ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತೇಜೋಮೂರ್ತಿ, ಚಿತ್ರದುರ್ಗ
* ಬಯಲುಸೀಮೆ ಪ್ರದೇಶದ ಭೌಗೋಳಿಕತೆಗೆ ಅನುಗುಣವಾಗಿ ಗ್ರೀನ್‌ಹೌಸ್‌/ ಪಾಲಿಹೌಸ್‌ ಸೂಕ್ತವೇ? ಅದನ್ನು ಉಪಯೋಗಿಸಿಕೊಂಡು ಇಲ್ಲಿನ ವಾತಾವರಣಕ್ಕೆ ಸರಿಹೊಂದುವ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು?
ಉ: ಎಲ್ಲ ವಾತಾವರಣಕ್ಕೂ ಗ್ರೀನ್‌ ಹೌಸ್‌ ಹೊಂದಿಕೊಳ್ಳುತ್ತದೆ. ಈ ಪದ್ಧತಿಯಲ್ಲಿ ಅತಿ ಕಡಿಮೆ ನೀರಿನೊಂದಿಗೆ ಹಾಗೂ ಕೀಟ- ರೋಗ ಬಾಧೆ ಇಲ್ಲದೇ ಯಾವುದೇ ತೆರನಾದ ತರಕಾರಿ, ಪುಷ್ಪ ಕೃಷಿ ಕೈಗೊಳ್ಳಬಹುದು. ಮಳೆ ನೀರನ್ನು ಶೇಖರಿಸಿ ಈ ಬೆಳೆಗಳಿಗೆ ನೀಡಿ. ಇದರ ಜೊತೆಗೆ ತೋಟಗಾರಿಕೆ ಇಲಾಖೆಯವರಿಂದ ಸಹಾಯ ಧನ  ಕೂಡ ಲಭ್ಯ.

* ಶಿವರಾಜ್, ಚಾಮರಾಜನಗರ
ಜಾಣಗೆರೆ  ಹಲಸಿನ ಸಸಿಗಳು ಎಲ್ಲಿ  ದೊರೆಯುತ್ತೆವೆ. ಮತ್ತು ಹಲಸನ್ನು   ರಪ್ತು ಮಾಡಬಹುದೆ?

ಉ: ಹಲಸು ಜಾಣಗೆರೆ ಜಾತಿಯದ್ದೇ ಬೇಕೆಂದಿಲ್ಲ. ಯಾವುದಾದರೂ ಉತ್ತಮ ಜಾತಿಯಾದರೂ ಆಗಬಹುದು. ತಾವು ಬೆಂಗಳೂರು ಕೃಷಿ ವಿದ್ಯಾಲಯದ  ತೋಟಗಾರಿಕೆ ವಿಭಾಗದವರಲ್ಲಿ ಕಸಿ ಮಾಡಿದ ಹಲಸಿನ ಸಸಿ ಪಡೆಯಬಹುದು. ನನ್ನಲ್ಲೂ ಕಸಿ ಮಾಡಿದ 150 ಉತ್ತಮ ಹಲಸಿನ ಸಸಿ ಇವೆ.

* ನಂದಿನಿ, ಜನ್ನೊರು
ಸಾಮಾಜಿಕ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ  ನಮ್ಮ ಜಮೀನಿನ ಕಡಿಮೆ ನೀರಿನ ಅಶ್ರಯದಲ್ಲಿ ತೇಗದ ಸಸಿಗಳನ್ನು ಬೆಳೆಯಬೇಕೆಂದುಕೊಂಡಿದ್ದೇವೆ.  ತೇಗವನ್ನು ಕನಿಷ್ಠ  ಯಾವ ವರ್ಷಕ್ಕೆ  ಕಟಾವು ಮಾಡಬಹುದು? ಅದರ ಮೌಲ್ಯ ಎಷ್ಟಿದೆ? ಎಷ್ಟು ವರ್ಷದ ವಿವಿಧ  ಅವಧಿಗಳಿಗೆ  ಕಟಾವು ಮಾಡಿದರೆ ಎಷ್ಟು ಮೌಲ್ಯ ದೊರೆಯುತ್ತದೆ. ದಯವಿಟ್ಟು ತಿಳಿಸಿಕೊಡಿ.

ಉ: ತೇಗದ ಮರಗಳನ್ನು ಏತ ಬೆಳೆಯಾಗಿ ಬೆಳೆಯುವ ಬದಲು ಸರ್ವೆ ಮರ, ಹೆಬ್ಬೇವು, ಸಿಲ್ವರ್‌ ಓಕ್‌, ಮಾಗನಿ ಮರಗಳ ಜೊತೆಯಲ್ಲಿ ಮಧ್ಯಂತರ ಬೆಳೆಯಾಗಿ ಬೆಳೆದರೆ ಕ್ರಮವಾಗಿ 4ನೇ ವರ್ಷ,  12ನೇ ವರ್ಷ, 18ನೇ ವರ್ಷ, 25ನೇ ವರ್ಷ ಮತ್ತು ತೇಗದ ಮರವನ್ನು 40 ವರ್ಷಗಳ ನಂತರ ಮಾರಾಟ ಮಾಡಿದರೆ ಅತಿ ಹೆಚ್ಚು ಲಾಭ.

* ಬಾಲಾಜಿ, ಚಾಮರಾಜನಗರ
ಬೇರು ಹುಳು ಹತೋಟಿ ಹೇಗೆ ಮಾಡುವುದು?

ಉ: ಬೇರು ಹುಳು ನಿಯಂತ್ರಣಕ್ಕೆ ತಮಿಳುನಾಡಿನ ಸತ್ಯಮಂಗಲದಲ್ಲಿರುವ ಬನ್ನಾರಿಯಮ್ಮನ್‌ ಸಕ್ಕರೆ ಕಾರ್ಖಾನೆಯವರಲ್ಲಿ ಔಷಧ ಲಭ್ಯವಿದೆ. (ದೂ: -4295-220363, 9994936700). ‘ಬಿವೇರಿಯಾ ಬ್ರಾಂಗ್ನಿಯಾರ್ಟಿ’ ಎಂಬ ಪುಡಿಯನ್ನು ಒಂದು ಎಕರೆಗೆ 4 ಕಿಲೋಗ್ರಾಂನಂತೆ 10 ಕಿಲೋ ಮರಳಲ್ಲಿ ಬೆರೆಸಿ ತಂಪಾದ ಸಮಯದಲ್ಲಿ ಭೂಮಿಗೆ ಬೆರೆಸಿದರೆ ಅವುಗಳನ್ನು ತಡೆಯಬಹುದು. 250 ಲೀಟರ್ ಸಿಂಪರಣಾ ದ್ರಾವಣ ತಯಾರಿಸುವುದು ಹೀಗೆ: 10 ಲೀಟರ್  ನೀರನ್ನು 8 ದಿನ ಹುಳಿಸಿದ ಹಸುವಿನ ಮೊಸರಲ್ಲಿ ಬೆರೆಸಿ. 100 ಬಾರ್‌ ಸೋಪನ್ನು 4 ಲೀಟರು ನೀರಿನಲ್ಲಿ ಕರಗಿಸಿ. ಇದಕ್ಕೆ 2 ಕೆ.ಜಿ. ಕಡಲೆಕಾಯಿ ಎಣ್ಣೆ ಹಾಕಿ. ಇವೆಲ್ಲ ಮಿಶ್ರಣವನ್ನು 240 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.

* ದ್ರಾಕ್ಷಿ ಬಳ್ಳಿಗಳು ಎಲ್ಲಿ ಸಿಗುತ್ತವೆ? ಬೇಸಾಯ ಕ್ರಮಗಳ ಬಗ್ಗೆ ತಿಳಿಸಿ
* ತೋಟಗಾರಿಕೆ ಇಲಾಖೆಯಲ್ಲಿ ದ್ರಾಕ್ಷಿ ಬಳ್ಳಿ ಲಭ್ಯ. ದ್ರಾಕ್ಷಿ ತೋಟದಿಂದ ಆರೋಗ್ಯವಂತ ಕಡ್ಡಿ ತಂದು  ನೀವೇ ಸಸಿ ಮಾಡಿ ಕೊಂಡರೆ ಖರ್ಚು ಕಡಿಮೆ.  ಬೇಸಾಯ ಕ್ರಮ ಹೀಗೆ: ಸಾಲಿಂದ ಸಾಲಿಗೆ 15 ಅಡಿ ಅಂತರವಿರಲಿ. ಗಿಡದಿಂದ  ಗಿಡಕ್ಕೆ 12 ಅಡಿ ಅಂತರ ಕೊಟ್ಟು 1 ಚದರ ಮೀಟರ್‌ ಗಾತ್ರದ ಗುಂಡಿ ತೋಡಿ.  ಗುಂಡಿ ತುಂಬಾ ಹಸಿರು ಸೊಪ್ಪು ತುಂಬಿಸಿ ಚೆನ್ನಾಗಿ ತುಳಿದು 15 ಲೀಟರ್ ಸೆಗಣಿ ಬಗ್ಗಡವನ್ನು ಸುರಿಯಿರಿ.

ಇದಕ್ಕೆ ಅರ್ಧ ಅಡಿ ಮೇಲ್ಮಣ್ಣನ್ನು  ಮುಚ್ಚಿ 1 ತಿಂಗಳಲ್ಲಿ 3–4 ಬಾರಿ ನೀರು ಹಾಯಿಸಿ. ಜನವರಿ ತಿಂಗಳ ನಂತರ ಅರ್ಧ ಕೆ.ಜಿ. ಬೇವಿನ ಹಿಂಡಿ ಬೆರೆಸಿ ನೆಡಿ. ಆಧಾರವಾಗಿ 6 ಅಡಿ ಉದ್ದದ ನೇರವಾದ ಬಿದಿರಿನ ಕಡ್ಡಿ ನೆಟ್ಟು ಕಾಪಾಡಿ.  ಕೀಟರೋಗಗಳಿಂದ ಕಾಪಾಡಲು 10 ದಿನಕ್ಕೊಮ್ಮೆ ಒಂದು ಕೆ.ಜಿ. ಬೇವಿನ ಬೀಜ ಕುಟ್ಟಿ 2 ಲೀಟರ್ ಗಂಜಲದಲ್ಲಿ ನೆನೆಸಿಟ್ಟು ನಂತರ 3ನೇ ದಿನ 15 ಲೀಟರ್ ನೀರು ಬೆರೆಸಿ ಬಟ್ಟೆಯಿಂದ ಶೋಧಿಸಿ ಸಿಂಪರಣೆ ಮಾಡುತ್ತಿರಿ.

* ವಿಜಯ ಲಕ್ಷ್ಮಿ ಅಂಗಡಿ, ಬೈಲಹೊಂಗಲ
ಕಡಲೆ ಹಾಗೂ ಅಲಸಂದೆಗೂ ಕೀಟಬಾಧೆ. ಇದನ್ನು ತಡೆಯಲು ಏನು ಮಾಡಬೇಕು?

ಯಾವುದೇ ಕೀಟಬಾಧೆ ಇದ್ದಲ್ಲಿ ಒಂದು ಕೆ.ಜಿ. ಬೇವಿನ ಬೀಜ ಕುಟ್ಟಿ 2 ಲೀಟರ್ ಗಂಜಲದಲ್ಲಿ 2 ದಿನ ನೆನೆಸಿಟ್ಟು 3ನೇ ದಿನ 15 ಲೀಟರ್ ನೀರು ಬೆರೆಸಿ ಬಟ್ಟೆಯಿಂದ ಶೋಧಿಸಿ ಸಿಂಪರಣೆ. 10 ದಿನಕ್ಕೊಮ್ಮೆ ಹೀಗೆ ಮಾಡಿ.

* ಮುನಿನರಸಿಂಹಯ್ಯ, ಬೆಂಗಳೂರು ಬಾಳೆ ಗಿಡಕ್ಕೆ ಹುಳು ಬಂದು ಎಲೆಗಳು ಸುರುಳಿಯಾಗುತ್ತಿವೆ. ಏನು ಮಾಡುವುದು?
ಉ: ನಾಲ್ಕು ಲೀಟರ್ ನೀರಿನಲ್ಲಿ 200ಗ್ರಾಂ ಬಾರ್‌ಸೋಪ್‌ ಕರಗಿಸಿ. ಇದಕ್ಕೆ ಬೇವಿನ ಎಣ್ಣೆ ಮಿಶ್ರಣ ಮಾಡಿ. ಇದನ್ನು 250 ಲೀಟರ್‌ ನೀರಿನಲ್ಲಿ ಬೆರೆಸಿ ಬಾಳೆ ಗಿಡಗಳಿಗೆ ಸಿಂಪಡಿಸಿ ನೋಡಿ.­

ಪದ್ಮಾ ರಾಯಚೂರು
* ಟೊಮೆಟೊ ಹಾಗೂ ಹಸಿಮೆಣಸು ಮುರುಟುತ್ತಾ ಇದೆ. ಇದಕ್ಕೇನು ಪರಿಹಾರ?

ಉ: ಅತಿ ಸೂಕ್ಷ್ಮವಾದ ರಸ ಹೀರುವ ಕೀಟಗಳು ಎಲೆಗಳ ಕೆಳಗಡೆ ಇದ್ದು ನಿರಂತರವಾಗಿ  ರಸ ಹೀರುವುದರಿಂದ ಎಲೆಗಳು ಮುರುಟುತ್ತಿವೆ. ಇದಕ್ಕೆ ಪರಿಹಾರವಾಗಿ ಒಂದು ಕೆ.ಜಿ. ಹಸಿ ಸೆಗಣಿಗೆ 5 ಲೀಟರ್ ನೀರು ಬೆರೆಸಿದ ಬಗ್ಗಡವನ್ನು ಎಲೆಗಳ ಕೆಳಭಾಗದಲ್ಲಿ ಅಂಟಿಕೊಳ್ಳುವಂತೆ ಸಿಂಪರಣೆ ಮಾಡಿ ಹತೋಟಿಯಲ್ಲಿಡಬಹುದು.

* ಲೋಳೇಸರ ಬೆಳೆಯುವುದು ಹಾಗೂ ಇದರ ಮಾರಾಟದ ಬಗ್ಗೆ  ಮಾಹಿತಿ ನೀಡಿ
ಉ: ಯಾರಾದರೂ ಲೋಳೆಸರ ಬೆಳೆಗಾರರಿಂದ ತುಂಡುಗಳನ್ನು ಪಡೆದು 2 ಅಂತರದ ಸಾಲಿನಲ್ಲಿ ಸಸಿಯಿಂದ ಸಸಿಗೆ ಒಂದೂವರೆ ಅಡಿ ಕೊಟ್ಟು ನೆಟ್ಟು ಬೆಳೆಸಬಹುದು. ಇದು ಆಯುರ್ವೇದ ಔಷಧಿಗಾಗಿ ಬೆಳೆದರೆ ಒಂದು ಎಕರೆಗೆ 10–15 ಟನ್‌ ಕೊಟ್ಟಿಗೆ ಅಥವಾ ಹಸಿರೆಲೆ ಗೊಬ್ಬರ ಮಾತ್ರ ಒದಗಿಸಿ . ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಹಿಮಾಲಯ ಡ್ರಗ್‌ ಹೌಸ್‌ನವರಲ್ಲಿ ಇದು ಲಭ್ಯ.


* ಮಾನಸಾ , ಶಿರಸಿ
ನಮ್ಮ ಕೊಟ್ಟಿಗೆಯಲ್ಲಿ ಸೊಳ್ಳೆಗಳು ಹಾಗೂ ನೊಣಗಳು ಜಾಸ್ತಿ. ಇದರಿಂದ ಮುಕ್ತಿ ಹೊಂದುವುದು ಹೇಗೆ?

ಉ: ದನದ ಕೊಟ್ಟಿಗೆಯಲ್ಲಿ ಸೊಳ್ಳೆ – ತಿಗಣೆಗಳ ಕಾಟವಿದ್ದರೆ ಕಿಟಕಿಗಳಿಗೆ ಸೊಳ್ಳೆ ಜಾಲಿಯನ್ನು ಅಂಟಿಸಿ. ಸಾಧ್ಯವಿಲ್ಲದಿದ್ದರೆ ಸಂಜೆ 6–30ರ ಸುಮಾರಿಗೆ ಹೊಗೆ ಹೊರಹೊಮ್ಮುವಂತೆ ಬೆಂಕಿ ಮಾಡಿ ಬಾಡಿದ ಎಲೆಗಳನ್ನು ಸೇರಿಸುತ್ತಾ ಹೊಗೆ ಹರಡಿಸಿ.

* ರಾಜೇಶ್‌ ಜೆ.- ಗುಲ್ಬರ್ಗ
ಮೆಕ್ಕೆಜೋಳ ಬೆಳೆಯಲು ಯಾವ ತಳಿ ಉತ್ತಮ?

ನಮ್ಮ  ಕೃಷಿ ವಿಶ್ವವಿದ್ಯಾನಿಲಯ ಅಥವಾ ಕರ್ನಾಟಕ ರಾಜ್ಯ ಬೀಜ ನಿಗಮದವರು ಒದಗಿಸುತ್ತಿರುವ ಬೀಜವನ್ನು ಬಳಸಿದರೆ ಉತ್ತಮ ಮತ್ತು ಲಾಭದಾಯಕ. ಬಹುರಾಷ್ಟ್ರೀಯ  ಕಂಪೆನಿಗಳ ಬಗ್ಗೆ ಎಚ್ಚರವಿರಲಿ.

* ಸೋಮಣ್ಣ ಧೀರಣ್ಣ, ಬೆಳಗಾವಿ
ಅಣಬೆ ಬೀಜಗಳು ಎಲ್ಲಿ ಸಿಗುತ್ತವೆ?

ಉ: ಧಾರವಾಡದ ಕೃಷಿ ವಿಶ್ವವಿದ್ಯಾನಿಲಯ ಅಥವಾ ಬೆಂಗಳೂರು ಸಮೀಪದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರಗಳಿಂದ ಪಡೆಯಬಹುದು.

* ಸೋಮನಾಥ, ಬಾಗಲಕೋಟೆ
ಕಬ್ಬು ಕೃಷಿ ಬಗ್ಗೆ ತಿಳಿಸಿ

ಉ: ಸಾಲು ಮಧ್ಯೆ 6 ಅಡಿ ಅಂತರ ಕೊಟ್ಟು 3 ಅಡಿ ಜೋಡಿ ಸಾಲಿನಲ್ಲಿ  1 ಅಡಿ ಅಂತರದಲ್ಲಿ 1–2 ಕಣ್ಣಿರುವ ತುಂಡು ಬೆಳೆದರೆ ಉತ್ತಮ. 2 ಬೆಳೆಗಳ ನಂತರ ಯಾವುದಾದರೂ ಬೇಳೆ ಕಾಳನ್ನು ಬೆಳೆಯುವುದು ಅನಿವಾರ್ಯ.

(ಎರಡು ವರ್ಷಗಳಿಂದ ಪ್ರಕಟಗೊಳ್ಳುತ್ತಿದ್ದ ‘ಕೃಷಿ ಮಂಥನ’ ಅಂಕಣ ಮುಕ್ತಾಯಗೊಂಡಿದ್ದು ಇನ್ನು ಮುಂದೆ ಪ್ರಕಟಗೊಳ್ಳುವುದಿಲ್ಲ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT