ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದ ‘ನೀರಲೂಟಿ’ ಸೊಪ್ಪಿನ ದರ್ಬಾರು

Last Updated 6 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಈ ಊರಿನ ಸುತ್ತಲೂ ಸೊಪ್ಪಿನದ್ದೇ ಕಾರುಬಾರು. ಕೊತ್ತಂಬರಿ, ಮೆಂತ್ಯ, ಸಬ್ಬಸಗಿ, ಉಳಿಚಿಕೆ, ಪಾಲಾಕ... ಹೀಗೆ ಹಲವು ಬಗೆಯ ಸೊಪ್ಪುಗಳನ್ನು ಇಲ್ಲಿ ಬೆಳೆಯುತ್ತಾರೆ.

ಇಂಥದ್ದೊಂದು ಅಪರೂಪದ ಚಿತ್ರಣ ಕಾಣಸಿಗುವುದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕನಕಗಿರಿಯ ನೀರಲೂಟಿ ಗ್ರಾಮದಲ್ಲಿ. ಈ ಚಿಕ್ಕ ಗ್ರಾಮದಲ್ಲಿ ನೂರಾ ಒಂದು ಕುಟುಂಬಗಳು ಇವೆ. ರೈತರೇ ಹೆಚ್ಚು ಇರುವುದರಿಂದ ಒಂದೆರಡು ಮನೆಗಳು ಬಿಟ್ಟು ಎಲ್ಲರೂ ತಮ್ಮ ಹೊಲದಲ್ಲಿ ತರಕಾರಿ ಪಲ್ಯೆಯನ್ನು ವರ್ಷ ಪ್ರತಿ ಬೆಳೆಯುತ್ತಿದ್ದಾರೆ. ಆದರೂ ಈ ನೀರಲೂಟಿ ಪಲ್ಯೆ ಅಂದರೆ ಸುತ್ತಲಿನ ನಗರಗಳಲ್ಲಿ ತುಂಬಾ ಬೇಡಿಕೆ.

ಈ ಊರಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಯಾರೊಬ್ಬರೂ ಕಾಣುವುದಿಲ್ಲ. ಎಲ್ಲಾ ರೈತರು ತಂತಮ್ಮ ತೋಟದಲ್ಲಿಯೇ ಇರುತ್ತಾರೆ. ಸೊಪ್ಪು ಕಿತ್ತುವ ಕಾಯಕದಲ್ಲಿ ಇವರು ನಿರತರು. ರಾತ್ರಿ ತರಕಾರಿ ಕಿತ್ತು ತಂದು ತಡರಾತ್ರಿಯವರೆಗೆ ಗಂಟುಗಳನ್ನು ಕಟ್ಟಿ, ಅದಕ್ಕೆ ನೀರು ಚಿಮ್ಮಿಸಿ ಬೆಳಗಾಗುವವರೆಗೆ ಜೋಪಾನ ಮಾಡಿಡುತ್ತಾರೆ. ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಎದ್ದು ಗಂಗಾವತಿಯಿಂದ ಬರುವ ತರಕಾರಿ ವ್ಯಾಪಾರದ ವಾಹನಕ್ಕೆ ಹಾಕಿ ಕಳಿಸುತ್ತಾರೆ.

ಕೆಲವು ಸೊಪ್ಪುಗಳನ್ನು ದೂರದೂರುಗಳಿಗೆ ರಾತ್ರಿಯೇ ಕಳುಹಿಸುತ್ತಾರೆ. ಇದರಿಂದ, ಪ್ರತಿ ದಿನ ರಾತ್ರಿ 8 ಗಂಟೆ ಆದರೆ ಸಾಕು, ಹೊಲದಿಂದ  ಕಿತ್ತು ತಂದಿರುವ ಪಲ್ಯೆಯ ಸೂಡು ಇರುವ  ಗಂಟುಗಳು ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಕಾಣುತ್ತವೆ.

ಮಾರುಕಟ್ಟೆ ಕೊರತೆ
ಇಲ್ಲಿಯ ಸೊಪ್ಪಿಗೆ ಭಾರಿ ಬೇಡಿಕೆ ಇದ್ದರೂ ರೈತರ  ಶ್ರಮಕ್ಕೆ ತಕ್ಕಂತಹ ಬೆಲೆ ಮಾತ್ರ ಇಲ್ಲ. ಇದಕ್ಕೆ ಕಾರಣ, ಸೂಕ್ತ ಮಾರುಕಟ್ಟೆ ಕೊರತೆ. ಪ್ರತಿ ದಿನ ಕನಿಷ್ಠ 2- 3 ಲಾರಿ ,ಸೊಪ್ಪಿನ ಗಂಟುಗಳೊಂದಿಗೆ ಸಮೀಪದ ಗಂಗಾವತಿ, ಕನಕಗಿರಿ, ತಾವರಗೇರಾ ಮಾರುಕಟ್ಟೆಗೆ ಹೋಗುತ್ತಾರೆ. ದೂರದ ಸಿಂಧನೂರು, ರಾಯಚೂರ ಮಾರುಕಟ್ಟೆಗೆ ರೈತರು ಹೋದರೆ ಬೆಲೆ ಹೆಚ್ಚಿರುತ್ತದೆ. ಆದರೆ ಸಾರಿಗೆ ಭತ್ಯೆ ಕೊಡುವ ಸ್ಥಿತಿ ಇವರದ್ದಲ್ಲ. ಎಕರೆಗೆ ಹತ್ತು ಸಾವಿರ ಖರ್ಚು ಮಾಡಿದರೆ 2 ಸಾವಿರ ಮಾತ್ರ ಲಾಭ ಬರುತ್ತಿದೆ. ಆದರೆ ರೈತರು ದಿನದ ಕೂಲಿ ಲೆಕ್ಕಾಚಾರ ಹಾಕಿದರೆ ಲಾಭಾಂಶ ಇಲ್ಲದೆ ಸೊಪ್ಪು ಬೆಳೆದ ರೈತನ ಬದುಕು ಸಪ್ಪೆ ಆಗುತ್ತಿದೆ.

ಉತ್ತಮ ಲಾಭದ ನಿರೀಕ್ಷೆಯಲ್ಲಿ
ರೈತರ ಬೀಜಕ್ಕೆ ಖರ್ಚಾಗಿರುವ ಹಣ ಕೂಡ ಬರುತ್ತಿಲ್ಲ. ಒಂದು ಸೂಡಿಗೆ 30–40 ಪೈಸೆಗೆ ಮಾರಾಟ ಆಗುವಂಥ ಪರಿಸ್ಥಿತಿ ಇದೆ. ಪಲ್ಯೆಯ ಬೆಲೆ ಹೆಚ್ಚಾದರೆ ರೈತರ ಮುಖದಲ್ಲಿ ಕಳೆ ಇರುತ್ತದೆ. ಆದರೆ ಕಡಿಮೆ ಬೆಲೆ ಇದ್ದರೆ ಕೂಲಿ ಖರ್ಚಿಗೆ ಹಾಕಿರುವ ದುಡ್ಡು ಸಾಲ ತಂದು ಕೊಟ್ಟಿರುವ ರೈತರು ಇದ್ದಾರೆ. 

ಇದರ ಜೊತೆಗೆ, ಕಳೆದ ಎರಡು ವರ್ಷಗಳಿಂದ ಅಂತರ್ಜಲ ಕಡಿಮೆ ಆಗಿದೆ. ಇದರಿಂದ ರೈತರು ಬೆಳೆಯಬೇಕಿದ್ದ ತರಕಾರಿ ಬೆಳೆ ಒಣಗಿ ನಷ್ಟದಲ್ಲಿ ಮುಳುಗಿದ್ದಾರೆ. ಆದರೆ ಬೆಳೆದ ಪಲ್ಯೆಯ ಸೂಡುಗಳನ್ನು ಆದಾಯ ಬರುವ ಬೆಲೆಯಲ್ಲಿ ಸರ್ಕಾರದಿಂದ ಖರೀದಿ ಮಾಡಿದರೆ ಉತ್ತಮ ಲಾಭವನ್ನು ರೈತರು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT