ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಯಂತೆ ಅರಳುವ ಹೂವು!

Last Updated 30 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮರಗಟ್ಟುವ ಚಳಿಯಲಿ ಚೇತೋಹಾರಿ ಪ್ರಕೃತಿ ಮಡಿಲಲ್ಲಿ ಮನಸೋತು ನಡೆದಿದ್ದೆ. ಹಾಡುಹಕ್ಕಿಗಳ ಸುಶ್ರಾವ್ಯ ಸಂಗೀತದ ಸೆಳೆತ, ಹಸಿರ ವನರಾಶಿಯ ಹಾದಿಯಲಿ ಮೈಮನ ಹಸಿರಾಗಿತ್ತು ಹಗುರಾಗಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿ ವ್ಯಾಘ್ರ ದರ್ಶನ! ಆದರೆ ಇದು ರಾಷ್ಟ್ರಪ್ರಾಣಿ ಹುಲಿಯಲ್ಲ. ಬದಲಿಗೆ ಹುಲಿ ರೂಪಿ ಎಂಬ ನಾಮಾಂಕಿತ ಸಸ್ಯ! ಹ್ಞಾಂ.....

ಹುಲಿ ಕಂಡಷ್ಟೇ ರೋಮಾಂಚನ ಈ ಸಸ್ಯ ಕಂಡಾಗಲೂ ಆಗುತ್ತದೆ. ಗೌರಿ ಹೂ (ಗ್ಲೋರಿಯೋಸಾ ಸುಪರ್ಬಾ) ಎಂಬ ವರ್ಗಕ್ಕೆ ಸೇರಿದ ಸುಂದರ ಬಳ್ಳಿ ಇದು. ಸುಮಾರು ೪ ರಿಂದ ೬ಮೀಟರ್ ಬೆಳೆವ ಇದು ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಕಂಡುಬರುವ ಸಸ್ಯ. ಗೆಣಸಿನ ರೀತಿಯ ಗೆಡ್ಡೆ ಹೊಂದಿರುವ ಇದು ಮಳೆಗಾಲದೊಂದಿಗೆ ಅಜ್ಞಾತ ವಾಸದಿಂದ ಹೊರಬಂದು ಬೆಂಕಿಯ ಉರಿಯಂಥ ಆಕರ್ಷಕ ಕೆಂಪು, ಹಳದಿ ಬಣ್ಣದಿಂದ ಮನಸೆಳೆಯುತ್ತದೆ.

ಆರು ದಳಗಳ ಕೆಂಪು ಸುಂದರಿ ಬೆಳೆಯುತ್ತಿದ್ದಂತೆ ತಳಭಾಗ ಹಳದಿ ಹಾಗೂ ಮೇಲ್ಭಾಗ ಕೇಸರಿ ಬಣ್ಣವಾಗುತ್ತೆ. ಸುಮಾರು ೨.೫ ಗ್ರಾಂ ತೂಕದ ಈ ಸುಂದರ ಹೂವು ಕುರುಚಲು ಕಾಡು, ಪೊದೆಗಳಲ್ಲಿ, ಹುಲ್ಲು ಗಾವಲಲ್ಲಿ, ಫಲವತ್ತಿಲ್ಲದ ಮಣ್ಣಿನಲ್ಲೂ ಬೆಳೆಯುತ್ತವೆ. ಇದರ ಎಲೆ ಕೆಲವೊಮ್ಮೆ ಎದುರು ಬದುರಾಗಿಯೂ ಅಥವಾ ಒಂದಾದರೊಂದರಂತೆ ಹರಡಿರುತ್ತದೆ.

ಇದು ಜಿಂಬಾವ್ವೆ ದೇಶದ ರಾಷ್ಟ್ರಪುಷ್ಪವಾದರೆ,  ತಮಿಳುನಾಡಿನ ರಾಜ್ಯ ಪುಷ್‍ಪ ಕೂಡ.

ವಿಷಕನ್ಯೆ
ಗೌರಿ ಹೂವಿನ ಸಸ್ಯ ಅಡಿಯಿಂದ ಮುಡಿಯವರೆಗೂ ವಿಷಯುಕ್ತ. ಆಫ್ರಿಕಾದಲ್ಲಿ ಬೇಟೆಗಾಗಿ ಬಳಸುವ ಬರ್ಜಿಯಲ್ಲಿ ಇದರ ವಿಷದ ಲೇಪನ ಮಾಡಿರುತ್ತಾರೆ. ಇದರ ಯಾವ ಭಾಗ ಸೇವಿಸಿದರೂ ತಲೆ ಸುತ್ತು, ವಾಂತಿ, ಬಾಯಲ್ಲಿ ನೊರೆ, ಗಂಟಲಲ್ಲಿ ಉರಿ, ಉದರ  ನೋವು, ಆಮಶಂಕೆ, ಚರ್ಮ ಪೊರೆ ಕಟ್ಟುವುದು, ಮಹಿಳೆಯರಲ್ಲಿ ಅಧಿಕ ರಕ್ತಸ್ರಾವ, ಕೂದಲು ಉದುರುವುದು... ಮುಂತಾದ ಲಕ್ಷಣ  ಕಾಣಿಸಿಕೊಳ್ಳುತ್ತದೆ. ಬೆಕ್ಕು, ನಾಯಿ, ಹಸುಗಳಿಗೆ ಇದು ಮಾರಣಾಂತಿಕ. ಗರ್ಭಿಣಿಯರು ಸೇವಿಸಿದರೆ ಗರ್ಭಪಾತವಾಗುತ್ತದೆ.

ಆದರೆ ಇದು ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿ. ಇದು ಹಲವು ರೋಗಗಳಿಗೆ ಸಂಜೀವಿನಿ. ಬಂಜೆತನಕ್ಕೆ, ಗಾಯಗಳಿಗೆ, ಹಾವು ಕಡಿತಕ್ಕೆ, ನೋವು ನಿವಾರಕವಾಗಿ, ಮೂತ್ರಪಿಂಡದ ರೋಗಕ್ಕೆ, ಗುಹ್ಯರೋಗಕ್ಕೆ, ಸಿಡುಬು ಮುಂತಾದ ರೋಗಗಳನ್ನು ತಡೆಗಟ್ಟಲು ಇದನ್ನು ಬಳಸಲಾಗುತ್ತದೆ.

ಇಂಥ ಅಪೂರ್ವ ಸಸ್ಯ ಇಂದು ವಿನಾಶದಂಚಿನಲ್ಲಿ ಇದೆ. ಆಸ್ಟ್ರೇಲಿಯಾದಲ್ಲಿ ಇದನ್ನು ಸಮುದ್ರ ದಡದಲ್ಲಿ ಬೆಳೆಸುತ್ತಿದ್ದಾರೆ. ಫಾರಂನಲ್ಲಿ ಬೆಳೆಸಲಾಗುತ್ತಿದ್ದರೂ ಕಾಡಿನ ಹೂವಿಗೆ ಹೆಚ್ಚಿನ ಬೇಡಿಕೆ. ಇದರಿಂದ ಕೈತುಂಬ ಹಣ ಖಚಿತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT