ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಟ್ಟ ಕಲಾಕೃತಿಗಳ ದೊಡ್ಡ ಸಂದೇಶ

Published 11 ಆಗಸ್ಟ್ 2024, 0:15 IST
Last Updated 11 ಆಗಸ್ಟ್ 2024, 0:15 IST
ಅಕ್ಷರ ಗಾತ್ರ

ಚಿತ್ರಕಲೆ, ಕಲಾಕೃತಿಗಳು ಸಂದೇಶವನ್ನು ಸಾರುತ್ತಿರುತ್ತವೆ. ಕಲಾವಿದರು ತಮ್ಮ ಮನದಾಳದ ಅಭಿವ್ಯಕ್ತಿಯನ್ನು ತರತರಹದ ಮಾಧ್ಯಮದ ಮೂಲಕ ಹೊರಹಾಕಿ, ಅದರ ಮೂಲಕ ಸಮಾಜದ ಒಳಹೊರಗನ್ನು ಅನಾವರಣಗೊಳಿಸುತ್ತಿರುತ್ತಾರೆ. ಹೀಗೆ ಶೈಲೇಂದ್ರ ಎಂಬುವ ಕಲಾವಿದರೊಬ್ಬರು ತಮ್ಮ ಕೈ ಚಳಕದಿಂದ ನೋಡುಗರ ಹುಬ್ಬೇರಿಸುವಂತಹ ಮಿನಿಯೇಚರ್ (ಪುಟ್ಟ) ಕಲಾಕೃತಿಗಳನ್ನು ಮಾಡಿ ಸೈ ಎನಿಸಿಕೊಂಡು, ತಮ್ಮ ಕಲಾಕೃತಿಗಳ ಮೂಲಕ ಮಹತ್ವದ ವಿಚಾರವನ್ನು ಹೇಳಲು ಹೊರಟಿದ್ದಾರೆ.

ಕಲಾವಿದ ಶೈಲೇಂದ್ರ ಜಿ., ಮಹಾರಾಷ್ಟ್ರದ ಗೊಂಡಿಯಾ ನಗರದವರು. ಕಳೆದ ಹನ್ನೆರಡು ವರ್ಷಗಳಿಂದ ಪುಣೆಯಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಅಟೊಮೋಟಿವ್ ಡಿಸೈನರ್ ಆಗಿದ್ದು, ಪ್ರವೃತ್ತಿಯಿಂದ ವನ್ಯಜೀವಿಗಳ ಮಿನಿಯೇಚರ್‌ಗಳನ್ನು ತಯಾರು ಮಾಡುವ ಅದ್ಭುತ ಕಲಾವಿದ. ಐದು ವರ್ಷಗಳಿಂದ ಶೈಲೇಂದ್ರ ಈ ಕಲೆಯಲ್ಲಿ ಮಗ್ನರಾಗಿದ್ದು, ವನ್ಯಜೀವಿಗಳ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಲು ಈ ರೀತಿಯ ಕಲಾಕೃತಿಗಳನ್ನು ಮಾಡುತ್ತಿದ್ದಾರೆ. ಹುಲಿ, ಸಿಂಹ, ಆನೆ, ಚಿರತೆ, ಘೇಂಡಾಮೃಗ, ಉಡ, ಹಾರ್ನ್‌ಬಿಲ್‌, ಗಿಳಿ, ನೀಲಕಂಠ, ಕಿಂಗ್ ಫಿಶರ್, ನವರಂಗಿ, ರಾಜಹಂಸ, ಮರಕುಟಿಗ, ಗೂಬೆ, ಕೊಕ್ಕರೆ, ಹದ್ದು–ಹೀಗೆ ಅನೇಕ ಪ್ರಾಣಿ, ಪಕ್ಷಿಗಳ ಚಿಕ್ಕ ಚಿಕ್ಕ ಮಾದರಿಗಳನ್ನು ಥೇಟ್ ನಿಜವೆಂಬಂತೆ ಬಹಳ ಚೆಂದವಾಗಿ ಮಾಡಿದ್ದಾರೆ. ಸಿಂಥೆಟಿಕ್ ಕ್ಲೇ, ಅಲ್ಯೂಮಿನಿಯಂ ವಯರ್, ಫಾಯಿಲ್, ಅಕ್ರಿಲಿಕ್ ಬಣ್ಣಗಳಿಂದ ಇವುಗಳಿಗೆ ಜೀವ ತುಂಬಿದ್ದಾರೆ. ಒಂದು ಮಿನಿಯೇಚರ್‌ ಮಾಡಲು ಕನಿಷ್ಠ ಒಂದು ವಾರ ಸಮಯ ತೆಗೆದುಕೊಳ್ಳುತ್ತಾರೆ ಶೈಲೇಂದ್ರ.

ಮಿನಿಯೇಚರ್‌ನಲ್ಲಿ ಮೂಡಿಬಂದ ಗೂಬೆ 
ಮಿನಿಯೇಚರ್‌ನಲ್ಲಿ ಮೂಡಿಬಂದ ಗೂಬೆ 

ಜಂಗಲ್ ಬುಕ್ ಕಾರ್ಟೂನ್ ಧಾರಾವಾಹಿಯಿಂದ ಸ್ಫೂರ್ತಿ ಪಡೆದ ಶೈಲೇಂದ್ರ ಅವರಿಗೆ ಬಾಲ್ಯದಿಂದಲೂ ಪರಿಸರ, ಪ್ರಾಣಿ ಪಕ್ಷಿಗಳೆಂದರೆ ತುಂಬಾ ಆಸಕ್ತಿ. ತಮ್ಮ ನಗರದಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೆ ಇಷ್ಟಪಟ್ಟು ಆಗಾಗ್ಗೆ ಹೋಗುತ್ತಿದ್ದರಂತೆ. ಅಲ್ಲಿನ ಪ್ರಾಣಿ ಪಕ್ಷಿಗಳ ಲೋಕವನ್ನು ನೋಡಿ ಮರುಳಾಗಿ, ಅವುಗಳ ಸಂರಕ್ಷಣೆಯ ಬಗ್ಗೆ ಯೋಚಿಸಿದ್ದರು. ಚಿಕ್ಕಂದಿನಲ್ಲಿ ಮನದಲ್ಲಿದ್ದ ಆ ಮಹದಾಸೆಯನ್ನು ಈಗ ಪ್ರಾಣಿ ಪಕ್ಷಿಗಳ ಮಿನಿಯೇಚರ್‌ಗಳನ್ನು ಮಾಡಿ, ಅವುಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.

‘ವನ್ಯಜೀವಿಗಳು ಮನುಕುಲ ಉಳಿಯಲು ನೆರವಾಗಿವೆ. ಆದರೆ, ಮನುಷ್ಯ ವನ್ಯಜೀವಿಗಳನ್ನು ನಾಶ ಮಾಡುತ್ತಾ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿದ್ದಾನೆ. ಈ ಭೂಮಿ ಇರುವುದು ಕೇವಲ ಮನುಷ್ಯರಿಗಾಗಿ ಅಲ್ಲ ಎಂಬುದನ್ನು ನಾವು ಮರೆಯಲೇಬಾರದು. ಆದಷ್ಟು ಮರಗಿಡಗಳನ್ನು ಬೆಳೆಸಬೇಕು. ವನ್ಯಜೀವಿಗಳ ಕಾಪಾಡಬೇಕು’ ಎಂದು ಶೈಲೇಂದ್ರ ಹೇಳುತ್ತಾರೆ. 

ತಾವು ರಚಿಸಿದ ಕಲಾಕೃತಿಯೊಂದಿಗೆ ಕಲಾವಿದ ಶೈಲೇಂದ್ರ ಜಿ.
ತಾವು ರಚಿಸಿದ ಕಲಾಕೃತಿಯೊಂದಿಗೆ ಕಲಾವಿದ ಶೈಲೇಂದ್ರ ಜಿ.

ಹಲವು ಕಡೆ ಮಿನಿಯೇಚರ್‌ಗಳನ್ನು ಪ್ರದರ್ಶನ ಮಾಡಿದ್ದು, ಜನ ಇವುಗಳನ್ನು ನೋಡಿ ಬೆರಗಾಗಿದ್ದಾರೆ. ಅನೇಕ ಮಿನಿಯೇಚರ್‌ಗಳನ್ನು ಖರೀದಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಲೆಯನ್ನು ಆಸಕ್ತರಿಗೆ ಕಲಿಸುವ ಯೋಜನೆಯನ್ನು ಶೈಲೇಂದ್ರ ಹೊಂದಿದ್ದಾರೆ.

ಮನುಷ್ಯನು ಸ್ವಾರ್ಥದಿಂದ ಕೈಗೊಳ್ಳುವ ವಿವಿಧ ಚಟುವಟಿಕೆಗಳಿಂದ ಪರಿಸರ ಹದಗೆಡುತ್ತಿದೆ. ಇದರ ದುಷ್ಪರಿಣಾಮವಾಗಿ ಪ್ರಾಣಿ, ಪಕ್ಷಿಗಳು ಅಸುನೀಗುತ್ತಿವೆ. ಅದೆಷ್ಟೋ ಪ್ರಾಣಿ, ಪಕ್ಷಿಗಳ ಪ್ರಭೇದಗಳು ಅಳಿದು ಹೋಗಿದ್ದರೆ, ಕೆಲವು ಪ್ರಭೇದಗಳು ಅಳಿದು ಹೋಗುವ ಅಂಚಿನಲ್ಲಿವೆ. ಇದು ಹೀಗೆಯೇ ಮುಂದುವರಿದರೆ ಪ್ರಾಣಿ ಪಕ್ಷಿಗಳನ್ನು ನಾವು ಇಂತಹ ಮಿನಿಯೇಚರ್‌ಗಳಲ್ಲಿಯೇ ನೋಡಬೇಕಾಗುತ್ತದೆ ಎಂಬುದು ಕಟುಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT