ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಬೆಂಗಾಡಿನಲ್ಲೂ ಬಗೆಬಗೆ ಬೆಳೆ!

Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

`ದುಡಿದಷ್ಟು ಫಲ ಕೊಡುವ ಬಂಗಾರದಂಥ ಭೂಮಿ ನಮ್ಮದು. ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದುಕೊಳ್ಳುತ್ತಿದ್ದೇನೆ. ಈ ಪ್ರದೇಶ ಮೊದಲು ಬರದ ಬೀಡಾಗಿ ಗುರ್ತಿಸಿಕೊಂಡಿತ್ತು. ನನ್ನ ಭೂಮಿಯಲ್ಲಿ ಕೊಳವೆ ಬಾವಿ ಕೊರೆಸಿದಾಗ ಗಂಗೆ ರಭಸವಾಗಿ ಬೀಳಲು ಪ್ರಾರಂಭಿಸಿದ ಕ್ಷಣ ನನ್ನ ಅದೃಷ್ಟದ ಬಾಗಿಲು ತೆರೆಯಿತು. ಹಲವು ರೀತಿಯ ಬೆಳೆಗಳನ್ನು ಬೆಳೆಯುತ್ತಾ ಆದಾಯಗಳಿಸುವ ಜೊತೆಗೆ ನೆಮ್ಮದಿಯಿಂದ ಸಂಸಾರದ ಬಂಡಿ ಕೃಷಿಯೊಂದಿಗೆ ಸಾಗುತ್ತಿರುವುದು ಸಂತಸ ತಂದಿದೆ...'

ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ಕೊಂಡೆತಿಮ್ಮನಹಳ್ಳಿ ಕೆ.ಪಿ.ಪ್ರಶಾಂತ್ ಎಂದಿನಂತೆ ಮಧ್ಯಾಹ್ನದ ಉರಿ ಬಿಸಿಲಿನಲ್ಲೂ ಬಾಳೆ ಬೆಳೆಗೆ ಗೊಬ್ಬರ ಹರಡುತ್ತಾ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದ ವೈಖರಿ ಹೀಗಿತ್ತು.

ತಂದೆ ಪುಟ್ಟನರಸಿಂಹಯ್ಯ ಮೂಲತಃ ಕೃಷಿಕರು. ಪ್ರಶಾಂತ್ ಎಂ.ಎ, ಬಿ.ಇಡಿ ವ್ಯಾಸಂಗ ಮಾಡಿದ್ದರೂ ಸಹ ಕೃಷಿಯನ್ನೇ ತಮ್ಮ ಬದುಕಿನ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅಪ್ಪಟ ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

ಒಟ್ಟು 10 ಎಕರೆ ಕೃಷಿ ಭೂಮಿ ಇದೆ. ಮೂರೂವರೆ ಎಕರೆ ನೀರಾವರಿಯಾಗಿದ್ದರೆ, ಆರು ಎಕರೆ ಖುಷ್ಕಿ (ಮಳೆಯಾಶ್ರಿತ) ಜಮೀನು. ಖುಷ್ಕಿ ಭೂಮಿಯಲ್ಲಿ ರಾಗಿ, ಜೋಳ, ಶೇಂಗಾ, ತೊಗರಿ, ಬತ್ತ, ಬಾಳೆ, ಬೀನ್ಸ್ ಸೇರಿದಂತೆ ಹಲವು ಬೆಳೆಗಳನ್ನು ಮಳೆ ಆಶ್ರಯದಲ್ಲಿ ಬೆಳೆಯುತ್ತಾರೆ. ಪ್ರಶಾಂತ್ ಅವರು ಕೃಷಿಯ ವಿಭಿನ್ನ ಪ್ರಯೋಗಗಳಲ್ಲಿ ತೊಡಗಿಕೊಂಡು, ಇಳುವರಿ ಜೊತೆಗೆ ಉತ್ಕೃಷ್ಟತೆ ಕಾಣಬಯಸುವ ನಡೆ ಭಿನ್ನತೆಯಿಂದ ಕೂಡಿದೆ. ಅಂದಹಾಗೆ ಬಾಳೆ, ಸುಗಂಧರಾಜ ಹೂ, ಮಾವು, ಸಪೋಟಾ, ತೇಗ ಹಾಗೂ ಇನ್ನಿತರೆ ಬೆಳೆಗಳಲ್ಲಿ ತಮ್ಮದೇ ವಿಶೇಷ ಪ್ರಯೋಗಗಳ ಮೂಲಕ ಯಶ ಕಂಡು, ಸಾಕಷ್ಟು ಆದಾಯವನ್ನು ಗಳಿಸುತ್ತಿದ್ದಾರೆ.

ಬಾಳೆ ಬೆಳೆಯಲ್ಲಿ ವಿಭಿನ್ನತೆ
ಪ್ರಶಾಂತ್ ಬಾಳೆ ಬೆಳೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ವಿಭಿನ್ನತೆಯಿಂದ ಬಾಳೆ ಬೆಳೆ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ. ತಮ್ಮ ಎರಡು ಎಕರೆ ನೀರಾವರಿ ಭೂಮಿಗೆ ಬಾಳೆ ಕೃಷಿ ಮಾಡುತ್ತಾರೆ. ಮೊದಲು ಭೂಮಿಯನ್ನು ತಮಗೆ ಸರಿ ಹೊಂದುವಂತೆ ಹದಮಾಡಿಕೊಳ್ಳುತ್ತಾರೆ. ಸಾಲುಗಳಂತೆ ವಿಂಗಡಿಸಿ ನಂತರ ಎರಡೂವರೆ ಅಡಿ ಕಾಲುವೆಯಂತೆ ತೊಡಲಾಗುತ್ತದೆ. ಹಸಿರೆಲೆ ಸೊಪ್ಪನ್ನು ಗುಂಡಿಗೆ ಸೇರಿಸಿ 20 ದಿನಗಳ ಮಟ್ಟಿಗೆ ಕೊಳೆಯಲಿಕ್ಕೆ ಬಿಟ್ಟು ಮಣ್ಣು ಮುಚ್ಚುತ್ತಾರೆ. ಹೀಗೆ ಮಾಡುವುದರಿಂದ ಮಣ್ಣಿನಲ್ಲಿ ಎರೆಹುಳು ಹೆಚ್ಚಾಗಿ ಬೆಳೆಗೆ ಸಹಕಾರಿಯಾಗುತ್ತದೆ. ಸಾವಯವ ಗೊಬ್ಬರವೇ ಭೂಮಿಯಲ್ಲಿ ಉತ್ಪತ್ತಿಯಾಗಿ ಬೆಳೆಗೆ ಉತ್ತೇಜನಕಾರಿಯಾಗುತ್ತದೆ. ತೇವಾಂಶ ಸಹ ಕಾಪಾಡುತ್ತದೆ ಎಂಬುದನ್ನು ಪ್ರಶಾಂತ್ ತಮ್ಮ ಬೆಳೆ ಅನುಭವದಲ್ಲಿ ಖಚಿತಪಡಿಸಿಕೊಂಡಿದ್ದಾರೆ.

ತರುವಾಯದಲ್ಲಿ ಎರಡು ಎಕರೆಗೆ 800 ಬಾಳೆ ಗೆಡ್ಡೆಗಳಂತೆ ಒಂದು ಬಾಳೆ ಗೆಡ್ಡೆಗೆ ಎಂಟು ಅಡಿ ಅಗಲ, ಉದ್ದದಂತೆ ನಾಟಿ ಮಾಡಿದ್ದಾರೆ. ಪ್ರತಿ ಬಾಳೆ ಗಿಡಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಒಂದು ಏಲಕ್ಕಿ ಬಾಳೆ ಗೊನೆ 10-16 ಕೆ.ಜಿ ಪಡೆದಿದ್ದಾರೆ. ಎರಡು ಎಕರೆಗೆ ಉತ್ತಮ ಇಳುವರಿ ಪಡೆದುಕೊಳ್ಳುವುದರ ಜೊತೆಗೆ ಬಾಳೆ ಬೆಳೆ ಪದ್ಧತಿಯಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಪಡೆದುಕೊಂಡು ಸಾಗುತ್ತಿದ್ದಾರೆ. ಬಾಳೆ ನಡುವೆ ಸಿಹಿ ಕುಂಬಳ, ತೆಂಗು, ತೇಗ, ಅಡಿಕೆ ಸಹ ಹಾಕುವ ಮೂಲಕ ಲಾಭಗಳಿಸಿಕೊಂಡು ಮುಂದುವರೆದಿದ್ದಾರೆ. ಬದುಗಳಲ್ಲಿ ಸಿಲ್ವರ್ ಗಿಡಗಳನ್ನು ಸಹ ಹಾಕಿದ್ದಾರೆ.

ಲಾಭದ ಸುಗಂಧರಾಜ
ಪ್ರಶಾಂತ್ ಮೊದಲು ಪ್ರಯೋಗಾರ್ಥವಾಗಿ ತಮ್ಮ 15 ಕುಂಟೆ ವ್ಯಾಪ್ತಿಗೆ ಹಾಕಿದ ಸುಗಂಧರಾಜ ಹೂ, ಉತ್ಕೃಷ್ಟ ಇಳುವರಿ ಬರುವ ಜೊತೆಗೆ 2 ರಿಂದ 3 ತಿಂಗಳಿಗೆಯೇ 40 ರಿಂದ 50 ಸಾವಿರ ಆದಾಯ ಪಡೆದುಕೊಂಡಿದ್ದರು. ಒಮ್ಮೆ ಗೆಡ್ಡೆ ನೆಟ್ಟರೆ ಮೂರು ವರ್ಷದ ತನಕವೂ ನಿರಂತರ ಆದಾಯ ಪಡೆಯಬಹುದಾಗಿರುತ್ತದೆ. ಯಾವುದೇ ಖರ್ಚಿಲ್ಲದೆಯೇ ತಿಂಗಳಿಗೆ 5 ರಿಂದ 6 ಸಾವಿರ ಪಡೆದುಕೊಳ್ಳುತ್ತಾರೆ. ಸುಗಂಧರಾಜ ಹೂವು ಬೇಸಾಯವು ಹೆಚ್ಚಿನ ಶ್ರಮವಿಲ್ಲದ್ದು. ಒಬ್ಬರೇ ನಿರ್ವಹಿಸುವಂತಹ ಬೆಳೆಯಾಗಿದೆ. ಭೂಮಿಯನ್ನು ಹದಗೊಳಿಸಿ ಗೊಂಚಲಂತಿರುವ ಗೆಡ್ಡೆಯನ್ನು ವಿಂಗಡಿಸಬೇಕು. ಗೆಡ್ಡೆಗಳಿಗೆ ನೀರು ಚಿಮುಕಿಸಿ ನೆರಳಿನಲ್ಲಿ ಸ್ವಲ್ಪ ಒಣಗಿಸಬೇಕು. ಗದ್ದೆಯಲ್ಲಿ ಸಾಲುಗಳನ್ನು ಮಾಡಿಕೊಂಡು ಸಾಲಿನಿಂದ ಸಾಲಿಗೆ ಹಾಗೂ ಗೆಡ್ಡೆಯಿಂದ ಗೆಡ್ಡೆಗೆ ಒಂದು ಅಡಿ ಅಂತರದಲ್ಲಿ ಹೂವಿನ ಗೆಡ್ಡೆಗಳನ್ನು ನೆಡಲಾಗುತ್ತದೆ. 8-10 ದಿನಗಳೊಳಗೆ ಮೊಳಕೆ ಬರುತ್ತದೆ. ಮೂರನೇ ತಿಂಗಳಿಗೆ ಹೂ ಬಿಡುತ್ತದೆ.

ಆದರೆ ಸ್ವಲ್ಪ ಭಿನ್ನವಾಗಿ ಪ್ರಶಾಂತ್ ಕೆಂಪು, ಕಪ್ಪು ಹಾಗೂ ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆಯುತ್ತಿದ್ದಾರೆ. ಈ ಬರದ ಬೆಂಗಾಡಿನಲ್ಲೂ ಇರುವ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಉತ್ತಮ ಪ್ರಗತಿ ಸಾಧಿಸುವುದು ತಮ್ಮ ಉದ್ದೇಶವೆನ್ನುತ್ತಾರೆ ಅವರು. 18 ಸಾವಿರ ವೆಚ್ಚದಲ್ಲಿ 8/8/8 ಅಡಿ ಆಳದಂತೆ ಮಳೆ ನೀರು ಸಂಗ್ರಹ ತೊಟ್ಟಿಯನ್ನು ಮಾಡಿಕೊಂಡಿದ್ದಾರೆ. ಸಂಗ್ರಹವಾದ ಮಳೆ ನೀರನ್ನು ತಮ್ಮ ದಿನನಿತ್ಯದ ಅಡುಗೆ, ಕುಡಿಯಲು ಬಳಸುತ್ತಾರೆ. ಈ ವ್ಯವಸ್ಥೆ ಮಾಡಿಕೊಂಡ ಮೇಲೆ ತುಂಬಾ ಸಹಕಾರಿಯಾಗಿದೆ ಎಂಬುದು ಪ್ರಶಾಂತ್ ಅವರ ಅಭಿಪ್ರಾಯ. ಮಾಹಿತಿಗೆ- 8095363424
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT