ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಗ್ಯಾರಂಟಿಗಳಿಂದ ಬಸವಣ್ಣನ ತತ್ವ ಅನುಷ್ಠಾನ: ಸಿದ್ದರಾಮಯ್ಯ

ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಚುನಾವಣಾ ಭಾಷಣ
Published 4 ಮೇ 2024, 16:20 IST
Last Updated 4 ಮೇ 2024, 16:20 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಬಸವಣ್ಣನವರ ಆದರ್ಶ ಮತ್ತು ಅಂಬೇಡ್ಕರ್ ಆಶಯಗಳನ್ನು ನಾವು ಐದೇ ಗ್ಯಾರಂಟಿಗಳ ಮೂಲಕ ಅನುಷ್ಠಾನಕ್ಕೆ ತಂದಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ 25 ಗ್ಯಾರಂಟಿಗಳನ್ನೂ ಜಾರಿಗೆ ತರಲಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಪಟ್ಟಣದಲ್ಲಿ ಶನಿವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಜೂನ್‌ 11ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮಹಿಳೆಯರು 200 ಕೋಟಿ ಬಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಅರಸಿಕೆರೆಯಲ್ಲಿ ಮಹಿಳೆಯೊಬ್ಬರು ಉಚಿತವಾಗಿ ಪ್ರಯಾಣ ಮಾಡಿದ ಟಿಕೆಟ್‌ಗಳ ಹಾರವನ್ನೇ ನನಗೆ ಹಾಕಿದರು. ಸರ್ಕಾರಕ್ಕೆ ಇದಕ್ಕಿಂತ ಖುಷಿ ಕೊಡುವ ವಿಷಯ ಇನ್ನೇನೂ ಇಲ್ಲ’ ಎಂದರು.

‘ಬಿಜೆಪಿ ಹತ್ತು ವರ್ಷಗಳಿಂದ ದ್ವೇಷದ ರಾಜಕಾರಣ ಮಾಡುತ್ತಿದೆ. ಬಡವರಿಗೆ, ರೈತರಿಗೆ, ದಲಿತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಏನು ಕಾರ್ಯಕ್ರಮ ಕೊಟ್ಟಿದ್ದೇನೆ ಎಂದು ಪ್ರಧಾನಿ ಮೋದಿ ಜನತೆಯ ಮುಂದೆ ಇಡಬೇಕಾಗಿತ್ತು. ಅದು ಅವರ ಕರ್ತವ್ಯ. ಆದರೆ, ಎಲ್ಲೂ ಸಾಧನೆ ಮುಂದಿಡುವುದಿಲ್ಲ. ಬರೀ ಭ್ರಮೆ ಹುಟ್ಟಿಸಿದ್ದಾರೆ’ ಎಂದು ಟೀಕಿಸಿದರು.

‘ವಿದೇಶದಲ್ಲಿರುವ ಕಪ್ಪು ಹಣ ತರುವುದು, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದು, ರೈತರ ಆದಾಯ ದ್ವಿಗುಣ, 2 ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ಒಂದೇಒಂದು ಅಚ್ಛೆ ದಿನ ಕೂಡ ಅವರು ಸಾಕಾರಗೊಳಿಸಲಿಲ್ಲ’ ಎಂದರು.

‘ಅಂಬಾನಿ, ಅದಾನಿಯಂಥ ಕೈಗಾರಿಕೋದ್ಯಮಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋಡಿ, ರೈತರ ಒಂದು ರೂಪಾಯಿ ಕೂಡ ಮನ್ನಾ ಮಾಡಿಲ್ಲ. ಮನಮೋಹನ ಸಿಂಗ್‌ ಪ್ರಧಾನಿ ಆಗಿದ್ದಾಗ ರೈತರ ₹72 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ನಾನು 2013–18ರ ಅವಧಿಯಲ್ಲಿ ₹8,165 ಕೋಟಿ ಸಾಲ ಮನ್ನಾ ಮಾಡಿದ್ದೇನೆ’ ಎಂದೂ ಹೇಳಿದರು.

‘ರಾಜ್ಯದಲ್ಲಿ ಬರ ಬಿದ್ದರೂ ಕೇಂದ್ರದ ನೆರವು ಕೊಡಲಿಲ್ಲ. ಬಿಜೆಪಿಯ 25 ಸಂಸದರಲ್ಲಿ ಒಬ್ಬರೂ ಇದನ್ನು ಕೇಳಲಿಲ್ಲ. ನಿಮ್ಮ ಸಂಸದ ಅಣ್ಣಾಸಾಹೇಬ ಜೊಲ್ಲೆ ಯಾವತ್ತಾದರೂ ಬಾಯಿ ಬಿಟ್ಟಿದ್ದಾರಾ? ಇಂಥವರನ್ನು ಮತ್ತೆ ಆಯ್ಕೆ ಮಾಡುತ್ತೀರಾ?’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಚಿವರಾದ ಕೆ.ಎಚ್‌.ಮುನಿಯಪ್ಪ, ಸತೀಶ ಜಾರಕಿಹೊಳಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಮಹೇಂದ್ರ ತಮ್ಮಣ್ಣವರ, ಅಭ್ಯರ್ಥಿ ಪ್ರಿಯಾಂಕಾ ಮಾತನಾಡಿದರು.

ಚಿಕ್ಕೋಡಿಯಲ್ಲಿ ಶನಿವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣ ಆಲಿಸಲು ಸೇರಿದ ಜನ
ಚಿಕ್ಕೋಡಿಯಲ್ಲಿ ಶನಿವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣ ಆಲಿಸಲು ಸೇರಿದ ಜನ
ನಮ್ಮ ಸಂವಿಧಾನ ರಕ್ಷಣೆ ಮಾಡಿಕೊಳ್ಳಬೇಕಿದೆ. ಜಾತ್ಯತೀತ ದೇಶ ಕಾಪಾಡಬೇಕಿದೆ. 140 ಕೋಟಿ ಜನ ಸಮಾನವಾಗಿ ಬದುಕಬೇಕಿದೆ. ಅದಕ್ಕಾಗಿ ಕಾಂಗ್ರೆಸ್‌ ಗೆಲ್ಲಿಸಬೇಕಿದೆ
–ಕೆ.ಎಚ್‌.ಮುನಿಯಪ್ಪ, ಸಚಿವ
ಸತೀಶ ಕುಂಡಲಿ ಕೇಳುವುದಿಲ್ಲ. ಚಿಕ್ಕೋಡಿಯಲ್ಲಿ ಬಿಜೆಪಿ ಸೋಲಿಸಿದವರಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಈ ಬಾರಿ ಪ್ರಿಯಾಂಕಾ ಕುಂಡಲಿಯಲ್ಲಿ ಗೆಲುವು ಬರೆದಿದೆ.
–ಲಕ್ಷ್ಮಣ ಸವದಿ ಶಾಸಕ
ಸತೀಶ ಜಾರಕಿಹೊಳಿ ಮೇಲೆ ಒತ್ತಡ ಹಾಕಿ ನಾವೇ ಪ್ರಿಯಾಂಕಾ ಅವರನ್ನು ನಿಲ್ಲಿಸಿದ್ದೇವೆ. 2 ಲಕ್ಷ ಮತಗಳ ಅಂತರದಿಂದ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು.
–ಪ್ರಕಾಶ ಹುಕ್ಕೇರಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2

‘ಯಲ್ಲಪ್ಪ ತೆಗೆದು ಮಲ್ಲಪ್ಪ ಮಾಡಿದ ಮೋದಿ’

‘ಕಾಂಗ್ರೆಸ್‌ನ ಯೋಜನೆಗಳನ್ನೇ ಮೋದಿ ಅವರು ತಿರುಚಿ ತಮ್ಮದಾಗಿಸಿಕೊಂಡಿದ್ದಾರೆ. ಯಲ್ಲಪ್ಪ ಇದ್ದುದ್ದನ್ನು ಮಲ್ಲಪ್ಪ ಮಾಡಿದ್ದಾರೆ ಅಷ್ಟೇ’ ಎಂದು ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಲೇವಡಿ ಮಾಡಿದರು.

‘ಇಂದಿರಾ ಆವಾಸ್‌ ಯೋಜನೆಯನ್ನು ಪ್ರಧಾನಮಂತ್ರಿ ಆವಾಸ್‌ ಮಾಡಿದರು. ನ್ಯಾಷನಲ್‌ ಇ ಗವರ್ನನ್ಸ್‌ ಅದನ್ನು ಡಿಜಿಟಲ್‌ ಇಂಡಿಯಾ ಮಾಡಿದರು ನ್ಯಾಷನಲ್‌ ಪಾಲಿಸಿಯನ್ನು ಮೇಕ್‌ ಇನ್‌ ಇಂಡಿಯಾ ಮಾಡಿದರು. ಕಾಂಗ್ರೆಸ್‌ನ ಕೊಡುಗೆಗಳನ್ನೇ ಹೆಸರು ಬದಲಾಯಿಸಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ’ ಎಂದರು.

‘ಹೊಸ ಜನರೇಷನ್‌ನ ಸವಾಲುಗಳು ಬೇರೆ ಬೇರೆ ಇವೆ. ಅವುಗಳ ಬಗ್ಗೆ ಸಂಸತ್ತಿನಲ್ಲಿ ಹೊಸ ಧ್ವನಿಯೇ ಬೇಕಾಗಿದೆ. ನನಗೆ ಅವಕಾಶ ಕೊಟ್ಟರೆ ಯುವಜನರ ಪ್ರತಿನಿಧಿಯಾಗುತ್ತೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT