ಬರದ ನಡುವೆಯೂ ಸ್ವರ್ಣಗೌರಿ ಹಬ್ಬಕ್ಕೆ ಭರದ ಸಿದ್ಧತೆ

ಚಿತ್ರದುರ್ಗ: ಬರದ ನಡುವೆಯೂ ಜಿಲ್ಲೆಯಾದ್ಯಂತ ಸ್ವರ್ಣಗೌರಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿದೆ.

ಇಲ್ಲಿನ ನವದುರ್ಗಿಯರ ದೇಗುಲಗಳೂ ಸೇರಿ ವಿವಿಧ ದೇವಿ ದೇಗುಲಗಳಲ್ಲಿ, ಅನೇಕ ಮನೆಗಳಲ್ಲಿ ಬುಧವಾರ ಹಬ್ಬ ನಡೆಯಲಿದೆ. ಅಲ್ಲದೆ, ಸಾಮೂಹಿಕ ಸ್ವರ್ಣಗೌರಿ ವ್ರತಕ್ಕೆ ಕೆಲ ದೇಗುಲಗಳಲ್ಲೂ ಸಮಿತಿಯವರು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಮಹಿಳೆಯರ ಹಬ್ಬವೆಂದೇ ಖ್ಯಾತಿಯಾಗಿರುವ ಈ ಹಬ್ಬಕ್ಕೆ ಮಂಗಳವಾರ ಸಂಜೆಯಿಂದಲೇ ಮನೆಗಳಲ್ಲಿನ ದೇವರ ಕೋಣೆ ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಲು ಕೆಲವರು ಮುಂದಾಗುತ್ತಿದ್ದಾರೆ. ದೇಗುಲಗಳಲ್ಲೂ ದೀಪಾಲಂಕಾರ, ತೋರಣ, ಪುಷ್ಪಾಲಂಕಾರದ ಜತೆಗೆ ವಿವಿಧ ವಸ್ತುಗಳಿಂದ ಅಲಂಕರಿಸಲಾಗುತ್ತಿದೆ.

ಮಹಿಳೆಯರು ತಮ್ಮ ಮನೆಗಳಲ್ಲಿ ವಿವಿಧ ಪುಷ್ಪಾಲಂಕಾರದಿಂದ ಸಿಂಗರಿಸಿದ ಮಂಟಪದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ, ವ್ರತವನ್ನು ಆಚರಿಸುತ್ತಾರೆ. ಬಗೆ, ಬಗೆಯ ತಿನಿಸು, ಹಣ್ಣುಗಳ ಜತೆ ಮಡಿಯಿಂದ ತಯಾರಿಸಿದ ಎಡೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಎನ್ನುತ್ತಾರೆ ಜೋಗಿಮಟ್ಟಿ ರಸ್ತೆ ನಿವಾಸಿಗಳಾದ ರೂಪಾ, ಶೋಭಾ.

ಬರಗೇರಮ್ಮ ದೇವತೆ: ಇಲ್ಲಿನ ಹೊಳಲ್ಕೆರೆ ರಸ್ತೆಯಲ್ಲಿ ಇರುವ ನಗರದೇವತೆ ಬರಗೇರಮ್ಮ ದೇವಿಯನ್ನು ಹಬ್ಬದ ಅಂಗವಾಗಿ ಲಕ್ಷಾಂತರ ಬಳೆಗಳಿಂದ ಅಲಂಕರಿಸಲಾಗುವುದು. ಕಳೆದ ಬಾರಿಗಿಂತಲೂ ವೈವಿಧ್ಯಮಯವಾಗಿ ಸಿಂಗರಿಸಲಾಗುವುದು ಎಂದು ಪ್ರಧಾನ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.

ಗೌರಿ ಮನೆಯಲ್ಲಿ ಆರಾಧನೆ: ಇಲ್ಲಿನ ರಾಜಬೀದಿ ದೊಡ್ಡಪೇಟೆಯಲ್ಲಿ ಇರುವ ಗೌರಿ ಮನೆಯಲ್ಲಿ ಹಬ್ಬಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದು, ವಿಶೇಷ ಪೂಜೆ ಜರುಗಲಿದೆ. ಉಚ್ಚಂಗಿ ಯಲ್ಲಮ್ಮ ದೇವಿ ದೇಗುಲದಲ್ಲೂ ಕೂಡ ಹಬ್ಬದ ಅಂಗವಾಗಿ ವಿಶೇಷವಾಗಿ ಅಲಂಕರಿಸಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ಕಣಿವೆ ಮಾರಮ್ಮ, ಬನ್ನಿ ಮಹಾಕಾಳಿ, ಕುಕ್ಕವಾಡೇಶ್ವರಿ, ಗೌರಸಮುದ್ರ ಮಾರಮ್ಮ, ಚೌಡೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಮುನ್ಸಿಪಲ್ ಕಾಲೊನಿಯ ಕೊಲ್ಲಾಪುರದ ಮಹಾಲಕ್ಷ್ಮಿ, ಕೆಳಗೋಟೆಯ ಅನ್ನಪೂರ್ಣೇಶ್ವರಿ, ಅಂಬಾ ಭವಾನಿ ಸೇರಿ ಎಲ್ಲ ಪ್ರಮುಖ ದೇಗುಲಗಳಲ್ಲಿ ವಿಶೇಷ ಪುಷ್ಪಾಲಂಕಾರ ನಡೆಯಲಿದೆ.

ಪ್ರಮುಖ ಸುದ್ದಿಗಳು