ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಕ್ಕೆ ಮಾರಕ ಜಂತು, ಉಣ್ಣೆ

Last Updated 4 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಜಾನುವಾರುಗಳನ್ನು ರೈತ ಮಾತ್ರವಲ್ಲ, ಬೇರೆ ಜೀವಿಗಳೂ ಅವಲಂಬಿಸಿವೆ. ಆದರೆ ಈ ಜೀವಿಗಳು ಜಾನುವಾರಗಳ ಪ್ರಾಣಕ್ಕೇ ಕುತ್ತಾಗಿವೆ.ಈ ಜೀವಿಗಳಲ್ಲಿ ಎರಡು ಪ್ರಕಾರ. ಹೊರ ಪರಾವಲಂಬಿ ಮತ್ತು ಒಳ ಪರಾವಲಂಬಿ. ಒಳ ಪರಾವಲಂಬಿಗಳು ತಮ್ಮ ಆಹಾರ, ಆಶ್ರಯ ಮತ್ತು ಸಂತಾನೋತ್ಪತ್ತಿಗಾಗಿ ತಮಗಿಂತಲೂ ಉನ್ನತ ಜೀವಿಗಳನ್ನು ಅವಲಂಬಿಸಿದರೆ, ಹೊರ ಪರಾವಲಂಬಿ ಜೀವಿಗಳಾದ ನೊಣ, ಸೊಳ್ಳೆ, ಹೇನು, ಜಿಗಟ, ಕಜ್ಜಿ ಮತ್ತು ಉಣ್ಣೆಗಳು ಆಹಾರ, ಆಶ್ರಯ ಮತ್ತು ಸಂತಾನೋತ್ಪತ್ತಿಗಾಗಿ ಮಾತ್ರ ಸೀಮಿತಗೊಳ್ಳದೆ ರಕ್ತದ ಪ್ರೋಟೊಜೊವ, ಬ್ಯಾಕ್ಟಿರಿಯಲ್, ವೈರಲ್ ರೋಗಗಳನ್ನು ಹರಡುವಲ್ಲಿ ಮಧ್ಯವರ್ತಿಗಳಾಗಿ ಪ್ರಮುಖ ಪಾತ್ರ ವಹಿಸುತ್ತವೆ.

ಅತ್ಯಂತ ಅಪಾಯಕಾರಿ
ಹಸು, ಎಮ್ಮೆ, ಕುರಿ, ಮೇಕೆ, ನಾಯಿ ಮತ್ತು ಇತರೆ ಸಾಕು ಪ್ರಾಣಿಗಳಲ್ಲಿ ಬಾಧೆಯುಂಟು ಮಾಡುವ ಹೊರ ಪರಾವಲಂಬಿ ಜೀವಿಗಳಲ್ಲಿ ಉಣ್ಣೆಗಳು ಅತ್ಯಂತ ಅಪಾಯಕಾರಿ. ತಮ್ಮ ಆಹಾರಕ್ಕಾಗಿ ರಕ್ತ ಹೀರುವುದರೊಂದಿಗೆ ಮಾರಣಾಂತಿಕ ಕಾಯಿಲೆ ಹರಡುತ್ತವೆ.

ಈ ಉಣ್ಣೆಗಳಲ್ಲಿ ಗಡಸು ಚರ್ಮದ ಉಣ್ಣೆ ಮತ್ತು ಮೆದು ಚರ್ಮದ ಉಣ್ಣೆ ಎಂಬ ಎರಡು ಕುಟುಂಬಗಳಿವೆ. ಗಡಸು ಚರ್ಮದ ಉಣ್ಣೆಗಳು ಜಾನುವಾರುಗಳಲ್ಲಿ ಬಾಧೆಯುಂಟು ಮಾಡಿದರೆ, ಮೆದು ಚರ್ಮದ ಉಣ್ಣೆಗಳು ಕೋಳಿಗಳಲ್ಲಿ ಬಾಧೆಯುಂಟು ಮಾಡುತ್ತವೆ.

ಇವುಗಳ ಜೀವನ ಚಕ್ರ ವಿಚಿತ್ರ. ಒಂದು ಹೆಣ್ಣು ಉಣ್ಣೆ ಒಂದು ಬಾರಿ ೦.೫-–೧.೦ ಮಿ.ಲೀ ರಕ್ತ ಹೀರಿ ಉಬ್ಬಿ, ಜಾನುವಾರುವಿನ ಮೈ ಮೇಲಿಂದ ಉದುರಿ ಕೊಟ್ಟಿಗೆ, ಮನೆಯ ಬಿರುಕು, ಸಂದು ಅಥವಾ ಹುಲ್ಲುಗಾವಲಿನ ಮರದ ತೊಗಟೆಯತ್ತ ತೆವಳುತ್ತಾ ಹೋಗಿ ೧೮ ಸಾವಿರಕ್ಕೂ ಅಧಿಕ ಮೊಟ್ಟೆಯನ್ನಿಡುತ್ತವೆ. ವಾತಾವರಣದ ಉಷ್ಣಾಂಶ ಮತ್ತು ತೇವಾಂಶಕ್ಕನುಸಾರವಾಗಿ ಮೊದಲ ಹಂತದ ಲಾರ್ವ ಮೊಟ್ಟೆಯೊಡೆದು ಹೊರ ಬರುತ್ತವೆ.

ಜಾನುವಾರುವಿನ ರಕ್ತ ಹೀರುತ್ತಲೇ ಪ್ರಾಯದವರೆಗೂ ಬರುತ್ತವೆ. ಪ್ರಾಯದ ಗಂಡು ಮತ್ತು ಹೆಣ್ಣು ಉಣ್ಣೆಗಳು ಜಾನುವಾರುವಿನ ಮೈ ಮೇಲೆ ಮಿಲನಗೊಳ್ಳುತ್ತವೆ. ಹೆಣ್ಣು ಉಣ್ಣೆ ಉದುರಿ ಬಿದ್ದು ಪುನಃ ಮೊಟ್ಟೆ ಇಡುವ ಪ್ರಕ್ರಿಯೆ ಆರಂಭಿಸಿದರೆ, ಗಂಡು ಉಣ್ಣೆ ೩–-೪ ತಿಂಗಳು ಜಾನುವಾರುವಿನ ಮೈ ಮೇಲಿದ್ದು, ರಕ್ತ ಹೀರುತ್ತಿರುತ್ತವೆ!

ರಕ್ತ ಹೀರುತ್ತಿರುವ ಕಾರಣ, ಜಾನುವಾರುಗಳಲ್ಲಿ ರಕ್ತಹೀನತೆ ಕಾಡತೊಡಗುತ್ತದೆ. ಇದರಿಂದ ಹಾಲಿನ ಇಳುವರಿ ಕುಂಠಿತವಾಗುವುದು, ಪೋಷಕಾಂಶಗಳ ಕೊರತೆಯಿಂದ ಜಾನುವಾರುಗಳಲ್ಲಿ ಬಂಜೆತನ ಕಾಡುವುದು, ಮೇವು ತಿನ್ನುವುದನ್ನು ಕಡಿಮೆ ಮಾಡುವ ಸಮಸ್ಯೆಗಳೆಲ್ಲ ಉಂಟಾಗುತ್ತವೆ.

ರಕ್ತ ಹೀರುವಾಗ ಆದ ಚರ್ಮದ ಗಾಯ ಇನ್ನುಳಿದ ಪರಾವಲಂಬಿ ಜೀವಿಗಳನ್ನು ಆಕರ್ಷಿಸಿ ಗಾಯವನ್ನು ಇಮ್ಮಡಿಗೊಳಿಸುತ್ತವೆ. ಹೆಣ್ಣು ಉಣ್ಣೆಗಳು ರಕ್ತ ಹೀರಲು ಚರ್ಮವನ್ನು ಛೇದಿಸುವಾಗ ಬಳಸುವ ಜೊಲ್ಲಿನಲ್ಲಿರುವ ನಂಜಿನಿಂದ ನರವ್ಯೂಹದ ಮೇಲೆ ಪರಿಣಾಮ ಬೀರಿ ಜಾನುವಾರು ಪಾರ್ಶ್ವವಾಯು ರೋಗಕ್ಕೆ ತುತ್ತಾಗುತ್ತದೆ. ಮಾರಣಾಂತಿಕ ರೋಗಗಳಾದ ಬಬೇಸಿಯಾ, ತೈಲೇರಿಯಾ, ಅನಾಪ್ಲಾಜ್ಮ್ ಮತ್ತು ಟ್ರಿಪ್ಯಾನೊಜೋಮಾ ಹರಡುತ್ತವೆ. ಮನುಷ್ಯರಲ್ಲಿ ಮಂಗನ ಕಾಯಿಲೆ ಹರಡಲೂ ಇದೇ ಕಾರಣ.

ಹೀಗಿರಲಿ ಆರೈಕೆ

ಜಾನುವಾರುವಿನ ಮೈ ಸ್ವಚ್ಛಗೊಳಿಸಿ 2–3 ಮಿ.ಲೀ ‘ಅಮಿಟ್ರಾಜ್‌’ ಕಿ್ರಮಿನಾಶಕವನ್ನು ಒಂದು ಲೀಟರ್ ನೀರಿಗೆ ಬೇರೆಸಿ ಜಾನುವಾರುವಿನ ಮೈಗೆ ಹಚ್ಚಬೇಕು ಮತ್ತು ಜಾನುವಾರು ಮೈ ನೆಕ್ಕದಂತೆ ನೋಡಿಕೊಳ್ಳಬೇಕು. ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ೧೦ ಮಿ.ಲೀ ಈ ಕ್ರಿಮಿ ನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಬಿರುಕು, ಸಂದುಗಳಲ್ಲಿ ಸಿಂಪಡಿಸಬೇಕು. ಏಕೆಂದರೆ ಶೇ.೭೫ ರಷ್ಟು ಉಣ್ಣೆಗಳು ಕೊಟ್ಟಿಗೆ ಮನೆಯ ಬಿರುಕು, ಸಂದುಗಳಲ್ಲಿ ಅವಿತುಕೊಂಡಿರುತ್ತವೆ.

ಜಾನುವಾರುವಿನ ಮೈ ಮೇಲಿನ ಉಣ್ಣೆಗಳನ್ನು ಮಾತ್ರ ಸ್ವಚ್ಛಗೊಳಿಸಿದ್ದಲ್ಲಿ, ಮತ್ತೆ ಉಣ್ಣೆಗಳು ಮೈ ಮೇಲೇರುತ್ತವೆ. ಕಡಿಮೆ ಜಾನುವಾರುಗಳಿದ್ದಲ್ಲಿ ರೈತರು ಪಶುವೈದ್ಯರನ್ನು ಸಂಪರ್ಕಿಸಿ ಐವರ್‌ಮೆಕ್ಟಿನ್ ಇಂಜೆಕ್ಷನ್ ಕೂಡ ಕೊಡಿಸಬಹುದು. ಆದರೆ ಇದು ತಾತ್ಕಾಲಿಕ ನಿಯಂತ್ರಣವಷ್ಟೆ.

ಹೀಗೂ ಮಾಡಬಹುದು
ಹುಲ್ಲುಗಾವಲನ್ನು ಬೇಸಿಗೆಯಲ್ಲಿ ಸುಡುವುದರಿಂದ ಉಣ್ಣೆಗಳನ್ನು ನಿರ್ಮೂಲನೆ ಮಾಡಬಹುದು. ಜಾನುವಾರು ಹುಲ್ಲುಗಾವಲಿನಲ್ಲಿ ಮೇಯುತ್ತಿರುವಾಗ ಕೆಲವು ಹಕ್ಕಿಗಳು ಈ ಉಣ್ಣೆಗಳನ್ನು ಹೆಕ್ಕಿ ತಿಂದು ಉಪಕಾರ ಮಾಡುತ್ತವೆ. ಉಣ್ಣೆಗಳ ಹತೋಟಿಗಾಗಿ ವಿದೇಶದ ಕೆಲವು ಲಸಿಕೆಗಳಿವೆ. ಆದರೆ ಅವು ರೈತರಿಗೆ ಎಟುಕುವುದಿಲ್ಲ. ಆದ್ದರಿಂದ ರೈತರು ಕಾಲ ಕಾಲಕ್ಕೆ ಪಶು ವೈದ್ಯರ ಸಲಹೆ ಪಡೆದು ಉಣ್ಣೆಗಳ ನಿರ್ಮೂಲನೆ ಮಾಡಬೇಕು.
–ಡಾ. ರಾಜು ಬ. ಮೇತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT