ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು: ಇರಲಿ ಜೋಪಾನ

Last Updated 14 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ತ್ತರ ಕರ್ನಾಟಕದ ಹಲವು ರೈತರು ಕಳೆದ ಬೇಸಿಗೆಯಲ್ಲಿ ಮೇವಿಲ್ಲದೆ ಪರದಾಡಿ ದನ ಕರುಗಳನ್ನು ಅನಿವಾರ್ಯವಾಗಿ ಕಡಿಮೆ ಬೆಲೆಗೆ ಮಾರಿದ್ದಾರೆ. ಆರ್ಥಿಕ ಸಾಮರ್ಥ್ಯವಿದ್ದ ರೈತರು ನೀರಾವರಿ ಪ್ರದೇಶದಿಂದ ಒಂದು ಟ್ರಾಲಿ ಮೇವಿಗೆ ೧೩ ರಿಂದ ೧೫ ಸಾವಿರ ರೂಪಾಯಿ ಕೊಟ್ಟು ಒಣ ಮೇವು ಖರೀದಿಸಿ ಜಾನುವಾರುಗಳನ್ನು ಜೋಪಾನ ಮಾಡಿದರೆ, ಬಡ ರೈತರಿಗೆ ಇದು ಸಾಧ್ಯವಾಗದೆ ಬಡಕಲು ದೇಹದ ದನ ಕರುಗಳನ್ನು ಅರ್ಧ ಬೆಲೆಗೆ ಮಾರಿದ್ದಾರೆ. 

ಇದಕ್ಕೆಲ್ಲ ಕಾರಣ ಏನು ಗೊತ್ತೆ? ಮೇವನ್ನು ಸರಿಯಾಗಿ ಸಂಗ್ರಹಣೆ ಮಾಡಿಕೊಳ್ಳದೇ ಇರುವುದು. ಆದರೆ ಈ ಬಾರಿ ಹಾಗೆ ಮಾಡಬೇಡಿ. ಈ ವರ್ಷ ರಾಜ್ಯದ ಹಲವೆಡೆ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಹೊಲ ಗದ್ದೆಗಳು ಹಸಿರು ಮೇವಿನಿಂದ ಕಂಗೊಳಿಸುತ್ತಿವೆ. ಇಂಥ ಸಮಯದಲ್ಲಿ ರೈತರು ಜಾಣತನದಿಂದ ಮೇವನ್ನು ಬೇಸಿಗೆಗಾಗಿ ಸಂಸ್ಕರಣೆ ಮಾಡಿ ಸಂರಕ್ಷಿಸಿಕೊಳ್ಳಬೇಕು.

ಮೇವನ್ನು ಸಂಸ್ಕರಿಸಿ­ಕೊಳ್ಳುವುದು ಹೇಗೆಂಬ ಚಿಂತೆ ಬೇಡ. ಇಲ್ಲಿ ನಿಮಗಾಗಿ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ರಸಮೇವು ತಯಾರಿಸುವ ಬಗೆ ದಪ್ಪ ದಂಟಿನ ಜೋಳ ಮತ್ತು ಗೋವಿನ ಜೋಳದಿಂದ ರಸಮೇವು ತಯಾರಿಸಬಹುದು. ರಸಮೇವಿನಲ್ಲಿ ಲ್ಯಾಕ್ಟಿಕ್‌ ಆಮ್ಲ ಉತ್ಪತ್ತಿಯಾಗಿ ಬಹು ದಿನಗಳವರೆಗೆ ಮೇವು ಕೆಡದೆ ಸುರಕ್ಷಿತ­ವಾಗಿ­ರು­ತ್ತದೆ. ರೈತರು ತಮ್ಮ ಅವಶ್ಯಕತೆಗೆ ಅನುಸಾರ­ವಾಗಿ ಮಳೆ ನೀರು ಒಳಗೆ ನುಗ್ಗದ ಜಾಗದಲ್ಲಿ ಗುಂಡಿ ತೋಡಿಕೊಂಡು ರಸಮೇವು ತಯಾರಿಸಬಹುದು.

ಗುಂಡಿಗಳು ದುಂಡಗೆ ಅಥವಾ ಚೌಕಾಕಾರ­ವಾಗಿ­ರಬೇಕು. ಗುಂಡಿಯ ಅಳತೆಯನ್ನು ಮೇವಿನ ಪ್ರಮಾಣ ಮತ್ತು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ನಿರ್ಧರಿಸಬೇಕು. ಸಾಮಾನ್ಯವಾಗಿ ೪ ರಿಂದ ೧೦ ಅಡಿ ಆಳ ಇರಬೇಕು ಮತ್ತು ಒಂದು ಘನ ಅಡಿ ಜಾಗದಲ್ಲಿ ಅಂದಾಜು ೨೦ ಕಿ.ಗ್ರಾಂ ಕತ್ತರಿಸಿದ ಮೇವನ್ನು ಶೇಖರಿಸಬಹುದು. ಗುಂಡಿಯ ಒಳಭಾಗವನ್ನು ಸಿಮೆಂಟಿನಿಂದ ಪ್ಲಾಸ್ಟರ್ ಮಾಡಬೇಕು ಇಲ್ಲವಾದರೆ ದಪ್ಪ ಪ್ಲಾಸ್ಟಿಕ್‌ ಹಾಳೆ ಕೂಡ ಬಳಸಬಹುದು.

ರಸಮೇವು ತಯಾರಿಸುವ ಹಂತ
ಮೇವಿನಲ್ಲಿ ಶೇ.೭೦ ರಷ್ಟು ತೇವಾಂಶವಿರುವಾಗ ಹಾಗೂ ಗೋವಿನ ಜೋಳದ ತೆನೆಯಲ್ಲಿ ಹಾಲ್ಗಾಳುಗಳಾದಾಗ ಮೇವನ್ನು ಕಟಾವು ಮಾಡಬೇಕು. ಈ ಮೇವನ್ನು ಒಂದರಿಂದ ಒಂದೂವರೆ ಅಂಗುಲ ಉದ್ದವಿರುವಂತೆ ಕತ್ತರಿಸಬೇಕು. ಮೇವನ್ನು ನೇರವಾಗಿ ಗುಂಡಿಯಲ್ಲಿ ಬೀಳುವಂತೆಯೇ ಕತ್ತರಿಸುವುದು ಉತ್ತಮ.

ನಂತರ ಕತ್ತರಿಸಿದ ಮೇವನ್ನು ಸಮನಾಗಿ ಹರಡಬೇಕು. ಇದಕ್ಕೆ ಮೊದಲು ಗುಂಡಿಯಲ್ಲಿ ತೆಳುವಾಗಿ ಉಪ್ಪನ್ನು ಸಿಂಪಡಿಸುವುದು ಉತ್ತಮ. ಕತ್ತರಿಸಿದ ಮೇವಿನ ಮೇಲೆ ಶೇ.೧ರ ಪ್ರಮಾಣದಲ್ಲಿ ಮೇವು ಕತ್ತರಿಸುತ್ತಿದ್ದಂತೆ ಪ್ರತಿ ಪದರಗಳ ಮೇಲೂ ಸಿಂಪಡಿಸಬೇಕು. ಕತ್ತರಿಸಿ ತುಂಬಿದ ಮೇವನ್ನು ಚೆನ್ನಾಗಿ ತುಳಿದು ಮೇವಿನ ಮಧ್ಯದಲ್ಲಿ ಗಾಳಿ ಉಳಿಯದಂತೆ ನೋಡಿಕೊಳ್ಳಬೇಕು.

ಗುಂಡಿಯಲ್ಲಿ ಸುಮಾರು ೩ ಅಡಿ ಎತ್ತರದವರೆಗೂ ಮೇವನ್ನು ತುಂಬಿ ನಂತರ ಮೇಲ್ಭಾಗವನ್ನು ಒಣ ಮೇವಿನಿಂದ ಅಥವಾ ಕತ್ತರಿಸದ ಉದ್ದ ಮೇವಿನಿಂದ ಮುಚ್ಚಬೇಕು. ನಂತರ ಪ್ಲಾಸ್ಟಿಕ್ ಹಾಳೆಯಿಂದ ಸಂಪೂರ್ಣವಾಗಿ ಮುಚ್ಚಿ ಮೇಲೆ ಭಾರಕ್ಕಾಗಿ ದಿಂಡುಕಲ್ಲುಗಳನ್ನು ಹೇರಬೇಕು. ಮುಚ್ಚಿದ ಗುಂಡಿಯಲ್ಲಿ ಒಂದೆರಡು ವಾರದಲ್ಲಿ ಮೇವು ಕುಸಿದು ಅಲ್ಲಲ್ಲಿ ಬಿರುಕುಗಳು ಬರುತ್ತವೆ.

ಈ ರೀತಿಯ ಬಿರುಕುಗಳನ್ನು ಮಣ್ಣಿನಿಂದ ಮುಚ್ಚಬೇಕು. ಈ ರೀತಿ ಮುಚ್ಚಿದ ಮೇವಿನಲ್ಲಿ ಸೂಕ್ಷ್ಮಾಣು ಜೀವಿಗಳು ಮೇವಿನಲ್ಲಿರುವ ಪಿಷ್ಟ ಪದಾರ್ಥವನ್ನು ಉಪಯೋಗಿಸಿಕೊಂಡು ಲ್ಯಾಕ್ಟಿಕ್ ಆಮ್ಲ ಉತ್ಪತ್ತಿ ಮಾಡುತ್ತವೆ. ಲ್ಯಾಕ್ಟಿಕ್ ಆಮ್ಲವು ಮೇವನ್ನು ಕೆಡದಂತೆ ಕಾಪಾಡುತ್ತದೆ. ಗಾಳಿ ಆಡಲು ಬಿಟ್ಟರೆ ಮೇವು ಕೆಡುವುದರೊಂದಿಗೆ ಅದರ ಗುಣಮಟ್ಟ ಕಳಪೆಯಾಗುವುದು.

ಸಾಮಾನ್ಯವಾಗಿ ರಸಮೇವನ್ನು ತಯಾರಿಸಿದ ಎರಡು ತಿಂಗಳ ನಂತರ ಒಂದು ಕಡೆಯಿಂದ ಹೊರ ತೆಗೆದು ಜಾನುವಾರುಗಳಿಗೆ ತಿನ್ನಿಸಬಹುದು. ಪದರ ಪದರವಾಗಿ ಒಂದು ಕಡೆಯಿಂದ ಮೇಲಿಂದ ಕೆಳಗಿನವರೆಗೂ ತೆಗೆಯಬೇಕೇ ಹೊರತು ಎಲ್ಲವನ್ನೂ ಒಮ್ಮೆಗೆ ತೆಗೆದು ಗಾಳಿಗೆ ಇಡಬಾರದು.

ಉತ್ತಮ ರಸಮೇವು ಬೇಲದ ಹಣ್ಣಿನ ವಾಸನೆ ಮತ್ತು ಚಿನ್ನದ ಹಳದಿ ಬಣ್ಣದಿಂದ ಕೂಡಿರುತ್ತದೆ. ರಸಮೇವಿಗಾಗಿ ಉಪಯೋಗಿಸುವ ಹಸಿರು ಮೇವು ಹೆಚ್ಚು ಬಾಡಿದ್ದರೆ ಕಾಕಂಬಿಯನ್ನು ನೀರಿನಲ್ಲಿ ಕದಡಿ ಶೇ.೫ ರಿಂದ ೧೦ರ ಪ್ರಮಾಣದಲ್ಲಿ ಉಪಯೋಗಿಸ­ಬಹುದು. ಶೇ. ೧ರ ಪ್ರಮಾಣದ ಉಪ್ಪಿನ ಉಪಯೋಗದಿಂದ ಲ್ಯಾಕ್ಟಿಕ್ ಆಮ್ಲದ ಉತ್ಪತ್ತಿ ಚೆನ್ನಾಗಿ ಆಗಿ ಉತ್ತಮ ಗುಣಮಟ್ಟದ ರಸಮೇವನ್ನು ತಯಾರಿಸಬಹುದು.

ಹುಲ್ಲು ತಯಾರಿಸುವ ಬಗೆ
ತೆಳು ಕಾಂಡ ಮತ್ತು ಹೆಚ್ಚು ಎಲೆ, ಗರಿಗಳಿಂದ ಕೂಡಿರುವ ರೋಡ್ಸ್ ಹುಲ್ಲು, ಅಂಜನ್ ಹುಲ್ಲು ಮತ್ತು ಕುದುರೆ ಮೆಂತೆ ಮೇವುಗಳನ್ನು ಒಣಗಿಸಿಟ್ಟುಕೊಳ್ಳಬೇಕು. ಏಕದಳ ಬೆಳೆಗಳನ್ನು ತೆನೆ ಬಿಡುತ್ತಿದ್ದಂತೆ ಮತ್ತು ದ್ವಿದಳ ಬೆಳೆಗಳು ಹೂ ಕಾಣಿಸಿಕೊಂಡಾಗ ಕತ್ತರಿಸಿ ಬಯಲಿನಲ್ಲಿ ಶೇಕಡಾ ೧೨ ರಷ್ಟು ತೇವಾಂಶ ಬರುವವರೆಗೆ ಒಣಗಿಸಬೇಕು.

ರೈತರು ಒಂದು ಹಿಡಿಯಷ್ಟು ಮೇವನ್ನು ತೆಗೆದುಕೊಂಡು ಸುರುಳಿ ಮಾಡಿ ಹಿಂಡಿ ತೇವಾಂಶ ಪರಿಶೀಲಿಸಬಹುದು. ಈ ರೀತಿ ಒಣಗಿಸಿದ ಹುಲ್ಲನ್ನು ನೀರು, ಮಳೆ ಬಿದ್ದು ನೆನೆಯದಂತೆ ಶೇಖರಿಸಿ­ಕೊಳ್ಳ­ಬೇಕು. ಹಸಿರು ಮೇವನ್ನು ಈ ರೀತಿ ಒಣಗಿಸಿಡು­ವು­ದ­ರಿಂದ ಅದರ ಪೌಷ್ಟಿಕಾಂಶ­ಗಳನ್ನು ಉಳಿಸಿ­ಕೊಂಡು ಬೇಸಿಗೆಯಲ್ಲಿ ದನ ಕರುಗಳಿಗೆ ತಿನ್ನಿಸಬಹುದು.

ಮೇವಿನ ಸಂಸ್ಕರಣೆ
ಜೋಳ, ಗೋವಿನ ಜೋಳ, ಭತ್ತದ ಹುಲ್ಲು ಮತ್ತು ರಾಗಿ ಹುಲ್ಲಿನಿಂದ ತಯಾರಿಸುತ್ತಾರೆ. ಇದರಲ್ಲಿ ನಾರಿನ ಅಂಶ ಜಾಸ್ತಿ ಮತ್ತು ಪೌಷ್ಟಿಕಾಂಶಗಳು ಕಡಿಮೆ ಇದ್ದು, ಜಾನುವಾರುಗಳಲ್ಲಿ ಹೆಚ್ಚಿನ ಪ್ರಮಾಣವು ಜೀರ್ಣವಾಗದೆ ಹಾಗೆಯೇ ಉಳಿಯುವುದು. ಆದ್ದರಿಂದ ಇವುಗಳನ್ನು ಹೆಚ್ಚು ಉಪಯುಕ್ತವನ್ನಾಗಿ ಮಾಡಲು ಸಂಸ್ಕರಿಸಿ ಉಪಯೋಗಿಸುವುದು ಸೂಕ್ತ. ಇವುಗಳಲ್ಲಿ ಯೂರಿಯಾ ಸಿಂಪರಣೆ ಮಾಡುವುದು ಹೆಚ್ಚು ಫಲಕಾರಿಯಾಗಿ ಕಂಡುಬರುತ್ತದೆ.

ಒಣಗಿದ ಹುಲ್ಲನ್ನು ಗಟ್ಟಿಯಾದ ನೆಲದ ಮೇಲೆ ಅಥವಾ ಕಾಂಕ್ರಿಟ್ ನೆಲದ ಮೇಲೆ ತೆಳ್ಳಗೆ ಹರಡಿ ನಂತರ ಶೇ.೪ರ ಪ್ರಮಾಣದಲ್ಲಿ ಯೂರಿಯಾ ದ್ರಾವಣವನ್ನು ಮೇವಿನ ಮೇಲೆ ಸಿಂಪಡಿಸಬೇಕು. ಈ ರೀತಿ ಯೂರಿಯಾ ಸಿಂಪಡಿಸಿದ ಹುಲ್ಲನ್ನು ಸಣ್ಣ ಸಣ್ಣ ಗುಂಡಿಗಳಲ್ಲಿ ಹಾಕಿ ಅದುಮಿ ಮೇಲೆ ಪ್ಲಾಸ್ಟಿಕ್ ಹಾಳೆ ಮುಚ್ಚಿ ೧೫ ದಿನಗಳವರೆಗೆ ಬಿಡಬೇಕು. ಯೂರಿಯಾ ಅಮೋನಿಯಾ ಆಗಿ ಪರಿವರ್ತನೆಗೊಂಡು ಮೇವಿನ ಪೌಷ್ಟಿಕಾಂಶಗಳನ್ನು ಲಿಗ್ನಿನ್ ಹೊದಿಕೆಯಿಂದ ಬಿಡುಗಡೆ ಮಾಡಿ ಮೇವಿನ ಗುಣಮಟ್ಟವನ್ನು ಉತ್ತಮಪಡಿಸುತ್ತವೆ.

ಪ್ರತಿ ದಿನಕ್ಕೆ ಬೇಕಾದ ಹುಲ್ಲನ್ನು ಬೇರೆ ಬೇರೆ ಪ್ಲಾಸ್ಟಿಕ್ ಅಥವಾ ಗೋಣಿ ಚೀಲದಲ್ಲಿ ಹಾಕಿ ಶೇಖರಿಸಿಟ್ಟು ಉಪಯೋಗಿಸಬಹುದು. ಈ ರೀತಿ ಸಂಸ್ಕರಿಸಿದ ಹುಲ್ಲನ್ನು ಕೊಡುವುದರಿಂದ ದನಗಳು ಹೆಚ್ಚು ಒಣಮೇವನ್ನು ತಿನ್ನುತ್ತವೆ ಮತ್ತು ನಾರಿನ ಅಂಶ ಬೇಗನೆ ಜೀರ್ಣವಾಗಿ ಶಕ್ತಿ ಉಪಯೋಗವು ಸುಧಾರಿಸುವುದು. ಮೀತಿ ಮೀರಿದ ರಸಮೇವಿನ ಅಥವಾ ಯೂರಿಯಾ ಬಳಸಬಾರದು. ಇಂತಹ ಸಂದರ್ಭದಲ್ಲಿ ಪಶುವೈದ್ಯರ ಸಲಹೆ ಪಡೆಯುವುದು ಸೂಕ್ತ.
-ಡಾ. ರಾಜು ಬ. ಮೇತ್ರಿ. ಪಶು ವೈದ್ಯಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT