ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ್ಗೆಯ ಮೊಳ ಬದನೆ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಈಚೆಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಮಗ್ಗೆ ಹಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಪೀಪಲ್ ಟ್ರೀ ಸಂಸ್ಥೆ, ಕಾರ್ಯ ಕ್ಷೇತ್ರದ ಕಚೇರಿಯ ಗೋಡೆ ಪಕ್ಕದಲ್ಲಿ ಸಣ್ಣ ಬದನೆ ಸಸಿಯೊಂದು ಬೆಳೆದಿತ್ತು. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಚನ್ನಬಸಪ್ಪರವರನ್ನ ಗಿಡದ ಬಗ್ಗೆ ಕೇಳಿದಾಗ, ಗ್ರಾಮಸ್ಥರು ಕೊಟ್ಟ ಬೀಜಗಳನ್ನು ಸಂಗ್ರಹಿಸುವಾಗ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು, ಸಸಿ ಹುಟ್ಟಿರಬಹುದೆಂದರು.

ರಸ್ತೆಯ ಅಕ್ಕಪಕ್ಕ ಅನಾಥವಾಗಿ ಬೆಳೆದಿದ್ದ ಬದನೆ ಸಸಿ ಬೆಳೆದು ಕಾಯಿ ಬಿಟ್ಟು ಊರ್ಜಿತವಾಗುವ  ಸಾಧ್ಯತೆ ಇರಲಿಲ್ಲವಾದ್ದರಿಂದ ಸಸಿ ಕಿತ್ತು ಸಂಸ್ಥೆಯ ಕೈತೋಟದಲ್ಲಿ ನೆಟ್ಟು ಆರೈಕೆ ಮಾಡಲಾಯಿತು. ನಿಧಾನವಾಗಿ ಚೇತರಿಸಿಕೊಂಡ ಸಸಿ, ಬೆಳೆದು ಸೊಂಪಾದ ಗಿಡವಾಯಿತು. ಡಿಸೆಂಬರ್ ಜನವರಿ ತಿಂಗಳಲ್ಲಿ ಗೊಂಚಲು ಕಾಯಿಗಳನ್ನು ಬಿಟ್ಟು ಮೈದುಂಬಿ ನಿಂತಿತ್ತು. ಯಾವುದೋ ಹೈಬ್ರಿಡ್ ತಳಿ ಇರಬಹುದೇನೋ ಎಂಬ ಅನುಮಾನ ಸುಳ್ಳಾಗಿ, ಮೊಳದುದ್ದದ ಕಾಯಿಗಳು ಬಿಟ್ಟಿದ್ದವು. ಈ ವಿಶೇಷ ನಾಡತಳಿಯ ಬದನೆ ಬೀಜಗಳನ್ನು ಕೊಟ್ಟ ರೈತರನ್ನು ಹುಡುಕಾಡಿದಾಗ, ಪತ್ತೆಯಾಗಿದ್ದು ಮಹಾಬೂಬಿ ಎಂಬ ರೈತ ಮಹಿಳೆ.

1970–80 ರ ದಶಕದಲ್ಲಿ ಕಬಿನಿ ನದಿಗೆ ಅಣೆಕಟ್ಟು ಕಟ್ಟಿದಾಗ, ಮುಳುಗಡೆಯಾದ ಹಳ್ಳಿಗಳಲ್ಲಿ ಮಗ್ಗೆ ಗ್ರಾಮ ಕೂಡ ಒಂದು. ಅಂತರಸಂತೆ ಮಾರ್ಗವಾಗಿ ಕೇರಳದ ಮಾನಂದವಾಡಿಗೆ ಹೋಗಬೇಕಾದರೆ, ಕೆ.ಆರ್.ಪುರ, ಮಗ್ಗೆ ಅವಳಿ ಹಳ್ಳಿಗಳು ಸಿಗುತ್ತವೆ. ಮುಳುಗಡೆಯಾದ ಮಗ್ಗೆ ಹಳ್ಳಿಯ ಗಾಢ ನೆನಪುಗಳನ್ನು ಮರೆಯಲಾಗದೆ, ಸ್ಥಳಾಂತರಗೊಂಡ ಜಾಗಕ್ಕೆ, ಮಗ್ಗೆ ಎಂದೇ ಹೆಸರಿಟ್ಟರು. ಮಹಾಬೂಬಿ ಮುಳುಗಿ ಹೋದ ಹಳ್ಳಿ, ತರಕಾರಿ ದವಸಧಾನ್ಯಗಳನ್ನು ಬೆಳೆಯುತ್ತಿದ್ದ ತನ್ನ ಭೂಮಿಯನ್ನು ನೆನೆದು ಭಾವುಕಳಾದರು. ಅವರು ಕೊಟ್ಟಿದ್ದ ಬದನೆಯ ತಳಿಯ ಬಗ್ಗೆ ಕೇಳಿದಾಗ ಮೊಳ ಬದನೆ ಎಂಬ ಹೆಸರೇಳಿ, ಅದು ಕಾಯಿ ಬಿಡುತ್ತಿದ್ದ ಸಂಭ್ರಮ ಹೇಳುತ್ತಾ, ಗ್ರಾಮ ತೊರೆದು ಬರುವಾಗ ತನ್ನೊಡನೆ ತಂದ ಬೀಜದ ಕಥೆ ಹೇಳಿದರು.

ಕನ್ನಡ ನಾಡಿನ ವೈವಿಧ್ಯ ಕೃಷಿ ಪ್ರದೇಶಗಳಲ್ಲಿ ಬೆಳೆಯುವ ಬದನೆಯ ನಾಟಿ ತಳಿಗಳಾದ ಈರಣಗೇರಿ, ಎಲೆ ಮರ ಬದನೆ, ಕುಡನೆ ಗುಳಲಿಕಾಯಿ, ನೆಲಗುಳ್ಳ, ಮಲಪುರ, ರಾಮದುರ್ಗ, ಹೆಬ್ಬುಗುಳ್ಳ, ಮೈಸೂರು ಬದನೆ, ಬೆಕ್ಕಿನ ತಲೆ ಬದನೆ, ಮುಳ್ಳು ಬದನೆ, ಉಡುಪಿಗುಳ್ಳ, ತಳದ್‌ಬದ್ನೆ, ಹೆಬ್ಬದನೆ, ಗಂಜಿ ಬದನೆ, ಮಂಜ್ರಿ ಗೋಟ, ಆಡು ಮೊಲೆ ಬದನೆ, ಮುಂತಾದ ವೈವಿಧ್ಯ ತಳಿಗಳಲ್ಲಿ, ಮೈಸೂರು ಪ್ರದೇಶದ ಮೊಳ ಬದನೆಯು ಒಂದು. ಸೋಲನೇಸಿ ಕುಟುಂಬಕ್ಕೆ ಸೇರಿರುವ ಬದನೆಯ ವೈಜ್ಞಾನಿಕ ಹೆಸರು ಸೊಲ್ಯಾನಂ ಮೆಲಾಂಜೆನಾ.

ಬದನೆ ಉಪಯೋಗಿಸಿ ಮಾಡುವ ಎಲ್ಲಾ ಅಡುಗೆಗಳಿಗೆ ಈ ಬದನೆಯೂ ಸೂಕ್ತವಾದ ತಳಿ. ಮೈಸೂರು, ಬೆಂಗಳೂರು ಕಡೆ ಮಾಡುವ ಮೊಸರು ಸಾಂಬಾರಿಗೆ, ವಿಶೇಷವಾಗಿ ಮೊಳಬದನೆಯನ್ನು ಬಳಸುತ್ತಾರೆ.

ಬೆಳೆಸುವ ವಿಧಾನ
ಚಳಿಗಾಲದ ನವೆಂಬರ್ ಡಿಸೆಂಬರ್ ತಿಂಗಳು ಹೊರತುಪಡಿಸಿ ಬೇರೆ ದಿನಗಳಲ್ಲಿ ಬೀಜಗಳನ್ನು ಬಿತ್ತಬೇಕು. 20 ರಿಂದ 25 ದಿವಸಗಳ ಪ್ರಾಯದ ಸಸಿಗಳನ್ನು ಪಾತಿಗಳಲ್ಲಿ ನೆಡಬೇಕು. ಒಂದು ಪಾತಿಗೆ ಎರಡರಿಂದ ಮೂರು ಕೆ.ಜಿ. ಉತ್ತಮ ತಿಪ್ಪೆ ಗೊಬ್ಬರ, 100 ಗ್ರಾಂ ಬೇವಿನ ಅಥವಾ ಹೊಂಗೆ ಹಿಂಡಿಯನ್ನು ಮಣ್ಣಿನ ಜೊತೆ ಮಿಶ್ರಣ ಮಾಡಿ ನೆಡಬೇಕು.

ಸುಳಿ ಮತ್ತು ಕಾಯಿಕೊರಕ ಕೀಟ ನಿವಾರಣೆ ಮಾಡಲು ತಿಂಗಳಿಗೆ 2ರಿಂದ 3 ಬಾರಿ ಒಂದು ಭಾಗ ಗಂಜಲಕ್ಕೆ ಹತ್ತು ಭಾಗ ನೀರು ಮಿಶ್ರಣ ಮಾಡಿ ಸಿಂಪಡನೆ ಮಾಡಬೇಕು. ವೈವಿಧ್ಯ ಜೊತೆಗಾರ ತರಕಾರಿ, ಹಸಿರು ಸೊಪ್ಪುಗಳ ಜೊತೆ ಬೆಳೆದರೆ ಕೀಟಗಳ ಕಾಟ ನಿಯಂತ್ರಣದಲ್ಲಿರುತ್ತವೆ. ಕೈತೋಟ, ಕುಂಡಗಳಲ್ಲಿ ಬೆಳೆದು ಮನೆ ಬಳಕೆಗೆ ಬಳಸುವುದರ ಜೊತೆಗೆ ಹೆಚ್ಚಿನ ಜಾಗದಲ್ಲಿ ಬೆಳೆದು ಮಾರಾಟ ಮಾಡಬಹುದು. ಗಿಡಗಳನ್ನು ಚೆನ್ನಾಗಿ ಆರೈಕೆ ಮಾಡಿದರೆ ಎರಡು ವರ್ಷಗಳ ಕಾಲ ಫಸಲು ಪಡೆಯಬಹುದು.

ಬೀಜಗಳ ಆಯ್ಕೆ ಮತ್ತು ಶೇಖರಣೆ
ರೋಗ ಕೀಟ ಭಾದೆ ಇಲ್ಲದ ಹೆಚ್ಚು ಇಳುವರಿ ಮತ್ತು ಗುಣಮಟ್ಟದ ಕಾಯಿಗಳನ್ನು ಬಿಟ್ಟಿರುವ ಗಿಡಗಳಲ್ಲಿ ಹಳದಿ ಬಣ್ಣದ ಮಾಗಿದ ಹಣ್ಣುಗಳನ್ನು ಸಂಗ್ರಹಿಸಿ, ತಣ್ಣೀರಿನಲ್ಲಿ ಐದಾರು ದಿವಸಗಳ ಕಾಲ ಇಟ್ಟು ಬೀಜಗಳನ್ನ ಸಂಗ್ರಹಿಸಿ. ಬೂದಿ ಲೇಪನ ಮಾಡಿ, ಬಿಸಿಲಿನಲ್ಲಿ ಒಣಗಿಸಿ ಶೇಖರಣೆ ಮಾಡಬೇಕು. ಕಬಿನಿ ಹಿನ್ನೀರಿನಲ್ಲಿರುವ ‘ಪೀಪಲ್ ಟ್ರೀ’ ಸಂಸ್ಥೆಯ ಭೂಮಿಯಲ್ಲಿ ಮೊಳ ಬದನೆ ತಳಿಯನ್ನು ಸಂರ್ವಧನೆ ಮಾಡಿ, ರೈತರಿಗೆ ವಿತರಿಸಲಾಗುತ್ತದೆ. ಮೊಳ ಬದನೆ ಬೆಳೆಸುವ ಆಸಕ್ತರು ಸಂಸ್ಥೆಯನ್ನು ಸಂರ್ಪಕಿಸಬಹುದು.  9945219836.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT