ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗೆ ಆಧುನಿಕ ಸ್ಪರ್ಶ ಕೊಟ್ಟವರು...

Last Updated 19 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಕಲೆ ಕೇವಲ ಸೌಂದರ್ಯ ಪ್ರಜ್ಞೆಯಾಗಿರದೇ ಸಾಮಾಜಿಕ ಚಿಂತನೆಯೂ ಆಗಿದೆ ಎಂದು ತಮ್ಮ ಮಾತುಗಳಲ್ಲಿ ಒತ್ತಿ ಹೇಳುತ್ತಿದ್ದ ಡಾ.ಟಿ.ಬಿ. ಸೊಲಬಕ್ಕನವರ ಅವರು ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಬಯಲಾಟ ಕಲೆಯನ್ನು ಜನರಿಗೆ ಹತ್ತಿರ ಮಾಡುವ ಪ್ರಯತ್ನವನ್ನು ನಿರಂತರವಾಗಿ ಮಾಡಿದ್ದಾರೆ.

1992ರಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಹುಲಸೋಗಿ ಗ್ರಾಮದಲ್ಲಿ ಸೊಲಬಕ್ಕನವರ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ದೂರದರ್ಶನ ಕಾರ್ಯಕ್ರಮ ನಿವೃತ್ತ ಅಧಿಕಾರಿ ಎ.ಆರ್‌. ಸುರೇಶ ಮತ್ತು ನಾನು ಸೇರಿದಂತೆ ಹಲವರು ಆರಂಭಿಸಿದ ’ಕರ್ನಾಟಕ ದೊಡ್ಡಾಟ ಮತ್ತು ಬಯಲಾಟ ಟ್ರಸ್ಟ್‌’ ಈ ಕಲೆಗಳನ್ನು ಜನರಿಗೆ ಹತ್ತಿರವಾಗಿಸಲು ವೇದಿಕೆ ಕಲ್ಪಿಸಿತು.

ಬಯಲಾಟ ಜನಸ್ನೇಹಿಯಾಗಿಸಲು ಅಹೋರಾತ್ರಿ ಬದಲು ಒಂದೂವರೆ, ಎರಡು ತಾಸಿಗೆ ಪ್ರದರ್ಶನಗಳನ್ನು ಸೀಮಿತಗೊಳಿಸಲಾಯಿತು. ಮೊದಲಾದರೆ ರಾಮಾಯಣ, ಮಹಾಭಾರತದ ಕತೆಗಳು, ಕಾಳಗ ಮತ್ತು ಕಲ್ಯಾಣದ ವಿಷಯಗಳೇ ಪ್ರಧಾನ ಕಥಾವಸ್ತುವಾಗಿರುತ್ತಿದ್ದವು. ಇವುಗಳ ಬದಲು ಬಸವಣ್ಣ, ಕನಕದಾಸರು, ಕಿತ್ತೂರು ರಾಣಿ ಚನ್ನಮ್ಮ, ರೇಣುಕಾ ಯಲ್ಲಮ್ಮ ಹೀಗೆ ಹೊಸ ತಲೆಮಾರಿಗೆ ಸಂದೇಶ ನೀಡುವ ಕಥೆಗಳನ್ನು ಬಯಲಾಟ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡೆವು. ಇದರಿಂದ ಜನ ಸಿನಿಮಾಗಳಂತೆ ಬಯಲಾಟವನ್ನೂ ಹಣ ಕೊಟ್ಟು ನೋಡುವ ವಾತಾವರಣ ನಿರ್ಮಾಣವಾಯಿತು. ಸೊಲಬಕ್ಕನವರ ಅವರು ಈ ಎಲ್ಲ ಬದಲಾವಣೆಗಳ ರೂವಾರಿಯಾಗಿದ್ದರು.

2009ರಲ್ಲಿ ‘ದೊಡ್ಡಾಟದ ಅಡ್ಡಾಟ’ ಸಂಚಾರಿ ಪ್ರದರ್ಶನ ಆರಂಭಿಸಿದ್ದು ಈ ಕಲೆಗೆ ಖ್ಯಾತಿ ತಂದುಕೊಟ್ಟಿತು.

ಹುಲಸೋಗಿಯಿಂದ ಬೆಳೆದ ಕಲಾವಿದ: ಹುಲಸೋಗಿ ಗ್ರಾಮದಲ್ಲಿ 1947ರಲ್ಲಿ ಜನಿಸಿದ ಸೊಲಬಕ್ಕನವರ ಧಾರವಾಡದ ಡಿ.ವಿ. ಹಾಲಭಾವಿ ಕಲಾ ಶಾಲೆಯಲ್ಲಿ ಶಿಕ್ಷಣ ಪೂರೈಸಿದರು. ದಾವಣಗೆರೆಯಲ್ಲಿ ಡಿಪ್ಲೊಮಾ ಫೈನ್‌ ಆರ್ಟ್‌ ಮಾಡಿದರು. ಮೂರು ವರ್ಷಗಳ ಕಾಲ ಚಲನಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ, 1972ರಿಂದ 1990ರ ವರೆಗೆ ದಾವಣಗೆರೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದರು.

1986ರಲ್ಲಿ ‘ನೂರು ಅಡಿಗಳ ಬಣ್ಣದ ನಡೆ ಅಣುಸಮರಕ್ಕೆ ಜನತೆಯ ತಡೆ’ ಶೀರ್ಷಿಕೆ ಅಡಿ ಪ್ರದರ್ಶಿತವಾದ 120 ಅಡಿ ಉದ್ದದ ತೈಲವರ್ಣ ಚಿತ್ರ ರಚಿಸಿದ್ದು ಅವರ ವಿಶೇಷ ಸಾಧನೆ. ಚಾರ್ಕೋಲ್‌, ಪೆನ್‌ ಮತ್ತು ಇಂಕ್‌ ಮಾಧ್ಯಮಗಳಲ್ಲಿ ಭಿನ್ನ ಪ್ರಯೋಗಗಳನ್ನು ಮಾಡಿದ್ದರು. ದೇಶದಲ್ಲಿ ಬಯಲು ವಸ್ತು ಸಂಗ್ರಹಾಲಯ ಯೋಜನೆ ಮೊದಲು ಮಾಡಿದ್ದು ಸೊಲಬಕ್ಕನವರ. ಮನುಷ್ಯನ ಹುಟ್ಟಿನಿಂದ ಸಾಯುವತನಕದ ಬೆಳವಣಿಗೆಯ ವಿವಿಧ ಹಂತಗಳ ಕಲಾಕೃತಿಗಳನ್ನು ನಿರ್ಮಿಸುವ ಹೆಗ್ಗುರಿ ಅವರದ್ದಾಗಿತ್ತು.

(ಲೇಖಕರು: ಸೊಲಬಕ್ಕನವರ ಒಡನಾಡಿ)
ನಿರೂಪಣೆ: ಪ್ರಮೋದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT