ಕೆರೆಗಳ ರಕ್ಷಣೆಗೆ ಜಂಟಿ ಸಮಿತಿ ರಚನೆ

ಬೆಂಗಳೂರು: ನಗರದ ಕೆರೆಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮಂಗಳವಾರ ರಚಿಸಿದ್ದಾರೆ.

ಬೆಂಗಳೂರು ಮಹಾನಗರಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ, ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ನಮ್ಮ ಬೆಂಗಳೂರು ಪ್ರತಿಷ್ಠಾನ, ಯುನೈಟೆಡ್‌ ಬೆಂಗಳೂರು ಸಂಘಟನೆ ಪ್ರತಿನಿಧಿಗಳನ್ನು ಸಮಿತಿಗೆ ನೇಮಿಸುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ. 

ಜಂಟಿ ಸಮಿತಿ ಸದಸ್ಯರು ನಗರದ ಎಲ್ಲ ಕೆರೆಗಳನ್ನು ಪರಿಶೀಲಿಸಿ ವಸ್ತುಸ್ಥಿತಿ ವರದಿ ಕೊಡಬೇಕು. ಈ ವರದಿ ಆಧರಿಸಿ, ಕೆರೆಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಅವರಿಗೆ ಸಭೆಯ ನೋಟಿಸ್‌ ತಲುಪದಿದ್ದರಿಂದಾಗಿ ಬರಲಾಗಿಲ್ಲ ಎಂಬ ವಿಷಯವನ್ನು ಲೋಕಾಯುಕ್ತರ ಗಮನಕ್ಕೆ ತರಲಾಯಿತು. ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವಂತೆ ಅವರು ಹೇಳಿದರು.

ಮಧ್ಯಂತರ ಸೇರ್ಪಡೆ ಅರ್ಜಿ: ‘ಅರಕೆರೆ ಕೆರೆ ಒತ್ತುವರಿ ಸಂಬಂಧದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ಪ್ರಕರಣದಲ್ಲಿ ಮಧ್ಯಂತರ ಸೇರ್ಪಡೆ ಅರ್ಜಿ ಸಲ್ಲಿಸಿ, ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ’ ಎಂದು ಎಫ್‌ಒವಿಸಿಎಬಿ ಸಂಘಟನೆ ಪ್ರತಿನಿಧಿಗಳಿಗೆ ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ದಕ್ಷಿಣದ ತಹಶೀಲ್ದಾರ್ ಈ ಪ್ರಕರಣದ ಸಂಬಂಧ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಸಂಘಟನೆಯ ಪ್ರತಿನಿಧಿಗಳು ಮನವರಿಕೆ ಮಾಡಿಕೊಟ್ಟರು.

ಪ್ರಮುಖ ಸುದ್ದಿಗಳು