ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಹೈನು ರಾಸುಗಳ ರಕ್ಷಣೆ

Last Updated 2 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೇಸಿಗೆಯಲ್ಲಿ ಹಗಲಿನ ಉಷ್ಣಾಂಶ ಹೆಚ್ಚಾದಾಗ ಹೈನುಗಾರರು ತಮ್ಮಲ್ಲಿರುವ ಮಿಶ್ರ ತಳಿಯ ಹಸುಗಳು ಹಾಗೂ ಎಮ್ಮೆಗಳ ರಕ್ಷಣೆಗೆ ಹೆಚ್ಚಿನ ಗಮನ ಕೊಡಬೇಕು. ಬಿಸಿಲಿನ ಬೇಗೆ ಹೆಚ್ಚಾದರೆ ಮಿಶ್ರ ತಳಿ ಹಸುಗಳು ಅದರ ತಾಪ ತಳಲಾರದೆ ಚಡಪಡಿಸುತ್ತವೆ. ಇದರಿಂದ ಹಾಲಿನ ಉತ್ಪಾದನೆಯಲ್ಲಿ ಇಳಿಮುಖವಾಗುತ್ತದೆ. ರಾಸುಗಳ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಆಗುತ್ತವೆ. ಆದ್ದರಿಂದ   ಹೈನು ರಾಸುಗಳ ರಕ್ಷಣೆ ಮತ್ತು ನಿರ್ವಹಣೆಗೆ ವಿಶೇಷ ಗಮನ ಕೊಡಬೇಕು.

ಉಷ್ಣಾಂಶ ಹೆಚ್ಚಾದಾಗ ಮಿಶ್ರ ತಳಿಯ ಹಸುಗಳಲ್ಲಿ ಈ ಕೆಳಕಂಡ ಲಕ್ಷಣಗಳು ಕಂಡು ಬರುತ್ತವೆ.

- ಹಾಲು ಇಳಿವರಿ ಶೇ.10-30 ರಷ್ಟು ಕಡಿಮೆಯಾಗುತ್ತದೆ.
-ತಿನ್ನುವ ಮೇವಿನ ಪ್ರಮಾಣ 20-25ರಷ್ಟು ಕಡಿಮೆಯಾಗುತ್ತದೆ.
-ಕೆಲವು ಹಸುಗಳ ದೇಹದ ಉಷ್ಣಾಂಶ 104 ಡಿಗ್ರಿ ಗಿಂತ ಸ್ವಲ್ಪ ಹೆಚ್ಚಾಗಬಹುದು.
-ಉಸಿರಾಡುವಾಗ ಆಗಾಗ ಬಾಯಿ ತೆರೆದು ನಾಲಿಗೆಯನ್ನು ಚಾಚುತ್ತವೆ.
-ರಾಸುಗಳ ಚಲನವಲನದಲ್ಲಿ ಆಯಾಸದ ಚಿಹ್ನೆಗಳು ಎದ್ದು ಕಾಣುತ್ತವೆ.
- ಅವುಗಳ ಹೃದಯ ಬಡಿತ ಹೆಚ್ಚಾಗುತ್ತದೆ.
-ಕಡಿಮೆ ಹಾಲುಕೊಡುವ ರಾಸುಗಳಿಗಿಂತ ಹೆಚ್ಚು ಹಾಲು ಕೊಡುವ ರಾಸುಗಳು ಬಿಸಿಲಿನ ಒತ್ತಡದಿಂದ ಹೆಚ್ಚು ಬಳಲುತ್ತವೆ. 

ರಕ್ಷಣಾ ಕ್ರಮಗಳು
-ರಾಸುಗಳಿಗೆ ಸ್ವಲ್ಪ ಹೆಚ್ಚು ಮೇವನ್ನು ಹಾಕಬೇಕು. ಅವು ತಿನ್ನುವ ಮೇವನ್ನು ಮೂರರಿಂದ ನಾಲ್ಕು ಭಾಗ ಮಾಡಿ ಬೇರೆ ಬೇರೆ ಸಮಯದಲ್ಲಿ ಕೊಡಬೇಕು. ಹೀಗೆ ಮಾಡುವುದರಿಂದ ರಾಸುಗಳು ಮೇವನ್ನು ಸಂಪೂರ್ಣ ತಿನ್ನುತ್ತವೆ. ಒಂದೇ ಸಲ ಹೆಚ್ಚು ಮೇವು ಹಾಕಿದರೆ ಮೇವು ಉಳಿದು ಹೋಗಬಹುದು. ಅದರಲ್ಲಿ ನೊಣ ಸೊಳ್ಳೆ ಇತರೆ ಕೀಟಗಳು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

-ಮೇವಿನ ಬಹುಪಾಲನ್ನು ತಂಪಾದ (ಸಂಜೆ ಮತ್ತು ರಾತ್ರಿ) ಸಮಯದಲ್ಲಿ ಕೊಡುವುದು ಸೂಕ್ತ. ಬಿಸಿಲು ಹೆಚ್ಚಾದಾಗ ಹಸುಗಳು ಮೇವು ತಿನ್ನಲು ಬಯಸುವುದಿಲ್ಲ.

-ಹೈನು ರಾಸುಗಳಿಗೆ ಶುದ್ಧ ಹಾಗೂ ತಂಪಾದ ನೀರು ಕುಡಿಸಬೇಕು. ಸುಮಾರು 400 ಕೇಜಿ ತೂಕದ ಹಸು ಅಥವಾ ಎಮ್ಮೆಗೆ ದಿನಕ್ಕೆ ಸುಮಾರು 60 ಲೀಟರ್ ನೀರು ಬೇಕಾಗುತ್ತದೆ.

-ಹೈನು ರಾಸುಗಳನ್ನು ನೇರವಾದ ಸೂರ್ಯನ ಕಿರಣಗಳು ಬೀಳದಂತೆ ರಕ್ಷಿಸಬೇಕು. ಹಗಲಿನ ವೇಳೆ  ತಂಪಾದ, ನೆರಳಿರುವ ಜಾಗದಲ್ಲಿ ಕಟ್ಟಿಹಾಕಬೇಕು. ಕೊಟ್ಟಿಗೆಗಳ ಸುತ್ತ, ಮುತ್ತ ಮರಗಳಿದ್ದರೆ  ಸಹಜವಾಗಿಯೇ ತಂಪಾದ ಪರಿಸರ ಇರುತ್ತದೆ. ಕೊಟ್ಟಿಗೆ ಮೇಲೆ ತೆಂಗಿನ ಗರಿಗಳನ್ನು ಹಾಕಿ ಬಿಸಿಲಿನ ತೀವ್ರತೆ ಕಡಿಮೆ ಮಾಡಬಹುದು.

-ಕೊಟ್ಟಿಗೆಯಲ್ಲಿ ಶುದ್ಧವಾದ ಗಾಳಿ ಇರುವಂತೆ  ನೋಡಿಕೊಳ್ಳಿ.
-ಬಿಸಿಲು ಹೆಚ್ಚಾದರೆ ಕೊಟ್ಟಿಗೆ ಬಳಿ ಮರಳಿನ ಚೀಲಗಳನ್ನು ಇಟ್ಟು ಅವುಗಳ ಮೇಲೆ ನೀರು ಹಾಕಬೇಕು. ಇದರಿಂದ ಅಲ್ಲಿ ವಾತಾವರಣ ತಂಪಾಗುತ್ತದೆ.

-ದಿನಕ್ಕೆ 2 ರಿಂದ 3 ಸಲ ರಾಸುಗಳ ಮೇಲೆ ನೀರನ್ನು ಸಿಂಪಡಿಸಬೇಕು.
-ಹೈನು ರಾಸುಗಳಿಗೆ ನೆನಸಿದ ಕಾಳನ್ನು ತಿನ್ನಿಸಬೇಕು.
-ಹಿಂಡಿ, ಕಾಳು ಇತ್ಯಾದಿಗಳಿಗೆ ಶೇ.1ರಷ್ಟು ಉಪ್ಪನ್ನು ಮಿಶ್ರ ಮಾಡಿಕೊಡಿ,
- ಕೊಟ್ಟಿಗೆಗಳಲ್ಲಿ ರಾಸುಗಳ ನಡುವೆ ಹೆಚ್ಚಿನ ಅಂತರ ಇರುವಂತೆ ನೋಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಳಿಗೆ : ಡಾ.ಎಚ್.ಎಸ್.ಮಧುಸೂದನ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 99017 88399   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT