ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

EVM ಮೇಲೆ ಅಪನಂಬಿಕೆ ಸೃಷ್ಟಿ ಪಾಪದ ಕೆಲಸ: ಕ್ಷಮೆ ಕೇಳಲು ಕಾಂಗ್ರೆಸ್‌ಗೆ PM ಆಗ್ರಹ

Published 26 ಏಪ್ರಿಲ್ 2024, 10:28 IST
Last Updated 26 ಏಪ್ರಿಲ್ 2024, 10:28 IST
ಅಕ್ಷರ ಗಾತ್ರ

ಅರಾರಿಯಾ: ‘ಚುನಾವಣೆಯಲ್ಲಿ ಬಳಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರದ ವಿರುದ್ಧ ಅಪನಂಬಿಕೆ ಸೃಷ್ಟಿಸಿದ ಪಾಪದ ಕೆಲಸಕ್ಕಾಗಿ ವಿರೋಧ ಪಕ್ಷಗಳು ದೇಶದ ಕ್ಷಮೆ ಕೇಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಶುಕ್ರವಾರ ಹರಿಹಾಯ್ದರು.

ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ನಲ್ಲಿ ದಾಖಲಾದ ಎಲ್ಲಾ ಮತಗಳನ್ನೂ ಎಣಿಕೆ ಮಾಡಲು ಆದೇಶಿಸುವಂತೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ವಿರೋಧ ಪಕ್ಷಗಳು ತಮ್ಮ ನೆಚ್ಚಿನ ಮುಸ್ಲಿಂ ಮತಬ್ಯಾಂಕ್‌ ಅನ್ನು ಅವಲಂಬಿಸುವ ಮೂಲಕ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೀಸಲಾತಿಯಿನ್ನು ಕಸಿದು, ನಿರ್ಲಕ್ಷಿಸಲಿದೆ’ ಎಂದು ಆರೋಪಿಸಿದ್ದಾರೆ.

‘ಕಾಂಗ್ರೆಸ್, ಆರ್‌ಜೆಡಿ ಮತ್ತು ಇಂಡಿಯಾ ಒಕ್ಕೂಟದ ಇತರ ಪಕ್ಷಗಳು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮತಗಟ್ಟೆಗಳನ್ನೇ ವಶಕ್ಕೆ ಪಡೆಯುತ್ತಿದ್ದ ಇವರು, ಬಡವರು, ಹಿಂದುಳಿದವರು, ದಲಿತರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಿದ್ದರು. ಆದರೆ ವಿದ್ಯುನ್ಮಾನ ಮತಯಂತ್ರದಿಂದಾಗಿ ಅವರೆಲ್ಲರಿಗೂ ಅವರ ಹಕ್ಕುಗಳು ದೊರೆತಿವೆ. ಹೀಗಾಗಿ ವಿರೋಧಿಗಳ ಹಳೆಯ ಆಟ ಈಗ ನಡೆಯುತ್ತಿಲ್ಲ. ಇದರಿಂದಾಗಿ ಇವಿಎಂ ಮೇಲೆ ಆರೋಪ ಹೋರಿಸುವ ಪಾಪದ ಕೆಲಸವನ್ನು ಇವರು ಮಾಡುತ್ತಿದ್ದಾರೆ’ ಎಂದು ಮೋದಿ ದೂರಿದರು.

‘ಆದರೆ ದೇಶದ ಸುಪ್ರೀಂ ಕೋರ್ಟ್‌ ಇಂದು ಮಹತ್ವದ ತೀರ್ಪನ್ನು ನೀಡಿದ್ದು, ಇವಿಎಂ ಮತ್ತು ವಿವಿಪ್ಯಾಟ್‌ನ ಎಲ್ಲಾ ಮತಗಳ ಎಣಿಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ವಿರೋಧಿಗಳ ಮುಖಕ್ಕೆ ಭಾರಿಸಿದೆ’ ಎಂದು ಪ್ರಧಾನಿ, ಕರ್ನಾಟಕದಲ್ಲಿ ಹಿಂದುಳಿದವರಿಗೆ ನೀಡಿದ್ದ ಮೀಸಲಾಯಿತಿಯನ್ನು ಮುಸ್ಲಿಮರಿಗೆ ವರ್ಗಾಯಿಸಿದೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

‘ಹಿಂದೆ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಮುಸ್ಲೀಮರಿಗೆ ಮೀಸಲಾತಿ ನೀಡಲು ತಮ್ಮ ಒಪ್ಪಿಗೆ ಸೂಚಿಸಿದ್ದರು. ಹಾಗೆಯೇ ನನ್ನನ್ನು ಸೋಲಿಸಲು ಇವರು ನಡೆಸುವ ಯಾವುದೇ ಸಂಚು ಫಲ ನೀಡದು. ಇವರ ಪ್ರಣಾಳಿಕೆಯು ಮುಸ್ಲೀಂ ಲೀಗ್‌ನ ನಕಲಾಗಿದೆ. ಜತೆಗೆ ಹಿಂದೂಗಳಿಗೆ ಇವರು ಎಸಗುವ ಅನ್ಯಾಯ ಜಗಜ್ಜಾಹೀರಾಗಿದೆ’ ಎಂದಿದ್ದಾರೆ.

‘ಹೀಗಾಗಿ ದೇಶದ ಹಿತದೃಷ್ಟಿಯಿಂದ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಆರ್ಥಿಕ ಬೆಳವಣಿಗೆ ಮತ್ತು ಸೇನಾ ಸಾಮರ್ಥ್ಯಕ್ಕೆ ಈ ಚುನಾವಣೆ ಬಹಳ ಮುಖ್ಯ. ಹೀಗಾಗಿ ಯುವಜನತೆಯನ್ನೂ ಒಳಗೊಂಡ ದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು’ ಎಂದು ಮೋದಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT