರೀಕಾಂತ, ಮಡಿಕೇರಿ
ಕರಿಮೆಣಸಿನ ಬಳ್ಳಿಗಳು ಬೇರು ಕೊಳೆತು ಒಣಗುತ್ತಿವೆ. ಈ ವರ್ಷ ಮಳೆ ಜಾಸ್ತಿ ಬಂದಿದೆ. ಈ ರೋಗ ಎರಡು ಅಥವಾ ಮೂರು ವರ್ಷಕ್ಕೊಮ್ಮೆ  ಬರುತ್ತದೆ. ಇದರ ನಿಯಂತ್ರಣ ಹೇಗೆ ತಿಳಿಸಿರಿ. ನಾನು ಸಾವಯವ ಪದ್ಧತಿ ಅನುಸರಿಸುತ್ತಿದ್ದೇನೆ. ಸಾವಯವ ಪದ್ಧತಿಯ ನಿಯಂತ್ರಣ ಕ್ರಮಗಳನ್ನು ತಿಳಿಸಿ.

ಉ: ಕರಿ ಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಹೆಚ್ಚು ತೇವದ ಬಾಧೆ ಇಲ್ಲದಂತೆ ಎಚ್ಚರವಹಿಸಿ. 2 ತಿಂಗಳಿಗೊಮ್ಮೆ ಮಳೆಗಾಲದಲ್ಲಿ ತಪ್ಪದೆ ಬೋರ್ಡೊ ದ್ರಾವಣ ಸಿಂಪಡಿಸಿರಿ. 200 ಮಿ.ಲೀ. 8 ದಿನ ಹುದುಗಿಸಿದ ಹುಳಿ ಮೊಸರನ್ನು 4 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ.

* ವಿಕ್ರಮ, ನಿಟ್ಟೂರು
ಮನೆಯ ಬೂದಿಯನ್ನು ಗೊಬ್ಬರವಾಗಿ ಉಪಯೋಗಿಸಬಹುದಾ? ಎರೆಹುಳು ಗೊಬ್ಬರ ತಯಾರಿಸುವ ಪುಸ್ತಕ ಎಲ್ಲಿ ಸಿಗುತ್ತದೆ?

ಉ: ಬೂದಿಯಲ್ಲಿ ಹೆಚ್ಚಿನ ಪೊಟಾಷ್‌ ದೊರೆಯುತ್ತೆ. ಉಪಯೋಗಿಸಿ. ಪುಸ್ತಕಕ್ಕಾಗಿ ಕೃಷಿ ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದವರನ್ನು ಸಂಪರ್ಕಿಸಿ.

* ಶಾಂತಮ್ಮ, ಕೂಡಲಸಂಗಮ
ನಾವು ಸುಮಾರು 500 ಕೋಳಿಗಳನ್ನು ಸಾಕಿದ್ದೇವೆ. ಈ ಕೋಳಿಗಳ ಕೊಕ್ಕನ್ನು ಕತ್ತರಿಸಬೇಕು ಎನ್ನುತ್ತಾರೆ. ಇದು ಏಕೆ, ಕತ್ತರಿಸುವ ವಿಧಾನ ಹೇಗೆ, ಮುಂತಾದ ವಿಧಾನಗಳನ್ನು ದಯವಿಟ್ಟು ತಿಳಿಸಿರಿ.

ಉ: ಬಹುಶಃ ಕೋಳಿಗಳು ಒಂದಕ್ಕೊಂದು ಕಚ್ಚಾಟುವುದನ್ನು ತಪ್ಪಿಸಲಿರಬಹುದು. ದಯವಿಟ್ಟು ತಮ್ಮ ಸಮೀಪದ ಪಶು ವೈದ್ಯರನ್ನು ಭೇಟಿ ಮಾಡಿ.

* ಮನುಶ್ರೀ, ಶಿರಸಿ
ನಾನು ಸಾವಯವ ಪದ್ಧತಿಯಲ್ಲಿ ಬಾಳೆಹಣ್ಣು ಬೆಳೆಯುತ್ತಿದ್ದೇನೆ. ಅದನ್ನು ಹಣ್ಣು ಮಾಡಲು ಸಾವಯವ ವಿಧಾನ ತಿಳಿಸಿ.

ಉ: ಒಂದು ಬಾಳೆ ಗೊನೆ ಎರಡೂವರೆ ಚದರ ಅಡಿ ಸ್ಥಳ ದೊರೆಯುವಂತೆ 4 ಅಡಿ ಎತ್ತರ ನಾಲ್ಕು ದಿಕ್ಕಿನಲ್ಲಿ ಗೋಡೆಕಟ್ಟಿ. ನಿಮ್ಮ ಬಾಳೆ ಗೊನೆಗಳು ಅಲ್ಲಿ ನಿಲ್ಲುವಂತೆ ಜೋಡಿಸಿ. ಒಂದು ಮೂಲೆಯಲ್ಲಿ 2 ಅಡಿ ಜಾಗ ಬಿಟ್ಟು 1–2 ತೆಂಗಿನ ಕೊಬ್ಬರಿ ತೆಗೆದ ನಾರು ಸಿಪ್ಪೆ ಸಹಿತ ಬೆಂಕಿ ಮಾಡಿ ಇಡಿ. ತೊಟ್ಟಿ ಮುಚ್ಚುವಂತೆ ಪ್ಲೈವುಡ್‌ ಷೀಟ್‌ ಅಥವಾ ತಗಡು ಮುಚ್ಚಿ ಸಂದಿಯಿಲ್ಲದಂತೆ ಹಸಿ ಸಗಣಿ ಅಥವಾ ಹಸಿ ಮಣ್ಣಿನಿಂದ ಮುಚ್ಚಿ 20 ಗಂಟೆ ನಂತರ ತೆಗೆದು ನೋಡಿದರೆ ಸುಂದರವಾಗಿ ಹಣ್ಣಾಗುತ್ತೆ.

* ಮಹಾಂತೇಶ್‌, ಕೊಡಗು
ನಾನು ಜೇನು ಹುಳು ಸಾಕಿದ್ದೇನೆ. ಕೆಲವೊಮ್ಮೆ ಹುಳುಗಳಿಗೆ ತೊಂದರೆಯಾದಾಗ ಗುಂಪು ಗುಂಪಾಗಿ ಹೋಗಿ ಸಿಕ್ಕಸಿಕ್ಕವರನ್ನು ಕಡಿಯುತ್ತವೆ. ಜೇನು ಹುಳು ಕಡಿತ ವಿಷಕಾರಿಯೇ?

ಉ: ಜೇನು ಹುಳುಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿರಿ. ಸಾಕು ಜೇನುಹುಳು 4–5 ಕಚ್ಚಿದರೂ ತೊಂದರೆಯಿಲ್ಲ.

* ಯಶವಂತ, ದಾವಣಗೆರೆ
ನಾನು ದೊಡ್ಡ ಪ್ರಮಾಣದಲ್ಲಿ ಎರೆ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ ಉತ್ಪಾದಿಸಬೇಕೆಂದಿರುವೆ. ಇದಕ್ಕೆ ಸರ್ಕಾರದಿಂದ ಸಹಾಯ ದೊರೆಯುತ್ತದೆಯೇ?

ಉ: ತಾವು ತೋಟಗಾರಿಕೆ ಇಲಾಖೆಯವರನ್ನು ಸಂಪರ್ಕಿಸಿದರೆ, ಸಹಾಯ ಧನ, ಸಾಕಾಣಿಕೆ ಪದ್ಧತಿ, ಬಿತ್ತನೆಗಾಗಿ ಎರೆಹುಳುಗಳು ಎಲ್ಲಾ  ದೊರೆಯುತ್ತದೆ. ಎರೆಗೊಬ್ಬರ ತಯಾರಿಕೆ ತುಂಬಾ ಲಾಭದಾಯಕ ವೃತ್ತಿ.

* ಸಿದ್ದಪ್ಪ ಗಿಡ್ಡಪ್ಪ, ತುಮಕೂರು
ಹೊಸದಾಗಿ ಎರಡು ಎಕರೆ ತೆಂಗಿನ ತೋಟ ಮಾಡಬೇಕೆಂದಿರುವೆ. ತೆಂಗು ಮಂಡಳಿಗೆ ಸಸಿಗಳಿಗೆ ನೋಂದಾಯಿಸಿಕೊಂಡಿದ್ದೇನೆ. ಯಾವ ಅಂತರದಲ್ಲಿ ಬೆಳೆದರೆ ನಮಗೆ ಅನುಕೂಲ?

ಉ: ತೆಂಗು 28/28 ಅಡಿ ಅಂತರದಲ್ಲಿ ಬೆಳೆಯುವುದು ಸೂಕ್ತವಾದರೂ, ಸಸಿ ತರುವಾಗ ಯಾವ ತಳಿ ಎಂದು ತಿಳಿದು ಅವರಿಂದಲೇ ಮಾಹಿತಿ ಪಡೆಯಿರಿ.

* ಕನಕಾ ಮೂರ್ತಿ, ಬೆಂಗಳೂರು
ನಮ್ಮ ತೋಟದಲ್ಲಿ ಅರ್ಧ ಎಕರೆಯಲ್ಲಿ ಕನಕಾಂಬರ ಬೆಳೆದಿದ್ದೇನೆ. ಆದರೆ ಗಿಡಗಳಲ್ಲಿ ಸರಿಯಾಗಿ ಹೂವು ಬಿಡುತ್ತಿಲ್ಲ. ಇನ್ನೂ ಸ್ವಲ್ಪ ಪ್ರದೇಶದಲ್ಲಿ ಕನಕಾಂಬರ ಬೆಳೆಯಬೇಕೆಂದಿದ್ದೇನೆ. ಹೆಚ್ಚು ಇಳುವರಿ ಕೊಡುವ ತಳಿಗಳ ಬಗ್ಗೆ ತಿಳಿಸಿ.

ಉ: ಕನಕಾಂಬರ ಹೂವಿನಲ್ಲಿ ಎಲ್ಲ ತಳಿಗಳೂ ಉತ್ತಮವೇ. ಸಾಗುವಳಿ ಪದ್ಧತಿ, ಸಾವಯವ ಗೊಬ್ಬರದ ಬಳಕೆ, ಸಮರ್ಪಕ ರೋಗ ಕೀಟ ನಿವಾರಣೆ ಪದ್ಧತಿಗಳು ಅತಿ ಮುಖ್ಯ. ಆದರೂ ತಾವು ಲಾಲ್‌ಬಾಗಿನ ಹೂ ಬೆಳೆ ತಜ್ಞರನ್ನು ಸಂಪರ್ಕಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT