ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಕರು ಸತ್ತ ರೂ ಸಾವಿರ!

Last Updated 3 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

‘ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ’. ಹಾಗೆಂದು ಈ ಗಾದೆ ಎಲ್ಲ ಪ್ರಾಣಿಗಳಿಗೆ ಅನ್ವಯಿಸುವುದಿಲ್ಲ. ರೈತರ ಬೆನ್ನೆಲುಬಾಗಿರುವ ದನಕರುಗಳು ಬದುಕಿದ್ದರೆ ಮೂವತ್ತರಿಂದ ಅರವತ್ತು ಸಾವಿರ ಬೆಲೆ ಬಾಳುತ್ತವೆ, ಒಂದು ವೇಳೆ ಸತ್ತರೆ ಅದಕ್ಕೆ ಬೆಲೆಯೇ ಇಲ್ಲ, ಅವುಗಳ ಹಾಲನ್ನು ಮಾರಿ ಜೀವನ ನಡೆಸುವ ಬಡ ರೈತನ ಗೋಳನ್ನೂ ಕೇಳುವವರಿಲ್ಲ. ಬರಗಾಲದ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸಿದರೆ ರೈತನಿಗೆ ಗಾಯದ ಮೇಲೆ ಬರೆ ಎಳೆದಂತೆ.

ಸತ್ತರೂ ಸಾವಿರ!
‘ಹಾಗಿದ್ದರೆ ದನಕರುಗಳು ಸತ್ತರೂ ಸಾವಿರ’ ಆದರೆ ಹೇಗಿರುತ್ತೆ? ಇದನ್ನು ಸಾಕಾರಗೊಳಿಸಿದೆ ಕರ್ನಾಟಕ ಜಾನುವಾರು ಅಭಿವೃದ್ಧಿ ಏಜೆನ್ಸಿಯ ‘ಜಾನುವಾರು ವಿಮಾ ಯೋಜನೆ’. ಪ್ರತಿಯೊಬ್ಬ ರೈತರೂ ಜಾನುವಾರು ವಿಮೆ ಮಾಡಿಸುವುದು ಅತ್ಯಗತ್ಯ. ಇದಕ್ಕಾಗಿ ರೈತರು ಮಾಡಬಹುದಾದುದು ಇಷ್ಟೆ. ನಿಮ್ಮ ಮನೆಯಲ್ಲಿ ಬೆಲೆ ಬಾಳುವ ಹೈನು, ಎಮ್ಮೆ, ಮಿಶ್ರ ತಳಿ ಆಕಳು ಅಥವಾ ಸ್ಥಳೀಯ ಆಕಳು ಇದ್ದಲ್ಲಿ ನಿಮಗೆ ಹತ್ತಿರವಿರುವ ಪ್ರಾಥಮಿಕ ಪಶು ಚಿಕಿತ್ಸಾಲಯ ಅಥವಾ ಪಶು ಆಸ್ಪತ್ರೆಗೆ ಭೇಟಿ ಕೊಟ್ಟು ಯೋಜನೆಯ ಬಗ್ಗೆ ವಿವರ ಮಾಹಿತಿ ಪಡೆದು ಜಾನುವಾರುಗಳಿಗೆ ವಿಮೆ ಮಾಡಿಸಿ. ಪಶುವೈದ್ಯರು ಮತ್ತು ಪಶುವೈದ್ಯಕೀಯ ಪರೀಕ್ಷಕರು ಬಂದು ವಿಮೆಗೊಳಿಸಬೇಕಾದ ಜಾನುವಾರುವಿನ ಆರೋಗ್ಯ ಪರೀಕ್ಷಿಸುತ್ತಾರೆ ಮತ್ತು ಜಾನುವಾರುವಿನ ಅಂದಾಜು ಬೆಲೆ ನಿಗದಿಪಡಿಸುತ್ತಾರೆ.

ಇದಾದ ನಂತರ ಕಿವಿಗೆ ಓಲೆ ಹಾಕಿ ಜಾನುವಾರುವಿನ ಎತ್ತರ, ಬಣ್ಣ, ಜಾತಿ, ಕೊಂಬಿನ ಅಳತೆ, ಬಾಲದ ಗೊಂಡಿಯ ಬಣ್ಣ, ಗರ್ಭದ ಜಾನುವಾರು ಇದ್ದಲ್ಲಿ ಗರ್ಭದ ಹಂತ, ಹಾಲು ಕುಡಿಯುವ ಕರುವಿದ್ದರೆ ಅದರ ವಯಸ್ಸು ಮತ್ತು ಮೈ ಮೇಲೆ ವಿಶೇಷ ಮಚ್ಚೆಗಳಿದ್ದರೆ ಅವುಗಳನ್ನು ಆರೋಗ್ಯ ಪ್ರಮಾಣ ಪತ್ರದಲ್ಲಿ ನಮೂದಿಸಿ ಜಾನುವಾರುವಿನ ಮಾಲೀಕನ ಸಹಿ ತೆಗೆದುಕೊಳ್ಳುತ್ತಾರೆ.

ಆರೋಗ್ಯ ಪ್ರಮಾಣ ಪತ್ರದೊಂದಿಗೆ ಜಾನುವಾರುವಿನ ಜೊತೆ ಮಾಲೀಕ ನಿಂತಿರುವ ಫೋಟೊ ತೆಗೆಸಿ ವಿಮಾ ಕಂಪೆನಿಗೆ ಸಲ್ಲಿಸಬೇಕು. ಜಾನುವಾರುವಿನ ಬೆಲೆಗೆ ತಕ್ಕಂತೆ ರೈತರು ಕಂತು ಕಟ್ಟಬೇಕಾಗುತ್ತದೆ. ಉದಾಹರಣೆಗೆ ಜಾನುವಾರುವಿನ ಬೆಲೆ ೧೦ಸಾವಿರ ರೂಪಾಯಿಯಾಗಿದ್ದರೆ ಒಂದು ವರ್ಷಕ್ಕೆ ರೈತರು ೧೬೩ ಕಂತು ಹಾಗೂ ೪೦ ಸೇವಾ ತೆರಿಗೆ ಸೇರಿಸಿ ೨೦೩ ರೂಪಾಯಿ ಕಂತು ಕಟ್ಟಬೇಕಾಗುತ್ತದೆ. ಅಂದರೆ ಒಂದು ವರ್ಷಕ್ಕೆ ಜಾನುವಾರುವಿನ ಬೆಲೆಯ ಶೇಕಡಾ ೩.೨೫, ಎರಡು ವರ್ಷಕ್ಕೆ ಶೇಕಡಾ ೫.೮೫ ಮತ್ತು ಮೂರು ವರ್ಷಕ್ಕಾದರೆ ಶೇಕಡಾ ೮.೨೯ ರಷ್ಟು ಕಟ್ಟಬೇಕಾಗುತ್ತದೆ. ಈ ಕಂತಿನಲ್ಲಿ ಶೇಕಡಾ ೫೦ರಷ್ಟು ಕೇಂದ್ರ ಸರ್ಕಾರ ಭರಿಸುತ್ತದೆ. ಇನ್ನುಳಿದ ಶೇ ೫೦ರಷ್ಟು ಕಂತು ಮತ್ತು ಸೇವಾ ತೆರಿಗೆಯನ್ನು ರೈತರು ಕಟ್ಟಬೇಕು.

ವಿಮಾ ಕಂತು ಕಟ್ಟಿದ ೧೫ ದಿನಗಳಲ್ಲಿ ಕಂಪೆನಿಯು ಪಾಲಿಸಿ ಸಂಖ್ಯೆಯೊಂದಿಗೆ ಬಾಂಡ್‌ ಪೇಪರ್ ನೀಡುವುದು. ರೈತರು ಬಾಂಡ್‌ ಪೇಪರ್ ಸುರಕ್ಷಿತವಾಗಿಟ್ಟುಕೊಳ್ಳಬೇಕು ಮತ್ತು ಜಾನುವಾರುವಿನ ಕಿವಿಯೋಲೆ ಇದೆಯೋ ಅಥವಾ ಬಿದ್ದು ಹೋಗಿದೆಯೋ ಎಂದು ಆಗಾಗ ನೋಡಬೇಕು. ಆಕಸ್ಮಿವಾಗಿ ಕಿವಿಯೋಲೆ ಬಿದ್ದು ಹೋಗಿದ್ದಲ್ಲಿ, ಕೂಡಲೇ ಪಶು ವೈದ್ಯರ ಗಮನಕ್ಕೆ ತಂದು ಹೊಸ ಕಿವಿಯೋಲೆ ಹಾಕಿಸಬೇಕು ಮತ್ತು ಹೊಸ ಕಿವಿಯೋಲೆ ಸಂಖ್ಯೆಯನ್ನು ವಿಮಾ ಕಂಪೆನಿಗೆ ತಿಳಿಸಬೇಕು. ಏಕೆಂದರೆ ಆಕಸ್ಮಿಕವಾಗಿ ಜಾನುವಾರು ಸತ್ತಾಗ ಕಿವಿಯೋಲೆ ಇಲ್ಲದಿದ್ದರೆ ವಿಮಾ ಕಂಪನಿಯ ಷರತ್ತಿನನ್ವಯ ಅಂತಹ ಜಾನುವಾರುವಿನ ಪಾಲಿಸಿ ಹಣ ರೈತರಿಗೆ ಸಿಗುವುದಿಲ್ಲ.

ವಿಮೆಗೊಳಪಟ್ಟ ಜಾನುವಾರು ಆಕಸ್ಮಿಕವಾಗಿ ಮರಣ ಹೊಂದಿದಾಗ ರೈತರು ತಕ್ಷಣಕ್ಕೆ ಸಂಬಂಧಿಸಿದ ಪಶು ವೈದ್ಯರಿಗೆ ಮತ್ತು ವಿಮಾ ಕಂಪೆನಿಗೆ ತಿಳಿಸುವುದು ಅತ್ಯವಶ್ಯಕ. ಪಶು ವೈದ್ಯರು ವಿಮಾ ಕಂಪೆನಿಯ ಏಜೆಂಟರ ಸಮ್ಮುಖದಲ್ಲಿ ಸತ್ತ ಜಾನುವಾರುವಿನ ಮರಣೋತ್ತರ ಪರೀಕ್ಷೆ ಮಾಡಿ ವರದಿ ಬರೆದು ವಿಮಾ ಕಂಪೆನಿಗೆ ಕಳಿಸುತ್ತಾರೆ. ಕಂಪೆನಿಯು ಮರಣೋತ್ತರ ಪರೀಕ್ಷೆ ವರದಿ ಪರಿಶೀಲಿಸಿ ಜಾನುವಾರು ಮಾಲೀಕನ ಹೆಸರಿನಲ್ಲಿ ಚೆಕ್ ಮೂಲಕ ಪಾಲಿಸಿ ಹಣ ಸಂದಾಯ ಮಾಡುತ್ತದೆ. ಹೀಗೆ ಪಡೆದ ಹಣದಲ್ಲಿ ಬಡ ರೈತರು ಹಸು ಅಥವಾ ಎಮ್ಮೆ ಖರೀದಿಸಿ ಅದನ್ನೂ ವಿಮೆಗೊಳಪಡಿಸಿ ಮತ್ತೆ ಹೈನುಗಾರಿಕೆ ಕೈಗೊಳ್ಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT