ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಟು ಗುಳ್ಳ ಉಪಯೋಗ ಬಹಳ

Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಬೆಳೆಯುವ ಬದನೆ `ಮಟ್ಟು ಗುಳ್ಳ' ಎಂದೇ ಪ್ರಸಿದ್ಧಿ. ಬಿಟಿ ಬದನೆ ಜೊತೆ ಅಪ್ಪಟ ದೇಶೀ ತಳಿಯೊಂದು ತನ್ನ ಉಳಿಕೆಗಾಗಿ ಹೋರಾಟ ನಡೆಸಿ ಗೆದ್ದು ಸುದ್ದಿ ಮಾಡಿತು. ಹಲವಾರು ವರ್ಷಗಳಿಂದ ಕಡೆಗಣನೆಗೆ ಒಳಗಾಗಿದ್ದ ತರಕಾರಿಯೊಂದು ಈ ರೀತಿಯಲ್ಲಿ ಪ್ರಸಿದ್ಧಿಗೆ ಬಂದು ಬೇಡಿಕೆ ಹೆಚ್ಚಿಸಿಕೊಂಡಿತು. ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳೂ ಇದರ ಬಗ್ಗೆ ಸಂಶೋಧನೆ ನಡೆಸಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಆಸಕ್ತಿ ವಹಿಸಿದರು. ಅದರ ಪರಿಣಾಮವಾಗಿ ರೈತರು ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಕೃಷಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಸುಮಾರು 30 ವರ್ಷಗಳಿಂದ ಮಟ್ಟು ಗುಳ್ಳ ಬೆಳೆಯುತ್ತಿರುವ ಕೃಷಿಕ ಲಕ್ಷ್ಮಣ ಈ ಹೊಸ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಲಾಭದ ಪ್ರಮಾಣ ಶೇ 40ರಷ್ಟು ಹೆಚ್ಚಿದೆ ಎನ್ನುತ್ತಾರವರು. `ಹಿಂದೆ ನಾವು ಸಾಂಪ್ರದಾಯಿಕ ಪದ್ಧತಿಯಲ್ಲೇ ಗುಳ್ಳ ಬೆಳೆಯುತ್ತಿದ್ದೆವು. ದೂರದೂರಿನಿಂದ ಬೀಜ ಇಲ್ಲವೇ ಸಸಿ ತಂದು ಗದ್ದೆ ಉಳುಮೆ ಮಾಡಿ ಗಿಡ ನೆಡುತ್ತಿದ್ದೆವು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ನಮ್ಮ ಕೆಲಸವನ್ನು ಸರಾಗವಾಗಿಸಿದ್ದಾರೆ. ಕೃಷಿಯಲ್ಲಿ ತಾಂತ್ರಿಕತೆಯನ್ನು ಬಳಸುವ ಮೂಲಕ ಹೆಚ್ಚಿನ ಲಾಭ ಪಡೆಯುವುದನ್ನು ಹೇಳಿಕೊಡುತ್ತಿದ್ದಾರೆ' ಎನ್ನುತ್ತಾರೆ ಅವರು.

ನೋಡಲು ಇದು ಸಾಮಾನ್ಯ ಬದನೆಯಂತೆ ಕಂಡರೂ ರುಚಿ ಜಾಸ್ತಿ. ಕಡಿಮೆ ಬೀಜ ಹೊಂದಿರುವ ಮಟ್ಟು ಗುಳ್ಳದ ಸಿಪ್ಪೆ ಬಲು ತೆಳು. ಮಧುಮೇಹಕ್ಕೆ ದಿವ್ಯೌಷಧ. ನವೆಂಬರ್‌ನಿಂದ ಏಪ್ರಿಲ್ ತಿಂಗಳವರೆಗೆ ಮಾತ್ರ ಮಟ್ಟು ಗುಳ್ಳ ಲಭ್ಯ. ಬೆಳೆಯುವ ಆರಂಭದಲ್ಲಿ ಹಾಗೂ ಮುಗಿಯುವ ವೇಳೆ ಕಿ.ಲೋಗೆ 100-120ರ ಬೆಲೆಯಲ್ಲಿ ಇದು ಮಾರಾಟವಾಗುತ್ತದೆ!

ಏನಿದು ಹೊಸದು?
ಮಲ್ಚಿಂಗ್ ಫಿಲಂ: ಈ ಪದ್ಧತಿಯಲ್ಲಿ ಗದ್ದೆಗೆ ಸಾವಯವ ಗೊಬ್ಬರ ಹಾಕಿ ಉಳುಮೆ ಮಾಡಬೇಕು. ಹತ್ತು ದಿನಗಳ ಬಳಿಕ 5 ಅಡಿಗೊಂದರಂತೆ ಎತ್ತರದ ಮಣ್ಣಿನ ದಿಣ್ಣೆ ರಚಿಸಬೇಕು. ಮೂರು ಅಡಿ ಅಂತರದಲ್ಲಿ ಒಂದು ಸಸಿ ನೆಡಬೇಕು. ಗೊಬ್ಬರ ಹಾಕಿದ ಮಣ್ಣಿನ ಮೇಲೆ ಮಲ್ಚಿಂಗ್ ಫಿಲಂ ಹೊದೆಸಬೇಕು. 30 ಮೈಕ್ರಾನ್‌ನ ಫಿಲಂ ಆರು ತಿಂಗಳು ಬಿಸಿಲಿಗೆ ಹಾಳಾಗದೆ ಇರುವುದರಿಂದ ಅದನ್ನೇ ಬಳಸಬೇಕು.

ಈ ಪದ್ಧತಿ ಅನುಸರಿಸಿದರೆ ಪದೇ ಪದೇ ಗೊಬ್ಬರ ನೀಡಬೇಕಾಗಿಲ್ಲ. ಪ್ಲಾಸ್ಟಿಕ್ ಹೊದಿಕೆಯಡಿ ಇರುವ ಗೊಬ್ಬರವೇ ಒಂದು ಬೆಳೆಗೆ ಸಾಕು. ಕಳೆ ಕೀಳುವ ಕೆಲಸ ಇಲ್ಲವಾದ್ದರಿಂದ ಕೂಲಿಯಾಳುಗಳ ಬಳಕೆಯೂ ಕಡಿಮೆ. ರಾಸಾಯನಿಕ ಗೊಬ್ಬರ ಬಳಸುವ ಅಗತ್ಯವೇ ಇಲ್ಲ. ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಗಿಡದ ಬುಡಕ್ಕೆ ನೀರು ಬಿಡುವ ಮೂಲಕ ನೀರು ಪೋಲಾಗುವುದನ್ನೂ ತಡೆಯಬಹುದು. ನೀರು ಆವಿಯಾಗುವುದಿಲ್ಲವಾದ್ದರಿಂದ ಹೆಚ್ಚು ನೀರು ಹಾಯಿಸುವ ಅಗತ್ಯವೂ ಇಲ್ಲ. ಕ್ರಿಮಿಕೀಟಗಳ ಉಪಟಳ, ರೋಗಭಾದೆಯೂ ಇಲ್ಲ.

ಕರಾವಳಿಯಲ್ಲಿ ಮಲ್ಚಿಂಗ್ ಫಿಲಂ ಬಳಕೆ ಇದೇ ಮೊದಲು. ಪ್ರಯೋಗದ ಹಂತದಲ್ಲೇ ಇದು ಗೆದ್ದಿದೆ. ನವೆಂಬರ್‌ನಿಂದ ಈವರೆಗೆ ಒಂದೇ ಗಾತ್ರದ ಗುಳ್ಳ ಬೆಳೆಯುತ್ತಿದೆ. ನಾವು ಹಿಂದೆ ಮಾಡುತ್ತಿದ್ದ ವಿಧಾನದಲ್ಲಿ ಫೆಬ್ರುವರಿ ವೇಳೆಗೆ ಗಿಡ ಒಣಗಿ ಉತ್ಪಾದನೆ ಕುಂಠಿತವಾಗುತ್ತಿತ್ತು. ಆದರೆ ಈ ಬಾರಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಬಂದಿದೆ ಎಂದು ಖುಷಿ ಹಂಚಿಕೊಳ್ಳುತ್ತಾರೆ ಲಕ್ಷ್ಮಣ್. ಇವರ ಮಾರ್ಗದರ್ಶನದಡಿ ಗ್ರಾಮದ ಮೂವತ್ತು ಮಂದಿ ರೈತರು ಈ ಪದ್ಧತಿ ಅಳವಡಿಸಿ ಲಾಭ ಕಂಡುಕೊಂಡಿದ್ದಾರೆ. ಗುಳ್ಳದೊಂದಿಗೆ ಅಂತರ್ ಬೆಳೆಯಾಗಿ ಕೆಂಪು ಹರಿವೆ ಬೆಳೆಸುತ್ತಿರುವ ಇವರು, ಮಲ್ಲಿಗೆ, ಹಸಿಮೆಣಸು, ಕಲ್ಲಂಗಡಿ ಮೊದಲಾದ ಕೃಷಿ ಬೆಳೆಗಳಿಗೂ ಮಲ್ಚಿಂಗ್ ಫಿಲಂ ವಿಧಾನ ಸೂಕ್ತ ಎಂಬುದನ್ನು ಕಂಡುಕೊಂಡಿದ್ದಾರೆ.

ಪ್ರೋಟ್ರೇಸ್ ಪದ್ಧತಿ: ಗುಳ್ಳದ ಬೀಜ ಬಿತ್ತಿ ಗಿಡ ಮಾಡಲು ಮಟ್ಟು ಗ್ರಾಮದ ರೈತರು ಬಳಸುತ್ತಿರುವ ಹೊಸ ವಿಧಾನವಿದು. ಸಾಂಪ್ರದಾಯಿಕವಾಗಿ, ಅಂದರೆ ಗದ್ದೆಯಲ್ಲಿ ಬಿತ್ತನೆ ಮಾಡಿ ಮತ್ತೆ ಸಸಿಯನ್ನು ಬೇರೆಡೆ ನೆಡುವ ಪದ್ಧತಿ ಇತ್ತು. ಪ್ರೋಟ್ರೇಸ್ ಪದ್ಧತಿಯಲ್ಲಿ ಈ ರೀತಿಯ ವರ್ಗಾವಣೆ ಇಲ್ಲ. ಗುಂಡಿಗಳಿರುವ ಪ್ಲಾಸ್ಟಿಕ್ ಟ್ರೇಗೆ ತೆಂಗಿನ ನಾರಿನ ಪುಡಿ ಹಾಕಲಾಗುತ್ತದೆ. ನಂತರ ಪ್ರತಿ ಗುಂಡಿಗೊಂದರಂತೆ ಬೀಜ ಬಿತ್ತನೆ ಮಾಡಲಾಗುತ್ತದೆ. ಐದು ದಿನ ಸೂರ್ಯನ ಬೆಳಕು ಬೀಳದಂತೆ ಮೇಲು ಹೊದಿಕೆ ಹಾಕಿ ಸಂರಕ್ಷಿಸುತ್ತಾರೆ. ಮೊಳಕೆ ಬಂದ ಮೇಲೆ ಮೂರು ದಿನಕ್ಕೊಮ್ಮೆ ನೀರು ಹಾಯಿಸಿದರೆ 20-25ದಿನಗಳಲ್ಲಿ ಆರೋಗ್ಯವಂತ ಸಸಿಗಳು ಬೆಳೆದು ನಿಂತು ನೆಡಲು ಸೂಕ್ತವಾಗಿರುತ್ತವೆ.

ಈ ಪದ್ಧತಿಯಲ್ಲಿ 20 ಸಾವಿರ ಗಿಡ ಬೆಳೆದಿದ್ದಾರೆ ಲಕ್ಷ್ಮಣ. ಈ ಸಸಿಗಳು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದವುಗಳಿಗಿಂತ ಹೆಚ್ಚು ಆರೋಗ್ಯವಂತವಾಗಿರುತ್ತವೆ ಹಾಗೂ ಒಂದು ಗಿಡದಲ್ಲಿ ಆರರಿಂದ ಏಳು ಕೆಜಿ ಗುಳ್ಳ ಬೆಳೆಯುತ್ತದೆ. ಇದಕ್ಕೆ ಕೃಷಿ ಇಲಾಖೆ ಉಚಿತವಾಗಿ ಟ್ರೇ ಹಾಗೂ ನೆಟ್‌ಗಳನ್ನು ಒದಗಿಸುತ್ತದೆ. ಹವಾಮಾನ ವೈಪರೀತ್ಯದ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿರುವ ಈ ಕಾಲದಲ್ಲಿ ಸರಳ ವಿಧಾನಗಳನ್ನು ಬಳಸಿ ಮತ್ತೆ ಕೃಷಿಯತ್ತ ರೈತರನ್ನು ಕರೆತರುವ ಪ್ರಯತ್ನವಿದು. ಈ ಹೊಸ ಆವಿಷ್ಕಾರ ಮಾಡಿರುವ ಲಕ್ಷ್ಮಣ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ `ನಮ್ಮಕೂಟ ಪ್ರಗತಿಬಂಧು'ವಿನ ಸದಸ್ಯರು. ಸಂಪರ್ಕಕ್ಕೆ: 9964069001.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT