ಸೆರೆನಾ ವರ್ತನೆ ತಪ್ಪು: ಮಾರ್ಟಿನಾ

ನ್ಯೂಯಾರ್ಕ್‌: ‘ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ಅವರು ಅಶಿಸ್ತು ತೋರಿದ್ದು ಸರಿಯಲ್ಲ’ ಎಂದು ಹಿರಿಯ ಟೆನಿಸ್‌ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ ಹೇಳಿದ್ದಾರೆ. 

18 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಮಾರ್ಟಿನಾ ಅವರು ಪ್ರತಿಷ್ಠಿತ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಲೇಖನ ಬರೆದಿದ್ದು, ಈ ವಿವಾದದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೆರೆನಾ ಅವರು ಪಂದ್ಯದ ವೇಳೆ ಅಶಿಸ್ತು ತೋರಿದ್ದರಿಂದ ಅಂಪೈರ್‌ ಕಾರ್ಲೋಸ್‌ ರಾಮೊಸ್‌ ‘ಗೇಮ್‌ ಪೆನಾಲ್ಟಿ’ ವಿಧಿಸಿದ್ದರು. ಇದರಿಂದ ಕೆರಳಿದ್ದ ಸೆರೆನಾ ‘ನೀನು ಕಳ್ಳ, ಮಹಾನ್‌ ಸುಳ್ಳುಗಾರ’ ಎಂದು ರಾಮೊಸ್‌ ಅವರನ್ನು ನಿಂದಿಸಿದ್ದರು. 

ಪುರುಷರು ರ‍್ಯಾಕೆಟ್‌ ಮುರಿದರೆ, ಅಂಗಳದಲ್ಲಿ ಬರಿ ಮೈಯಲ್ಲಿ ಕುಳಿತುಕೊಂಡರೆ ಅದು ಅಶಿಸ್ತು ಅನಿಸುವುದಿಲ್ಲ. ಮಹಿಳೆಯರು ರ‍್ಯಾಕೆಟ್‌ ಮುರಿದರೆ, ಪಂದ್ಯದ ವೇಳೆ ಜೆರ್ಸಿ ತೆಗೆದರೆ ತಪ್ಪಾಗುತ್ತದೆ. ಅದಕ್ಕಾಗಿ ದಂಡವನ್ನೂ ಹಾಕುತ್ತಾರೆ. ಇದು ಅಸಮಾನತೆಯಲ್ಲವೇ ಎಂದು ಪ್ರಶ್ನಿಸಿದ್ದರು. 

ತಮ್ಮ ಲೇಖನದಲ್ಲಿ ಮಾರ್ಟಿನಾ ‘ಸೆರೆನಾ ಅವರ ಕೆಲ ಪ್ರಶ್ನೆಗಳು ನಿಜಕ್ಕೂ ಸಮಂಜಸ. ತಪ್ಪುಗಳನ್ನು ಪರಿಗಣಿಸುವುದು ಹಾಗೂ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಪುರುಷ ಹಾಗೂ ಮಹಿಳೆಯರ ಮಧ್ಯೆ ಸಾಕಷ್ಟು ಅಸಮಾನತೆ ಇದೆ. ಇದು ಕೇವಲ ಟೆನಿಸ್‌ನಲ್ಲಿ ಮಾತ್ರವಲ್ಲ, ಬದಲಿಗೆ ನಮ್ಮ ಜೀವನದಲ್ಲಿ ದಿನವೂ ಕಾಣುತ್ತೇವೆ’ ಎಂದು ಹೇಳಿದ್ದಾರೆ. 

‘ಆದರೆ, ಈ ಅಸಮಾನತೆಯನ್ನು ವಿರೋಧಿಸುವ ಭರದಲ್ಲಿ ನಮ್ಮ ವರ್ತನೆ ಸರಿಯಾಗಿರಬೇಕು. ಇಲ್ಲದಿದ್ದರೆ ನಾವು ಸ್ಪರ್ಧಿಸುವ ಕ್ರೀಡೆಗೆ ಅಗೌರವ ತೋರಿದಂತಾಗುತ್ತದೆ. ಪುರುಷರು ಮಾಡುವ ತಪ್ಪುಗಳನ್ನೇ ಮಹಿಳೆಯರು ಮಾಡಬೇಕೆನ್ನುವ ವಾದ ಸರಿಯಲ್ಲ’ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳು