ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನಲ್ಲಿ ಮಿಶ್ರಬೆಳೆಯಾಗಿ...

Last Updated 17 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿರುವ ತೆಂಗು ಆಹಾರ, ಔಷಧಿ, ವಸತಿ, ಉರುವಲು, ಮರಮುಟ್ಟು, ನಾರು ಮತ್ತಿತರೆ ಉಪಯೋಗಗಳನ್ನು ಹೊಂದಿದೆ. 7.5 ಮೀ ಅಂತರದ ವಯಸ್ಕ ತೆಂಗಿನಮರದ ಬೇರುಗಳು ಸುಮಾರು ಶೇಕಡ 22.3 ರಷ್ಟು ಭೂ ಪ್ರದೇಶವನ್ನು ಹಾಗೂ ಶೇಕಡ 30 ರಷ್ಟು ಭೂ ಮೇಲ್ಬಾಗವನ್ನು ಬಳಸಿಕೊಳ್ಳಬಲ್ಲವು.

ಹಾಗಾಗಿ ತೆಂಗಿನ ತೋಟದಲ್ಲಿ ಅದಕ್ಕೆ ಹೊಂದಿಕೊಳ್ಳುವ ಮಧ್ಯಂತರ ಬೆಳೆಗಳನ್ನು ಬೆಳೆದು ಅಧಿಕ ಆದಾಯ ಪಡೆಯಬಹುದು. ಅಷ್ಟೇ ಅಲ್ಲದೆ ಉತ್ತಮ ರೀತಿಯಲ್ಲಿ ಸಂಪನ್ಮೂಲಗಳ ಬಳಕೆ, ಸೂರ್ಯನ ಬೆಳಕು, ಕೂಲಿ ಆಳುಗಳು ಮತ್ತು ಮುಖ್ಯವಾಗಿ ಸಮಯದ ಸದ್ಬಳಕೆ ಈ ವಿಧಾನದಲ್ಲಿ ಸಾಧ್ಯ.

 ಸಾಂಬಾರುಗಳ ರಾಜ ಕರಿಮೆಣಸನ್ನು ಕೇರಳ ಮತ್ತು ಕರ್ನಾಟಕಗಳಲ್ಲಿ ಮಿಶ್ರಬೆಳೆಯಾಗಿ ತೆಂಗು ಮತ್ತು ಅಡಿಕೆ ಬೆಳೆಯ ಆಸರೆಯಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ತೆಂಗು ಮತ್ತು ಕರಿಮೆಣಸು ಈ ಎರಡೂ ಉತ್ಪನ್ನಗಳಿಗೆ ಬೆಲೆ ಹೆಚ್ಚಾಗುತ್ತಿರುವುದರಿಂದ ರೈತರ ಗಮನ ಈ ಬೆಳೆಗಳತ್ತ ಕೇಂದ್ರಿಕೃತವಾಗುತ್ತಿದೆ.

ಕಾಸರಗೋಡಿನ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ನಡೆಸಲಾದ ಪ್ರಯೋಗದಲ್ಲಿ ತೆಂಗು ಬೇಸಾಯದಲ್ಲಿ ಕರಿಮೆಣಸಿನ ಮಿಶ್ರಬೆಳೆ ಯಶಸ್ವಿಯಾಗಿದೆ.

ನಾಟಿ ವಿಧಾನ: ಬೇರು ಬಿಟ್ಟ ಕರಿಮೆಣಸಿನ ಕಾಂಡದ ತುಂಡುಗಳನ್ನು ತೆಂಗಿನ ಬುಡದಿಂದ 1 ಮೀ ಅಂತರ ಬಿಟ್ಟು 50 ಘನ ಸೆಂ.ಮೀ ಆಳತೆಯ ಗುಂಡಿಗಳಲ್ಲಿ ನಾಟಿ ಮಾಡಬೇಕು. ನಾಟಿಗೆ 15 ದಿನ ಮೊದಲು ಗುಂಡಿಗಳಿಗೆ ಎರೆಹುಳು ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ಹಾಕಬೇಕು.
 
ನಾಟಿ ಮಾಡಿದ ಒಂದು ವರ್ಷದವರೆಗೆ ಸಸಿಗಳಿಗೆ ಹೆಚ್ಚಿನ ಆರೈಕೆ ಮತ್ತು ಪೋಷಣೆ ಅತ್ಯಗತ್ಯ. ಬಳ್ಳಿಗಳಿಗೆ ಆಸರೆ ಒದಗಿಸುವಿಕೆ, ರೋಗ ನಿಯಂತ್ರಣ ಇತ್ಯಾದಿ ಕ್ರಮಗಳು ಭವಿಷ್ಯದ ಇಳುವರಿಯನ್ನು ನಿರ್ಧರಿಸಬಲ್ಲವು.

ಬೆಳೆ ನಿರ್ವಹಣೆ: ಕರಿ ಮೆಣಸನ್ನು ತೆಂಗಿನ ಜತೆ ಮಿಶ್ರ ಬೆಳೆಯಾಗಿ ಬೆಳೆದಾಗ ಎರಡು ಬೆಳೆಗಳಿಗೂ ಪ್ರತ್ಯೇಕವಾದ ಆರೈಕೆ ಅವಶ್ಯಕ.

ರಸ ಗೊಬ್ಬರಗಳನ್ನು ನೀಡುವುದರಲ್ಲಿಯೂ ಸಹ ಕರಿಮೆಣಸು ಬೆಳೆಗೆ ಶಿಫಾರಸ್ಸು ಮಾಡಿದ 50:50:150 ಗ್ರಾಂ ಸಾರಜನಕ: ರಂಜಕ: ಪೊಟಾಷ್ ಮತ್ತು 2-3 ಕಿ.ಗ್ರಾಂ ಸಾವಯವ ಗೊಬ್ಬರವನ್ನು ಪ್ರತೀ ವರ್ಷ ಹಾಕಬೇಕು. ಅಂತರ ಬೇಸಾಯ ಮಾಡುವಾಗ ಮೆಣಸಿನ ಬಳ್ಳಿಯ ಬೇರುಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು.
 
ಗೊಬ್ಬರಗಳನ್ನು ಬೇರಿನ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಹಾಕಿ ಮಣ್ಣು ಮುಚ್ಚಬೇಕು. ಬೇಸಿಗೆ ಸಮಯದಲ್ಲಿ ಹನಿ, ತುಂತುರು ಪದ್ಧತಿಯ ಮೂಲಕ ನೀರಾವರಿ ಒದಗಿಸಬೇಕು.

ಸಮಗ್ರ ರೋಗ ನಿರ್ವಹಣೆಯಲ್ಲಿ ಶಿಲೀಂದ್ರ ನಾಶಕಗಳು ಮತ್ತು ಟ್ರೈಕೋಡರ್ಮವನ್ನು ಬೇವಿನ ಹಿಂಡಿ/ ಎರೆಹುಳು ಗೊಬ್ಬರದೊಂದಿಗೆ ಸೇರಿಸಿ ಕೊಡುವುದರಿಂದ ಸೊರಗು ರೋಗವನ್ನು ನಿಯಂತ್ರಣದಲ್ಲಿ ಇಡಬಹುದು.

ಪನಿಯೂರ್-1, 4 ಮತ್ತು 5, ತೇವಮ್, ಪಂಚಮಿ ಮತ್ತು ಕರಿಮುಂಡ ಇವು ಹೆಚ್ಚಾಗಿ ಬೆಳೆಯಲಾಗುತ್ತಿರುವ ಕರಿಮೆಣಸಿನ ತಳಿಗಳಾಗಿವೆ. ಬಳ್ಳಿಗೆ ತೆಂಗಿನ ಕಾಂಡವನ್ನು ಆಸರೆಯಾಗಿ ಕೊಟ್ಟು 20-25 ಅಡಿಗಳಷ್ಟು ಎತ್ತರಕ್ಕೆ ನಿಯಂತ್ರಿಸುವುದರಿಂದ ಮೆಣಸು ಮತ್ತು ತೆಂಗು ಕಟಾವು ಸುಲಭವಾಗುತ್ತದೆ.

ಇನ್ನಷ್ಟು ಮಾಹಿತಿಗೆ ಕಾಸರಗೋಡಿನ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ. ಮಹೇಶ್ವರಪ್ಪ ಅವರನ್ನು 094951 03236 ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT