ಹದ ಬೆದಿಯಲಾರಂಭ
ಕದನದಲಿ ಕೂರಂಬು
ನದಿಯ ಹಾಯುವಲಿ ಹರಗೋಲ ಮರೆದಾತ
ವಿಧಿಯ ಬೈದೇನು ಸರ್ವಜ್ಞ
ಇನ್ನೇನು ಮುಂಗಾರು ಆರಂಭವಾಗಲಿದೆ. ಈ ಸಮಯಲ್ಲಿ ಹದ ಬೆದೆ ತಿಳಿಯುವುದು ಮತ್ತು ಅನುಸರಿಸುವುದು ರೈತರಿಗೆ ತುಂಬಾ ಮುಖ್ಯ. ಹದ ನೋಡಿ ಹರಗುವುದು ಒಕ್ಕಲುತನದ ಉಳುಮೆಯ ಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮಣ್ಣಿನಲ್ಲಿ ಹಸಿ (ತೇವಾಂಶ) ಇದ್ದಾಗ, ಅದು ಒಂದು ಸ್ಥಿತಿಗೆ ಬಂದಾಗ ಮಾತ್ರ ಸಾಗುವಳಿ ಉಳುಮೆ ಕ್ರಮಗಳು ಸರಿಯಾಗಿ ಆಗುತ್ತವೆ. ಮಳೆಯಾಗಿ ಭೂಮಿಯಲ್ಲಿಯ ಮಣ್ಣು ಹಸಿ ಹಿಡಿದ ನಂತರ, ಮೇಲ್ಮಣ್ಣು ಬಿಸಿಲು ಗಾಳಿಗಳಿಂದ ಕೆಲ ಸಮಯ ಆರಿದಾಗ ಕುಂಟೆ, ಕೂರಿಗೆ, ರಂಟೆ, ಎಡೆಗುಂಟೆ ಇತ್ಯಾದಿ ಸಾಧನಗಳನ್ನು ಸುಲಭವಾಗಿ ಉಪಯೋಗಿಸಬಹುದು.

ಮೇಲ್ಮಣ್ಣಿನಲ್ಲಿ ಇನ್ನೂ ತೇವವಿರುವಾಗ ಕುಂಟೆ, ರಂಟೆ ಇತ್ಯಾದಿಗಳು ಸುಲಭವಾಗಿ ಸಾಗುವುದಿಲ್ಲ, ಇಷ್ಟೇ ಅಲ್ಲದೇ ಕುಂಟೆ, ರಂಟೆ ಎಳೆಯುವ ಸಾಧನಗಳ ಭಾರದಿಂದ ಮಣ್ಣಿನ ರಚನೆ ಮಾರ್ಪಾಡಾಗಿ ಮೇಲ್ಮಣ್ಣು ಗಡುಸಾಗುತ್ತದೆ. ಒಮ್ಮೆ ಈ ರೀತಿ ಆದ ಮಣ್ಣಿನ ಗುಣಧರ್ಮ ಬದಲಾಯಿಸುವುದು ಕಷ್ಟ. ಇದರಿಂದ ಮುಂದಿನ ಸಾಗುವಳಿ ಹಾಗು ಬೆಳೆಗಳಿಗೆ ಅನಾನುಕೂಲವೇ ಹೆಚ್ಚು.

ಆದ್ದರಿಂದ ಮೇಲ್ಮಣ್ಣು ಬಿಸಿಲು ಗಾಳಿಗಳಿಂದ ಆರಿದ ಮೇಲೆಯೇ ಉಳುಮೆ ಮಾಡಿ. ಆಗ ಎತ್ತುಗಳ ಹೆಜ್ಜೆ ಭಾರದಿಂದಾಗಲೀ, ಸಾಗುವಳಿ ಸಾಧನಗಳ ಭಾರದಿಂದಾಗಲಿ ಹಸಿ ಮಣ್ಣು ಮೆತ್ತಿಕೊಳ್ಳುವುದಿಲ್ಲ, ಮಣ್ಣಿನ ರಚನೆಗೂ ಅಪಾಯವಾಗುವುದಿಲ್ಲ. ಅದು ಮೃದುವಾಗಿ ಹೂವಿನ ಹಾಸಿಗೆಯಂತಾಗುತ್ತದೆ.

ತೇವಯುಕ್ತ ಮಣ್ಣಿನಲ್ಲಿ ಮೊಳಕೆಯೊಡೆದ ಕಸಕಳೆಗಳ ಎಳೆ ಸಸಿಗಳು ಹರಗುವ ಕ್ರಿಯೆಯಿಂದ ಬೇರು ಸಹಿತ ನಾಶವಾಗುತ್ತವೆ, ಗಾಳಿ ಬಿಸಿಲಿಗೆ ಒಣಗಿ ಮುಂದಿನ ಬೆಳೆಯಲ್ಲಿ ಕಳೆ ಕಡಿಮೆಯಾಗುತ್ತದೆ. ಮಳೆಯಾದಾಗ ಬಿದ್ದ ನೀರು, ಹರಗಿ ಸಡಿಲಾದ ಮಣ್ಣಿನ ತಳದಲ್ಲಿ ಇಂಗಿ ಭೂಮಿಯಲ್ಲಿ ತೇವಾಂಶ ಉಳಿದುಕೊಳ್ಳುತ್ತದೆ.

ಹರಗುವುದನ್ನು ಬಿತ್ತುವ ಮೊದಲು, ಬಿತ್ತುವಾಗ, ಬಿತ್ತಿದ ನಂತರವೂ ಮಡಬೇಕಾಗುತ್ತದೆ. ಏಕೆಂದರೆ ಅದು ಬಿತ್ತುವ ಮೊದಲು ಮೇಲೆ ಹೇಳಿದಂತೆ ಮಣ್ಣನ್ನು ಸಡಿಲಗೊಳಿಸಿ ತಳದಲ್ಲಿರುವ ತೇವಾಂಶ ಆರದಂತೆ ಮಾಡುತ್ತದೆ.

ಮಳೆಯಾದಾಗ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಸ್ಪಂಜಿನಂತೆ ತಡೆ ಹಿಡಿದು, ತೇವಾಂಶ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಹರಗಿದಾಗ ಕಳೆ ಬೇರು ಸಹಿತ ಕಿತ್ತು ಬರುತ್ತವೆ, ಇವುಗಳನ್ನು ಹಾಗೆಯೇ ಭೂಮಿಗೆ ಸೇರಿಸಿದಾಗ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

ಸರಿಯಾಗಿ ಹರಗಿದ ಜಮೀನಿದ್ದರೆ ಬಿತ್ತುವಾಗ ಬೀಜವು ಪೂರ್ಣ ತಳಹಸಿಗೆ ಬೀಳುತ್ತದೆ. ಬಿತ್ತುವ ಕೂರಿಗೆಯ ತಾಳಿನಿಂದ ಭೂಮಿಯು ಸಡಿಲವಾಗುತ್ತದೆ. ಇದರ ಬೆನ್ನಲ್ಲೇ ಹರಗುವ ಕ್ರಿಯೆಗೆ ಬೆಳೆಸಾಲು ಹೊಡೆಯುವುದು ಅಥವಾ ಪಳಿ ಹೊಡೆಯುವುದು ಎನ್ನುತ್ತಾರೆ.

ಕೂರಿಗೆ ತಾಳಿನ ಎರಡು ಸಾಲಿನ ಮಧ್ಯದಲ್ಲಿನ ಮಣ್ಣಿನ ಭಾಗವನ್ನು ಸಡಿಲಮಾಡಿ ಬಿತ್ತಿದ ಬೀಜದ ಮೇಲೆ ಒಂದೇ ಸಮನಾದ ಹಸಿ ಮಣ್ಣಿನ ಹೊದಿಕೆ ಹಾಕಿ ಅಗತ್ಯವಿರುವ ಹಸಿ ಉಷ್ಣತೆಯನ್ನು ಪೂರೈಸಿದರೆ ಬೀಜ ಮೊಳೆಯಲು ಅನುಕೂಲವಾಗುತ್ತದೆ.

ಕೆಲವೊಮ್ಮೆ ಕಪ್ಪು ಮಣ್ಣಿನಲ್ಲಿ ಬಿತ್ತಿದ ನಂತರ ಮಳೆಯಾದರೆ ಭೂಮಿ ಹೆಪ್ಪುಗಟ್ಟಿದಂತಾಗಿ ಮೊಳಕೆಗೆ ಮೇಲೆದ್ದು ಬರಲು ಆಗುವುದಿಲ್ಲ. ಇದಕ್ಕೆ ದಬ್ಬ ಬಿತ್ತೆಂದು ಹೇಳುತ್ತಾರೆ. ಹೀಗಾದಾಗ ಬೀಜ ಮೊಳಕೆ ಒಡೆಯುತ್ತಿರುವಾಗಲೇ ಬಿತ್ತಿಗೆಗೆ ಅಡ್ಡಡ್ಡ ತೆಳುವಾಗಿ ಹರಗುತ್ತಾರೆ. ಇದಕ್ಕೆ ಅಡ್ಡ ಪಳಿ ಆಡುವುದು ಎನ್ನುತ್ತಾರೆ. ಇದರಿಂದ ಮೇಲ್ಮಣ್ಣು ಸ್ವಲ್ಪ ಸಡಿಲಗೊಂಡು ಮೊಳೆತ ಸಸಿಯು ಸುಲಭವಾಗಿ ಬೆಳೆಯುತ್ತದೆ.

ಈ ರೀತಿ ಬೆಳೆದ ನಂತರ ಕಳೆ ಕಸಗಳನ್ನು ನಾಶ ಮಾಡುವುದಕ್ಕೆ, ಮಣ್ಣನ್ನು ಸಡಿಲ ಮಾಡಿ ಬೇರುಗಳಿಗೆ ಗಾಳಿಯಾಡುವಂತೆ ಮಾಡುವ ಕ್ರಿಯೆಗೆ ಎಡೆ ಹೊಡೆಯುವುದು ಎನ್ನುತ್ತಾರೆ. ಇದರಲ್ಲಿ ಸಣ್ಣ ಕುಂಟೆಗಳಿಂದ ಅಥವಾ ಎಡೆ ಕುಂಟೆಗಳಿಂದ ಹರಗುತ್ತಾರೆ.

ತೀರಾ ಹಸಿ ಇದ್ದಾಗ ಎಡೆ ಹೊಡೆದರೆ ಪ್ರಯೋಜನ ಇಲ್ಲ. ಆದ್ದರಿಂದ ಹದ ನೋಡಿ ಮುಂದುವರಿಯುವುದು ಶ್ರೇಷ್ಠ. ತೇವಾಂಶ ಮತ್ತು ಪೋಷಕಾಂಶಗಳನ್ನು ಬೆಳೆಗಳಿಗೆ ಒದಗಿಸಲು ಹದವರಿತು ಎಡೆಗುಂಟೆ ಹೊಡೆಯಲೇಬೇಕು.

ಎಡೆಗುಂಟೆಗಳಲ್ಲಿ ಪಿಳಿಗುಂಟೆ, ಡುಮ್ಮಗುಂಟೆ, ಚಿಪ್ಪುಗುಂಟೆ ಹೀಗೆ ಅನೇಕ ಸಾಧನಗಳಿವೆ. ಕೆಲವು ವಿಧದ ಭೂಮಿಯಲ್ಲಿ ಹರಗುವ ಕ್ರಮ ತುಂಬಾ ಮುಖ್ಯ. ಬಿತ್ತಿಗೆಗೆ ಮೊದಲೇ ಭೂಮಿಯನ್ನು ತಯಾರಿಸಿಕೊಂಡು ಹದವಾಗಿ ಹಸಿಯಾದ ನಂತರ ಬಿತ್ತ ಬೇಕೆನ್ನುವಷ್ಟರಲ್ಲಿ ಮಳೆಯಾಗುವ ಸಂದರ್ಭವೂ ಉಂಟು. ಆಗ ಹೆಪ್ಪುಗೊಂಡ ಭೂಮಿಯನ್ನು ತೆಳುವಾಗಿ ಹರಗಿ ಬಿತ್ತಬೇಕು.ಹೀಗೆ ಬಿತ್ತುವ ಮುಂಚೆ ಹರಗುವ ಕ್ರಿಯೆಗೆ ಮಂದಹರ್ತಿ ಅಥವಾ ತಿಳಿಹರ್ತಿ ಎನ್ನುತ್ತಾರೆ.

ಒಕ್ಕಲುತನದಲ್ಲಿ ಬೆದಿ ನೋಡಿ ಬಿತ್ತುವ ಕೆಲಸ ಮಹತ್ವದ್ದು. ಬೆಳೆ ಚೆನ್ನಾಗಿ ಬರಬೇಕಾದರೆ ಫಲವತ್ತಾದ ಭೂಮಿ, ಅದಕ್ಕೆ ಅನುಗುಣವಾಗಿ ಉಳುಮೆ ಹಾಗು ನೀರು, ಉತ್ತಮ ಬೀಜ, ಗೊಬ್ಬರ, ಕೀಟಗಳ ನಿವಾರೋಣಾಪಾಯ ಬೇಕು. ಇವೆಲ್ಲ ಸರಿಯಾಗ್ದ್ದಿದರೂ ತಿಥಿಗೆ ಸರಿಯಾಗಿ ಬಿತ್ತದಿದ್ದರೆ ಬೆಳೆಗಳು ಸರಿಯಾಗಿ ಬರುವುದಿಲ್ಲ.

ಬಿತ್ತುವ ಕಾಲದಲ್ಲಿ ದಿನದಿಂದ ದಿನಕ್ಕೆ, ಗಂಟೆಯಿಂದ ಗಂಟೆಗೆ ಹದ ಬೆದೆ ಬದಲಾಗುತ್ತದೆ. ಬಿತ್ತನೆ ಬೀಜದ ಪ್ರಮಾಣ ಆಯಾ ಮಣ್ಣಿನ ರಚನೆಗೆ ಅನುಗುಣವಾಗಿ ಇರಬೇಕಾಗುತ್ತದೆ. ಕೆಲವೆಡೆಗೆ ಕಡಿಮೆ ಬೀಜ, ಕೆಲವೆಡೆ ಹೆಚ್ಚಿಗೆ ಬೀಜದ ಪ್ರಮಾಣದ ಅಗತ್ಯವಿರುತ್ತದೆ.

ಬಿತ್ತುವ ಜಾಣ ರೈತ ಅಥವಾ ರೈತ ಮಹಿಳೆ ತನ್ನ ಅನುಭವದ ಕೈಹಿಡಿತದಿಂದ ಇವೆಲ್ಲವನ್ನೂ ಸರಿಪಡಿಸುತ್ತಾರೆ. ಹೂಡಿದ ಎತ್ತುಗಳು ನಿಧಾನ ಅಥವಾ ಅವಸರದಿಂದ ನಡೆದರೆ ಅದಕ್ಕೆ ಅನುಗುಣವಾಗಿ ಬೀಜ ಬಿಡುವ ಹತೋಟಿಯ ಅನುಭವವೂ ಬೇಕು.

ಯಾವ ಬೀಜವನ್ನು ಎಷ್ಟು ಆಳಕ್ಕೆ ಬಿಡಬೇಕು ಎನ್ನುವುದು ಗೊತ್ತಿರಬೇಕು. ಬೀಜದ ಗಾತ್ರ, ಪ್ರಮಾಣಕ್ಕೆ ತಕ್ಕಂತೆ ಅದರ ಮೇಲೆ ಮಣ್ಣಿನ ಹೊದಿಕೆಗಳು ಬಹು ಮುಖ್ಯ. ಹೀಗೆ ಹದೆಬೆದೆಯನ್ನು ಅರಿಯುವುದು ಹಾಗು ಅನುಸರಿಸುವುದು ಕೃಷಿಯಲ್ಲಿ ತುಂಬಾ ಮಹತ್ವ. ಅದಕ್ಕಾಗಿಯೇ `ಹತ್ತಾಳು ಕೊಟ್ಟು ಒಂದು ಬಿತ್ತಾಳು ತರಬೇಕು~ ಎನ್ನುವ ನಾಣ್ಣುಡಿಯೇ ಇದೆ. ಇಲ್ಲಿ ಬಿತ್ತುವ ಕಲೆಗೆ ಅಷ್ಟೊಂದು ಮಹತ್ವವಿದೆ.

(ಲೇಖಕರು ಮಂಡ್ಯ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು. ಅವರ ಸಂಪರ್ಕ ಸಂಖ್ಯೆ 96322 02521)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.