ಸಂಸ್ಕೃತದಿಂದ ಮಾನಸಿಕ ಶಾರೀರಿಕ ಸ್ವಾಸ್ಥ್ಯ: ವಿಶ್ವಪ್ರಿಯ ಸ್ವಾಮೀಜಿ

ಉಡುಪಿ: ನಮ್ಮ ದಿನನಿತ್ಯ ವ್ಯವಹಾರದಲ್ಲಿ ಸಂಸ್ಕೃತ ಭಾಷೆಯನ್ನು ಉಚ್ಚರಿಸಿದಾಗ ಮನುಷ್ಯನ ನರ ಮಂಡಲಗಳಲ್ಲಿ ಪ್ರಚೋದನೆ ಉಂಟು ಮಾಡಿ ರೋಗ ನಿವಾರಣೆ ಮಾಡುವುದರ ಜತೆಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ ಎಂದು ಅದಮಾರು ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಈಚೆಗೆ ನಡೆದ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆ ಮತ್ತು ಸಂಸ್ಕೃತೋತ್ಸವದ ಸಂದರ್ಭದಲ್ಲಿ ಮಾತನಾಡಿದರು.

ಕೇವಲ ಸಂಸ್ಕೃತ ದಿನವೆಂದು ಆಚರಿಸದೆ ದಿನದಿನವೂ ಸಂಸ್ಕೃತ ದಿನವಾಗಬೇಕು. ಸಂಸ್ಕೃತ ಭಾಷೆಯೂ ಎಲ್ಲಾ ಭಾಷೆಗಳ ಮಾತೃಭಾಷೆಯಾಗಿದೆ . ಸಂಸ್ಕೃತದಿಂದ ಬೇರೆ ಭಾಷೆಗಳಿಗೆ ತದ್ಭವ ಆಗಿದೆ ಹೊರತು ಸಂಸ್ಕೃತವು ಯಾವ ಭಾಷೆಯ ತದ್ಭವ ಅಲ್ಲ ಎಂದು ಹೇಳಿದರು.

ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಡಾ. ಮಧುಸೂಧನ ಭಟ್ಟ ಮಾತನಾಡಿ, ಸಂಸ್ಕೃತ ಭಾಷೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಈ ಭಾಷೆ ಎಷ್ಟು ಸರಳವೂ ಅಷ್ಟೇ ಕಠಿಣವೂ ಆಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ಶಿಕ್ಷಣ ಸಂಸ್ಥೆಯಲ್ಲಿ ಅತಿಹೆಚ್ಚು ಸಂಸ್ಕೃತ ಕಾರ್ಯಕ್ರಮಗಳು ನಡೆಯುವುದು ಪೂರ್ಣಪ್ರಜ್ಞ ಸಂಸ್ಥೆಯಲ್ಲಿ ಮಾತ್ರ ಎಂದು ಸಂಸ್ಥೆಯನ್ನು ಅಭಿನಂದಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಂಸ್ಕೃತ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ತಿಗಳನ್ನು ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲೆ ಡಾ.ಜೆ. ಸುಕನ್ಯ ಮೇರಿ, ಸಂಸ್ಕೃತ ಉಪಾನ್ಯಾಸಕ ಡಾ. ರಾಮಕೃಷ್ಣ ಉಡುಪ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿಗಳು