ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕ ತುಂಬಿದ ಬೀಜ ಸಂಗ್ರಹ

Last Updated 29 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗೊಂಚಲು ಹೀರೆ, ಬಳ್ಳಿ ಬದನೆ, ಬಳ್ಳಿ ಬಟಾಟೆ, ಒಂದೂವರೆ ಅಡಿ ಉದ್ದದ ನಾಟಿ ಬದನೆ, ಕೆಂಪು ಬೆಂಡೆ, ಎಂಟು ಅಡಿ ಎತ್ತರದ ಹರಿವೆ...

ಇವೆಲ್ಲವೂ  ಸಾವಯವ ಕೃಷಿಕ ದಕ್ಷಿಣ ಕನ್ನಡದ ವಿಟ್ಲ ಬಳಿಯ ಬಿಲ್ಲಂಪದವು ನಾರಾಯಣ ಭಟ್ ಅವರ `ಬೀಜ ಸಂಗ್ರಹ~ದಲ್ಲಿ ಇರುವ ಅಪರೂಪದ ತರಕಾರಿಗಳು. ಸಾವಯವ ತರಕಾರಿಗಳನ್ನು ತಮ್ಮ ಅಂಗಳದಲ್ಲಿ ಬೆಳೆದು ಬೀಜ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದು, ಇವರ `ಬೀಜ ಸಿರಿ~ಗೆ ಈಗ ಹತ್ತು ವರ್ಷ.

ಬೀಜ ಸಂಗ್ರಹಕ್ಕೆಂದೇ ಐವತ್ತಕ್ಕೂ ಹೆಚ್ಚು ತರಕಾರಿಗಳನ್ನು ಪ್ರತೀವರ್ಷ ಮಳೆಗಾಲದಲ್ಲಿ  ಮನೆಯಂಗಳದಲ್ಲಿ ಬೆಳೆಯುತ್ತಾರೆ.  ಜೂನ್ ತಿಂಗಳಿನಲ್ಲಿ ಅಂಗಳದ ತುಂಬೆಲ್ಲ ತರಕಾರಿ ಗಿಡದ ಗೋಣಿ ಚೀಲಗಳು.  ಇವುಗಳಿಗೆ ಸುಟ್ಟ ಮಣ್ಣು ಮತ್ತು ಒಣಗೊಬ್ಬರ ತುಂಬಿಸಿ ಟ್ರೇಯಲ್ಲಿ ಸಿದ್ಧಪಡಿಸಿದ ಪುಟ್ಟಗಿಡಗಳನ್ನು ನೆಟ್ಟು ಬಿಡುತ್ತಾರೆ.  ಕಳೆಗಳ ತೊಂದರೆ ಇಲ್ಲದೆಯೇ ಸಾವಯವ ಗೊಬ್ಬರದಲ್ಲಿ ಬೆಳೆಯುವ ತರಕಾರಿಗಳನ್ನು ಕೊಯ್ದು ಒಣಗಿಸಿ ಬೀಜ ಸಂಗ್ರಹಿಸುತ್ತಾರೆ.

`ಬೀಜಗಳನ್ನು ಭಸ್ಮ ಇಲ್ಲವೇ ವಿಭೂತಿಯ ಜೊತೆಗೆ ಮಿಶ್ರಮಾಡಿದರೆ ತುಂಬಾ ಚೆನ್ನಾಗಿ ಕಾಯ್ದಿರಿಸಬಹುದು. ಒಂದು ವರ್ಷಕ್ಕಿಂತ ಹಳೆಯದಾದ ಬೀಜಗಳು ಮೊಳಕೆ ಒಡೆಯುವುದು ಕಡಿಮೆ.  ಹೀಗಾಗಿ ತರಕಾರಿ ಬೆಳೆಯುವವರು ಸಾಧ್ಯವಿದ್ದಷ್ಟೂ ತಾಜಾ ಬೀಜಗಳನ್ನು ಬಳಸಬೇಕು~ ಎನ್ನುವುದು ಭಟ್ ಅವರ ಕಿವಿ ಮಾತು.

ಒಂದು ಎಕರೆಯಿಂದ ಆರಂಭ: ಇವರು ತರಕಾರಿ ಕೃಷಿ ಪ್ರಾರಂಭಿಸಿದ್ದು 1998ರಲ್ಲಿ. ಮೊದಲಿಗೆ ಒಂದು ಎಕರೆ ಸೌತೆ, ಒಂದು ಎಕರೆ ಅಲಸಂಡೆ ಬೆಳೆದರು.  ನಂತರ ಅಂಗಳದ 35 ಸೆಂಟ್ಸ್ ಜಾಗದಲ್ಲಿ ಅಲಸಂಡೆ ಬೆಳೆದರು. ಬಳಿಕ 2000ನೇ ಇಸವಿಯಲ್ಲಿ ಊರಬೆಂಡೆಯ 200 ಗಿಡಗಳನ್ನು ಬೆಳೆದರು. ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾಗ ಸ್ಥಳೀಯ ಉತ್ತಮ ತರಕಾರಿ ಬೀಜಗಳಿಗೆ ಇರುವ ಬೇಡಿಕೆಯನ್ನು ಅರಿತರು.  ನಂತರ ಒಂದೊಂದಾಗಿ ಅಪರೂಪದ ತರಕಾರಿ ಬೀಜಗಳನ್ನು ಸಂಗ್ರಹಿಸುತ್ತಾ ಹೋದರು.  2002 ಇಸವಿಯ ನಂತರ ಇವರು ಬೀಜ ಮಾರಾಟಕ್ಕೆಂದೇ ತರಕಾರಿ ಬೆಳೆಯುತ್ತಿದ್ದಾರೆ. 

`ಬೀಜ ಸಿರಿ~ ಹೆಸರಿನಡಿ ಮಾರಾಟ ಮಾಡುವ ಇವರ ಸಾವಯವ ಬೀಜಗಳಿಗೆ ಎಲ್ಲೆಡೆಯಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಅಳಿದು ಹೋಗುತ್ತಿರುವ ಅಪರೂಪದ ನಾಟಿ ತರಕಾರಿ ಬೀಜಗಳ 50ಕ್ಕೂ ಹೆಚ್ಚಿನ ವೈವಿಧ್ಯ ಇವರ ಸಂಗ್ರಹದಲ್ಲಿದೆ. ಇದರಲ್ಲಿ ಕಾಡಿನಲ್ಲಷ್ಟೇ ಬೆಳೆಯುವ ಕಾಡು ಪೀರೆ, ಬದನೆಯ ಹತ್ತು ವಿಧಗಳು, ಬೆಂಡೆಯ ಐದು ವಿಧಗಳು, ಹರಿವೆಯ ಏಳೆಂಟು ವಿಧಗಳು, ಹೀರೆಕಾಯಿ ಆರು ವಿಧಗಳು, ಸೋರೆಕಾಯಿಯ ನಾಲ್ಕು ವಿಧಗಳು ಪ್ರಮುಖವಾಗಿವೆ.

ಒಂದೊಂದು ತರಕಾರಿಗೂ ಅದರ ಬಿತ್ತನೆಯಿಂದ ಹಿಡಿದು ಕೊಯ್ಲಿನವರೆಗೆ ತೆಗೆದುಕೊಳ್ಳಬೇಕಾದ ಕೃಷಿ ಕ್ರಮಗಳನ್ನು ಮನದಟ್ಟಾಗುವಂತೆ  ಭಟ್ ವಿವರಿಸುತ್ತಾರೆ. ತರಕಾರಿ ಕೃಷಿಯ ಒಳಸುರಿಗಳು, ಕೀಟ ಬಾಧೆ, ಫಸಲು ಹೆಚ್ಚಿಸಲು ಇರುವ ಉಪಾಯಗಳು ಹೀಗೆ ಒಂದೊಂದು ಅಂಶದ ಬಗ್ಗೆಯೂ ಅವರಿಗೆ ಅಪಾರ ಮಾಹಿತಿ ಇದೆ.  ಸಂಪರ್ಕಕ್ಕೆ: 08255 270266
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT