ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಬೆಯಾಡ್ಸೋನು... ಗೊಂಬೆ ಮಾಡ್ವೋನು..!

Last Updated 30 ಮಾರ್ಚ್ 2019, 20:00 IST
ಅಕ್ಷರ ಗಾತ್ರ

‘ನೋಡಿ ನಲಿ, ಆಡಿ ಕಲಿ... ಇದು ಗೊಂಬೆಯಾಟವಯ್ಯಾ..!’ ಮಕ್ಕಳ ಗಮನವನ್ನು ಸುಲಭವಾಗಿ ಸೆಳೆಯುವ ಉದ್ದೇಶದಿಂದ ಪಠ್ಯದಲ್ಲಿನ ಗೊಂಬೆಯಾಟದಿಂದ ಆರಂಭಿಸಿದ ಕಲಿಕೆ, ಇದೀಗ ಎಲ್ಲೆಡೆ ಪ್ರದರ್ಶನ ನೀಡುವ ಹಂತಕ್ಕೆ ತಲುಪಿದೆ.

ಹೌದು ಇಂಥಹ ಗೊಂಬೆಯಾಟದ ಪ್ರದರ್ಶನ, ಅದನ್ನು ಅಳವಡಿಕೆಯ ಬಗ್ಗೆ ವಿಶೇಷ ತರಬೇತಿಯ ಜತೆಯಲ್ಲೇ ಉಪನ್ಯಾಸ ನೀಡುತ್ತಾ, ರಾಜ್ಯಾದ್ಯಂತ ಪ್ರದರ್ಶನ ನೀಡುತ್ತಿರುವವರು ನಿಡಗುಂದಿ ತಾಲ್ಲೂಕಿನ ಮುದ್ದಾಪುರ ಗ್ರಾಮದ, ಸದ್ಯ ಕಾರವಾರ ಜಿಲ್ಲೆ ಹಳಿಯಾಳ ತಾಲ್ಲೂಕಿನ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಸಿದ್ದಪ್ಪ ಬಿರಾದಾರ.

ವಿಜ್ಞಾನದ ಉಪಕರಣ ಮಾದರಿ, ಕ್ಷೇತ್ರ ಗಣಿತ ಆಯಾಮಗಳ ಮಾದರಿ, ಚಿತ್ರಗಳು ವಿಶೇಷವಾಗಿ ಗೊಂಬೆಗಳ ಮೂಲಕ ಮಕ್ಕಳಿಗೆ ಪಾಠ ಮಾಡುತ್ತಿರುವ ಇವರ ಶೈಲಿ ವಿಶಿಷ್ಟ.

ಗೊಂಬೆಗಳ ಅಖಾಡದಲ್ಲಿ:

ನವದೆಹಲಿಯ ಸಿ.ಸಿ.ಆರ್.ಟಿ ವತಿಯಿಂದ 2005ರಲ್ಲಿ ಹೈದಾರಾಬಾದ್‌ನಲ್ಲಿ ನಡೆದ ‘ಶಿಕ್ಷಣದಲ್ಲಿ ಗೊಂಬೆಗಳ ಪಾತ್ರ’ ಎಂಬ 13 ದಿನದ ತರಬೇತಿ ಪಡೆದು ಮರಳಿದ ಸಿದ್ದಪ್ಪ ಬಿರಾದಾರ, ಶಾಲೆಯನ್ನೇ ತಮ್ಮ ಗೊಂಬೆಗಳ ಅಖಾಡವನ್ನಾಗಿಸಿದ್ದಾರೆ.

ಕೈಗೊಂಬೆ, ಕಡ್ಡಗೊಂಬೆ, ಕೀಲುಗೊಂಬೆ, ಸೂತ್ರದ ಗೊಂಬೆ ಹಾಗೂ ಬೆರಳು ಗೊಂಬೆಗಳ ತಯಾರಿಕೆಯಲ್ಲಿ ಹಾಗೂ ಆಡಿಸುವುದರಲ್ಲಿ ಪರಿಣಿತಿ ಸಾಧಿಸಿದ್ದಾರೆ. ಕಲೆ, ಸಂಗೀತ, ಸಾಹಿತ್ಯ, ನೃತ್ಯದ ಜತೆ ವಿವಿಧ ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.

ತಾವೇ ತಯಾರಿಸಿದ 400ಕ್ಕೂ ಹೆಚ್ಚು ಗೊಂಬೆಗಳ ಜತೆಗೆ. ತಂಡದೊಂದಿಗೆ ಜಾಗತಿಕ ತಾಪಮಾನ, ಪರಿಸರ ಸಂರಕ್ಷಣೆ, ನಮ್ಮ ಆರೋಗ್ಯ, ಶರಣರ ಪರಿಚಯ, ಅಂಬೇಡ್ಕರ್‌ ಜೀವನಾಧಾರಿತ ಬೆಳಕು ಹಂಚಿದ ಬಾಲಕ, ಹೂವುಗಳ ಪರಿಚಯ, ರಾಮಾಯಣ, ಮಹಾಭಾರತ. ಪ್ಲಾಸ್ಟಿಕಾಸುರ, ಕಾಳಿ ಯೋಜನೆ, ಭರವಸೆ, ಪುಣ್ಯಕೋಟಿ ಸೇರಿದಂತೆ 500ಕ್ಕೂ ಹೆಚ್ಚು ಗೊಂಬೆಯಾಟದ ರೂಪಕಗಳನ್ನು ಪ್ರದರ್ಶಿಸಿದ್ದಾರೆ. ಬಾಲ ವಿಕಾಸ ಅಕಾಡೆಮಿ ಸದಸ್ಯರಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿಸಿಆರ್‌ಟಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

13 ವರ್ಷಗಳಿಂದ ಶಿಕ್ಷಣದಲ್ಲಿ ಗೊಂಬೆಗಳನ್ನು ಅಳವಡಿಸಿರುವ ಇವರ ಬತ್ತಳಿಕೆಯಲ್ಲಿ ಪ್ರಸ್ತುತ ಪ್ರಾಣಿ, ಪಕ್ಷಿ, ಮನುಷ್ಯ, ಸಸ್ಯ ಸಂಕುಲ ಸೇರಿದಂತೆ 400ಕ್ಕೂ ಹೆಚ್ಚು ಗೊಂಬೆಗಳು ಸ್ಥಾನ ಪಡೆದಿವೆ. ಹಲವು ರೂಪಕಗಳನ್ನು, ಕಥನಕಗಳನ್ನು, ಪಠ್ಯಗಳೊಂದಿಗೆ ಗೊಂಬೆಗಳೊಂದಿಗೆ ಹೊಂದಿಸಿ ಪ್ರದರ್ಶನವನ್ನೂ ನೀಡಿದ್ದಾರೆ.

2010ರ ನವೆಂಬರ್‌ನಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಶಿಕ್ಷಕರಿಗಾಗಿ ನಡೆದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಗೊಂಬೆಯಾಟದ ಕುರಿತು ವಿಷಯ ಪ್ರಸ್ತುತ ಪಡಿಸಿದ್ದಾರೆ.

ಗೊಂಬೆ ಮಾಡೋದು ಹೇಗೆ ?:

‘ನಾನು ಹೆಚ್ಚಾಗಿ ಕೈಗೊಂಬೆಗಳನ್ನು, ಬೆರಳು ಗೊಂಬೆಗಳನ್ನು ಮಾಡಿದ್ದೇನೆ, ಕೈಗೊಂಬೆಯೊಂದನ್ನು ಮಾಡಲು ನನಗೆ 10 ದಿನದ ಸಮಯ ತಗಲುತ್ತದೆ, ಹಳೆ ದಿನಪತ್ರಿಕೆಗಳ ಕಾಗದವನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಮೆಂತೆ ಬೀಜದೊಂದಿಗೆ ರುಬ್ಬಿ ಪೇಸ್ಟ್‌ ಮಾಡುತ್ತೇನೆ. ಪೇಪರ್‌ ಉಂಡೆಯೊಂದನ್ನು ಮಾಡಿ ಆ ಉಂಡೆಗೆ ಕಾಗದದ ಪೇಸ್ಟನ್ನು ಹಚ್ಚುತ್ತೇನೆ, ಬೇಕಾದ ಆಕಾರವನ್ನು ನೀಡಿದ ನಂತರ ಬಿಸಿಲಿನಲ್ಲಿ ಒಣಗಿಸುತ್ತೇನೆ. ಒಣಗಿದಾದ ನಂತರ ಸೂಕ್ತ ಬಣ್ಣ. ಬಟ್ಟೆಗಳಿಂದ ಅಲಂಕಾರ ನಡೆಯುತ್ತೆ’ ಎಂದು ಗೊಂಬೆ ಮಾಡೋ ಬಗೆಯನ್ನು ಮೇಷ್ಟ್ರು ಬಿಚ್ಚಿಟ್ಟರು.

‘ಕಡ್ಡಗೊಂಬೆ, ಕೈಗೊಂಬೆ, ಕೀಲುಗೊಂಬೆ ಪರದೆಯ ಎದುರಿಗೆ ಆಟ ಆಡಿಸಲಾಗುತ್ತದೆ. ಬಿಡುವಿನ ವೇಳೆಯಲ್ಲಿ ಗೊಂಬೆ ತಯಾರಿಸುತ್ತೇನೆ. ಮ್ಯಾಜಿಕ್ ಗೊಂಬೆಗಳಿಂದ ಮಕ್ಕಳು ಬಹುಬೇಗ ಆಕರ್ಷಿತರಾಗುತ್ತಾರೆ’ ಎನ್ನುತ್ತಾರೆ ಬಿರಾದಾರ.

ಸದ್ಯ ಹೊಂಗಿರಣ ಎಂಬ ತಂಡ ಕಟ್ಟಿಕೊಂಡು, ರಾಜ್ಯದ ನಾನಾ ಕಡೆ ಶರಣ ಸಂಸ್ಕೃತಿಯಿಂದ ಹಿಡಿದು, ಆಯಾ ಕಾರ್ಯಕ್ರಮಕ್ಕೆ ಸಂದರ್ಭಕ್ಕೆ ತಕ್ಕಂತೆ ಹೋಲುವ ಗೊಂಬೆಯಾಟದ ನಿರಂತರ ಒಂದೂವರೆ ಗಂಟೆ ಪ್ರದರ್ಶನ ನೀಡುತ್ತಾರೆ ಬಿರಾದಾರ. ಯೂಟ್ಯೂಬ್‌ನಲ್ಲಿಯೂ 100ಕ್ಕೂ ಹೆಚ್ಚು ‘ಹೊಂಗಿರಣ’ ಅಡಿಯಲ್ಲಿ ಅವರ ವಿಡಿಯೋಗಳು ಸದ್ದು ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT