ಛೇ,ಛೇ ದೇವರಿಗೆ ತಲೆಬಾಗುವುದೇ ಎಂದಿಗೂ ಸಾಧ್ಯವಿಲ್ಲ. ತಲೆಬಾಗುವುದಿಲ್ಲ ಎಂದು ತಲೆ ಎತ್ತಿ ನಿಂತ ಸಾಗುವಾನಿ ಮರವನ್ನು ಕತ್ತರಿಸಿ ತಂದು ಸುಂದರ ಕೆತ್ತನೆಗಳೊಂದಿಗೆ ಆರೂವರೆ ಅಡಿ ಎತ್ತರದ ಬಾಗಿಲು ಚೌಕಟ್ಟನ್ನು ಮಾಡಿಸಿ, ಎಲ್ಲ ರೀತಿಯ ರಕ್ಷಣೆ ಹಾಗೂ ಅನುಕೂಲಗಳಿರುವ ಮನೆಯನ್ನು ಕಟ್ಟಿಸುವ ನಮ್ಮ ಸಾಮರ್ಥ್ಯವೇನು ಕಡಿಮೆಯೇ?

ತಗ್ಗಿ,ಬಗ್ಗಿ ನಡೆಯಬೇಕಾಗಿದ್ದ ಹಳೆಯ ಕತ್ತಲೆ ಮನೆಗಳನ್ನು ಕಳೆದು ಬೆಳಕಿನೆಡೆಗೆ ನಡೆದ ನಮ್ಮ ಯೋಗ್ಯತೆಯೇನು ಕಳಪೆಯೇ? ತಾನು ಇದ್ದಲ್ಲೇ ಇದ್ದು ಬೆಂಕಿ ಉಗುಳುವುದು ಬಿಟ್ಟರೆ ಆ ಸೂರ್ಯನಿಗೇನು ಗೊತ್ತು ಎಲ್ಲ ನಕ್ಷತ್ರಗಳ ಹಾಗೆ ಅವನೂ ಒಂದು ನಕ್ಷತ್ರ ಎಂದು ವೈಜ್ಞಾನಿಕವಾಗಿ ಒಪ್ಪಿಕೊಳ್ಳಬಹುದೇ ಹೊರತು ದೇವರೆಂದು ಪೂಜಿಸುವ ಮೌಢ್ಯ ಎಂದೂ ಸಾಧ್ಯವಿಲ್ಲ. ಮಾತಾ,ಪಿತೃಗಳಿಂದ ಮೊದಲ್ಗೊಂಡು ಗುರು,ಹಿರಿಯರವರೆಗೆ, ಕಂಡ ಕಂಡ ಕಲ್ಲುಗಳಿಂದ ಹಿಡಿದು ದಂಡಪಿಂಡಗಳಿಗೆ ಪೂಜಿಸಿ ಕಾಲಹರಣ ಮಾಡುವ ಕಾಲ ಇದಲ್ಲ. ಬಂಗಲೆಯಿಂದ ಬಂಗಲೆಗೆ ಭವಿಷ್ಯವನ್ನು ವರ್ಗಾಯಿಸುವ ತುರ್ತಿನೊಳಗೆ ಸೂರ್ಯೋಪಾಸನೆಗೆ ಸಮಯ ಇಲ್ಲ ಎಂದು ನಾವು ನೀವು ತೀರ್ಮಾನಿಸಿದರೂ ನಡೆದೀತು. ಯಾಕೆಂದರೆ ಬೆಳಕು ನೀಡುವುದು ಅವನ ಧರ್ಮ. ನಾವು ಹಳಿದರೂ, ಉಗುಳಿದರೂ ಅದು ಅವನಿಗೇನೂ ತಲುಪುವುದಿಲ್ಲ. ಅವನು ತನ್ನ ಕರ್ತವ್ಯವನ್ನು ಬಿಡುವುದಿಲ್ಲ. ಯಾರ ಮೇಲೂ ಕೋಪಿಸುವುದಿಲ್ಲ.

‘ಹಾಗಾಗಿ ಆತ ದೇವರು’ ಅವರಿವರ ಮಾತಿಗೆ, ಮರ್ಜಿಗೆ ಕಾಯದೆ, ತಮ್ಮ ಕರ್ತವ್ಯವನ್ನು ಪ್ರೀತಿಯಿಂದ, ಪ್ರಾಮಾಣಿಕತೆಯಿಂದ ಮಾಡುವವರೆಲ್ಲರೂ ನಮಗೆ ಪೂಜ್ಯರು ಎಂಬ ಋಷಿ ಚಿಂತನೆಯನ್ನು ನಾವು ಒಪ್ಪದಿರಬಹುದು. ಆದರೆ ನಾವು ಕಟ್ಟಿಸಿದ ಮನೆಯ ದಾರಂದದಿಂದ ಮೊದಲ್ಗೊಂಡು ಒಂದೊಂದು ವಸ್ತುವೂ ಸೌರಶಕ್ತಿಯಿಂದಲೇ ಆದುದೆಂಬುದನ್ನು ಒಪ್ಪಲೇಬೇಕಾಗುವುದು. ಅದು ಹೇಗಾಯಿತೆಂದು ತಿಳಿಯದಿದ್ದರೆ ನಮ್ಮ ಅಕ್ಷರ ಜ್ಞಾನ ವ್ಯರ್ಥ. ಆ ಸಾಗುವಾನಿ ಮರ (ಅಥವಾ ಯಾವುದೇ ಮರ) ಸುಖಾ ಸುಮ್ಮನೆ ಬೆಳೆಯುವುದಿಲ್ಲ. ಸೂರ್ಯ ನೆತ್ತರಕ್ಕೆ ತನ್ನ ಗಿಲ್ಲುಗಳನ್ನು ಚಾಚುವುದಿಲ್ಲ. ಈ ಭೂಮಿಯಲ್ಲಿ ಎಲ್ಲವೂ ಇದೆ. ಮಣ್ಣಿದೆ, ನೀರಿದೆ, ಗಾಳಿ ಇದೆ ಅವಕಾಶವೂ ಇದೆ. ನಾವೆಲ್ಲ ಇದ್ದೇವೆ. ಆದರೆ ಇರುವ ಎಲ್ಲರಿಗೂ ಚೈತನ್ಯ ಬಂದಿರುವುದು ಸೂರ್ಯನಿಂದ. ಸಾಗುವಾನಿಯಂತಹ ಹಸಿರುಳ್ಳ ಸಸ್ಯಗಳು ಸೂರ್ಯ ಶಕ್ತಿಯನ್ನು ಸಂಸ್ಕರಿಸಿ ನಮಗೆಲ್ಲ ದಯಪಾಲಿಸಿರುವುದರಿಂದ.

ನಾವು, ನೀವು ಮುಟ್ಟಲಾಗದ, ಹಿಡಿಯಲಾಗದ ಸೂರ್ಯ ಕಿರಣಗಳನ್ನು ಮರಗಿಡಗಳು ಹಿಡಿಯಬಲ್ಲವು. ಹೀರಬಲ್ಲವು, ಮಣ್ಣು, ನೀರು, ಗಾಳಿಗಳ ಜೊತೆಗೆ ರುಬ್ಬಬಲ್ಲವು. ಈ ಪ್ರಕ್ರಿಯೆಗೆ ‘ದ್ಯುತಿ ಸಂಶ್ಲೇಷಣೆ’ ಎಂದು ಹೆಸರು. ಪರಿಣಾಮವಾಗಿ ಒಂದು ಸಣ್ಣ ಬೀಜ ಹೆಮ್ಮರವಾಗಿ ಬೆಳೆಯುವುದು. ದಿನ ದಿನವೂ ಹೊಸ ಚಿಗುರಿನೊಂದಿಗೆ ಬೆಳೆಯುವುದು. ತನ್ನ ಗುಣ ಧರ್ಮಕ್ಕೆ ಅನುಗುಣವಾಗಿ ಹೂವನ್ನೋ, ಕಾಯನ್ನೋ ಹಣ್ಣನ್ನೋ ಕೊಡುವುದು. ನಮ್ಮಿಂದ ಮಾಡಲಾಗದ ಕೆಲಸವನ್ನು ಪ್ರತಿಯೊಂದು ಗಿಡಗಳೂ ಮಾಡುತ್ತವೆ.

ನಾವು ನಿಲ್ಲಲಾಗದ ಬಿಸಿಲಿನಲ್ಲಿ ಸದಾ ನಿಲ್ಲುತ್ತವೆ. ನಾವು ಉಣ್ಣಲಾಗದ ಬಿಸಿಲನ್ನು ಉಂಡು ನಮಗೆ ನೆರಳು, ತಂಪು ಉಣ ಬಡಿಸುತ್ತವೆ. ವಸ್ತುವಲ್ಲದ ಬೆಳಕನ್ನು ವಸ್ತುವಾಗಿ ಮಾರ್ಪಡಿಸಿ ನಮ್ಮ ಕೈಗೆ ನೀಡುತ್ತವೆ. ನಮ್ಮ ಕೈಕಾಲು ಹಾಗೂ ತಲೆಗಳೆಲ್ಲ ಕೆಲಸ ಮಾಡುವುದು ಆ ಗಿಡ ಮರಗಳೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವುದರಿಂದಲೇ. ಸೂರ್ಯನ ನಿಷ್ಠೆ ಹಾಗೂ ಪ್ರಾಮಾಣಿಕತೆಗಳನ್ನು ಅವು ಕೂಡ ಕೈಂಕರ್ಯವಾಗಿ ಸ್ವೀಕರಿಸಿರುವುದರಿಂದಲೇ.

ಹತ್ತಿರದಲ್ಲೇ ಇದ್ದು ಎತ್ತರವಾಗಿ ಬೆಳೆದು ಬಿಸಿಲ ಬೇಗೆಯಿಂದ ನಮ್ಮ ತಲೆ ಕಾಯುವ, ಹೊತ್ತು ಹೊತ್ತಿಗೆ ತುತ್ತನ್ನು ಇತ್ತು ನಮ್ಮ ಕೈ ಕಾಲುಗಳಿಗೆ ಕಸುವು ತರುವ, ಹೊತ್ತು ಮುಳುಗಿದ ಹೊತ್ತು ತಾ ಹೊತ್ತಿ ಬೆಳಕೀವ, ನಾವೇನು ಬಯಸುತ್ತೇವೆಯೋ ಅವೆಲ್ಲವನ್ನೂ ಹೊತ್ತು ಗೊತ್ತುಗಳಿಲ್ಲದೆ ನೀಡುವ, ದ್ಯುತಿ ಸಂಶ್ಲೇಷಣೆ ಎಂಬ ಅಪೂರ್ವ ಅಮೂಲ್ಯ ತಪವನಾಚರಿಸುವ, ಸಸ್ಯಗಳನ್ನು ಪೂಜಿಸದಿದ್ದರೆ, ಪೋಷಿಸದಿದ್ದರೆ, ಅರ್ಥೈಸದಿದ್ದರೆ ನಮ್ಮ ಜ್ಞಾನ,ವಿಜ್ಞಾನಗಳಿಗೆ ಇಲ್ಲ ಅರ್ಥ. ಶಕ್ತಿ ಸಾಮರ್ಥ್ಯಗಳೆಲ್ಲ ವ್ಯರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.