ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭೆ ಚುನಾವಣೆ: ನಾಳೆ ಪ್ರಚಾರಕ್ಕೆ ತೆರೆ

ಬೀದರ್‌ ಜಿಲ್ಲೆಯಾದ್ಯಂತ 144 ಕಲಂ ಜಾರಿ; ಹೊರಗಿನವರು ಕ್ಷೇತ್ರ ಬಿಡುವಂತೆ ಸೂಚನೆ
Published 4 ಮೇ 2024, 16:23 IST
Last Updated 4 ಮೇ 2024, 16:23 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಗೆ ಇನ್ನೇರಡು ದಿನಗಳು ಬಾಕಿ ಉಳಿದಿದ್ದು, ಭಾನುವಾರ (ಮೇ 5) ಸಂಜೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯಕ್ಕೆ ತೆರೆ ಬೀಳಲಿದೆ.

‘ಭಾನುವಾರ ಸಂಜೆ 6ರಿಂದ ‘ಸೈಲೆನ್ಸ್‌ ಪೀರಿಯಡ್‌’ ಆರಂಭವಾಗುವುದರಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ವೇದಿಕೆ ಕಾರ್ಯಕ್ರಮ, ಮೆರವಣಿಗೆ, ಲೌಡ್‌ ಸ್ಪೀಕರ್ ಬಳಸುವಂತಿಲ್ಲ. ಆಯಾ ಪಕ್ಷದ ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಪ್ರಚಾರ ಮಾಡಬಹುದು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಜಿಲ್ಲೆಯಾದ್ಯಂತ ಕಲಂ 144 ಜಾರಿಯಲ್ಲಿ ಇರಲಿದ್ದು, ಭಾನುವಾರ ಸಂಜೆ 6ರಿಂದ ಬಾರ್‌ಗಳನ್ನು ಮುಚ್ಚಿಡಬೇಕು. ಬೀದರ್‌ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು, ಅಭ್ಯರ್ಥಿಗಳ ಪ್ರಚಾರಕ್ಕಾಗಿ ಹೊರಗಿನಿಂದ ಬಂದವರು ಕ್ಷೇತ್ರ ಬಿಟ್ಟು ತೆರಳಬೇಕು’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಮೂಲಕ ಸೂಚನೆ ನೀಡಿದರು.

‘ಸೈಲೆನ್ಸ್’ ಅವಧಿಯಲ್ಲಿ ‘ಒಪಿನಿಯನ್ ಪೋಲ್’ ಮಾಡುವಂತಿಲ್ಲ. ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಾದರೆ ಜಿಲ್ಲಾ ಎಮ್.ಸಿ.ಎಮ್.ಸಿ ತಂಡದ ಅನುಮತಿ ಪಡೆಯುವುದು ಕಡ್ಡಾಯ. ಒಬ್ಬ ಅಭ್ಯರ್ಥಿ ಒಟ್ಟು ಹತ್ತು ವಾಹನಗಳನ್ನು ಪ್ರಚಾರಕ್ಕೆ ಬಳಸಬಹುದು. ಅದಕ್ಕಾಗಿ ಅನುಮತಿ ಪಡೆಯಬೇಕು. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳು ನಿರಂತರವಾಗಿ ಕೆಲಸ ಮಾಡಲಿವೆ. ಫ್ಲಾಯಿಂಗ್‌ ಸ್ಕ್ವಾಡ್‌ಗಳು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲಿವೆ ಎಂದು ವಿವರಿಸಿದರು.

ಒಟ್ಟು 243 ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಹಾಗೂ 250 ಕ್ರೂಸರ್‌ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಬುಕ್ ಮಾಡಲಾಗಿದೆ. ಶೇ 85ರಷ್ಟು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮೇ 7 ರಂದು ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹಾಜರಿದ್ದರು.

ಒಟ್ಟು 18.92 ಲಕ್ಷ ಮತದಾರರು ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18.92 ಲಕ್ಷ ಜನ ಮತದಾರರಿದ್ದಾರೆ. 18 ಅಭ್ಯರ್ಥಿಗಳು ಹಾಗೂ ಒಂದು ನೋಟಾ ಸೇರಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ‘ಸಖಿ’ ಪಿಂಕ್ ಮತಗಟ್ಟೆ ಒಂದು ಯುವ ಮತಗಟ್ಟೆ ಒಂದು ವಿಶೇಷಚೇತನರ ಮತಗಟ್ಟೆ ಹಾಗೂ ಒಂದು ‘ಥೀಮ್ ಬೇಸ್‌’ ವಿಶೇಷ ಮತಗಟ್ಟೆ ಇರಲಿದೆ. 324 ‘ಕ್ರಿಟಿಕಲ್’ ಮತಗಟ್ಟೆಗಳು ಇವೆ. 120 ವಿಡಿಯೋಗ್ರಾಫರ್‌ ಹಾಗೂ 150 ಮೈಕ್ರೊ ವೀಕ್ಷಕರು ಕೆಲಸ ನಿರ್ವಹಿಸುವರು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಶೇ 80ರಷ್ಟು ಮತದಾನದ ಗುರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆದ ಜಿಲ್ಲಾ ಸ್ವೀಪ್‌ ಸಮಿತಿ ನೋಡಲ್ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 64ರಷ್ಟು ಮತದಾನವಾಗಿತ್ತು. ಈ ಸಲ ಅದು ಶೇ 80ರಷ್ಟು ಆಗಬೇಕೆಂಬ ಗುರಿಯೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ವಾಕಥಾನ್ ಕ್ರಿಕೆಟ್ ಸೈಕಲ್ ಜಾಥಾ ರಂಗೋಲಿ ಪ್ರಬಂಧ ಸ್ಪರ್ಧೆ ಸೇರಿದಂತೆ ಇತರೆ ಚಟುವಟಿಕೆಗಳು ಸೇರಿವೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಒಟ್ಟು 35 ಸಾವಿರ ಯುವ ಮತದಾರರಿದ್ದಾರೆ. ಎಲ್ಲರೂ ಮತ ಚಲಾಯಿಸಬೇಕು. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಬೀದರ್‌ ಲೋಕಸಭಾ ಕ್ಷೇತ್ರದ 103 ಮತಗಟ್ಟೆಗಳಲ್ಲಿ ಹೆಚ್ಚಿನ ಮತದಾನಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಒಂಬತ್ತು ಜನರ ಗಡಿಪಾರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ 31 ಕಡೆ ‘ಏರಿಯಾ ಡಾಮಿನೇಷನ್’ ಮಾಡಲಾಗಿದೆ. ಇದರ ಉದ್ದೇಶ ಶಾಂತಿ ಸುವ್ಯವಸ್ಥಿತೆ ಮತ್ತು ನಿರ್ಭೀತವಾಗಿ ಬಂದು ಮತ ಚಲಾಯಿಸಲು ಜನರಲ್ಲಿ ಧೈರ್ಯ ತುಂಬುವುದಾಗಿದೆ. ಈ ವರ್ಷ 9 ಜನರಿಗೆ ಗಡಿಪಾರು ಮಾಡಲಾಗಿದ್ದು. ಒಬ್ಬರನ್ನು ಗೂಂಡಾ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು. ‘ಕ್ರಿಟಿಕಲ್’ ಹಾಗೂ ಸೂಕ್ಷ್ಮ ಮತಗಟ್ಟೆಗಳಲ್ಲಿ ಶಾಂತಿಭಂಗ ಮಾಡುವ 861 ವ್ಯಕ್ತಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. 2331 ಜನರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಹಂತದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 1141 ಜನ ಸಿವಿಲ್ ಪೊಲೀಸರು ಡಿಎಆರ್ 160 ಜನ ಕೆ.ಎಸ್.ಆರ್.ಪಿ. 7 ಪ್ಲಟೂನ್ 1185 ಜನ ಗೃಹರಕ್ಷಕರು ಅರಣ್ಯ ಇಲಾಖೆಯ ಎಂಟು ಜನ ಕೆ.ಎಸ್.ಐ.ಎಸ್.ಎಫ್‌.ನ 28 ಜನ ಹಾಗೂ ಸಿ.ಪಿ.ಎಮ್.ಎಫ್.ನ 36 ಸೆಕ್ಷನ್‌ಗಳು ಇರಲಿವೆ ಎಂದು ವಿವರಿಸಿದರು.

ವಯಸ್ಸಾದವರಿಗೆ ವಾಹನ ವ್ಯವಸ್ಥೆ ‘85 ವರ್ಷ ಮೇಲಿನ ವಯಸ್ಸಾದವರಿಗೆ ಮತಗಟ್ಟೆಗೆ ಬಂದು ಮತ ಹಾಕುವುದಕ್ಕೆ ಅನುಕೂಲವಾಗಲೆಂದು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು. ಬಿಸಿಲು ಹೆಚ್ಚಿಗೆ ಇರುವುದರಿಂದ ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಒಆರ್‌ಎಸ್‌ ಪ್ಯಾಕೆಟ್‌ ಇಡಲು ಸೂಚಿಸಲಾಗಿದೆ. ಅಂಗವಿಕಲರಿಗೆ ವೀಲ್‌ ಚೇರ್‌ಗಳು ಇರಲಿವೆ. ಆರೋಗ್ಯ ಇಲಾಖೆಯ ಎಲ್ಲ ನೌಕರರು ಆ ದಿನ ಕರ್ತವ್ಯದ ಮೇಲೆ ಇರುವಂತೆ ಸೂಚಿಸಲಾಗಿದೆ. ಯಾವುದೇ ಮತಗಟ್ಟೆಯಲ್ಲಿ ವೈದ್ಯಕೀಯ ನೆರವು ಬೇಕಿದ್ದರೆ ತಕ್ಷಣವೇ ಒದಗಿಸಲು ತಿಳಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT