ನವೋದ್ಯಮಿಯಾದ ಯುವ ಎಂಜಿನಿಯರ್

ಮೂಡಲಗಿ: ಇಲ್ಲಿನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಪದವೀಧರ ವಿನಯಕುಮಾರ ಚಂದ್ರು ಗಾಣಿಗ ನೌಕರಿಗಾಗಿ ಬೇರೆಲ್ಲೂ ಅಲೆಯದೇ ವಿದ್ಯುತ್ ಪರಿವರ್ತಕಗಳನ್ನು ತಯಾರಿಸುವ ಸಣ್ಣ ಕೈಗಾರಿಕೆ ಪ್ರಾರಂಭಿಸಿ, ಈ ಭಾಗದ ನವೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.

2014ರಲ್ಲಿ ಪದವಿ ಮುಗಿಸಿದ ಅವರಿಗೆ, ಬಹಳಷ್ಟು ಕೆಲಸದ ಅವಕಾಶಗಳಿದ್ದವು. ಹಲವು ಕಂಪನಿಗಳು ಉದ್ಯೋಗದ ಆಫರ್‌ ನೀಡಿದ್ದವು. ವಿದ್ಯುತ್ ತಂತ್ರಜ್ಞಾನದ ಬಗ್ಗೆ ಆಸಕ್ತಿ ಇದ್ದ ಅವರಿಗೆ ಸ್ವಂತ ಉದ್ಯಮದ ಕನಸಿತ್ತು. ಯಾವ ಉದ್ಯಮ ಆರಂಭಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ ಗೆಳೆಯರಾದ ಸುಕುಮಾರ ಮತ್ತು ಉಮೇಶ ನೆರವಾದರು. ವಿದ್ಯುತ್ ಪರಿವರ್ತಕಗಳ ತಯಾರಿಕೆಯ ಕುರಿತು ಕನಸು ತುಂಬಿ ಅವರೊಂದಿಗೆ ಸಹಾಯಕ್ಕೂ ನಿಂತರು.

ಕೈಗಾರಿಕೆ ಆರಂಭಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು, ಕಚ್ಚಾ ವಸ್ತುಗಳನ್ನು ತರಿಸುವುದು, ಉತ್ಪಾದನೆಯ ಕೌಶಲ  ಹೀಗೆ... ಹಲವು ವಿಷಯದಲ್ಲಿ ತೊಂದರೆ ಅನುಭವಿಸಿದ ವಿನಯ, ಛಲ ಬಿಡಲಿಲ್ಲ. ಅದರ ಪರಿಣಾಮ ಉದ್ಯಮಿಯಾಗಿ ಯಶಸ್ಸಿನ ಹಾದಿಯಲ್ಲಿದ್ದಾರೆ. ಈ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.

ಶೆಡ್‌ನಲ್ಲಿ ಘಟಕ :

ವಿವಿಧೆಡೆ ಮಾಹಿತಿ ಕಲೆ ಹಾಕಿ ಇಲ್ಲಿ ಶ್ರೀರಂಗ ಎಲೆಕ್ಟ್ರಿಕಲ್ಸ್‌ ಉದ್ಯಮ ಪ್ರಾರಂಭಿಸಿದರು. ತಮ್ಮ ನಿವೇಶನದಲ್ಲಿ ಶೆಡ್‌ ನಿರ್ಮಿಸಿ, ವಿದ್ಯುತ್ ಪರಿವರ್ತಕ ಉತ್ಪಾದನಾ ಘಟಕ ಸ್ಥಾಪಿಸಿದರು. ವೈಂಡಿಂಗ್ ಯಂತ್ರ, ಒವನ್ ಯುನಿಟ್, ಟೆಸ್ಟಿಂಗ್ ಬೆಂಚ್ ಹಾಗೂ ಪೇಂಟಿಂಗ್ ವ್ಯವಸ್ಥೆಯೊಂದಿಗೆ ಘಟಕವನ್ನು ಅಣಿಗೊಳಿಸಿದ್ದಾರೆ. ಕೆಲವೇ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಈ ಘಟಕ ಕಂಡಿದೆ.

ಮೂರ‍್ನಾಲ್ಕು ಕೆಲಸಗಾರರೊಂದಿಗೆ ಆರಂಭವಾದ ಈ ಘಟಕದಲ್ಲಿ ತಿಂಗಳಿಗೆ 10ರಿಂದ 15 ಪರಿವರ್ತಕಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಈಗ, 10 ಮಂದಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 30ಕ್ಕೂ ಹೆಚ್ಚು ಪರಿವರ್ತಕಗಳು ರೂಪ ಪಡೆಯುತ್ತಿವೆ. ಇವರು ತಯಾರಿಸುವ ಪರಿವರ್ತಕಗಳಿಗೆ ನವದೆಹಲಿಯ ಇಂಧನ ಕ್ಷಮತೆ ಮಂಡಳಿಯಿಂದ (ಬಿಇಇ) ಐಎಸ್ಒ ಪ್ರಮಾಣಪತ್ರ ದೊರೆತಿದೆ. ಹೆಸ್ಕಾಂಗೆ ನಿಯಮಿತವಾಗಿ ಪರಿವರ್ತಕಗಳನ್ನು ಪೂರೈಸುತ್ತಿದ್ದಾರೆ. ಖಾಸಗಿ ವಿದ್ಯುತ್ ಗುತ್ತಿಗೆದಾರರು, ರೈತರು ಕೂಡ ಖರೀದಿಸುತ್ತಿದ್ದಾರೆ. ಇದರಿಂದಾಗಿ ಘಟಕಕ್ಕೆ ಆರ್ಡರ್‌ ಹೆಚ್ಚಾಗುತ್ತಿದೆ. ಬೇರೆ ಜಿಲ್ಲೆಗಳಿಂದಲೂ ಬೇಡಿಕೆ ಇದೆ.

ಗುಣಮಟ್ಟಕ್ಕೆ ಆದ್ಯತೆ:

ಕಚ್ಚಾ ಸಾಮಗ್ರಿಗಳನ್ನು ರಾಜ್ಯದ ವಿವಿಧೆಡೆಯಿಂದ ಹಾಗೂ ಗುಜರಾತ್‌ನಿಂದ ತರಿಸುತ್ತಾರೆ. ಆರಂಭದಿಂದ ಹಿಡಿದು ಗುಣಮಟ್ಟದ ಪರೀಕ್ಷೆವರೆಗೂ ತಾವಾಗಿಯೇ ಮೇಲ್ವಿಚಾರಣೆ ವಹಿಸುತ್ತಾರೆ.

‘ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇನೆ. ಹೀಗಾಗಿ, ಹೆಸ್ಕಾಂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಖರೀದಿಸುತ್ತಾರೆ. ಉತ್ಪಾದನೆಯೊಂದಿಗೆ ಘಟಕದಲ್ಲಿ ಪರಿವರ್ತಕಗಳ ದುರಸ್ತಿಯ ಕೆಲಸವನ್ನೂ ಮಾಡಿಕೊಡುತ್ತೇವೆ. ಸ್ಥಳಕ್ಕೇ ಹೋಗಿ ದುರಸ್ತಿ ಮಾಡಿಕೊಡುವುದಕ್ಕೆ ಹೆಚ್ಚಿನ ಬೇಡಿಕೆ ಇದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ ಮೊ: 94495 73355.

ಪ್ರಮುಖ ಸುದ್ದಿಗಳು