19 ದಿನಗಳ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಹಾರ್ದಿಕ್‌ ಪಟೇಲ್‌

ಅಹಮದಾಬಾದ್: ಮೀಸಲಾತಿಗೆ ಆಗ್ರಹಿಸಿ ಪಾಟೀದಾರ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು 19 ದಿನಗಳ ನಂತರ ಬುಧವಾರ ಅಂತ್ಯಗೊಳಿಸಿದ್ದಾರೆ.

ಪಾಟೀದಾರ ಸಮುದಾಯದ ಮೀಸಲಾತಿ ಮತ್ತು ರೈತರ ಸಾಲ ಮನ್ನಾ ವಿಚಾರವಾಗಿ ಗುಜರಾತ್‌ ಸರ್ಕಾರ ಮತ್ತು ಹಾರ್ದಿಕ್‌ ಪಟೇಲ್‌ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಸಮುದಾಯದ ಮುಖಂಡರಾದ ನರೇಶ್‌ ಪಟೇಲ್‌ ಮತ್ತು ಸಿಕೆ ಪಟೇಲ್‌ ನೀಡಿದ ನಿಂಬೆ ಹಣ್ಣಿನ ಶರಬತ್ತು ಸೇವಿಸುವ ಮೂಲಕ ಹಾರ್ದಿಕ್‌ ಉಪವಾಸ ಅಂತ್ಯಗೊಳಿಸಿದರು. 

ಬಳಿಕ ಮಾತನಾಡಿದ ಹಾರ್ದಿಕ್‌, ’ನಮ್ಮ ಸಮುದಾಯದ ಮೀಸಲಾತಿ ಮತ್ತು ರೈತರ ಸಾಲ ಮನ್ನಾ ವಿಚಾರವಾಗಿ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಘೋಷಿಸಿದರು. ‌

ಆಗಸ್ಟ್‌ 25ರಂದು ಪಟೇಲ್‌ ತನ್ನ ನಿವಾಸದ ಬಳಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಗುಜರಾತ್‌ ರೈತರ ಸಾಲ ಮನ್ನಾ ಹಾಗೂ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಅಡಿಯಲ್ಲಿ ಪಾಟಿದಾರ ಸಮುದಾಯದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಪಟೇಲ್‌ ಉಪವಾಸ ಕೈಗೊಂಡಿದ್ದರು. 

ದೇಶದ್ರೋಹದ ಆರೋಪದ ಮೇಲೆ ಬಂಧನದಲ್ಲಿರುವ ತನ್ನ ಸಹ–ಹೋರಾಟಗಾರ ಅಲ್ಪೇಶ್‌ ಕಥೇರಿಯಾ ಬಿಡುಗಡೆಗೂ ಇದೇ ವೇಳೆ ಪಟೇಲ್‌ ಗುಜರಾತ್‌ ಸರ್ಕಾರವನ್ನು ಒತ್ತಾಯಿಸಿದ್ದರು. ಉಪವಾಸ ಸತ್ಯಾಗ್ರಹದ 14ನೇ ದಿನ ಪಟೇಲ್‌ ಆರೋಗ್ಯ ಸ್ಥಿತಿ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದರು. ದೇಶದ ಹಲವು ಮುಖಂಡರಿಂದ ಪಟೇಲ್‌ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿತ್ತು. 

ಹೋರಾಟ ನಡೆಯುವಾಗಲೇ ತನ್ನ ಪ್ರಾಣ ಹೋದರೆ ಎಂಬ ಆಲೋಚನೆಯಿಂದ ಸತ್ಯಾಗ್ರಹದ ಒಂಭತ್ತನೆ ದಿನ ಹಾರ್ದಿಕ್ ಪಟೇಲ್ 'ವಿಲ್' (ಮರಣ ಪತ್ರ) ಘೋಷಣೆ ಮಾಡಿದ್ದರು. 

 

ಪ್ರಮುಖ ಸುದ್ದಿಗಳು