ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಡೆಯಲ್ಲೂ ಲಾಭ

Last Updated 3 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

`ಚೆಂಡು ಅಥವಾ ಗೊಂಡೆ~ ಎಂದು ಕರೆಸಿಕೊಳ್ಳುವ ಹೂವನ್ನು ವಾಣಿಜ್ಯ ಬೆಳೆಯಾಗಿಯೂ ಬೆಳೆಯಬಹುದು ಎಂಬುದು ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. ದೇವರ ಪೂಜೆಗೆ ಈ ಹೂವನ್ನು ಬಳಸುವ ಪದ್ಧತಿಯಿಲ್ಲ. ಆದರೆ ಮನೆಗಳ, ದನಕರುಗಳ ಅಲಂಕಾರದಲ್ಲಿ ಇದನ್ನು ಉಪಯೋಗಿಸುವ ಪರಿಪಾಠವಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆ ಖೇಡ್ ತಾಲ್ಲೂಕು ದೇವುಗಾಂ ಎಂಬ ಹಳ್ಳಿಯ ರೈತ ವಿಠ್ಠಲ್ ಬಾಬುರಾವ್ ಮೋರೆ ಸುಮಾರು 10 ವರ್ಷದಿಂದ ತಮ್ಮ 24 ಗುಂಟೆ ಜಮೀನಿನಲ್ಲಿ ಈ ಹೂವನ್ನು ಹಣದ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಅದರಲ್ಲಿ ಯಶಸ್ಸೂ ಕಂಡಿದ್ದಾರೆ.

ಅವರ ಜಮೀನಿನಲ್ಲಿ ಕೆಂಪು ಹಾಗು ಹಳದಿ ಈ ಎರಡೂ ಬಣ್ಣದ ಗೊಂಡೆ ಹೂಗಳಿವೆ. `ವರ್ಷದಲ್ಲಿ ಎರಡು ಬಾರಿ (ಏಪ್ರಿಲ್ ಹಾಗೂ ಅಕ್ಟೋಬರ್‌ನಲ್ಲಿ. ಅಂದರೆ ಮಳೆಗಾಲದ ಮೊದಲು ಹಾಗೂ ಮಳೆಗಾಲ ಮುಗಿಯಲು ಬಂದಾಗ) ಬೆಳೆಯಬಹುದು. ಇದರಿಂದ ಸಾಕಷ್ಟು ಲಾಭವೂ ಇದೆ~ ಎಂದು ಅವರು ಹೇಳುತ್ತಾರೆ.

ಅವರ ಪ್ರಕಾರ, ಇದು ಆರಾಮದಾಯಕ ಬೆಳೆ. ಕಡಿಮೆ ಪರಿಶ್ರಮದಲ್ಲಿ ಹೆಚ್ಚು ಲಾಭ ತರುತ್ತದೆ. ಇದನ್ನು ಬೆಳೆಯುವ ಮುನ್ನ ಕೊಟ್ಟಿಗೆ ಗೊಬ್ಬರ ಹಾಗೂ ಯೂರಿಯಾ ಗೊಬ್ಬರವನ್ನು ಹದ ಮಣ್ಣಿಗೆ ಬೆರೆಸಬೇಕು.

ಇಲ್ಲಿನ ನರ್ಸರಿಯಲ್ಲಿ ಕೆಂಪು ಹೂವಿನ ಸಸಿಗೆ 1.75 ರೂ, ಹಳದಿ ಹೂವಿನ ಸಸಿಗೆ 2 ರೂಪಾಯಿ. ಅದನ್ನು ತಂದು 1/2 ಅಡಿ ಉದ್ದ ಹಾಗೂ 1 ಅಡಿ ಅಗಲ ಅಂತರ ಕೊಟ್ಟು ನಾಟಿ ಮಾಡಬೇಕು.

ಉತ್ತಮ ಬೀಜ ಸಿಕ್ಕರೆ ಸ್ವತಃ ಸಸಿ ಮಡಿಯಲ್ಲಿ ಬೆಳೆಸಿ ನೆಡಬಹುದು. ನಾಟಿ ಮಾಡಿದ 10 ರಿಂದ 15 ದಿನದಲ್ಲಿ ಬೇರು ಭೂಮಿಯಲ್ಲಿಭದ್ರವಾಗುತ್ತದೆ. ಮೊದಲು ದಿನಕ್ಕೊಮ್ಮೆ ನೀರು ಹಾಕಬೇಕು. ತದನಂತರ ವಾರಕ್ಕೊಮ್ಮೆ ಹಾಕಿದರೆ ಸಾಕು. ಸರಿಸುಮಾರು 1 ತಿಂಗಳ ನಂತರ ಹೂ ಬಿಡಲು ಪ್ರಾರಂಭವಾಗುತ್ತದೆ.

ಹೂವಿನಲ್ಲೇ ಬೀಜ ಇರುತ್ತದೆ. ಚೆನ್ನಾಗಿರುವ ಹೂವನ್ನು ಒಣಗಿಸಿ ಅದೇ ಬೀಜವನ್ನು ಮುಂದೆ ಬಳಸಬಹುದು.

ಹೂವನ್ನು ಕೀಳುವುದು ಒಂದು ಕಲೆ. ನಿಧಾನವಾಗಿ ಹೂ ಕೀಳಬೇಕು. ಬಲ ಪ್ರಯೋಗ ಮಾಡಿದರೆ ಹೂವಿನ ಜತೆ ಬುಡ ಸಮೇತ ಗಿಡ ಕಿತ್ತು ಬರುತ್ತದೆ. ಇದು ಸರಾಸರಿ 3 ತಿಂಗಳ ಬೆಳೆ. ಈ ಅವಧಿಯಲ್ಲಿ 4 ರಿಂದ 5 ಸಲ ಹೂ ಕೊಡುತ್ತದೆ. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಹೂವಿನ ಬೆಲೆಯಲ್ಲೂ ವ್ಯತ್ಯಾಸವಾಗುತ್ತದೆ.

ಲಾಭ-ನಷ್ಟ

ಮೋರೆಯವರಿಗೆ 24 ಗುಂಟೆಯಲ್ಲಿ ಹೂ ಬೆಳೆಸಲು ಸುಮಾರು 18 ಸಾವಿರ ರೂಪಾಯಿವರೆಗೂ ಖರ್ಚು ಬರುತ್ತದೆ. ಇದಲ್ಲದೆ ಹೂ ಬಿಡುವ ಅವಧಿಯಲ್ಲಿ ತಿಂಗಳಿಗೆ 1500 ರಿಂದ 1800 ರೂಪಾಯಿವರೆಗೆ ಇತರೆ ಖರ್ಚಾಗುತ್ತದೆ. ಈ ವೆಚ್ಚವನ್ನೆಲ್ಲ ಕಳೆದು 25 ರಿಂದ 30 ಸಾವಿರ ರೂಪಾಯಿವರೆಗೆ ಲಾಭ ಗಳಿಸುತ್ತಿದ್ದಾರೆ.

ಹೂವನ್ನು ಕಿಲೋಗೆ 50 ರಿಂದ 80 ರೂ ದರದಲ್ಲಿ ಮಾರುಕಟ್ಟೆಯಲ್ಲಿ ಮಾರುವ ಅವರು ಹೇಳುವಂತೆ `ಇದಕ್ಕೆ ಪ್ರಾಣಿಗಳ ಕಾಟ ಇಲ್ಲವೆ ಇಲ್ಲ. ಇನ್ನು ರೋಗ? ಹೂ ಬಿಟ್ಟ ಮೇಲೆ ಕೀಟಗಳ ಕಾಟ ಹೆಚ್ಚು. ಅವು ಹೂವಿನ ಪಕಳೆಗಳನ್ನು ತಿನ್ನುತ್ತವೆ.

ಇದರಿಂದ ಪಕಳೆಗಳು ಉದುರುತ್ತವೆ. ಆದ್ದರಿಂದ ಮೊಗ್ಗಿರುವಾಗ, ಅರಳುವ ಸಮಯದಲ್ಲಿ ಕೀಟನಾಶಕ ಸಿಂಪಡಿಸಬೇಕು. ಈ ಬೆಳೆಯಲ್ಲಿ ಲಾಭಕ್ಕೆ ಹಾಗೂ ಹೂಡಿದ ಹಣಕ್ಕೆ ಮೋಸವಂತೂ ಇಲ್ಲ~.

ಮಾಹಿತಿಗಾಗಿ ಅವರನ್ನು (ಹಿಂದಿ ಅಥವಾ  ಮರಾಠಿಯಲ್ಲಿ ಮಾತನಾಡಬೇಕು) 095923 00706 ಅಥವಾ 098220 84071 ಮೂಲಕ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT